ಚುಟುಕು

Update: 2019-06-29 12:38 GMT

1. ಯುದ್ಧ ಮತ್ತು ಶಾಂತಿ

ಬಿಕ್ಕಿಬಿಕ್ಕಿ ಅಳುತ್ತಾ ಕುಳಿತ ಶಾಂತಿಯನ್ನು ನೋಡಿ ಯುದ್ಧ ಕೇಳಿತು. ‘ಯಾಕೆ ಅಳುತ್ತಿದ್ದೀಯಾ?’ ಶಾಂತಿಯ ಅಳು ಮತ್ತು ಜೋರಾಯಿತು. ‘ಹೇಳು, ಏನಾಯ್ತು?’ ಯುದ್ಧ ಮತ್ತೆ ಒತ್ತಾಯಿಸಿತು. ‘‘ಈ ಮನುಷ್ಯರು ಹೀಗೂ ಮಾಡುತ್ತಾರೆಂದು ನಾನು ಅಂದುಕೊಂಡೇ ಇರಲಿಲ್ಲ. ನಿನ್ನೆ ನನ್ನ ಸಂಕೇತವಾದ ಆಲಿವ್ ಎಲೆ ಹಿಡಿದ ಪಾರಿವಾಳವನ್ನು ಸಾಯಿಸಿಬಿಟ್ಟರು. ಇವತ್ತು ಎಲ್ಲರೂ ಒಮ್ಮೆಲೇ ನಾನಾ ಕಡೆಯಿಂದ ಬಂದರು. ಎಲ್ಲರ ಕೈಯಲ್ಲೂ ಆಯುಧ ಕಂಡು ನಾನು ಭೀತಿಯಿಂದ ಕಿರುಚಿದೆ. ಯಾರೋ ಕೆಲವು ಮಕ್ಕಳು, ಕೆಲವು ಮುದುಕರು, ಬೆರಳೆಣಿಕೆಯ ಯುವಕರು ಬಂದು ಶಾಂತಿಯನ್ನು ಕೊಲ್ಲಬೇಡಿ, ನಮಗೆ ಶಾಂತಿ ಬೇಕು. ನಮಗಷ್ಟೇ ಅಲ್ಲ ನಿಮಗೂ ಇಡೀ ಪ್ರಪಂಚಕ್ಕೂ ಶಾಂತಿ ಬೇಕು ಅಂದರು. ಸಾಗರೋಪಾದಿಯಲ್ಲಿ ಸೇರಿದ್ದ ಜನ ಅವರಿಗೆ ಬೆದರಿಕೆ ಹಾಕಿದರು. ಬೇಗ ಇವಳನ್ನು ಇಲ್ಲಿಂದ ಕರೆದೊಯ್ಯಿರಿ ಅವರ ಆರ್ಭಟಕ್ಕೆ ಹೆದರಿದ ನನ್ನ ಜನ ನನ್ನನ್ನು ಹೊತ್ತು ತಂದು ಇಲ್ಲಿ ಅಡಗಿಸಿಟ್ಟಿದ್ದಾರೆ. ನನಗೆ ಇಂತಹ ಹೀನಾಯ ಸ್ಥಿತಿ ಬಂತಲ್ಲ ಎಂದು ಅಳುತ್ತಿದ್ದೇನೆ’’ ಯುದ್ಧ, ಶಾಂತಿಯನ್ನು ಸಮಾಧಾನಪಡಿಸಲು ಏನೋ ಹೇಳಬಯಸಿತು. ಆದರೆ ಆ ಜನಸಾಗರದ ಮೊರೆತದಲ್ಲಿ ಅದರ ಮಾತು ಶಾಂತಿಗೆ ಕೇಳಿಸಲಿಲ್ಲ. ವಾಟ್ಸ್ ಆ್ಯಪ್, ಫೇಸ್ ಬುಕ್, ಟ್ವಿಟರ್, ಟಿ.ವಿ.ಚಾನೆಲ್, ಗಾಳಿಸುದ್ದಿ ಮುಂತಾದ ಕ್ಷಿಪಣಿಗಳನ್ನೂ ಬಾಂಬುಗಳನ್ನೂ ಹೊತ್ತ ಜನ ಯುದ್ಧವನ್ನು ಎತ್ತಿಕೊಂಡು ವಿಜ್ರಂಭಣೆಯಿಂದ ಮೆರವಣಿಗೆ ಹೊರಟರು. ಅಸಹಾಯಕನಾಗಿ ಶಾಂತಿಯನ್ನು ನೋಡಿದ ಯುದ್ಧ ತನ್ನನ್ನು ಹೊತ್ತವರ ತೋಳುಗಳಿಂದ ಇಳಿಯಲಾರದೇ ಯಾಂತ್ರಿಕವಾಗಿ ಮುಂದುವರಿಯಿತು. ಶಾಂತಿ ಮುಂದಾಗುವುದನ್ನು ನೆನೆದು ಕಣ್ಣು ಮುಚ್ಚಿತು.

2. ಪ್ರೀತಿ ಹಾಗೂ ಕಾಡ್ಗಿಚ್ಚು

ಪ್ರೀತಿ ಒಮ್ಮೆ ಲೋಕ ಸಂಚಾರ ಹೊರಟಿತ್ತು. ಒಂದು ಉತ್ತಮ ಮಾದರಿಯನ್ನು ಹುಡುಕುವುದೇ ಅದರ ಪ್ರಯಾಣದ ಉದ್ದೇಶ. ಕ್ಷಣ ಕ್ಷಣಕ್ಕೂ ಮರಳಿ ಬಂದು ದಡಕ್ಕೆ ಮುತ್ತಿಕ್ಕುವ ಅಲೆಯದ್ದೇ ನಿಜವಾದ ಮಾದರಿ ಎಂದು ಒಂದು ಕ್ಷಣ ಅನಿಸಿತು. ಆದರೆ ಮರುಕ್ಷಣ ಇಲ್ಲ, ಇದು ಪರಿಪೂರ್ಣವಲ್ಲ. ದಡವೆಂದೂ ಒಣಗಿಯೇ ಇದೆ!. ಪ್ರೀತಿ ಮುಂದೆ ಹೊರಟಿತು. ಒಂದು ಜೊತೆ ಲವ್ ಬರ್ಡ್ಸ್ ಪರಸ್ಪರ ಕೊಕ್ಕುಗಳನ್ನು ತಿಕ್ಕಿ ಮುತ್ತಿಕ್ಕುತ್ತಿದ್ದವು. ಸ್ವಲ್ಪ ಹೊತ್ತು ನಿಂತರೂ ಈ ಯಾಂತ್ರಿಕತೆಯಲ್ಲಿ ಏನೂ ಬದಲಾವಣೆ ಕಾಣದ ಪ್ರೀತಿ, ಅಲ್ಲ, ಇದೂ ನನ್ನ ಮಾದರಿಯಲ್ಲ.. ಎನ್ನುತ್ತಾ ಮುಂದೆ ಸಾಗಿತು.

 ಎಲ್ಲೆಲ್ಲಿ ಅಲೆದರೂ ಪ್ರೀತಿಗೆ ಏನೋ ಏಕತಾನತೆ, ಕೃತಕತೆ ಅಲ್ಲೆಲ್ಲಾ ಗೋಚರಿಸುತ್ತಿತ್ತು. ಎಲ್ಲೂ ಅದಕ್ಕೆ ಶಾಶ್ವತ ಬದಲಾವಣೆಯಾಗಲೀ ರೂಪಾಂತರವಾಗಲೀ ಕಾಣಲಿಲ್ಲ. ಅಷ್ಟರಲ್ಲಿ ಏನೋ ಚಟಪಟ ಸದ್ದು, ಅಸಾಧಾರಣ ಬಿಸಿ, ಪ್ರಖರ ಬೆಳಕು, ಸುಟ್ಟ ವಾಸನೆ ಅದರ ಪಂಚೇಂದ್ರಿಯಗಳನ್ನು ತಲುಪಿತು. ವೇಗವಾಗಿ ವ್ಯಾಪಿಸುವ ಕಾಡ್ಗಿಚ್ಚು ಕ್ಷಣಮಾತ್ರದಲ್ಲಿ ಗಿಡಮರ, ಪ್ರಾಣಿಪಕ್ಷಿಗಳನ್ನೆಲ್ಲ ಸುಟ್ಟು ಬೂದಿ ಮಾಡುತ್ತಾ ಮುನ್ನುಗ್ಗುತ್ತಿತ್ತು. ‘‘ಓ, ಇದೇ ನನ್ನ ಮಾದರಿ. ಎಂತಹ ರೂಪಾಂತರ! ನಾನು ಹೀಗೇ ಇರಬೇಕು! ಇನ್ನೂ ಸ್ವಲ್ಪ ಹತ್ತಿರ ಹೋಗಿ ನೋಡುತ್ತೇನೆ! ಆಶ್ಚರ್ಯ,’’ ಉದ್ವೇಗಗಳಿಂದ ಹತ್ತಿರ ಹೋದ ಪ್ರೀತಿಯನ್ನು ಕ್ಷಣ ಮಾತ್ರದಲ್ಲಿ ದ್ವೇಷದ ಕೆನ್ನಾಲಗೆ ಚಾಚಿ ಎಳೆದಿತ್ತು. ಪ್ರಾಣಿ, ಪಕ್ಷಿ, ಗಿಡಮರಗಳ ಪ್ರಾಣದೊಂದಿಗೆ ಲೀನವಾಗುವಾಗ ದ್ವೇಷದುರಿಯ ಅಟ್ಟಹಾಸ ಅದರ ಕಿವಿಗೆ ಅಸ್ಪಷ್ಟವಾಗಿ ಕೇಳುತ್ತಿತ್ತು.

3. ಅತಿಥಿ

ತಮ್ಮ ಕಚೇರಿಗೆ ಬರಲಿರುವ ಆ ಪ್ರಸಿದ್ಧ ವ್ಯಕ್ತಿಯ ಸ್ವಾಗತಕ್ಕಾಗಿ ಅವರು ಬಹಳಷ್ಟು ಸಿದ್ಧತೆಗಳನ್ನು ಮಾಡಿದ್ದರು. ತಮ್ಮ ಆತಿಥ್ಯದಲ್ಲಿ ಅವರಿಗೆ ಒಂದಿನಿತೂ ಕುಂದು ಕೊರತೆ ಬರಬಾರದೆಂದು ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಅಷ್ಟರಲ್ಲಿ ಗೇಟಿನ ಬಳಿ ಯಾವುದೋ ಆಟೋ ನಿಂತ ಸದ್ದಾಯಿತು. ಸಾಧಾರಣ ಬಟ್ಟೆ ಧರಿಸಿದ ಒಬ್ಬ ಗಡ್ಡಧಾರಿ ಮುದುಕ ಅದರಿಂದ ಇಳಿದು ಕಚೇರಿಯ ಕಡೆಗೆ ನಡೆದು ಬಂದ. ಸೆಕ್ಯೂರಿಟಿ ತಡೆದಾಗ ಏನೋ ಹೇಳಿ ಅವನ ಬಾಯಿ ಮುಚ್ಚಿಸಿ ಮುಂದಕ್ಕೆ ಅಡಿಯಿಟ್ಟ. ಈತನನ್ನು ಕಂಡು ಎಲ್ಲರಿಗೂ ಅಸಹನೆ. ‘‘ನಾನು ನಿಮ್ಮ ಬಾಸ್‌ನ್ನು ನೋಡಬೇಕು’’ ಆತ ಹೇಳಿದ. ‘‘ಏಯ್, ಬೇಗ ಇಲ್ಲಿಂದ ಹೊರಡು. ಹಾಗೆಲ್ಲಾ ಬಾಸನ್ನು ನೋಡಲಾಗುವುದಿಲ್ಲ. ನಾವೆಲ್ಲಾ ಬಹುಮುಖ್ಯವಾದ ಅತಿಥಿಯೊಬ್ಬರ ನಿರೀಕ್ಷೆಯಲ್ಲಿದ್ದೇವೆ’’ ಅಲ್ಲಿದ್ದವರು ಅವನನ್ನು ಸಾಗಹಾಕಲು ನೋಡಿದರು. ಅಷ್ಟರಲ್ಲಿ ಯಾಕೋ ಹೊರಬಂದ ಬಾಸ್ ಕೆಂಡಾಮಂಡಲವಾದ. ‘‘ಈ ಭಿಕಾರಿಯನ್ನು ಯಾರು ಒಳಗೆ ಬಿಟ್ಟರು!? ಸೆಕ್ಯೂರಿಟಿ...’’ ಆತ ಅರಚಲು ಶುರು ಮಾಡಿದಾಗ ಆ ಮುದುಕ ತನ್ನ ಹಳೆಯ ಕೋಟಿನೊಳಗಿಂದ ಒಂದು ಗುರುತುಪತ್ರ ತೆಗೆದು ಬಾಸ್‌ನ ಕಡೆ ಚಾಚಿದ. ಬಾಸ್ ಅದನ್ನು ನೋಡುತ್ತಿರಬೇಕಾದರೆ ಆತ ತನ್ನ ಹಳೆಯ ಕೋಟು ಕಳಚಿದ, ತಲೆಯಲ್ಲಿದ್ದ ವಿಗ್, ಕೃತಕ ಗಡ್ಡ ತೆಗೆದ. ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸಿದರು.

4. ಪ್ರೀತಿಯೆಂದರೆ...

‘ಪ್ರೀತಿಯೆಂದರೇನು?’ ಅವಳು ಅವನಲ್ಲಿ ಕೇಳಿದಳು. ‘‘ಪ್ರೀತಿಸುವುದು..’’ ಆತ ನಗುತ್ತಾ ಉತ್ತರಿಸಿದ. ಅವಳಿಗೆ ಆ ಉತ್ತರದಿಂದ ತೃಪ್ತಿಯಾಗಲಿಲ್ಲ. ‘‘ಹಾಗಾದರೆ ಪ್ರೀತಿಯ ಮಾನದಂಡ ಯಾವುದು?’’ ‘‘ಪ್ರೀತಿ’’ ಆತ ಪುನಃ ನಸುನಗುತ್ತಾ ಉತ್ತರಿಸಿದಾಗ ಅವಳಿಗೆ ಮುನಿಸೇರಿತು. ‘‘ಪ್ರೀತಿ ಹೇಗಿರಬೇಕು?’’ ಮತ್ತೆ ಪ್ರಶ್ನೆ ಹಾಕಿದಳು. ‘‘ಪ್ರೀತಿಯಾಗಿರಬೇಕು’’ ಅವಳ ಕಣ್ಣುಗಳನ್ನೇ ನೋಡುತ್ತಾ ಆತ ಉತ್ತರಿಸಿದ. ಅವನ ಕಣ್ಣುಗಳೊಂದಿಗೆ ಕಣ್ಣಲ್ಲೇ ಮಾತಾಡಿದಳು. ಅಲ್ಲಿ ಕೇವಲ ಪ್ರೀತಿಯನ್ನಷ್ಟೇ ಕಂಡ ಅವಳಿಗೆ ಮತ್ತೆ ಪ್ರಶ್ನೆಗಳಿರಲಿಲ್ಲ.

Writer - ಜೆಸ್ಸಿ ಪಿ.ವಿ. ಪುತ್ತೂರು

contributor

Editor - ಜೆಸ್ಸಿ ಪಿ.ವಿ. ಪುತ್ತೂರು

contributor

Similar News