ಬಾಲ್ಯದ ಗಾಯಗಳು
ಭಾಗ 1
ಲೈಂಗಿಕ ದೌರ್ಜನ್ಯವನ್ನು ನಾವು ಒಂದು ಸ್ವತಂತ್ರ ಘಟನೆ ಎಂದು ನೋಡುತ್ತೇವೆ. ಮಕ್ಕಳು ಹಿರಿಯರೊಡನೆ ಅವರು ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡು, ಅದಕ್ಕೆ ಪರಿಹಾರ ಕಂಡುಕೊಂಡು, ಗುಣಮುಖರಾಗಬಹುದು ಎಂದು ಕಾಣಿಸುತ್ತದೆ. ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದು ಒಂದು ಕಷ್ಟವಾದರೆ, ಅದನ್ನು ಹೇಳುವುದು ಇನ್ನೊಂದು ಕಷ್ಟ. ಒಂದು ಮಗುವಿನ ಬಾಲ್ಯ, ಸುತ್ತಲಿನ ಪರಿಸರ, ಆ ಮಗುವನ್ನು ಬೆಳೆಸಿರುವ ರೀತಿ, ಎಲ್ಲವೂ, ಆ ಮಗು ಲೈಂಗಿಕ ದೌರ್ಜನ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಲೈಂಗಿಕ ದೌರ್ಜನ್ಯವನ್ನು ನಾವು ಒಂದು ಸ್ವತಂತ್ರ ಘಟನೆಯಾಗಿ ನೋಡದೆ, ಮಗುವಿನ ಸಂಪೂರ್ಣ ಬಾಲ್ಯವನ್ನು ನೋಡಿದರೆ, ಆ ಮಗುವಿನ ತೊಳಲಾಟ ಮತ್ತು ಅದರಿಂದ ಗುಣವಾಗಲು ಬೇಕಾದ ಪರಿಹಾರಗಳು ಕಾಣಬಹುದು.
ಕುಮಾರಿ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಮೂವತ್ತೈದು ವಯಸ್ಸಿನ ಅವಳು ತನ್ನ ಮೇಲೇ ದೌರ್ಜನ್ಯವಾಗಲು ಕಾರಣಗಳೇನಿರಬಹುದೆಂದು ಯೋಚಿಸಿದಾಗ, ಅವಳ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಅವಳನ್ನು ಸುಲಭದ ಶಿಕಾರಿಯನ್ನಾಗಿ ಮಾಡಿರಬಹುದೆನಿಸಿತು ಮತ್ತು ದೌರ್ಜನ್ಯವನ್ನು ಹೇಳಲು ಅಸಾಧ್ಯ ಪರಿಸ್ಥಿತಿಗಳನ್ನು ಕಲ್ಪಿಸಿತ್ತು. ಅವಳಿಗೆ ಬಾಲ್ಯದಲ್ಲಿ ಯಾರ ಸಹಾಯವೂ ದೊರೆಯಲಿಲ್ಲ. ತನ್ನ ಪರಿಸ್ಥಿತಿಯಲ್ಲಿರುವ ಯಾವುದೇ ಮಗು, ಅಥವಾ, ತನ್ನ ಪೋಷಕರಂತೆ ನಡೆದುಕೊಳ್ಳುವ ಯಾವುದೇ ಹಿರಿಯರು ಅವಳ ಅನುಭವಗಳನ್ನು ಓದಿ, ಎಚ್ಚೆತ್ತುಕೊಂಡರೆ, ತಾನು ಪಟ್ಟ ಪಾಡು ಸಾರ್ಥಕ ಎಂದು ತನ್ನ ಬಾಲ್ಯದ ಘಟನೆಗಳನ್ನು ವಿಶದವಾಗಿ ಬರೆದಿದ್ದಾಳೆ. ಅವಳ ಉದ್ದೇಶ, ಈ ಬರಹ ಆದಷ್ಟೂ ಜನರನ್ನು ತಲುಪಬೇಕು ಎಂಬುದೊಂದೇ. ನಾನು, ಅವಳ ಕಥೆಯನ್ನು ನಿಮ್ಮ ಮುಂದಿಟ್ಟಿದ್ದೇನೆ.