ಕೆಡುಕಿನ ಪ್ರತಿಫಲ
ಹಿಂದೆ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನ ಜಾಣ್ಮೆ, ಬುದ್ಧಿವಂತಿಕೆಯನ್ನು ಮೆಚ್ಚಿ ರಾಜನು ಅವನಿಗೆ ತೋರುತ್ತಿದ್ದ ಗೌರವವನ್ನು ಕಂಡು ಇತರ ಕೆಲವರಿಗೆ ಹೊಟ್ಟೆ ಕಿಚ್ಚು ಪಡುವಂತಾಗುತಿತ್ತು. ಆದರೆ ಮತ್ಸರ ಪಡುವ ಜನ ದಿನದಿಂದ ದಿನಕ್ಕೆ ಈ ಬೆಳವಣಿಗೆಯನ್ನು ಹೇಗಾದರೂ ಮಾಡಿ ನಿಲ್ಲಿಸಿ ರಾಜ ಬೀರಬಲ್ಲನನ್ನು ಅತಿಯಾಗಿ ಅವಲಂಬಿಸದಂತೆ ಮಾಡಬೇಕು. ಅವನ ತೇಜೋವಧೆ ಮಾಡಬೇಕೆಂದು ಯೋಚಿಸುತ್ತಲೇ ಇದ್ದರು.
ಕ್ಷೌರಿಕನೊಬ್ಬ ಕ್ಷೌರ ಮಾಡುತ್ತಿರುವ ಸಂದರ್ಭದಲ್ಲಿ ರಾಜನ ಯೋಗ ಕ್ಷೇಮದ ಬಗ್ಗೆ ವಿಚಾರಿಸುತ್ತಾ, ತಮ್ಮ ತಂದೆ ತಾಯಿಗಳು ಸ್ವರ್ಗ ಸೇರಿ ವರ್ಷಗಳೇ ಮುಗಿದು ಹೋದವು. ಅವರ ಸ್ಥಿತಿ ಗತಿಯ ಬಗ್ಗೆ ವಿಚಾರಿಸಿದ್ದೀರಾ? ಎಂದು ಕೇಳಿದನು. ಇದನ್ನು ಕೇಳಿ ರಾಜನು ನಕ್ಕು, ಸತ್ತು ಸ್ವರ್ಗದಲ್ಲಿರುವವರನ್ನು ಯಾರಾದರೂ ವಿಚಾರಿಸಲು ಸಾಧ್ಯವಾಗುತ್ತಾ? ಎಂದನು. ಕ್ಷೌರಿಕನು ಆಶ್ಚರ್ಯದ ವಿಷಯ ಹೇಳುವವನಂತೆ, ‘‘ನಿಮಗೆ ಗೊತ್ತಿಲ್ಲವೇ ಮಹಾರಾಜರೇ! ಬೀರಬಲ್ಲರಿಗೆ ಸ್ವರ್ಗಕ್ಕೆ ಹೋಗುವ ಮಾರ್ಗ, ರೀತಿ ಗೊತ್ತಿದೆ. ಅವರು ಅವಾಗಾವಾಗ ತನ್ನ ತಂದೆ ತಾಯಂದಿರನ್ನು ನೋಡಿಕೊಂಡು ಬರಲು ಸ್ವರ್ಗಕ್ಕೆ ಹೋಗುತ್ತಿರುತ್ತಾರೆೆ. ಈ ವಿಷಯ ತಮಗೆ ತಿಳಿದಿರಬಹುದೆಂದುಕೊಂಡಿದ್ದೆ. ಅವರಿಗೆ ಹೇಳಿ ನೋಡಿ, ಖಂಡಿತ ನಿಮ್ಮ ತಂದೆ ತಾಯಂದಿರನ್ನು ನೋಡಿಕೊಂಡು ಬರುತ್ತಾರೆ’’ ಎಂದು ಹೇಳಿ ತನ್ನ ಕೆಲಸ ಮುಗಿಸಿಕೊಂಡು ಹೊರಟು ಹೋದ.
ಅಕ್ಬರನಿಗೆ ಇದೇ ವಿಷಯ ಸುಳಿದಾಡತೊಡಗಿತು. ಇಷ್ಟು ದಿನ ಬೀರಬಲ್ಲ ತನಗೆ ಈ ವಿಷಯ ಹೇಳಲಿಲ್ಲವೇಕೆ? ನನಗೂ ಗೊತ್ತಿರಬಹುದೆಂದುಕೊಂಡಿದ್ದಾನೆ. ಇರಲಿ ಈ ಬಾರಿ ಅವನನ್ನು ಸ್ವರ್ಗಕ್ಕೆ ಕಳುಹಿಸಿ ತಂದೆ ತಾಯಿಯರನ್ನು ಮಾತನಾಡಿಸಿಕೊಂಡು ಬರಲು ತಿಳಿಸಬೇಕು ಎಂದು ನಿರ್ಧರಿಸಿ ಬೀರಬಲ್ಲನನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದನು.
ಬೀರಬಲ್ಲ ಬಂದಾಗ ‘‘ಬೀರಬಲ್ಲ ನಿನಗೆ ಸ್ವರ್ಗಕ್ಕೆ ಹೋಗುವುದು ತಿಳಿದಿದೆಯಂತೆ. ಆಗಾಗ ನೀನು ಸ್ವರ್ಗಕ್ಕೆ ಹೋಗುತ್ತಿರುತ್ತಿಯಂತೆ. ಇಷ್ಟು ದಿನ ನನಗೆ ತಿಳಿಸಿರಲಿಲ್ಲವೇಕೆ? ಆದದ್ದಾಯ್ತು. ಇದೊಂದು ಬಾರಿ ನನಗಾಗಿ ನೀನು ಸ್ವರ್ಗಕ್ಕೆ ಹೋಗಿ ಬರಬೇಕು. ಅಲ್ಲಿ ನನ್ನ ತಂದೆ ತಾಯಿಯರ ಯೋಗಕ್ಷೇಮ ತಿಳಿದುಕೊಂಡು ಬರಬೇಕು. ಪಾಪ ಅಲ್ಲಿ ಅವರೆಲ್ಲಾ ಹ್ಯಾಗಿದ್ದಾರೋ ತಿಳಿದುಕೊಳ್ಳುವ ಹಂಬಲ ನನಗೆ. ಸಾಧ್ಯವಾದಷ್ಟು ಬೇಗ ಹೋಗುವ ಏರ್ಪಾಟು ಮಾಡಿಕೋ. ಅದಕ್ಕೆ ಬೇಕಾಗುವ ಎಲ್ಲಾ ಸಹಾಯ ನಾನು ಮಾಡುತ್ತೇನೆ’’ ಎಂದನು. ಇದನ್ನು ಕೇಳಿದ ಬೀರಬಲ್ಲ ಈ ಮಾತಿನ ಹಿಂದೆ ಯಾರದೋ ಸಂಚು ಇದೆ. ಇಲ್ಲದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಒಪ್ಪಿಕೊಳ್ಳುವುದೊಂದೇ ದಾರಿ. ಯೋಚಿಸಲು ಒಂದಷ್ಟು ಸಮಯ ಸಿಕ್ಕರೆ ಸಾಕು ಯೋಚಿಸಬಹುದೆಂದುಕೊಂಡು, ಈ ವಿಷಯ ತಡವಾಗಿಯಾದರೂ ತಮಗೆ ಹೇಗೆ ಗೊತ್ತಾಯಿತು ಪ್ರಭು ಎಂದು ಕೇಳಿದ. ನಿನ್ನೆಯ ದಿನ ಕ್ಷೌರಿಕ ಕ್ಷೌರ ಮಾಡಲು ಬಂದಾಗ ತಿಳಿಸಿದ ಎಂದನು. ‘‘ಆಯ್ತು ಮಹಾರಾಜರೆ, ನಾನು ಸ್ವರ್ಗಕ್ಕೆ ಹೋಗಿ ಬರಲು ಸಿದ್ಧ. ಆದರೆ ಈಗ ಬಹು ಮುಖ್ಯವಾದ ಕೆಲಸವಿರುವುದರಿಂದ ನನಗೆ ಒಂದು ತಿಂಗಳು ಸಮಯ ಬೇಕಾಗುತ್ತದೆ. ನಂತರ ಹೋಗುತ್ತೇನೆ’’ ಎಂದು ಹೇಳಿ ರಾಜರಿಂದ ಒಪ್ಪಿಗೆ ಪಡೆದು ನಮಸ್ಕರಿಸಿ ಆ ಕ್ಷೌರಿಕನಿಗೆ ಒಂದು ಗತಿ ಕಾಣಿಸಬೇಕೆಂದು ಯೋಚಿಸುತ್ತಾ ಮನೆಗೆ ಬಂದನು. ಸ್ಮಶಾನದಿಂದ ತನ್ನ ಮನೆಗೆ ಗುಪ್ತವಾಗಿ ಸುರಂಗ ಮಾರ್ಗ ಮಾಡಿಸಿದನು. ತಿಂಗಳ ನಂತರ ಒಂದು ದಿನ ಎಲ್ಲರೂ ಸ್ಮಶಾನಕ್ಕೆ ಬಂದರು. ಕಟ್ಟಿಗೆಯ ರಾಶಿಯ ಮೇಲೆ ಬೀರಬಲ್ಲ ಮಲಗಿದ. ಆಮೇಲೆ ಕಟ್ಟಿಗೆ ಒಟ್ಟುತ್ತಿದ್ದಾಗ, ಮೆಲ್ಲನೇ ಸುರಂಗ ಮಾರ್ಗದಿಂದ ತನ್ನ ಮನೆ ಸೇರಿದ. ಇತ್ತ ಕ್ಷೌರಿಕನೊಂದಿಗೆ ಬೀರಬಲ್ಲನ ವಿರೋಧಿಗಳೆಲ್ಲಾ ತುಂಬಾ ಸಂತಸ ಪಟ್ಟರು. ಪೀಡೆಯೊಂದು ತೊಲಗಿತು ತಾವಿನ್ನು ನೆಮ್ಮದಿಯಾಗಿರಬಹುದೆಂದು ನಿಟ್ಟುಸಿರು ಬಿಟ್ಟರು. ಒಂದು ತಿಂಗಳ ನಂತರ ಬೀರಬಲ್ಲ ಅಕ್ಬರನ ಆಸ್ಥಾನಕ್ಕೆ ಬಂದಾಗ ಎಲ್ಲರೂ ಆಶ್ಚರ್ಯ ಪಟ್ಟರು. ಅಕ್ಬರ್ ಸಂತೋಷಗೊಂಡ. ಸ್ವರ್ಗದಲ್ಲಿ ತನ್ನ ತಂದೆ ತಾಯಿಗಳು ಇರುವ ಸ್ಥಿತಿಯ ಬಗ್ಗೆ ಕೇಳಿದ. ಬೀರಬಲ್ಲ ‘‘ಅವರೆಲ್ಲಾ ಚೆನ್ನಾಗಿದ್ದಾರೆ ಮಹಾ ಪ್ರಭು, ಎಲ್ಲಾ ರೀತಿಯಿಂದಲೂ ಆರೋಗ್ಯದಿಂದಿದ್ದಾರೆ. ಆದರೆ ಒಂದು ವಿಷಯದಲ್ಲಿ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವರ್ಗದಲ್ಲಿ ಕ್ಷೌರಿಕರೇ ಇಲ್ಲ. ನನ್ನನ್ನು ನೋಡಿ, ಒಂದೇ ತಿಂಗಳಿಗೆ ಇಷ್ಟೊಂದು ಗಡ್ಡ ಬೆಳೆದಿರಬೇಕಾದರೆ ಒಂದು ವರ್ಷದಲ್ಲಿ ಎಷ್ಟೊಂದು ಗಡ್ಡ ಬೆಳೆದು ಅವರು ಸಂಕಟ ಪಡುತ್ತಿರಬಹುದು. ಅವರು ಆದಷ್ಟು ಬೇಗ ಒಬ್ಬ ಕ್ಷೌರಿಕನನ್ನು ಕಳುಹಿಸಿ ಕೊಡಲು ಹೇಳಿದ್ದಾರೆ. ಒಳ್ಳೆಯ ರೀತಿಯಿಂದ ಕಾಳಜಿ ಮಾಡುವ ಕ್ಷೌರಿಕ ಬೇಕಾಗಿರುವುದರಿಂದ ನಿಮ್ಮ ಕ್ಷೌರಿಕನನ್ನೇ ಕಳುಹಿಸಿ ಕೊಡುವುದೇ ಒಳ್ಳೆಯದು’’ ಎಂದನು. ಅಕ್ಬರ್ ಕೂಡಲೇ ಕ್ಷೌರಿಕನನ್ನು ಕರೆದು ಸ್ವರ್ಗಕ್ಕೆ ಹೋಗಿ ಬರಲು ತಿಳಿಸಿದನು. ರಾಜಾಜ್ಞೆಯನ್ನು ಮೀರುವಂತಿರಲಿಲ್ಲ. ಯಾರೋ ಹೇಳಿದ ಮಾತಿಗೆ ಒಪ್ಪಿಕೊಂಡು ಅಕ್ಬರನ ಮುಂದೆ ಬೀರಬಲ್ಲನ ಬಗ್ಗೆ ಕೆಟ್ಟದ್ದಾಗಿ ಹೇಳಿದ್ದಕ್ಕೆ ತನ್ನ ಪ್ರಾಣವನ್ನೇ ಕೊಡಬೇಕಾಗಿ ಬಂದಿದ್ದಕ್ಕೆ ಕ್ಷೌರಿಕನು ಹಳಿದುಕೊಂಡನು. ಪ್ರಾಣ ಕಳೆದುಕೊಂಡನು. ಯಾರಿಗಾದರೂ ನಾವು ಕೇಡು ಮಾಡಲು ಹೋದರೆ ಅದು ನಮಗೇ ತಿರುಗಿ ಕೇಡಾಗುವುದು.