ಪ್ರಕೃತಿಯ ಮಡಿಲಲ್ಲಿ ಭದ್ರೆಯ ಸೊಬಗು

Update: 2019-06-29 12:30 GMT

ಸುತ್ತಲೂ ಹಸಿರು ವನಗಳ ವೈಭವ ಆಕಾಶದೆತ್ತರಕ್ಕೆ ಕೈ ಚಾಚಿರುವ ಬೆಟ್ಟಗಳು, ಮಳೆಗಾಲದ ಜಿಟಿ ಜಿಟಿ ಹನಿಗಳ ಸೊಬಗು. ಭದ್ರಾ ಅಭಯಾರಣ್ಯದ ಪರಿಸರದ ರಂಗನ್ನು ಮತ್ತಷ್ಟು ಗಟ್ಟಿಗೊಳಿಸುವ ಹುಮ್ಮಸ್ಸು, ರುಧ್ರ ರಮಣೀಯ ದೃಶ್ಯಗಳು ನಯನಗಳಿಗೆ ಮುದ ನೀಡಿದರೆ ಮನಸಿಗೇನೋ ಸಂತೋಷ. ಭದ್ರಾ ಅಭಯಾರಣ್ಯ, ಭದ್ರಾ ಜಲಾಶಯ, ಹಲವಾರು ದೇವಸ್ಥಾನಗಳು ಪ್ರಕೃತಿ ಸೌಂದರ್ಯಕ್ಕೆ ಮತ್ತಷ್ಟು ಮೆರಗನ್ನು ನೀಡಿವೆ. ಪ್ರವಾಸಿಗರಿಗಂತೂ ಅತ್ಯುತ್ತಮ ಪ್ರವಾಸಿ ಸ್ಥಳವಾಗಿದ್ದು ಇಲ್ಲಿನ ದೃಶ್ಯ ವೈಭವಕ್ಕೆ ಮರುಳಾಗದವರೆ ಇಲ್ಲ. ಅಭಯಾರಣ್ಯ ವೀಕ್ಷಣೆಯ ಪ್ರವೇಶಕ್ಕೆ ಅರಣ್ಯ ಇಲಾಖೆ ಮತ್ತು ಭದ್ರಾ ರಿವರ್ರ್ ಟರ್ನ್ ಲಾಡ್ಜ್ ಸಹಾಯದಿಂದ ಹೋಗಬಹುದಾಗಿದೆ. 1958 ರಿಂದ 1972 ಜಾಗ್ರವ್ಯಾಲಿಯಾಗಿದ್ದ ಅರಣ್ಯವನ್ನು ನಂತರದ ದಿನಗಳಲ್ಲಿ ಅಭಯಾರಣ್ಯವಾಗಿ ಘೋಷಣೆ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ತರೀಕೆರೆಯಿಂದ 20 ಕಿ.ಮೀ.ಕ್ರಮಿಸಿದರೆ ಲಕ್ಕವಳ್ಳಿ ಬಳಿ ಇರುವ ಭದ್ರಾ ಅಭಯಾರಣ್ಯದ ಸುಂದರ ಕಂಪನ್ನು ಕಣ್ತುಂಬಿ ಕೊಳ್ಳಬಹುದು.

ರಸ್ತೆಯ ಇಕ್ಕೆಲಗಳಲ್ಲಿ ಮಾವಿನ ಮರಗಳು, ಕೃಷಿ ತೋಟಗಳು, ಪೈರು ನಾಟಿ ಮಾಡಿದ ಭತ್ತದ ಗದ್ದೆಗಳು ಅಲ್ಲಲ್ಲಿ ಹರಿಯುವ ಕಾಲುವೆ ನೀರು ಇಂತಹ ಸೌಂದರ್ಯ ಇನ್ನೆಲ್ಲಿ ಕಾಣಲು ಸಾಧ್ಯ. ಅರಣ್ಯ ಇಲಾಖೆ ಹಾಗೂ ರಿವರ್ ಟರ್ನ್ ಲಾಡ್ಜ್ ಸಹಭಾಗಿತ್ವದಲ್ಲಿ ಪ್ರತಿದಿನ ಬೆಳಗ್ಗೆ 6:30ರಿಂದ 8:30ರ ವೇಳೆಗೆ ಅರಣ್ಯದೊಳಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲಿ ನಿಮಗೆ ಸುಂದರ ಪ್ರಕೃತಿ ಮುಂಜಾನೆಯ ಮಂಜಿನ ಹನಿಗಳು ಪ್ರಾಣಿ ಪಕ್ಷಿಗಳ ಇಂಪಾದ ಧ್ವನಿ. ಅಲ್ಲೊಂದು, ಇಲ್ಲೊಂದು ಗಜರಾಜನ ಘರ್ಜನೆ. ಸುತ್ತ ದಟ್ಟ ಅರಣ್ಯದ ಮಧ್ಯೆ ಒಂದೇ ಒಂದು ಕವಲುದಾರಿ. ಎಲ್ಲಾ ನಿಶ್ಯಬ್ದ ವಾತಾವರಣ. ಬೀಟೆ, ಹೊನ್ನೆ, ತೇಗ, ಶ್ರೀಗಂಧ, ನೀಲಗಿರಿ, ಬಿದಿರು, ಸಾಗುವಾನಿ, ಮರಗಳು ಪ್ರಕೃತಿಯ ಸಂಪತ್ತು. ಇವುಗಳ ಮಧ್ಯೆ ಬಾನಾಡಿಗಳು ಗೂಡುಗಳ ಕಟ್ಟಿಕೊಂಡು ಆನಂದದಿಂದ ಜೀವಿಸುವ ಬಾಂಧವ್ಯ ಚಿವ್ ಚಿವ್ ಎನ್ನುವ ಸದ್ದು. ಅಲ್ಲೊಂದು ಇಲ್ಲೊಂದು ಜಿಂಕೆಗಳ ಹಿಂಡು ರಸ್ತೆಗಳ ಮಧ್ಯೆ ದಾಟುವ ದೃಶ್ಯ. ಪ್ರವಾಸಿಗರನ್ನೆಲ್ಲಾ ಕುತೂಹಲದಿಂದ ಕಾಯುತ್ತ ಕಣ್ಣು ಮಿಟುಕಿಸದೇ ಅತ್ತ ಕಡೆ ಗಮನಹರಿಸುವ ಕ್ಷಣ. ಆದರೆ ಲೆನ್ಸ್ ಕ್ಯಾಮರಾಗಳು ಮಾತ್ರ ಕ್ಲಿಕ್, ಕ್ಲಿಕ್ ಎನ್ನುವ ಸದ್ದು ಮಾಡುತ್ತ ಒಂದು ನಿಮಿಷದಲ್ಲೆ ನೂರಾರು ಫೋಟೊಗಳು ಹವ್ಯಾಸಿ ಛಾಯಾಗ್ರಾಹಕರಿಗಂತೂ ಒಂದು ರೀತಿ ಸಾಹಸವೇ ಸರಿ.

ದಟ್ಟ ಅರಣ್ಯದ ಮಧ್ಯೆ ಅರಣ್ಯ ರಕ್ಷಕರ ಕ್ಯಾಂಪ್‌ಗಳು ಹಾಗೂ 1905ರಲ್ಲಿ ಬ್ರಿಟಿಷರ ಕಾಲದ ಸುಕಲಟಿ ಬಂಗಲೇ ಇದ್ದು, ಇದು ಆಗಿನ ದಿನಗಳಲ್ಲಿ 2,770 ರೂ. ಖರ್ಚು ಮಾಡಿ ನಿರ್ಮಿಸಲಾಗಿದೆ. ಇತ್ತೀಚೆಗಿನ ಕಾಂಕ್ರಿಟ್ ಮಹಡಿ ಮನೆಗಳಿಗಿಂತ ಸುಂದರ ಸೊಬಗಿನಿಂದ ಕೂಡಿದೆ. ಇದರ ಸುತ್ತ ಸಾಗುವಾನಿ ಮರಗಳ ವನ ಅತ್ಯಂತ ಸುಂದರವಾಗಿದೆ. ಕಾಡಿನ ಕಡಿದಾದ ದಾರಿಯಲ್ಲಿ ಆನೆ, ಕರಡಿ, ಚಿರತೆ ಎಲ್ಲಿ ಇವೆ ಎಂದು ಅತ್ತ ಇತ್ತ ಕಣ್ಣಾಡಿಸುತ್ತ ಕುಳಿತ ಪ್ರವಾಸಿಗರು ಇನ್ನು ಇವೆಲ್ಲಾ ಕಾರು ಸಫಾರಿಯಲ್ಲಿ ಕಂಡು ಬರುವ ದೃಶ್ಯಾವಳಿಯಾಗಿದೆ.

ಇದರ ಜೊತೆಗೆ ಅರಣ್ಯ ಮತ್ತು ಭದ್ರಾ ಹಿನ್ನೀರನ್ನು ವೀಕ್ಷಿಸಲು ಅರಣ್ಯ ಇಲಾಖೆ ಬೋಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿದೆ. ಭದ್ರಾ ಹಿನ್ನೀರಿನಲ್ಲಿ ವಿಹರಿಸಲು ಇದೊಂತರ ಮಜವೇ ಸರಿ. ಮಳೆಗಾಲದ ಹನಿಗಳು. ಚಳಿ ವಾತಾವರಣ ಇಬ್ಬನಿಯ ಹನಿಗಳು ಮರದ ಎಲೆಗಳನ್ನು ತಬ್ಬಿ ಒಂದೊಂದೇ ಹನಿಗಳು ನೆಲಕ್ಕೆ ಅಪ್ಪಳಿಸಿದ ಕ್ಷಣಗಳು ಎಷ್ಟು ಮನಮೋಹಕ. ಇವುಗಳ ಮಧ್ಯೆ ಅಲ್ಲಲ್ಲಿ ನೀರಿನ ನಡುವೆ ಸಮುದ್ರದಲ್ಲಿನ ಮಂಜುಗಡ್ಡೆಯಂತೆ ಗೋಚರವಾಗುವ ಸಣ್ಣ ಗುಡ್ಡಗಳು, ಅವುಗಳಲ್ಲಿ ಬದುಕ ಕಟ್ಟಿಕೊಂಡಿರುವ ರಿವರ್ ಟರ್ನ್ ಹಕ್ಕಿಗಳ ಹಿಂಡು, ಕೂಹು ಕೂಹು ಸದ್ದು ಎಲ್ಲೋ ಸ್ವರ್ಗದಲ್ಲಿ ಸಂಚರಿಸಿದ ಅನುಭವ. ಈ ಹಕ್ಕಿಗಳು ಹಿಮಾಚಲ ಪ್ರದೇಶದಿಂದ ಪ್ರತಿ ಬೇಸಿಗೆ ಕಾಲದಲ್ಲಿ ಇಲ್ಲಿಗೆ ವಲಸೆ ಬರುತ್ತವೆ. ಈ ರೀತಿಯಾಗಿ ಆಗಮಿಸುವ ಹಕ್ಕಿಗಳು ಬೇಸಿಗೆ ಕಾಲವೆಲ್ಲಾ ಇಲ್ಲೇ ವಾಸವಿದ್ದು ಮೊಟ್ಟೆ ಇಟ್ಟು ಮರಿಗಳನ್ನು ಮಾಡಿ ಮಳೆಗಾಲ ಆರಂಭ ಆಗುತ್ತಿದ್ದಂತೆ ತಮ್ಮ ಮೂಲ ನಿವಾಸಕ್ಕೆ ಕುಟುಂಬ ಸಮೇತ ಹೊರಟು ಹೋಗುತ್ತವೆ. ರಿವರ್ ಟರ್ನ್ ಹಕ್ಕಿಗಳ ಮರಿಗಳು ಆಹಾರಕ್ಕಾಗಿ ಸಣ್ಣ ಸಣ್ಣ ಹೆಜ್ಜೆ ಇಡುತ್ತ ನೀರಿನತ್ತ ಸಾಗುವುದು ಒಂದೆಡೆ ಆದರೆ, ಮರಿಗಳಿಗೆ ಹಾರಾಟ ಕಲಿಸುವಲ್ಲಿ ತಲ್ಲೀನವಾದ ತಾಯಿ ಹಕ್ಕಿ. ನೀರಿನ ಮಧ್ಯೆ ಹಾರಾಟ ಆರಂಭಿಸಲು ಮರಿಗಳ ಹರಸಾಹಸ ಸ್ವಲ್ಪ ಯಾಮಾರಿದರು ನೀರಿನಲ್ಲಿ ಬಿದ್ದು ಸಾಯುವ ಪರಿಸ್ಥಿತಿ, ಇದರ ಜೊತೆ ಜೊತೆಗೆ ಮರಿಗಳ ಹಿಡಿಯಲು ಕಾಯುತ್ತ ಕುಳಿತ ಹದ್ದುಗಳ ಹಿಂಡು. ಇವೆಲ್ಲಾ ಸಮಸ್ಯೆಗಳಿಂದ ಪಾರು ಮಾಡಲು ತಾಯಿ ಹಕ್ಕಿ ಮಾಡುವ ಪ್ರಯತ್ನ ಇದೆಯಲ್ಲ, ಅದೊಂತರ ಸಾಹಸದ ವಿಚಾರ.

ಸುತ್ತಲೂ ಭದ್ರಾ ಹಿನ್ನೀರು ಇವುಗಳ ನಡುವೆ ಅಲ್ಲಲ್ಲಿ ಕರೆಂಟು ಕಂಬಗಳ ಆಕೃತಿಯ ಮರಗಳು ನೀರಿನ ಮಧ್ಯೆ ನಿಂತೂ ಬಕ ಪಕ್ಷಿಗಳಿಗೆ ಆಸರೆಯಾಗಿದೆ. ಕಿಂಗ್ ಫಿಶರ್, ಹದ್ದು, ಕಾರ್ಮೋರೆಟ್, ರಿವರ್ ಟರ್ನ್ ಹಕ್ಕಿಗಳು ಇವುಗಳ ಮೇಲೆ ಕುಳಿತು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತವೆ. ಮೀನುಗಳು ನೀರಿನಿಂದ ಮೇಲೆ ಬರುವುದೇ ತಡ ಅವುಗಳ ಬೇಟೆಗೆ ಮುಂದಾಗಿ ದಿನನಿತ್ಯದ ತಮ್ಮ ಆಹಾರವನ್ನು ಹುಡುಕಿಕೊಂಡು ಬಿಡುತ್ತವೆ. ಇನ್ನೂ ಬೇಸಿಗೆ ಕಾಲದಲ್ಲಿ ಭದ್ರಾ ಹಿನ್ನೀರಿನ ಮಟ್ಟ ಕೆಳ ಹಂತಕ್ಕೆ ಇಳಿಯುತ್ತಿದ್ದಂತೆ, ಅರಣ್ಯದ ಪ್ರಾಣಿಗಳೆಲ್ಲ ನೀರಿನ ಬಳಿಗೆ ಆಗಮಿಸುತ್ತವೆ. ಇದರಲ್ಲಿ ಮುಖ್ಯವಾಗಿ ಜಿಂಕೆಗಳ ಹಿಂಡು. ಇವುಗಳ ಜೊತೆಗೆ ಕಾಡು ಹಂದಿ, ಮುಳ್ಳಂದಿ, ನವಿಲು, ಬಾತುಕೋಳಿ, ಹುಲಿ, ಚಿರತೆ, ಕಾಡು ಎಮ್ಮೆ, ಸಾರಂಗ, ಲಂಗರೂ, ಪ್ರಾಣಿಗಳನ್ನು ಕಾಣಬಹುದು. ಇದರಲ್ಲಿ ಮುಖ್ಯವಾಗಿ ಆಹಾರ ಅರಸುತ್ತ ಬರುವ ಹುಲಿ ಚಿರತೆಗಳು ಸಾರಂಗದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅವುಗಳನ್ನು ಕಾಪಾಡಲು ಲಂಗರೂ ಕೂಗುತ್ತ ಓಡಲು ಆರಂಭಿಸುತ್ತದೆ, ಈ ಸಂದರ್ಭದಲ್ಲಿ ಸಾರಂಗಕ್ಕೆ ಸೂಚನೆ ದೊರೆತು ಅವು ಅಲ್ಲಿಂದ ಕಾಲ್ಕಿತ್ತು ಓಡುತ್ತ ಅಪಾಯದಿಂದ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತವೆ. ಅರಣ್ಯದಲ್ಲಿ ಈ ಎರಡು ಪ್ರಾಣಿಗಳ ನಡುವೆ ಒಂಥರ ಅವಿನಾಭಾವ ಸಂಬಂಧ, ಹೊಂದಾಣಿಕೆ, ಒಂದರ ಜೊತೆ ಮತ್ತೊಂದು ಒಡನಾಟ, ಸಾರಂಗ ಇದ್ದ ಸ್ಥಳದಲ್ಲಿ ಲಂಗರೂ ಇದ್ದೇ ಇರುತ್ತದೆ.

ಸಂಜೆಯ ಇಳಿ ತಂಪಲ್ಲಿ ಗಜರಾಜನ ಹಿಂಡು ನೀರಿಗಿಳಿದು ತನ್ನ ಆಪ್ತರೊಂದಿಗೆ ಆಟವಾಡುವ ದೃಶ್ಯ, ತನ್ನ ಮೇಲೆ ನೀರೆರಚಿಕೊಂಡು ಗುಂಪುಗಳ ಜೊತೆ ಮೋಜು ಮಾಡುವ ದೃಶ್ಯಗಳು ಕಾಣಸಿಗುತ್ತವೆ. ರಾಜ ಗಾಂಭೀರ್ಯದ ನಡಿಗೆ, ಒಂದು ಮತ್ತೊಂದರ ನಡುವೆ ಘರ್ಷಣೆ, ಆ ಸಂದರ್ಭದಲ್ಲಿ ಅರಣ್ಯವನ್ನೇ ನಡುಗಿಸುವ ಘರ್ಜನೆ ಎಂತಹವರನ್ನು ಭಯ ಹುಟ್ಟಿಸಿ ಬಿಡುತ್ತವೆ. ಇವುಗಳನ್ನೆಲ್ಲಾ ಕಣ್ತುಂಬಿಕೊಳ್ಳುವ ಪ್ರವಾಸಿಗರ ನಯನಗಳಿಗೆ ಹಾಗೂ ಮನಸಿಗೆ ಎಲ್ಲಿಲ್ಲದ ಆನಂದ ಮನಸಿನಲ್ಲಿ ಎಂತಹ ನೋವುಗಳಿದ್ದರೂ ಒಂದೇ ಕ್ಷಣದಲ್ಲಿ ಮರೆಯಾಗುವ ಅನುಭವ. ಇನ್ನು ಕ್ಯಾಮರಾಗಳ ಕಣ್ಣಿಗೆ ಪ್ರಾಣಿಗಳ ಓಡಾಟ ಹೊಳೆಯುವ ನಕ್ಷತ್ರವಿದ್ದಂತೆ, ಎಷ್ಟೇ ದೂರದಲ್ಲಿ ಇರುವ ಪ್ರಾಣಿಗಳನ್ನು ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಸೆರೆ ಹಿಡಿಯಬಹುದು. ಸುಂದರ ತಿಳಿಸಂಜೆ ಆಗ ತಾನೇ ರವಿ ತನ್ನ ದಿನಚರಿಗೆ ಗುಡ್ ಬೈ ಹೇಳಿ ಗುಡ್ಡಗಳ ಮರೆಯಲಿ ಮರೆಯಾಗುತ್ತ ಸಾಗುವ ದೃಶ್ಯ, ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಕನ್ನಡಿ ಹಿಡಿದ ಹಾಗೇ ಇರುತ್ತದೆ.

ನೀರಿನ ಮಧ್ಯೆ ಬೋಟ್‌ನಲ್ಲಿ ಚಲಿಸುವ ಪ್ರವಾಸಿಗರಿಗಂತೂ ಎಲ್ಲೋ ಸಮುದ್ರದಲ್ಲಿ ಚಲಿಸಿದ ಅನುಭವ ಗಾಳಿಯ ರಭಸಕ್ಕೆ ಅತ್ತ ಇತ್ತ ಮೈ ಮೇಲೆ ಹಾರುವ ನೀರಿನ ಅಲೆಗಳು ಸಂಜೆಯ ತಂಪಿನಲ್ಲಿ ಮೈಗೆ ಚಳಿಯನ್ನು ಮೂಡಿಸಿಬಿಡುತ್ತವೆ. ಇಂತಹ ಸೊಬಗನ್ನು ಅನುಭವಿಸಲು ಪ್ರವಾಸಿಗರು ಭದ್ರಾ ಅಭಯಾರಣ್ಯಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು. ಇಂತಹ ಸುಂದರ ಕ್ಷಣಗಳನ್ನು ಸವಿಯಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅರಣ್ಯ ಇಲಾಖೆಯ ಪರಿಶ್ರಮದಿಂದ. ಇಷ್ಟೆಲ್ಲಾ ಸೊಬಗು, ವಿಸ್ಮಯಗಳನ್ನು ಹೊಂದಿರುವ ಭದ್ರ ಅಭಯಾರಣ್ಯವನ್ನು ವಿಕ್ಷೀಸಲು ಸಾಧ್ಯವಾಗಿದೆ. ಇದರ ಜೊತೆಗೆ ಸಾರ್ವಜನಿಕರು, ಪ್ರವಾಸಿಗರೂ, ಅರಣ್ಯ ಸಿಬ್ಬಂದಿಯ ಜೊತೆಗೆ ಅರಣ್ಯದ ರಕ್ಷಣೆಗೆ ಶ್ರಮಿಸಬೇಕು ಆಗ ಮಾತ್ರ ಇನ್ನಷ್ಟು ದೃಶ್ಯಗಳನ್ನು ಕಾಣಬಹುದು.

Writer - ಡ್ಯಾನಿಯಲ್ ಜೆ., ಲಕ್ಕವಳ್ಳಿ

contributor

Editor - ಡ್ಯಾನಿಯಲ್ ಜೆ., ಲಕ್ಕವಳ್ಳಿ

contributor

Similar News