ಸುಲ್ತಾನಾಪುರದ ಬಾಲಸೇವಕರು

Update: 2019-06-29 12:50 GMT

ರವಿವಾರ ವಾರದ ರಜಾದಿನ ಆದುದರಿಂದ, ಸುಲ್ತಾನಾಪುರದ ಶಾಲಾ ಮಕ್ಕಳು ಆಟದ ಮೈದಾನದ ಹತ್ತಿರ ಬಾಲ್, ಬ್ಯಾಟ್, ವಿಕೆಟುಗಳನ್ನು ಹಿಡಿದುಕೊಂಡು ಆಟ ಆಡಲು ಬಂದಿದ್ದರು. ಮಳೆಗಾಲ ಪ್ರಾರಂಭವಾದುದರಿಂದ, ಹಿಂದಿನ ದಿನದ ರಾತ್ರಿ ಸುರಿದ ಭಾರೀ ಮಳೆಗೆ ಮೈದಾನದ ತುಂಬೆಲ್ಲಾ ಕೆಸರು ನೀರು ನಿಂತುಕೊಂಡಿತ್ತು. ಮಕ್ಕಳಿಗೆ ಆಟ ಆಡಲು ಅಸಾಧ್ಯವಾಗಿತ್ತು. ಮಕ್ಕಳೆಲ್ಲ ಏನು ಮಾಡುವುದೆಂದು ಆಲೋಚಿಸುತ್ತ, ಮೈದಾನದ ಅಂಚಿನಲ್ಲಿದ್ದ ಮರದಡಿಯಲ್ಲಿ ಕುಳಿತ್ತಿದ್ದರು. ‘‘ಮಿತ್ರರೇ... ಮಳೆಗಾಲದ ಸಮಯವಾದ್ದರಿಂದ ನಮಗೆ ಇನ್ನು ಮುಂದೆ ಕ್ರಿಕೆಟ್ ಆಡಲು ಆಗುವುದಿಲ್ಲ. ಮಳೆ ನಿಂತರೂ ಮೈದಾನ ಆಟವಾಡಲು ಯೋಗ್ಯವಾಗಿಲ್ಲ. ಹಾಗಾಗಿ ನಾವು ಒಂದು ಕೆಲಸ ಮಾಡೋಣ. ಅಂದರೆ ಇಂದು ನಾವೆಲ್ಲ ಸಮಾಜದ ಮುಂದಿನ ದಿನಗಳ ಒಳಿತಿಗಾಗಿ ಎಲ್ಲರು ಸೇರಿಕೊಂಡು ಶ್ರಮದಾನ ಮಾಡೋಣ’’ ಎಂದು ರಹೀಂ ಹೇಳಿದ. ಅಂತಹ ಸಮಾಜಕ್ಕೆ ಒಳಿತಾಗುವ ಶ್ರಮದಾನ ಏನೆಂದು ರಾಮನು ರಹೀಂನಲ್ಲಿ ಪ್ರಶ್ನಿಸಿದನು.

‘‘ನೋಡಿ ಗೆಳೆಯರೇ... ಈ ಸಲದ ಭೀಕರ ಜಲಕ್ಷಾಮ ನಿಮಗೆ ತಿಳಿದಿದೆ. ನಾವು ಊರ ಜನರು ಕುಡಿಯುವ ನೀರಿಗಾಗಿ ಪರದಾಡ ಬೇಕಾಯಿತು. ಈ ಬಾರಿಯ ಬೇಸಿಗೆಗಾಲದಲ್ಲಿ ಕೆರೆ ಬಾವಿಗಳು ಬತ್ತಿ ಹೋಗಲು, ಎಲ್ಲದಕ್ಕೂ ಅಂತರ್ಜಲದ ಕುಸಿತ..! ಮಳೆ ನೀರೆಲ್ಲಾ ಭೂಗರ್ಭ ಸೇರದೆ, ಕಡಲ ಗರ್ಭ ಸೇರುತ್ತಿರುವುದು ಮುಖ್ಯ ಕಾರಣವೆಂದು, ನಿನ್ನೆಯ ದಿನ ನಮಗೆ ‘ಜಾನ್ ಡಿಸೋಜ ಮೇಸ್ಟ್ರು’ ತರಗತಿಯಲ್ಲಿ ವಿಜ್ಞಾನದ ಪಾಠ ಮಾಡುವಾಗ ಹೇಳಿದ್ದು ನಿಮಗೆಲ್ಲ ನೆನಪಿದೆ ಅಲ್ಲವೇ..! ಮನೆ ವಠಾರದಲ್ಲಿ ಸ್ಥಳಾವಾಕಾಶ ಇದ್ದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಅದರಲ್ಲಿ ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಹರಿಯಲು ಬಿಟ್ಟು, ಭೂಗರ್ಭ ಸೇರಿಸುವ ಪ್ರಯತ್ನ ಮಾಡಬೇಕು. ಹೀಗೆ ಎಲ್ಲಾ ಮನೆಗಳಲ್ಲಿ ಈ ಉಪಾಯ ಮಾಡಿದರೆ ಮುಂದಿನ ದಿನದಲ್ಲಿ ಅಂತರ್ಜಲ ಕುಸಿತ ಕಾಣದೆ ಜಲಕ್ಷಾಮ ಭೀತಿ ಎದುರಾಗದೆಂದು ಜಾನ್ ಡಿಸೋಜ ಮಾಸ್ತರರು ಹೇಳಿದ್ದರು. ಈ ವಿಷಯ ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ಸಲಹೆಯಾಗಿ ಹೇಳಬೇಕೆಂದು ಅವರು ನಮ್ಮಲಿ ಸಾಮಾಜಿಕ ಕಾಳಜಿ ಮೂಡಿಸಿದ್ದರು. ಹಾಗಾಗಿ ನಾವು ಅವರು ಹೇಳಿದ ಸಾಮಾಜಿಕ ಕಾಳಜಿಯನ್ನು ಕಾರ್ಯರೂಪಕ್ಕೆ ತರೋಣ’’ ಎಂದು, ರಹೀಂನು ರಾಮನ ಪ್ರಶ್ನೆಗೆ ಉತ್ತರಿಸಿದನು.

‘‘ಹಾಗಾದರೆ ನಾವೆಲ್ಲಾ ಮಾಡಬೇಕಾದದ್ದು ಏನು’’ ಎಂದು ರಹೀಂನಲ್ಲಿ ರಾಮನು ಮರು ಪ್ರಶ್ನಿಸಿದನು. ಮೈದಾನದ ಕೊನೆಯಲ್ಲಿ ಅದೆಷ್ಟೋ ವರ್ಷಗಳಿಂದ ಹಾಳುಬಿದ್ದ ಬಾವಿಯೊಂದಿದೆ. ಅದನ್ನು ಬ್ರಿಟಿಷರ ಕಾಲಘಟ್ಟದಲ್ಲಿ ನಿರ್ಮಿಸಿದೆಂದು ಬಲ್ಲವರು ಹೇಳುತ್ತಾರೆ. ಅದರ ಪಕ್ಕದಲ್ಲಿಯೇ ಮಳೆ ನೀರು ಹರಿದು ಹೋಗುವ ತೋಡು ಒಂದಿದೆ. ಅದಕ್ಕೊಂದು ಕಾಲುವೆ ಮಾಡಿ ಪಾಳು ಬಾವಿಯೊಳಗೆ ನೀರು ಹೋಗಲು ದಾರಿ ವ್ಯವಸ್ಥೆ ಮಾಡೋಣ. ಅಲ್ಲದೆ ಮೈದಾನದ ತಗ್ಗು ಪ್ರದೇಶದಲ್ಲಿ ನಿಂತ ನೀರು ಬಾವಿಯೊಳಗೆ ಹೋಗಲು ದಾರಿ ಮಾಡೋಣ ಇದರಿಂದ ಪೋಲಾಗುವ ನೀರು ಬಾವಿಯೊಳಗೆ ಸೇರುತ್ತದೆ. ಅಂತರ್ಜಲ ಕಾಯ್ದಿಟ್ಟುಕೊಳ್ಳಲು ಸುಲಭವಾಗುತ್ತದೆ. ಹೀಗೆ ಹೇಳಿದಾಗ ರಹೀಂನ ಮಾತಿಗೆ ಎಲ್ಲಾ ಗೆಳೆಯರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಎಲ್ಲಾ ಮಕ್ಕಳು ಅಕ್ಕ ಪಕ್ಕದ ಮನೆಗಳಿಂದ ಹಾರೆ ಪಿಕಾಸು ತಂದು ಪೊಲಾಗುವ ಮಳೆ ನೀರನ್ನು ಹಾಳು ಬಾವಿಗೆ ಹರಿದು ಹೋಗುವಂತೆ ಕಾಲುವೆ ಮಾಡಿದರು. ಬಾವಿಯ ಆವರಣಗೊಡೆಗೆ ರಂಧ್ರ ಕೊರೆದು ನೀರು ಬಾವಿಯ ಒಳಗೆ ಹೋಗುವಂತೆ ಮಾಡಿ, ಹಾಳು ಬಿದ್ದ ಬಾವಿಯನ್ನು ಜಲ ಮರುಪೂರಣ ಮಾಡುವ ಇಂಗು ಗುಂಡಿಯಾಗಿ ಪರಿವರ್ತಿಸಿದರು. ಇದೇ ರೀತಿ ಸುಲ್ತಾನಾಪುರದಲ್ಲಿ ಹಾಳು ಬಿದ್ದ ಬಾವಿಗಳನ್ನು ಮಕ್ಕಳು ಇಂಗು ಗುಂಡಿಯಾಗಿ ಪರಿವರ್ತಿಸಿದರು. ಮುಂದೆ ಯಾವತ್ತೂ ಸುಲ್ತಾನಾಪುರದಲ್ಲಿ ಜಲಕ್ಷಾಮ ಎದುರಾಗಲಿಲ್ಲ. ಜಾನ್ ಡಿಸೋಜ ಮಾಸ್ತರರ ಸಾಮಾಜಿಕ ಕಳಕಳಿಯ ಬೋಧನೆ, ಬಾಲಕ ರಹೀಂನ ಮುತುವರ್ಜಿ, ಇತರ ಬಾಲಕರ ಶ್ರಮದಾನವು ಸುಲ್ತಾನಪುರದ ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

Writer - ತಾರಾನಾಥ್ ಮೇಸ್ತ ಶಿರೂರು.

contributor

Editor - ತಾರಾನಾಥ್ ಮೇಸ್ತ ಶಿರೂರು.

contributor

Similar News