ಹದವರಿತ ಬರವಣಿಗೆ
ಭಾಗ-26
ಕೀಯಿಂಗ್ ವರ್ಸಸ್ ರೈಟಿಂಗ್
ಈಗ ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಕೀಯಿಂಗ್ ಇರುವಾಗ ರೈಟಿಂಗ್ ಏಕೆ ಬೇಕು ಅಂತ. ಆದರೆ ನನ್ನ ದೃಷ್ಟಿಯಲ್ಲಿ ಈ ಎರಡರ ಮಧ್ಯೆ ಸಮನ್ವಯ ಸಾಧಿಸುವ ರೀತಿಯಲ್ಲಿಯೇ ಶಿಕ್ಷಣದಲ್ಲಿ ಯೋಜನೆ ರೂಪಿಸಿಕೊಳ್ಳಬೇಕು. ಕಂಪ್ಯೂಟರ್‌ನಲ್ಲಿ ಕೀಲಿಮಣೆಯನ್ನು ಉಪಯೋಗಿಸುವಾಗಲೂ ಕೂಡಾ, ಟೈಪಿಂಗ್‌ನ ಪ್ರಾಕ್ಟೀಸ್ ಮಾಡುವ ರೀತಿಯಲ್ಲಿ ಎಡಗೈಯ ಕಿರುಬೆರಳಿಗೆ ‘ಎ’, ಉಂಗುರದ ಬೆರಳಿಗೆ ‘ಎಸ್’, ಮಧ್ಯದ ಬೆರಳಿಗೆ ‘ಡಿ’, ತೋರು ಬೆರಳಿಗೆ ‘ಎಫ್’ ಹೀಗೆ ಅಭ್ಯಾಸ ಮಾಡಿದರೇನೇ ಒಳಿತು. ಇದರಿಂದ ಕೀಬೋರ್ಡಿನಲ್ಲಿ ವೇಗವಾಗಿ ಟೈಪ್ ಮಾಡಲು ಸಾಧ್ಯವಾಗುತ್ತದೆ. ನಮಗೇ ಅರಿವಿಲ್ಲದಂತೆ ಬೆರಳುಗಳು ಸರಾಗವಾಗಿ ಚಲಿಸುತ್ತಾ ಅಕ್ಷರಗಳನ್ನು ಮೂಡಿಸುತ್ತಿರುತ್ತದೆ. ಹಾಗಾಗಿ ಮಕ್ಕಳಿಗೆ ಪ್ರಾರಂಭದಿಂದಲೇ ಇಂಗ್ಲಿಷ್ ಅಕ್ಷರಗಳ ಟೈಪಿಂಗ್ ಪ್ರಾಕ್ಟೀಸ್ ಮಾಡಿಸಬೇಕು. ಇದು ಎಷ್ಟು ಅನುಕೂಲವಾಗುತ್ತದೆ ಎಂದರೆ, ಮುಂದೆ ಯಾವುದೇ ಭಾಷೆಯಲ್ಲಿ ಟೈಪಿಂಗ್ ಮಾಡಲಿ, ಭಾಷೆ ಮತ್ತು ಅಕ್ಷರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಸರಾಗವಾಗಿ ಮತ್ತು ವೇಗವಾಗಿ ಟೈಪಿಂಗ್ ಮಾಡಬಹುದು. ಆದರೆ ಶಾಲೆಯ ಮಕ್ಕಳ ವಿಷಯದಲ್ಲಿ ಅವರು ಮಂಡಿಸಬೇಕಾದ ವಿಷಯವನ್ನು ಮೊದಲು ಕೈಯಲ್ಲಿ ಬರೆದು ನಂತರ ಟೈಪಿಂಗ್ ಮಾಡಲು ಬಿಡುವುದು ಉತ್ತಮ. ಅದರಲ್ಲೂ ಇಂಗ್ಲಿಷಿನಲ್ಲಿ ಇದನ್ನು ಗಮನಿಸಲೇಬೇಕು. ಏಕೆಂದರೆ, ಇಂಗ್ಲಿಷಲ್ಲಿ ಆಟೋಸ್ಪೆಲ್ ಕರೆಕ್ಟ್ ವ್ಯವಸ್ಥೆ ಇರುವುದರಿಂದ ಎಷ್ಟೋ ಬಾರಿ ಸ್ಪೆಲ್ಲಿಂಗ್ ತಪ್ಪಾದರೂ ಅದೇ ಸರಿ ಮಾಡಿಕೊಂಡು ಬಿಡುವುದರಿಂದ ಟೈಪ್ ಮಾಡುವ ವ್ಯಕ್ತಿಗೆ ಸ್ಪೆಲ್ಲಿಂಗ್ ಸರಿಯಾಗಿ ಬರದೇ ಹೋಗುವ ಸಾಧ್ಯತೆಗಳು ಇರುವುದು. ಆದರೆ ಬರೆಯುವ ಅಭ್ಯಾಸ ಇದ್ದರೆ ಸ್ಪೆಲ್ಲಿಂಗ್ ತಪ್ಪುಗಳು ಆಗುವುದಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದ ಟೈಪ್ ಮಾಡುವ ಮೂಲಕವೇ ಬರೆಯುವ ಅಭ್ಯಾಸವಿರುವ ನನಗೆ ಇಂಗ್ಲೀಷಲ್ಲಿ ಕೆಲವೊಮ್ಮೆ ಬರೆಯುವ ಸಂದರ್ಭ ಬಂದಾಗ ಕೆಲವು ಪದಗಳ ಸ್ಪೆಲ್ಲಿಂಗ್‌ನ ಗೊಂದಲವಾಗುವುದು. ಮಕ್ಕಳು ಬರೆಯುವ ಮತ್ತು ಟೈಪ್ ಮಾಡುವ ಎರಡೂ ಅಭ್ಯಾಸವನ್ನು ರೂಢಿಸಿಕೊಂಡರೆ ದಾಖಲಿಸುವ ಉತ್ತಮ ತಳಹದಿ ನಿರ್ಮಾಣವಾದಂತೆಯೇ ಸರಿ. ಮಕ್ಕಳ ಕಲಿಕೆಯ ಹಂತದಲ್ಲಿ ಅವರು ಮೊದಲು ತಾವು ಬರೆಯಬೇಕಾದ್ದನ್ನು ಬರೆದು ಅದನ್ನು ಅಂತಿಮವಾಗಿ ಮಂಡಿಸುವಾಗ ಟೈಪ್ ಮಾಡುವಂತಹ ರೂಢಿಯನ್ನು ಮಾಡಿಸಬೇಕು. ಆದರೆ ಅವರು ಬೆಳೆದಂತೆ ಮೊದಲು ಬರೆದು ನಂತರ ಪೇರ್ ಕಾಪಿ ಮಾಡುವ ಬದಲು, ಮೊದಲು ಟೈಪ್ ಮಾಡಿ, ನಂತರ ಅದನ್ನು ಪರಿಶೀಲಿಸಿ, ನಂತರ ಅದರಲ್ಲಿಯೇ ಅಗತ್ಯವಿರುವ ಎಡಿಟ್ ಮಾಡುವುದಿದ್ದರೆ ಅದನ್ನೂ ಮಾಡಿ ಅಂತಿಮ ಕರಡನ್ನು ಸಿದ್ಧಪಡಿಸಲು ಸಾಧ್ಯ ವಾಗುತ್ತದೆ.
ಬರವಣಿಗೆಯ ಸಮಸ್ಯೆಗಳನ್ನು ಗುರುತಿಸುವುದು
ಮಗುವು ಬರವಣಿಗೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದರೆ ಕೆಲವು ಲಕ್ಷಣಗಳಿಂದ ಗುರುತಿಸಬಹುದು.
1.ಮಗುವು ಬರೆಯುವಾಗ ಪೆನ್ಸಿಲ್ ಅಥವಾ ಪೆನ್ನನ್ನು ಹಿಡಿಯಲು ಬಾರದೇ ಕಷ್ಟಪಡುವುದು.
2.ಒಂದೊಂದು ಅಕ್ಷರವನ್ನೂ, ಅಕ್ಷರದ ಭಾಗ ಭಾಗಗಳನ್ನು ತುಂಡು ತುಂಡಾಗಿ ಗಮನಿಸಿಕೊಂಡು ಅಷ್ಟಷ್ಟೇ ಬರೆಯಲು ಯತ್ನಿಸುವುದು. ಒಂದೊಂದು ಅಕ್ಷರವನ್ನು ಅಥವಾ ಪದವನ್ನು ಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದೇ ಇರುವುದು. ಇದು ಬಹಳ ಮುಖ್ಯವಾದ ದೋಷ. ಮಗುವು ಈ ಸಮಸ್ಯೆಯನ್ನು ಎದುರಿಸುತ್ತಿದೆ ಎಂದರೆ, ಮಗುವಿಗೆ ಅಕ್ಷರದ ಶಬ್ಧವನ್ನು, ಉಚ್ಚಾರಣೆಯನ್ನು, ಅದರ ಜೊತೆಗೆ ಅಕ್ಷರದ ವಿನ್ಯಾಸವನ್ನು ಗುರುತಿಸಲು ವಿಫಲವಾಗಿರುವುದು. ಅದೇ ರೀತಿ ಪದಗಳೂ ಅಷ್ಟೇ. ಅವುಗಳ ಅರ್ಥ ಮತ್ತು ಉಚ್ಚಾರಣೆಯು ತಿಳಿಯದೇ ಒಂದು ರೇಖಾಚಿತ್ರವೊಂದನ್ನು ನೋಡಿಕೊಂಡು ಮತ್ತೊಂದು ರೇಖಾಚಿತ್ರವನ್ನು ಬರೆಯುವಂತೆ ಬರೆಯುತ್ತಾರೆ.
3.ಕೆಲವು ಸಣ್ಣ ಮಕ್ಕಳಿಗೆ ಅಕ್ಷರವನ್ನು ಎಲ್ಲಿಂದ ಪ್ರಾರಂಭಿಸುವುದು ಎಂಬ ಗೊಂದಲ ಇರುತ್ತದೆ. ಎಡದಿಂದ ಬಲಕ್ಕೋ, ಬಲದಿಂದ ಎಡಕ್ಕೋ, ಮೇಲಿಂದ ಕೆಳಕ್ಕೋ, ಕೆಳಗಿಂದ ಮೇಲಕ್ಕೋ; ಇತ್ಯಾದಿ ಗೊಂದಲಗಳಿಂದ ಬರೆಯುವಾಗ ಹಿಂಜರಿಯುತ್ತಾರೆ.
4.ಯಾವುದೋ ಅಕ್ಷರವನ್ನು ಯಾವುದೋ ಅಕ್ಷರವೆಂದುಕೊಂಡು ಬರೆಯುವುದು. ಕನ್ನಡದಲ್ಲಿ ‘ವ’ ಮತ್ತು ‘ಮ’ ಅಕ್ಷರಗಳಿಗೆ ಗೊಂದಲವನ್ನು ತಂದುಕೊಳ್ಳುವುದು. ಇಂಗ್ಲಿಷಲ್ಲಿ ಸ್ಮಾಲ್ ಲೆಟರ್‌ನ ‘ಬಿ’ ಮತ್ತು ‘ಡಿ’ ಅಕ್ಷರಕ್ಕೆ ಗೊಂದಲವಾಗುವುದು ಇತ್ಯಾದಿ.
5.ಸರಿಯಾಗಿ ಪೆನ್ಸಿಲ್ ಮತ್ತು ಪೆನ್ನನ್ನು ಹಿಡಿಯಲು ಬಾರದೇ ಇರುವುದರಿಂದ ಬರೆಯುವಾಗ ಎಷ್ಟು ಒತ್ತಬೇಕು ಎಂದು ತಿಳಿಯದೇ ಹೋಗುವುದು. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಒತ್ತುವುದು ಅಥವಾ ಒತ್ತದೇ ಇರುವುದು ಇತ್ಯಾದಿಗಳಾಗುತ್ತವೆ. ಕೆಲವು ಮಕ್ಕಳು ಪೇಪರ್ ಹರಿದುಹೋಗುವಂತೆ ಬರೆದರೆ, ಕೆಲವು ಮಕ್ಕಳು ಬರೆದರೆ ಅಕ್ಷರವೇ ಮೂಡದಷ್ಟು ಹಗುರವಾಗಿ ಬರೆಯುವರು.
6.ಕಾಗದ ಅಥವಾ ಪುಸ್ತಕವನ್ನು ಯಾವ ಕೋನದಲ್ಲಿ ಇಡುವುದು ಅಥವಾ ಬರೆಯುವಾಗ ಯಾವ ಕೋನದಿಂದ ಬರೆಯಬೇಕು ಎಂಬ ಅರಿವಿಲ್ಲದೇ ಗೊಂದಲಕ್ಕೀಡಾಗುವುದು.
7.ಗೆರೆಗಳಿಲ್ಲದ ಬಿಳಿಯ ಹಾಳೆಯಲ್ಲಿ ಬರೆಯುವಾಗ ಕ್ರಮವನ್ನು ಅನುಸರಿಸಲು ಆಗದೇ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸೊಟ್ಟಕ್ಕೆ ಹೋಗುವುದು. 8.ಒಂದೊಂದು ಅಕ್ಷರಗಳು ಒಂದೊಂದು ಗಾತ್ರದಲ್ಲಿರುವುದು. ಕೆಲವೊಮ್ಮೆ ಹದವರಿತ ಗಾತ್ರಗಳು ಮತ್ತು ಪದಗಳ ನಡುವೆ ಸರಿಯಾದ ಅಂತರವಿಲ್ಲದ ಅತಿಯಾಗಿ ದೊಡ್ಡವಿರುವುದು, ಅತಿಯಾಗಿ ಸಣ್ಣವಿರುವುದು, ಅಂತರವನ್ನು ಹೆಚ್ಚಿಗೆ ಬಿಡುವುದು, ಅಥವಾ ಪದಗಳ ನಡುವೆ ಅಂತರವನ್ನೇ ಬಿಡದಿರುವುದು ಇತ್ಯಾದಿಗಳೆಲ್ಲವೂ ಸಮಸ್ಯೆಗಳೇ.
9.ತಾನು ಬರೆದಿರುವ ಅಕ್ಷರವನ್ನು ಅಥವಾ ಪದವನ್ನು ತಾನೇ ಗುರುತಿಸಲು ಅಥವಾ ಓದಲು ಸಾಧ್ಯವಿಲ್ಲದಿರುವುದು.
10.ಬರವಣಿಗೆಯು ವಕ್ರವಕ್ರವಾಗಿರುವುದು.
11.ಬರೆಯುವಾಗ ಪದೇ ಪದೇ ಪೆನ್ಸಿಲ್ ಅಥವಾ ಪೆನ್ ಕೈಯಿಂದ ಜಾರಿ ಬೀಳುವುದು ಅಥವಾ ಆಯ ತಪ್ಪಿ ಹೊರಳುವುದು.
12.ಅತಿ ನಿಧಾನವಾಗಿ ಬರೆಯುವುದು.
13.ಬರೆಯುವುದೆಂದರೇನೇ ಕೈ ನೋವು, ಅಥವಾ ಇನ್ನೇನೋ ನೋವಿನ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುವುದು. ಇದು ಕಂಡು ಬಂದಾಗ ಮಗುವಿಗೆ ಬರೆಯುವ ಸಮಸ್ಯೆ ಏನೋ ಇದೆ ಎಂಬುದನ್ನು ಕಂಡುಕೊಳ್ಳಬೇಕು. ಕೆಲವೊಮ್ಮೆ ಸೋಮಾರಿತನದಿಂದಲೂ, ಅನಾಸಕ್ತಿಯಿಂದಲೂ ಇದು ಆಗಬಹುದು. ಆದರೆ, ಅದು ಕಲಿಕೆಯ ನ್ಯೂನತೆಯಿಂದಲೋ, ನರನಿಯಂತ್ರಣದ ಸಮಸ್ಯೆಯೋ, ಮಾನಸಿಕ ಸಮಸ್ಯೆಯೋ ಇತ್ಯಾದಿಗಳನ್ನು ಪತ್ತೆ ಹಚ್ಚಿ ಅದಕ್ಕೆ ಬೇಕಾದಂತೆ ಸೂಕ್ತಕ್ರಮ ತೆಗೆದುಕೊಳ್ಳಬೇಕು.
ಒಟ್ಟಾರೆ ಬರವಣಿಗೆಯಲ್ಲಿನ ಸಮಸ್ಯೆಯು ನಾನಾ ಕಾರಣದಿಂದ ಕಾಣಬರುವುದು. ಅದು ಮಾನಸಿಕ ಸಮಸ್ಯೆಯೋ, ನರದೌರ್ಬಲ್ಯವೋ, ಕಲಿಕೆಯಲ್ಲಿನ ಸಮಸ್ಯೆಯೋ, ಭೌತಿಕ ಸಮಸ್ಯೆಯೋ, ವರ್ತನೆಗಳ ಸಮಸ್ಯೆಯೋ, ಕೌಟುಂಬಿಕ ಸಮಸ್ಯೆಯೋ, ಶಾಲೆಯಲ್ಲಿ ಕಲಿಸುವ ವಿಧಾನದ ಸಮಸ್ಯೆಯೋ; ಒಟ್ಟಾರೆ ಯಾವ ಸಮಸ್ಯೆ ಎಂಬುದನ್ನು ಪತ್ತೆ ಹಚ್ಚಿ ನಂತರ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು. ಯಾವುದೇ ಸಮಸ್ಯೆಯಾದರೂ ಶಿಕ್ಷಕರು ಮತ್ತು ಪೋಷಕರು ಮುಕ್ತವಾಗಿ ಅದನ್ನು ಒಪ್ಪಿಕೊಂಡು, ನಂತರ ನಿವಾರಿಸಿಕೊಳ್ಳಲು ಯತ್ನಿಸಿದರೆ ಮಗುವಿನ ವಿದ್ಯಾಭ್ಯಾಸದ ದೃಷ್ಟಿಯಿಂದ ಅದು ಶ್ರೇಯಸ್ಕರ.