‘ಜೈ ಶ್ರೀರಾಮ್’ ರಾಜಕೀಯ ಸಮಾಜದ ಹೊಸ ಅಸ್ತ್ರ -ರವೀಶ್ ಕುಮಾರ್

Update: 2019-06-27 18:30 GMT

ನಾವು ಡಯಾಬಿಟೀಸ್‌ಗೆ ಹೊಂದಿಕೊಂಡಂತೆಯೇ ಈ ರಾಜಕೀಯ ಮತ್ತು ಮಾನಸಿಕ ಕಾಯಿಲೆಗೂ ಹೊಂದಿಕೊಳ್ಳುತ್ತಿದ್ದೇವೆ. ಯಾರಾದರೂ ಎಷ್ಟೆಂದು ಬರೆದಾರು? ಎಷ್ಟೆಂದು ಹೇಳಿಯಾರು? ಹೇಳುವವರು ಒಂದು ದಿನ ಸುಸ್ತಾಗುತ್ತಾರೆ ಎಂದು ಈ ಹಂತಕರಿಗೆ ತಿಳಿದಿದೆ. ಅವರ ಬಳಿ ಸಮರ್ಥನೆಗೆ ಒಂದೇ ತರ್ಕ ಇರುತ್ತದೆ. ಮೊದಲು ಗೋವು ಇತ್ತು, ಈಗ ಜೈಶ್ರೀರಾಮ್ ಸಿಕ್ಕಿದೆ.

ಬಾಲ್ಯದಲ್ಲಿ ಸೂರ್ಯೋದಯದ ಸಮಯದಲ್ಲಿ ಗಂಗಾ ನದಿಯಲ್ಲಿ ಸ್ನಾನಕ್ಕೆ ಹೋಗುವಾಗ ಬಹಳ ಜನರನ್ನು ಗಮನಿಸುತ್ತಿದ್ದೆ. ನದಿಯ ತೀವ್ರತೆ ಹಾಗೂ ಬೆಳಗ್ಗಿನ ಚಳಿಗೆ ಬೆದರಿದ ಜನರು ಪ್ರತಿದಿನ ಸ್ನಾನಕ್ಕೆ ನೀರಿಗಿಳಿಯುವಾಗ ಧೈರ್ಯ ತಂದುಕೊಳ್ಳಲು ರಾಮನ ಹೆಸರು ಜಪಿಸುತ್ತಿದ್ದರು. ಕಂಪಿಸುತ್ತಿದ್ದ ವ್ಯಕ್ತಿ ರಾಮನ ಹೆಸರು ಹೇಳಿದೊಡನೆ ಧೈರ್ಯ ತಂದುಕೊಂಡು ನೀರಿಗೆ ಹಾರುತ್ತಿದ್ದ. ಆದರೆ ಈಗ ಅದಕ್ಕೆ ತದ್ವಿರುದ್ಧ ವಾತಾವರಣ ನೋಡುತ್ತಿದ್ದೇನೆ. ತಮಗಿಂತ ದುರ್ಬಲರನ್ನು ಕೊಂದು ಹಾಕಲು ಮತ್ತು ಬೆದರಿಸಲು ಈಗ ಜೈಶ್ರೀರಾಮ್ ಘೋಷಣೆ ಹೇಳಿಸಲಾಗುತ್ತಿದೆ.
ಇಲ್ಲಿವರೆಗೆ ಗೋವಿನ ಹೆಸರಲ್ಲಿ ದುರ್ಬಲ ಮುಸ್ಲಿಮರಿಗೆ ಗುಂಪುಗಳು ಹೊಡೆಯುತ್ತಿದ್ದವು. ಈಗ ಜೈಶ್ರೀರಾಮ್ ಹೆಸರಲ್ಲಿ ಹೊಡೆಯುತ್ತಿದ್ದಾರೆ. ಈ ಎರಡೂ ಗುಂಪುಗಳು ಒಂದೇ ರಾಜಕೀಯ ಸಮಾಜದಿಂದ ಬಂದವರು. ಇದೇ ರಾಜಕೀಯ ಸಮಾಜದಿಂದ ಆಯ್ಕೆಯಾದ ಜನಪ್ರತಿನಿಧಿ ಲೋಕಸಭೆಯಲ್ಲಿ ಒಬ್ಬ ಸಂಸದರಿಗೆ ಅವರು ಮುಸಲ್ಮಾನರು ಎಂದು ನೆನಪಿಸಿ ಜೈಶ್ರೀರಾಮ್ ಹೆಸರಲ್ಲಿ ಅವರನ್ನು ಛೇಡಿಸುತ್ತಿದ್ದರು. ಬೀದಿಯಲ್ಲಿ ಆಗುತ್ತಿರುವುದೇ ಈಗ ಸದನದಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ.
ದಿಲ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಹಮ್ಮದ್ ಮೋಮಿನ್ ಅವರಿಗೆ ಯಾರದ್ದೋ ಕಾರು ತಾಗಿತು. ಏನೂ ಆಗಲಿಲ್ಲ. ಕಾರಿನವರು ಹತ್ತಿರ ಕರೆದು ಏನೂ ಆಗಲಿಲ್ಲ ತಾನೇ ಎಂದು ಕೇಳಿದರು. ಇಲ್ಲ, ಅಲ್ಲಾಹನ ಕೃಪೆ ಎಂದು ಹೇಳಿದ್ದೇ ತಪ್ಪಾಯಿತು. ಮೋಮಿನ್‌ರನ್ನು ಹಿಡಿದು ಥಳಿಸಲಾಯಿತು, ಜೈಶ್ರೀರಾಮ್ ಹೇಳುವಂತೆ ಹೇಳಲಾಯಿತು, ಬೈಗುಳಗಳೂ ಬಿದ್ದವು. ಅದೇ ಕಾರಿನವನು ಮತ್ತೆ ವಾಪಸ್ ಕಾರು ತಂದು ಮೋಮಿನ್‌ರಿಗೆ ಢಿಕ್ಕಿ ಹೊಡೆದ. ರಾಜಸ್ಥಾನ ಹಾಗೂ ಗುರುಗ್ರಾಮ (ಗುರ್ಗಾಂವ್)ಗಳಿಂದಲೂ ಜೈಶ್ರೀರಾಮ್ ಹೇಳಲು ಬಲವಂತ ಮಾಡಿದ ಘಟನೆಗಳು ವರದಿಯಾಗಿವೆ.


ಈಗ ಈ ರೋಡ್ ರೇಜ್ (ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಜಗಳ) ಘಟನೆಗಳು ಅಲ್ಲಲ್ಲಿ ಆಗುತ್ತಲೇ ಇರುತ್ತವೆ. ಸುಮ್ಮನೆ ಕಾರು ತಾಗಿದರೂ ಅಥವಾ ಮಾಮೂಲಿ ವಾಗ್ವಾದ ಕೂಡ ಈ ರೋಡ್ ರೇಜ್ ಕಾಯಿಲೆಯಿಂದಾಗಿ ವಿಕೋಪಕ್ಕೆ ತಿರುಗಿ ಇನ್ನೊಬ್ಬರ ಪ್ರಾಣ ತೆಗೆಯುವ ಹಂತಕ್ಕೆ ಹೋಗುತ್ತಿದೆ. ಈಗ ಕಾರು ತಾಗಿತು ಅಥವಾ ಇನ್ನೇನೋ ವಿವಾದ ಆಯಿತು ಎಂದು ಶುರುವಾಗಿ ಗುಂಪು ಸೇರಿ ಒಬ್ಬರನ್ನೊಬ್ಬರು ಹೊಡೆಯುವುದು ಭಾರತದಲ್ಲಿ ಸರ್ವೇಸಾಮಾನ್ಯವಾಗುತ್ತಿದೆ. ಇನ್ನು ಈ ಆಕಸ್ಮಿಕ ಸಿಟ್ಟಿಗೆ ರಾಜಕೀಯದ ಕೋಮು ಪೂರ್ವಗ್ರಹವೂ ಸೇರಿಕೊಂಡರೆ ಅದರ ಪರಿಣಾಮ ಮಾತ್ರ ಭಯಾನಕವಾಗಲಿದೆ. ಸಮಾಜದಲ್ಲಿ ಈಗಾಗಲೇ ಹೊಗೆಯಾಡುತ್ತಿರುವ ಸಿಟ್ಟಿಗೆ ಭಗ್ಗೆಂದು ಹೊತ್ತಿಕೊಳ್ಳಲು ಇನ್ನೊಂದು ಕಿಡಿ ಸಿಕ್ಕಂತಾಗುತ್ತದೆ. ಮೊದಲು ಗೋವು ಇತ್ತು ಈಗ ಜೈಶ್ರೀರಾಮ್ ಬಂದಿದೆ.
ಜಮ್‌ಶೆಡ್‌ಪುರದಲ್ಲಿ 24 ವರ್ಷದ ತಬ್ರೇಝ್‌ನನ್ನು ಜನರು ಕಳ್ಳತನದ ಆರೋಪದಲ್ಲಿ ಹಿಡಿದರು. ತಬ್ರೇಝ್‌ಕಳ್ಳತನ ಮಾಡಿಲ್ಲ ಎಂಬುದು ಆತನ ಮನೆಯವರ ಹೇಳಿಕೆ. ಆದರೆ ಜನರ ರಣೋತ್ಸಾಹ ಮತ್ತು ಅಲ್ಲಿನ ಕಾನೂನು ವ್ಯವಸ್ಥೆ ಹೇಗಿದೆ ನೋಡಿ. ತಬ್ರೇಝ್‌ನನ್ನು ಒಂದು ಕಂಬಕ್ಕೆ ಕಟ್ಟಿಹಾಕಿ ಏಳು ಗಂಟೆ ಹೊಡೆಯುತ್ತಾರೆ. ಜೈಶ್ರೀರಾಮ್ ಹೇಳಿಸುತ್ತಾರೆ. ಕೊನೆಗೆ ತಬ್ರೇಝ್ ಪ್ರಾಣಬಿಡುತ್ತಾನೆ.
ಇಲ್ಲಿ ಕಾನೂನಿನ ಆಡಳಿತ ಇದ್ದರೂ ಗುಂಪಿನ ದರ್ಬಾರ್ ಖಾಯಂ ಆಗಿಬಿಟ್ಟಿದೆ. ಈ ಗುಂಪಿಗೆ ಧರ್ಮ, ಜಾತಿ ಹಾಗೂ ಪರಂಪರೆಯ ಹೆಸರಲ್ಲಿ ವಿನಾಯಿತಿ ಸಿಕ್ಕಿದೆ. ಈ ಗುಂಪು ಯಾವುದಾದರೂ ಮಹಿಳೆಯನ್ನು ರಕ್ಕಸಿ ಎಂದು ಘೋಷಿಸಿ ಕೊಂದರೆ, ಅಂತರ್ಜಾತಿ ವಿವಾಹವಾದ ಜೋಡಿಯನ್ನು ಧರ್ಮದ ಹೆಸರಲ್ಲಿ ಕೊಂದು ಬಿಡುತ್ತದೆ. ಈಗ ಈ ಸರಣಿಗೆ ಯಾವುದಾದರೂ ತಪ್ಪುಮಾಡಿದ ಅಥವಾ ಜಗಳಕ್ಕೆ ಬಂದ ಮುಸಲ್ಮಾನನನ್ನು ಜೈಶ್ರೀರಾಮ್‌ನ ಹೆಸರಲ್ಲಿ ಕೊಲ್ಲುವುದು ಸೇರ್ಪಡೆಯಾಗಿದೆ.
ನಾವು ರಾಜಕೀಯವಾಗಿ ಮತ್ತು ಮಾನಸಿಕವಾಗಿ ಕಾಯಿಲೆ ಪೀಡಿತರಾಗಿದ್ದೇವೆ. ನಾವು ಡಯಾಬಿಟೀಸ್‌ಗೆ ಹೊಂದಿಕೊಂಡಂತೆಯೇ ಈ ರಾಜಕೀಯ ಮತ್ತು ಮಾನಸಿಕ ಕಾಯಿಲೆಗೂ ಹೊಂದಿಕೊಳ್ಳುತ್ತಿದ್ದೇವೆ. ಯಾರಾದರೂ ಎಷ್ಟೆಂದು ಬರೆದಾರು? ಎಷ್ಟೆಂದು ಹೇಳಿಯಾರು? ಹೇಳುವವರು ಒಂದು ದಿನ ಸುಸ್ತಾಗುತ್ತಾರೆ ಎಂದು ಈ ಹಂತಕರಿಗೆ ತಿಳಿದಿದೆ. ಅವರ ಬಳಿ ಸಮರ್ಥನೆಗೆ ಒಂದೇ ತರ್ಕ ಇರುತ್ತದೆ. ಮೊದಲು ಗೋವು ಇತ್ತು, ಈಗ ಜೈಶ್ರೀರಾಮ್ ಸಿಕ್ಕಿದೆ.
 ಸಿಟ್ಟಿನ ಈ ರೋಗ ಕೋಮುವಾದದ ರೂಪ ಪಡೆದುಕೊಂಡರೆ ನಾವೆಲ್ಲರೂ ಎಚ್ಚರಗೊಳ್ಳಬೇಕಾದ ಸಮಯ ಬಂದಿದೆ ಎಂದರ್ಥ. ಇಲ್ಲದಿದ್ದರೆ ಮತ್ತೆ ಯಾವುದಾದರೂ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಈ ಗುಂಪುಗಳ ಸಿಟ್ಟಿಗೆ ಬಲಿಯಾಗಬೇಕಾಗುತ್ತದೆ. ಉತ್ತರ ಪ್ರದೇಶದ ಗಾಝಿಯಾಬಾದ್‌ನ ಖೋಡಾದಲ್ಲಿ 50 ವರ್ಷದ ಆರೆಸ್ಸೆಸ್ ಸ್ವಯಂ ಸೇವಕರೊಬ್ಬರ ಹತ್ಯೆಯಾಯಿತು. ಅವರು ನೆರೆಯ ಯುವಕನಿಗೆ ತನ್ನ ಮಗಳನ್ನು ಭೇಟಿಯಾಗಬೇಡ ಎಂದಷ್ಟೇ ಹೇಳಿದ್ದರು. ಅವರೊಂದಿಗೆ ಜಗಳ, ಹೊಡೆದಾಟವಾಯಿತು. ಅವರು ಪ್ರಾಣ ಕಳೆದುಕೊಂಡರು. ಇಲ್ಲಿ ಕೊಲ್ಲುವಾಗ ರಾಮನ ಹೆಸರು ಹೇಳಲಿಲ್ಲ. ಆದರೆ ಇಲ್ಲಿ ಬಹುಶ ರಾಮಸ್ಮರಣೆ ಮಾಡುವವರೇ ಸಿಟ್ಟಿಗೆ ಬಲಿಯಾದರು.
ಧರ್ಮ ಅಥವಾ ಧರ್ಮ ಇಲ್ಲದ ಇಂತಹ ಹಲವು ಘಟನೆಗಳು ಜನರ ಪ್ರಾಣ ತೆಗೆಯುತ್ತಿವೆ. ರಾಜಕೀಯ ಕಾಯಿಲೆಗಳು ಲಸಿಕೆಗಳಿಂದ ಗುಣ ಆಗುವುದಿಲ್ಲ. ಜಮ್‌ಶೆಡ್‌ಪುರ, ಗುರುಗ್ರಾಮ, ದಿಲ್ಲಿ ಹಾಗೂ ರಾಜಸ್ಥಾನದ ಘಟನೆಗಳು ನಾಗರಿಕತೆಯ ಕಲ್ಪನೆಗೇ ವಿಶ್ವಾಸಾಘಾತ ನೀಡುವಂತಹವು. ಇವು ಶ್ರೀರಾಮನಿಗೆ ಮಾಡುವ ವಿಶ್ವಾಸದ್ರೋಹ ಎಂದು ನಾನು ಬರೆಯಬಹುದು. ಆದರೆ ನಾನು ಬರೆಯುವುದಿಲ್ಲ. ಏಕೆಂದರೆ ರಾಮನ ಹೆಸರಲ್ಲಿ ಕೊಲೆ ಮಾಡುವವರಿಗೆ ಮತ್ತು ಹಲ್ಲೆ ಮಾಡುವವರಿಗೆ ಇದರಿಂದ ಯಾವುದೇ ವ್ಯತ್ಯಾಸವಾಗದು. ಅವರು ರಾಮನ ಹೆಸರಲ್ಲೇ ಇದನ್ನು ಮಾಡುತ್ತಾರೆ. ಏಕೆಂದರೆ ಹಾಗೆ ಮಾಡಿದಾಗಲೇ ಇಲ್ಲಿನ ರಾಜಕೀಯ ಸಮಾಜ ಅವರಿಗೆ ಸಹಕಾರ ನೀಡುತ್ತದೆ ಮತ್ತು ಸರಕಾರ ಅವರನ್ನು ಬಚಾವ್ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ