ಮರೆಯೋದುಂಟೆ ಗಡಿನಾಡ ಸಿಂಹಿಣಿ 'ಡಾ.ಜಯದೇವಿ ತಾಯಿ ಲಿಗಾಡೆ'

Update: 2019-06-23 05:42 GMT

ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ತಮ್ಮಿಡೀ ಬದುಕನ್ನು ಬಸಿದು ನಾಡುಕಟ್ಟಿದ ಕನ್ನಡದ ಮಹಾಚೇತನ ಡಾ.ಜಯದೇವಿ ತಾಯಿ ಲಿಗಾಡೆ ಜನ್ಮದಿನ. ತನ್ನಿಮಿತ್ತ ಅವರ ಬದುಕು, ಬರಹ, ಹೋರಾಟ, ಸಾಧನೆ, ಸಿದ್ಧಿಯ ಮೇಲೊಂದು ಬೆಳಕು ಚೆಲ್ಲುವ ಲೇಖನವಿದು.

ಕೌಟುಂಬಿಕ ಹೊಣೆಯ ಜೊತೆಗೆ ಸಾಮಾಜಿಕ ಸೇವಾ ಕಾರ್ಯದಲ್ಲೂ ನಿರತರಾಗಿ ನಾಡು-ನುಡಿಗಾಗಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡ ಜಯದೇವಿತಾಯಿ ಲಿಗಾಡೆ ಅವರು ಸಾಹಿತ್ಯ ಕೃಷಿಯತ್ತ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಂಡು ಲೇಖನಿಯನ್ನು ಹರಿದುಬಿಟ್ಟರು. ಇದರ ಫಲವಾಗಿ ಇವರಿಂದ ಉತ್ಕೃಷ್ಟ ಸಾಹಿತ್ಯದ ಅಮೃತ ಫಲಗಳು ನಾಡಿಗೆ ದೊರೆಯುವಂತಾಯಿತು.

ಅದು ಸಾವಿರದ ಒಂಬೈನೂರ ಅರವತ್ತರ ದಶಕ. ಕನ್ನಡಿಗರುಳ್ಳ ಪ್ರದೇಶಗಳೆಲ್ಲಾ ಒಂದುಗೂಡಿ ಮೈಸೂರು ರಾಜ್ಯವಾಗಿ ಸರಿ ಸುಮಾರು ಒಂದು ದಶಕವೇ ಕಳೆದಿದ್ದ ಕಾಲವದು. ಆಗ ಗಡಿ ಸಮಸ್ಯೆಯ ಕಾವು ತಾರಕಕ್ಕೇರಿತ್ತು. ಸೊಲ್ಲಾಪುರದ ವಿಷಯವಾಗಿ ಮಹಾರಾಷ್ಟ್ರ-ಮೈಸೂರು ಮಧ್ಯೆ, ಕಾಸರಗೋಡು ವಿಷಯವಾಗಿ ಮೈಸೂರು- ಕೇರಳ ಮಧ್ಯೆ ಸಂಘರ್ಷ ಸಾಗಿತ್ತು. ಆ ಸಂದರ್ಭದಲ್ಲಿ ಸಮಾವೇಶಗೊಂಡಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದು ಅಂದು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪನವರು ಸದರಿ ಸಮಸ್ಯೆ ಅರಿಯಲು ಏಕಸದಸ್ಯ ಆಯೋಗ ರಚನೆಗೆ ಸಮ್ಮತಿ ಸೂಚಿಸಿದ್ದರು.ಇದು ಕನ್ನಡಿಗರನ್ನು ಕೆರಳಿಸಿತ್ತು. ಹೀಗೆ ಕುಪಿತಗೊಂಡಿದ್ದ ಕನ್ನಡಿಗರ ಪ್ರತಿಭಟನೆಯ ಸಾರಥ್ಯವನ್ನು ಓರ್ವ ಗಡಿನಾಡ ಸಿಂಹಿಣಿ ವಹಿಸಿತ್ತು. ಏಕೀಕರಣಕ್ಕಾಗಿ ಹೋರಾಡಿ ಅದು ಕೈಗೂಡಿದ ನಂತರವೂ ಸೊಲ್ಲಾಪುರದ ಕನ್ನಡಿಗರು ಅವರದೇ ನೆಲದಲ್ಲಿ ಪರಕೀಯರಂತೆ ಬದುಕುವ ಸ್ಥಿತಿ ಕಂಡು ಆ ಸಿಂಹಿಣಿ ಕೆರಳಿ ಕೆಂಡವಾಗಿತ್ತು.

ಪರಿಣಾಮ 1966 ಅಕ್ಟೋಬರ್ 25ರಂದು ಅದೇ ಸಿಂಹಿಣಿಯ ನೇತೃತ್ವದಲ್ಲಿ ಬೆಂಗಳೂರಿನ ಕೆಂಪೇಗೌಡ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯುತ್ತದೆ. ಆಗ ಏಕಸದಸ್ಯ ಆಯೋಗಕ್ಕೆ ಬಹಿಷ್ಕಾರದ ಘೋಷಣೆ ಕೂಗುತ್ತಾ ಮುಖ್ಯಮಂತ್ರಿ ನಿಜಲಿಂಗಪ್ಪನವರು ಸಭೆ ನಡೆಸುತ್ತಿದ್ದ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಭವನದತ್ತ ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ನುಗ್ಗಲು ಯತ್ನಿಸುತ್ತಾರೆ.ಆಗ ಪರಿಸ್ಥಿತಿಯನ್ನು ಅರಿತು ಸ್ವತಃ ಮುಖ್ಯಮಂತ್ರಿ ನಿಜಲಿಂಗಪ್ಪಅವರೇ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಸಿಂಹಿಣಿಯತ್ತ ಬಂದು ಮಾತುಕತೆ ನಡೆಸಿ ಕನ್ನಡ ಮಾತನಾಡುವ ಪ್ರದೇಶಕ್ಕೆ ಅನ್ಯಾಯವಾಗಲು ತಾನು ಬಿಡುವುದಿಲ್ಲವೆಂಬ ವಚನ ನೀಡುತ್ತಾರೆ. ಈ ಮಾತಿಗಷ್ಟೇ ತೃಪ್ತಿಯಾಗದ ಆ ಸಿಂಹಿಣಿ, ಏಕಸದಸ್ಯ ಆಯೋಗದ ತೀರ್ಪು ಮೈಸೂರು ರಾಜ್ಯದ ವಿರುದ್ಧ ಬಂದರೆ ಇಡೀ ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಂದ ಪಡೆದು ನಂತರ ತಮ್ಮ ಪ್ರತಿಭಟನೆ ನಿಲ್ಲಿಸುತ್ತಾರೆ. ಹೀಗೆ ಆಳುವ ಸರಕಾರದ ನೇತಾರನೇ ಅರ್ಧಕ್ಕೆ ಸಭೆೆ ನಿಲ್ಲಿಸಿ ತನ್ನತ್ತ ಎದ್ದು ಬರುವಂತೆ ಮಾಡಿದ್ದ ಆ ಸಿಂಹಿಣಿಯೇ ಕನ್ನಡದ ಕೆಚ್ಚಿನ ಮಹಾ ಹೋರಾಟಗಾರ್ತಿ, ಡಾ.ಜಯದೇವಿ ತಾಯಿ ಲಿಗಾಡೆ.

ದುರಂತವೆಂದರೆ ಏಕಸದಸ್ಯಆಯೋಗದ ವರದಿ ರಾಜ್ಯದ ಪರವಾಗಿ ಬಂದ ನಂತರವೂ ಸಹ ಅಚ್ಚ ಕನ್ನಡದ ಸೊಲ್ಲಾಪುರವು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಲಿಲ್ಲ. ಇದರಿಂದ ಮನನೊಂದ ಜಯದೇವಿತಾಯಿ ಲಿಗಾಡೆ ಅವರು ಸೊಲ್ಲಾಪುರವನ್ನು ತೊರೆದು ತಮಗೆ ಅತ್ಯಂತ ಪ್ರಿಯವಾಗಿದ್ದ ಬಸವಣ್ಣನ ನಾಡು ಬಸವಕಲ್ಯಾಣಕ್ಕೆ ಬಂದು ನೆಲೆಸಿ ತಮ್ಮ ಕೊನೆಯ ದಿನಗಳನ್ನು ಬಸವ ಬೆಳಕಿನಲ್ಲಿ ಕಳೆದರು. ತಮ್ಮ ಪ್ರಾಮಾಣಿಕ ಹೋರಾಟ ಹಾಗೂ ಪ್ರಚಂಡ ಸಾಹಿತ್ಯ ಕೃಷಿಯಿಂದ ಕನ್ನಡಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದರು.ಸಾರಸ್ವತ ಲೋಕದಲ್ಲಂತೂ ಕಾವ್ಯ ಹಿಮಾಲಯವೇತಾವಾದರು. ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಬಂದಂತಹ ಸಿರಿವಂತಿಕೆಯನ್ನು ಹೊಂದಿದ್ದರೂ ರುದ್ರಾಕ್ಷಿಮಾಲೆಯನ್ನು ಕೊರಳಲ್ಲಿ ಧರಿಸಿ ಜೀವನ ಪೂರ್ತಿ ಸರಳವಾಗಿಯೇ ಅಕ್ಷರಶಃ ಶರಣೆಯಾಗಿಯೇ ಬದುಕಿದರು. ಕನ್ನಡ ಉಳಿಸಿ ಬೆಳೆಸುವಲ್ಲಿ ಜಯದೇವಿತಾಯಿ ಲಿಗಾಡೆ ಅವರ ಅಗಾಧ ಪರಿಶ್ರಮ, ಅದ್ಭುತಕಾರ್ಯ, ಅಪಾರ ಸಾಧನೆಯನ್ನು ಕನ್ನಡ ನಾಡು ಯಾವತ್ತೂ ಮರೆಯುವಂತೆಯೇ ಇಲ್ಲ. ಸಂಪೂರ್ಣ ಮರಾಠಿಮಯ ಶಿಕ್ಷಣ ವಾತಾವರಣವಿದ್ದ ಅಚ್ಚ ಕನ್ನಡ ಪ್ರದೇಶವಾದ ಸೊಲ್ಲಾಪುರದಲ್ಲಿ 1950ರಲ್ಲೇ ಕನ್ನಡ ಕೋಟೆ ಎಂಬ ಸಂಘಕಟ್ಟಿ ಅದೇ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಯನ್ನೂ ಹುಟ್ಟುಹಾಕಿ ನಿಜಕ್ಕೂ ಕನ್ನಡಕಾವಲುಗಾರ್ತಿಯಾಗಿ, ನಾಡು-ನುಡಿಯ ಹಿರಿಮೆ-ಗರಿಮೆಯನ್ನು ಮೆರೆಸಿದ ಡಾ. ಜಯದೇವಿತಾಯಿ ಲಿಗಾಡೆ ಅವರು ಕನ್ನಡ ಚಳವಳಿಗೆ ಭದ್ರಬುನಾದಿ ಹಾಕಿದವರಲ್ಲಿ ಪ್ರಮುಖರಾಗಿದ್ದು, ಕನ್ನಡಿಗರ ಅಭಿಮಾನದ ಮಹಾತಾಯಿಯೇ ಆಗಿದ್ದಾರೆ. ಮನೆಯಲ್ಲೇ ಕನ್ನಡ ಕಲಿತಿದ್ದ ಇವರು ಇತರರಿಗೂ ಕನ್ನಡ ಕಲಿಸುವತ್ತ ಮುನ್ನಡಿಯಿಟ್ಟು ಮುನ್ನುಡಿ ಬರೆದವರು. ಕನ್ನಡ ಕಲಿಸಲು ಶಿಕ್ಷಕರು ಸಿಗುತ್ತಿಲ್ಲವೆಂಬ ಮಹಾರಾಷ್ಟ್ರ ಸರಕಾರದ ಕುಂಟುನೆಪಕ್ಕೆ ಇವರು ಸೆಡ್ಡುಹೊಡೆದು ತಮ್ಮ ಸ್ವಶಕ್ತಿಯಿಂದಲೇ 400 ಶಿಕ್ಷಕರನ್ನು ನೇಮಿಸಿಕೊಂಡು ಕನ್ನಡ ಶಿಕ್ಷಣ ಕಲಿಕೆಗೆ ಟೊಂಕಕಟ್ಟಿ ನಿಂತಿದ್ದು ಸಾಮಾನ್ಯ ವಿಷಯವಲ್ಲ. ಇದು ಕನ್ನಡ ನಾಡಚರಿತ್ರೆಯಲ್ಲಿ ಎಂದೂ ಅಳಿಸದ ಸುವರ್ಣಾಕ್ಷರಗಳ ದಾಖಲೆಯಾಗಿದೆ.

ಕನ್ನಡಕ್ಕೆ ಕುತ್ತು ಬಂತೆಂದರೆ ಅರ್ಧರಾತ್ರಿಯಾದರೂ ಸರಿಯೇ ಎದ್ದು ಬಂದು ಸಿಂಹದೋಪಾದಿಯಲ್ಲಿ ಘರ್ಜಿಸುತ್ತಾ ಕನ್ನಡ ವಿರೋಧಿತನವನ್ನು ಬಗ್ಗುಬಡಿಯುತ್ತಿದ್ದ ಜಯದೇವಿ ತಾಯಿ ಲಿಗಾಡೆ ಅವರಿಗೆ ಹೋರಾಟವೆಂಬುದು ನೀರು ಕುಡಿದಷ್ಟೇ ಸಲೀಸಾಗಿತ್ತು.

ಇದಕ್ಕೆ ಕಾರಣ ಅವರ ಎದೆಗಡಲಲ್ಲಿದ್ದ ನಾಡು-ನುಡಿ, ನೆಲ-ಜಲದ ಬಗೆಗಿನ ಅಪಾರ ಅಭಿಮಾನ. ಹೋರಾಟವೆಂಬುದು ಅವರಿಗೆ ಹುಟ್ಟಿನಿಂದಲೇ ಬಂದು ಬಿಟ್ಟಿತ್ತು. ಅಲ್ಲಿ ಇಂತಹದ್ದೇ ಎಂಬುದಿರಲಿಲ್ಲ. ಕನ್ನಡ ಚಳವಳಿ, ಸ್ವಾತಂತ್ರ ಏಕೀಕರಣ, ದಲಿತ ವಿಮೋಚನೆ, ಮಹಿಳಾಪರ ಕಾಳಜಿ, ಕಾರ್ಮಿಕ ಕಲ್ಯಾಣ, ಮಾನವಹಕ್ಕು, ಮೂಢನಂಬಿಕೆ, ಕಂದಾಚಾರ, ಮನುಷ್ಯತ್ವದ ಅರಿವು, ಶಿಕ್ಷಣ ಜಾಗೃತಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡಸಂರಕ್ಷಣೆ.... ಹೀಗೆ ಅವರ ಹೋರಾಟಕ್ಕೆ ಹಲವು ಮುಖಗಳು. ನ್ಯಾಯ ಸಮ್ಮತ ಬೇಡಿಕೆಗಳಿಗಾಗಿ ಹೋರಾಟವನ್ನು ಅಸ್ತ್ರ ಮಾಡಿಕೊಂಡಿದ್ದ ಇವರು ತಮ್ಮ ಹೋರಾಟದ ಜೊತೆಯಲ್ಲೇ ಅಷ್ಟೇ ಗಂಭೀರವಾಗಿ ಸಾಹಿತ್ಯ ಕೃಷಿಯನ್ನೂ ಮಾಡಿ ಸಾಹಿತ್ಯ ನಕ್ಷತ್ರವಾಗಿ ಹೊಳೆದವರು.

ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದ ಮಹಾಕವಯಿತ್ರಿ ಇವರೊಬ್ಬರೇ ಎಂದು ಜಿ.ಪಿ. ರಾಜರತ್ನಂ ಅವರಂಥ ಸಾಹಿತ್ಯ ದಿಗ್ಗಜರಿಂದಲೇ ಶಹಬಾಶ್‌ಗಿರಿ ಪಡೆದಿದ್ದ ಜಯದೇವಿ ತಾಯಿ ಲಿಗಾಡೆ ಅವರು, ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರಾದ ಮೇರು ಕೃತಿಗಳಲ್ಲೊಂದಾದ ಶ್ರೀ ಸಿದ್ದರಾಮೇಶ್ವರ ಪುರಾಣ ಮಹಾಕಾವ್ಯ ಸೇರಿದಂತೆ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಒಟ್ಟಾರೆ ಮೂವತ್ತೈದಕ್ಕೂ ಹೆಚ್ಚು ವೌಲಿಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಸಾಹಿತ್ಯ ಸುಗಂಧವನ್ನು ಮರಾಠಿ ಸಾಹಿತ್ಯಕ್ಕೂ ಪರಿಚಯಿಸಿದ ಕೀರ್ತಿಗೆ ಭಾಜನರಾಗಿದ್ದ ಇವರು ಕನ್ನಡ-ಮರಾಠಿ ಸಮನ್ವಯ ಕವಿ ಎಂದೇ ಪ್ರಸಿದ್ಧಿ ಪಡೆದವರು.

ಹಲವು ಹತ್ತು ರೀತಿಯಿಂದ ಕನ್ನಡಕ್ಕೆ ಶಕ್ತಿಯಿತ್ತು. ಕನ್ನಡದ ಮಹತ್ವವನ್ನು ಹೆಚ್ಚಿಸಿ, ವಿಶೇಷವಾಗಿ ತಮ್ಮ ಸಾಹಿತ್ಯ ರಚನೆಯಿಂದ ಕನ್ನಡ ಕೀರ್ತಿ ಕಳಶವನ್ನು ಬೆಳಗಿದ ಇಂಥ ಮಹಾತಾಯಿ ಡಾ.ಜಯದೇವಿತಾಯಿ ಲಿಗಾಡೆ 1912 ಜೂನ್ 23 ರಂದು ಸೊಲ್ಲಾಪುರದ ಇಂದ್ರ ಭವನದಲ್ಲಿ ಚೆನ್ನಬಸಪ್ಪ ಮಡಕಿ ಮತ್ತು ಸಂಗಮ್ಮ ಮಡಕಿ ದಂಪತಿಯ ಸುಪುತ್ರಿಯಾಗಿ ಜನಿಸಿದರು. ಇಂದ್ರ ವೈಭೋಗವೇ ತುಂಬಿದ್ದ ಸಿರಿವಂತ ಕುಟುಂಬದ ಕುಡಿಯಿವರು. ಇವರ ತಾಯಿಯ ತಂದೆಯಾದ ಅಜ್ಜ ವಾರದಮಲ್ಲಪ್ಪ ಅವರು ವಿಕ್ಟೋರಿಯಾ ರಾಣಿಯ ಆಡಳಿತದ ಅವಧಿಯಲ್ಲಿ ಭಾರತದ 12 ಪ್ರತಿಷ್ಠಿತ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ವಾರದಮಲ್ಲಪ್ಪನವರ ವಾಡೆ ಇಂದ್ರಭವನ ಇಂದು ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರದ ನಗರಸಭೆ ಕಚೇರಿಯಾಗಿದೆ. ಜಯದೇವಿ ತಾಯಿ ಲಿಗಾಡೆ ಅವರ ತಂದೆ ಚೆನ್ನಬಸಪ್ಪ ಮಡಕಿಯವರು ತತ್ವನಿಷ್ಠರೂ, ದಯಾಪರರೂ, ಸಜ್ಜನರೂ, ದೇಶಭಕ್ತರೂ, ಕುಶಲಮತಿಗಳೂ, ಸುಸಂಸ್ಕೃತರೂ ಆಗಿದ್ದರು. ತಾಯಿ ಸಂಗಮ್ಮ ಮಡಕಿಯೂ ಅಷ್ಟೆ. ಪರಮಶಿವಭಕ್ತಿಯೂ, ಒಳ್ಳೇ ಹಾಡುಗಾರ್ತಿಯೂ, ಉತ್ತಮ ವಾಗ್ಮಿಯೂ, ಸಮಾಜ ಸೇವಾಕಾಂಕ್ಷಿಯೂ ಆಗಿದ್ದು ಆ ಕಾಲಕ್ಕೆ ಇವರ ತಂದೆ-ತಾಯಿಗಳಿಬ್ಬರೂ ಒಳ್ಳೆ ಹೆಸರು ಗಳಿಸಿದ್ದರು. ಆಗರ್ಭ ಶ್ರೀಮಂತಿಕೆಯ ಅಜ್ಜ ವಾರದಮಲ್ಲಪ್ಪನವರಂತೂ ಶಿಕ್ಷಣ ಪ್ರೇಮಿಗಳಾಗಿ, ಉದ್ಯಮಿಗಳಾಗಿ, ಲಿಂಗಾಯತ ಸಮಾಜದ ಧುರೀಣರಾಗಿ ನಾಡು-ನುಡಿ, ಕಲೆ-ಸಾಹಿತ್ಯ, ಸಂಗೀತ-ಸಂಸ್ಕೃತಿಗಳ ಮಹಾಪೋಷಕರಾಗಿ ಪ್ರಸಿದ್ಧಿ ಹೊಂದಿದ್ದರು.

ಇಂಥ ಕುಟುಂಬದಲ್ಲಿ ಅರಳಿದ ಜಯ ದೇವಿತಾಯಿ ಲಿಗಾಡೆ ಅವರು ಬಾಲ್ಯದ ದಿನಗಳನ್ನು ಕಳೆದದ್ದು ತೋಟದ ಮನೆಯಲ್ಲಿ ಎಂದರೆ ಕೇಳಬೇಕೇ? ಪ್ರಕೃತಿ ಮಾತೆ ಹಸಿರುತೊಟ್ಟು ನಿತ್ಯ ಲಾಸ್ಯವಾಡುವ ವನಸಿರಿಯ ನಡುವೆ ಸಹಜವಾಗಿ ಇವರು ನಿಸರ್ಗದಿಂದ ಕಲಿತದ್ದು ಬಹಳ. ತೋಟದಲ್ಲಿ ಕೃಷಿಕರು, ಕೆಲಸಗಾರರು, ಕಾರ್ಮಿಕರು ಎಂಬ ಭೇದ-ಭಾವವಿಲ್ಲದೆ ಎಲ್ಲರೊಡನೆ ಬೆರೆತು ಬೆಳೆದ ಇವರಿಗೆ ಹಾಡು-ಹಸೆ, ಧಾರ್ಮಿಕ ಸಂಸ್ಕಾರಗಳು ತನ್ನಂತಾನೆ ದೊರೆತವು. ಬಾಲ್ಯದ ಸಾಹಿತ್ಯ-ಸಂಸ್ಕಾರದ ಬಗ್ಗೆ ಅವರೇ ಹೇಳುವಂತೆ ಬಾಲ್ಯದಲ್ಲೇ ತಾಯಂದಿರ ತ್ರಿಪದಿಗಳು ಅವರಿಗೆ ಮೆಚ್ಚುಗೆಯಾಗಿದ್ದವು. ಜೀವನದ ವಿವಿಧ ಸನ್ನಿವೇಶ-ಸಂದರ್ಭಗಳಲ್ಲಿ ಕೇಳಿದ ಹಾಡುಗಳು, ಅನುಭಾವ ಪದಗಳು, ಅವುಗಳ ಸಹಜ ಮಾಧುರ್ಯಇವರ ಮನಸ್ಸಿನ ಮೇಲೆ ನೆಲೆ ನಿಂತಿದ್ದವು. ವಿಶೇಷವಾಗಿ ತ್ರಿಪದಿಗಳ ಪರಿಣಾಮ, ಸರಳತೆ, ಬಂಧ, ಸತ್ವ, ಬೆಡಗು, ಲಯ, ಗತ್ತು, ಶೈಲಿ ಇವುಗಳೆಲ್ಲಾ ಬೇರೆರೂಪದಲ್ಲಿಇವರಿಗೆ ಪ್ರೇರಣೆ ನೀಡಿದ್ದವು. ಹೀಗೆ ಜಯದೇವಿತಾಯಿ ಲಿಗಾಡೆ ಅವರು ಬಾಲ್ಯದಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿದ್ದರು.

ಅಜ್ಜ ವಾರದಮಲ್ಲಪ್ಪ ಆರಂಭಿಸಿದ್ದ ಸ್ತ್ರೀ ಶಿಕ್ಷಣ ಚಳವಳಿಯ ಲಾಭ ಪಡೆದು ಮರಾಠಿ ಪ್ರಾಥಮಿಕ ಶಾಲೆಗೆ ಸೇರಿದ ಜಯದೇವಿತಾಯಿ ಲಿಗಾಡೆ ಅವರು ಆರನೆಯ ತರಗತಿವರೆಗೆ ಅಲ್ಲಿ ಕಲಿತುಕೊಂಡರು. ಹತ್ತನೇ ವಯಸ್ಸಿಗೇ ಬೃಹತ್ ಗ್ರಂಥಗಳನ್ನೆಲ್ಲಾ ನಿರರ್ಗಳವಾಗಿ ಓದುವುದನ್ನು ರೂಢಿಸಿಕೊಂಡಿದ್ದ ಇವರು ಶೂರ ಅರಸರನ್ನು, ವೀರನಾರಿಯರನ್ನು ಕುರಿತು ಮರಾಠಿಯಲ್ಲಿದ್ದ ಕಾದಂಬರಿಗಳನ್ನು ಓದುತ್ತಿದ್ದರು. 14ನೇ ವಯಸ್ಸಿಗೆ ಸೊಲ್ಲಾಪುರದ ಮತ್ತೊಂದು ಪ್ರತಿಷ್ಠಿತ ಲಿಗಾಡೆ ಮನೆತನದ ಚೆನ್ನಮಲ್ಲಪ್ಪ ಎಂಬ 16 ವರ್ಷದ ವರನೊಡನೆ 1926ರಲ್ಲಿ ಇವರ ವಿವಾಹ ನಡೆಯಿತು. ಸಂತೃಪ್ತ ದಾಂಪತ್ಯ ಜೀವನ ನಡೆಸಿದ ಇವರಿಗೆ ಮೂರು ಗಂಡು ಹಾಗೂ ಎರಡು ಹೆಣ್ಣು ಸೇರಿದಂತೆ ಒಟ್ಟು ಐದು ಮಂದಿ ಮಕ್ಕಳಿದ್ದರು. ತಮ್ಮ 34ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಇವರು ತಮ್ಮ ಇಡೀ ಕುಟುಂಬದ, ಮನೆತನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ಮುನ್ನಡೆಸಿದರು.

ಕೌಟುಂಬಿಕ ಹೊಣೆಯ ಜೊತೆಗೆ ಸಾಮಾಜಿಕ ಸೇವಾ ಕಾರ್ಯದಲ್ಲೂ ನಿರತರಾಗಿ ನಾಡು-ನುಡಿಗಾಗಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡ ಜಯದೇವಿತಾಯಿ ಲಿಗಾಡೆ ಅವರು ಸಾಹಿತ್ಯ ಕೃಷಿಯತ್ತ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಂಡು ಲೇಖನಿಯನ್ನು ಹರಿದುಬಿಟ್ಟರು. ಇದರ ಫಲವಾಗಿ ಇವರಿಂದ ಉತ್ಕೃಷ್ಟ ಸಾಹಿತ್ಯದ ಅಮೃತ ಫಲಗಳು ನಾಡಿಗೆ ದೊರೆಯುವಂತಾಯಿತು. ಇವರ ಸಾಹಿತ್ಯ-ಬರವಣಿಗೆಯನ್ನು ಕವಿ ಚೆನ್ನವೀರಕಣವಿ ಅವರ ಕಾವ್ಯನುಡಿಗಳಲ್ಲೇ ಹೇಳುವುದಾದರೆ-

ಎದೆತುಂಬಿ ಹಾಡಿದರೆ ಹಾಲ-ಹಳ್ಳವೆ ಹರಿದು

ಮುಳ್ಳು ಕಂಟಿಗಳೆದೆಯ ಕೊಳ್ಳವೂ ತುಂಬುವುದು

ತುಳುಕುವುದು ಸೊನ್ನಲಾಪುರದ ಸಿದ್ದರಾಮನ ಕೆರೆ

ನಾಡು ನುಡಿಯ ಅಭಿಮಾನದಿಂದ ದೇಶ-ಭಾಷೆಯ ಪ್ರೇಮದಿಂದ ಎಷ್ಟೊಂದು ಗಟ್ಟಿಯಾಗಿ ಜಯದೇವಿ ತಾಯಿ ಲಿಗಾಡೆ ಅವರು ಸಾಹಿತ್ಯ ಸೌಧವನ್ನು ನಿರ್ಮಿಸಿದರೋ ಅಷ್ಟೇ ಗಟ್ಟಿಯಾಗಿ ಕನ್ನಡವನ್ನು ಕಟ್ಟಿದವರಿವರು.ಇಂಥ ಕನ್ನಡದ ಮಹಾತಾಯಿ 1986 ಜುಲೈ 24 ರಂದು ಇಹಲೋಕಕ್ಕೆ ವಿದಾಯ ಹೇಳಿ ಶಿವಸಾನಿಧ್ಯ ಸೇರಿದರೂ ತಮ್ಮ ಬದುಕು-ಬರಹ, ಸಾಧನೆ-ಸಿದ್ಧಿಗಳಿಂದ ಚಿರಸ್ಥಾಯಿಯಾಗಿದ್ದಾರೆ.

Writer - ಬನ್ನೂರು ಕೆ.ರಾಜು

contributor

Editor - ಬನ್ನೂರು ಕೆ.ರಾಜು

contributor

Similar News