‘ಮೈ ನೇಮ್ ಈಸ್ ಬಾಂಡ್.... ಜೇಮ್ಸ್ ಬಾಂಡ್’

Update: 2019-06-29 18:30 GMT

ಬಾಂಡ್ ಚಿತ್ರಗಳ ಯಶಸ್ಸು ಅಬಾಧಿತವಾಗಿರುವುದು ಬಹಳ ಸರಳವಾದ ಅಂಶಗಳಿಂದ ಎಂಬುದು ಅಚ್ಚರಿಯ ವಿಷಯ. ಜಗತ್ತಿಗೆ ಎದುರಾಗುವ ಆಪತ್ತನ್ನು ನಿವಾರಿಸಲು ಬಾಂಡ್ ಕೈಗೊಳ್ಳುವ ಮೈನವಿರೇಳಿಸುವ ಸಾಹಸ, ಬಾಂಡ್ ಹುಡುಗಿಯರ ಪ್ರದರ್ಶನ, ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದು ಕೂರಿಸುವ ಬಿಗಿಯಾದ ನಿರೂಪಣೆ, ಸಮಕಾಲೀನತೆಯ ಲಕ್ಷಣಗಳ ಸಂಗೀತ, ಪಾತ್ರಗಳ ವರ್ತನೆ ಮತ್ತು ಸಲಕರಣೆಗಳ ನಾವೀನ್ಯ ಇವಿಷ್ಟೇ ಬಾಂಡ್ ಚಿತ್ರಗಳ ಯಶಸ್ಸಿಗೆ ಕಾರಣ ಎಂಬುದು ಬಹುತೇಕ ವಿಮರ್ಶಕರ ಅಭಿಪ್ರಾಯ. ಲಾಂಗ್‌ಲಿವ್ ಬಾಂಡ್.

ಕಪ್ಪುಪರದೆಯ ಮೇಲೆ ಬ್ಯಾಂಡ್ ಸಂಗೀತದ ಹಿನ್ನೆಲೆಯಲ್ಲಿ ಪುಟಿದೆದ್ದು ಪೋಸು ಕೊಡುವ ಬಿಳಿಯ ಬಣ್ಣದ ವೃತ್ತಗಳು. ಬಿಳಿಯ ವೃತ್ತದೊಂದು ದೊಡ್ಡದಾಗಿ ತೆರೆಯನ್ನು ಆವರಿಸಿಕೊಳ್ಳುತ್ತದೆ. ಅದರ ಜೊತೆಯ್ಲಲಿಯೇ ಪ್ರೇಕ್ಷಕನ ಕಣ್ಣು ತೆರೆದುಕೊಳ್ಳುತ್ತದೆ. ಎಡಗಡೆಯಿಂದ ಪೂರ್ಣ ಸೂಟು ಮತ್ತು ಹ್ಯಾಟು ಧರಿಸಿದ ವ್ಯಕ್ತಿಯೊಬ್ಬ ನಡೆದು ಎಡಕ್ಕೆ ತಿರುಗಿ ಪ್ರೇಕ್ಷಕನ ಕಣ್ಣಿಗೆ ನೇರವಾಗಿ ಗುರಿಯಿಟ್ಟು ಗುಂಡು ಹಾರಿಸುತ್ತಾನೆ. ಮೇಲಿಂದ ಇಳಿದ ರಕ್ತವು ನಿಧಾನವಾಗಿ ತೆರೆಯನ್ನು ಆವರಿಸಿಕೊಳ್ಳುತ್ತದೆ. ಪ್ರೇಕ್ಷಕ ನಿಟ್ಟುಸಿರು ಬಿಡುತ್ತಿರುವಾಗಲೇ ಬಿಂಬ ಕರಗಿ ಮತ್ತೊಂದು ದೃಶ್ಯಕ್ಕೆ ಎಡತಾಕುತ್ತದೆ.
ಇದು ಜಾಗತಿಕ ಚಲನಚಿತ್ರರಂಗದಲ್ಲಿ ಅತಿ ದೀರ್ಘಕಾಲದ ಫ್ರಾಂಚೈಸಿ ಎನಿಸಿದ ಜೇಮ್ಸ್‌ಬಾಂಡ್ ಎಂಬ ಪತ್ತೇದಾರಿ ನಾಯಕನಾಗಿರುವ ಚಿತ್ರದ ಆರಂಭದ ದೃಶ್ಯ. ಮೇಲೆ ವಿವರಿಸಿದ್ದು ಪ್ರಸಿದ್ಧ ‘ಗನ್ ಬ್ಯಾರೆಲ್’ ದೃಶ್ಯ. ಜೇಮ್ಸ್ ಬಾಂಡ್‌ನ ಎಲ್ಲಾ ಚಿತ್ರಗಳು ಆರಂಭವಾಗುವುದು ಹೀಗೆಯೇ! ಹಾಗೆ ನೋಡಿದರೆ 1962ರಿಂದ ಆರಂಭವಾಗಿ ಈವರೆವಿಗೂ ಬಿಡುಗಡೆಯಾಗಿರುವ ಎಲ್ಲಾ 25 ಬಾಂಡ್ ಚಿತ್ರಗಳು ಒಂದೇ ಚಿತ್ರದ ನಾನಾ ನಮೂನೆಗಳು. ಎಲ್ಲ ಚಿತ್ರಗಳ ನಿರೂಪಣೆಯು ಒಂದೇ ತೆರನಾಗಿರುವುದು ಈ ಸರಣಿಗಳ ವಿಶೇಷ.
ಗನ್ ಬ್ಯಾರೆಲ್ ದೃಶ್ಯದ ನಂತರ ಅದು ಮುಂದುವರಿಯುವುದು ಮುಖ್ಯ ಕಥನದ ‘ಮುನ್ನುಡಿ’ಯಲ್ಲಿ. ಗನ್ ಬ್ಯಾರೆಲ್ ದೃಶ್ಯ ಮತ್ತು ಶೀರ್ಷಿಕೆಗಳು ಆರಂಭವಾಗುವ ನಡುವೆ ಈ ‘ಮುನ್ನುಡಿ’ ಅಥವಾ ಶೀರ್ಷಿಕೆ ಪೂರ್ವ ದೃಶ್ಯ (ಪ್ರೀ ಟೈಟಲ್ ಸೀಕ್ವೆನ್ಸ್) ಬಿಚ್ಚಿಕೊಳ್ಳುತ್ತದೆ. ಇದು ಚಿತ್ರದ ‘ಟೀಸರ್’ ಅಥವಾ ಪ್ರೇಕ್ಷಕರನ್ನು ಕೆಣಕುವ ಅಥವಾ ಮುಂದಿನ ಸಾಹಸಕ್ಕೆ ಅಣಿಮಾಡುವ ದೃಶ್ಯ. ಇಲ್ಲಿ ಬಾಂಡ್‌ನ ಕಿರು ಸಾಹಸವೊಂದು ಇರುತ್ತದೆ. ಅದು ಮುಂದಿನ ಕಥನಕ್ಕೆ ಪೂರಕವಾಗಿರಬಹುದು ಅಥವಾ ಪ್ರತ್ಯೇಕ ಘಟನೆಯಾಗಿಯೇ ಉಳಿಯಬಹುದು. ಆದರೆ ನಾಲ್ಕೈದು ನಿಮಿಷದ ಈ ದೃಶ್ಯಾವಳಿಯಲ್ಲಿ ಬಾಂಡ್ ಶತ್ರು ಪಾಳೆಯಕ್ಕೆ ನುಗ್ಗುವುದು, ಧೈರ್ಯದಿಂದ ಎದುರಾಳಿಗಳನ್ನು ಸದೆಬಡಿಯುವುದು, ಆಧುನಿಕ ಸಲಕರಣೆಗಳಿಂದ ಪಾಳೆಯವನ್ನು ಉಡಾಯಿಸಿ ಮೈನವಿರೇಳಿಸುವ ರೀತಿಯಲ್ಲಿ ಅಪಾಯದಿಂದ ಪಾರಾಗುವುದು; ಇವು ಪ್ರೇಕ್ಷಕನಲ್ಲಿ ಕುತೂಹಲವನ್ನು ಸೃಷ್ಟಿಸಿ ಮುಂದಿನ ಕಥನಕ್ಕೆ ಅಣಿಗೊಳಿಸುತ್ತವೆ. ಬಾಂಡ್‌ನ ಸಾಹಸದ ಜೊತೆಯಲ್ಲಿ ಸಾಗಲು ಪ್ರೇಕ್ಷಕನೂ ಸಿದ್ಧವಾಗುವಂತೆ ಪ್ರೇರೇಪಿಸುತ್ತವೆ. ಉದಾಹರಣೆಗೆ ಬಾಂಡ್ ಹಿಮದ ಮೇಲೆ ಜಾರುತ್ತಾ ಶತ್ರುಗಳ ಗುಂಡಿನಿಂದ ಪಾರಾಗುತ್ತಾ, ಕೊನೆಗೆ ಹಿಮ ಶಿಖರದಿಂದ ನೆಗೆದು ಗಾಳಿಯಲ್ಲಿ ತೇಲಿ, ಬಿಚ್ಚಿಕೊಳ್ಳುವ ಪ್ಯಾರಾಚೂಟ್‌ನಿಂದ ನೆಲ ತಲುಪುವವರೆಗೆ (ದಿ ಸ್ಪೈ ಹೂ ಲವ್‌ಡ್ ಮೀ) ಪ್ರೇಕ್ಷಕ ಸೀಟಿನ ತುದಿಯಲ್ಲಿ ಕೂತಿರುತ್ತಾನೆ. ಅವನು ಪ್ರಾಣಾಪಾಯದಿಂದ ಪಾರಾದ ನಂತರ ಪ್ರೇಕ್ಷಕರ ಉದ್ಗಾರದೊಡನೆ ಚಿತ್ರದ ಟೈಟಲ್ (ಶೀರ್ಷಿಕೆ) ಆರಂಭವಾಗುತ್ತವೆ.
ಶೀರ್ಷಿಕೆಯ ದೃಶ್ಯಗಳೂ ಬಾಂಡ್ ಸಿನೆಮಾದಲ್ಲಿ ವಿಶಿಷ್ಟವಾಗಿರುತ್ತವೆ. ಮುಖ್ಯ ಶೀರ್ಷಿಕೆಯ ದೃಶ್ಯಗಳು ಆಯಾ ಚಿತ್ರದ ಕಥನದ ಆಶಯವನ್ನು ಬಿಂಬಿಸುವ ಗಾಢ ವರ್ಣದ ನೇಪಥ್ಯದಲ್ಲಿ ಎದ್ದು ಬರುವ ಮಶೀಮಯ (ಶಿಲೊಟೆ) ಚಿತ್ರಗಳಾಗಿರುತ್ತವೆ. ಬಹುತೇಕ ಬಿಂಬಗಳು ಮಸುಕಾದ ಇಲ್ಲವೇ ಮಶೀಮಯವಾದ ನಗ್ನ ಹೆಣ್ಣಿನ ಬಿಂಬಗಳಾಗಿರುತ್ತವೆ. ಜೊತೆಗೆ ಚಿತ್ರದ ಅವಿಭಾಜ್ಯ ಅಂಗವಾದ ಗನ್‌ಸಿಡಿತ, ಮದ್ಯದ ಗ್ಲಾಸು, ಬಾಟಲ್‌ಗಳ ಚಲನೆ, ಅಂಗಸಾಧನೆಯ ಹೆಣ್ಣಿನ ಬಿಂಬಗಳು ಅಡಕಿರಿಯುತ್ತವೆ. ಈ ಶೀರ್ಷಿಕೆ ಮತ್ತು ಬಿಂಬಗಳನ್ನು ಬಾಂಡ್ ಚಿತ್ರದ ಪ್ರಖ್ಯಾತ ವಿಮರ್ಶಕರಾದ ಸ್ಮಿತ್ ಅಂಡ್ ಲ್ಯಾಮಿಂಗ್ಟನ್ ಅವರು ‘‘ಬೆರಗುಗೊಳಿಸುವ, ಮಾದರಿಯೆನಿಸುವ, ಲೈಂಗಿಕ ಪ್ರಚೋದನೆಯ ಚಿತ್ರ ಸಮೂಹ’’ವೆಂದು ಬಣ್ಣಿಸಿದ್ದಾರೆ. ಇದಕ್ಕೆ ಸೂಕ್ತವೆನಿಸಿದ ಆಶಯ ಗೀತೆ ಹಿನ್ನೆಲೆಯಲ್ಲಿ ತೇಲಿ ಬರುತ್ತದೆ. ಈ ಆಶಯ ಗೀತೆಗಳು ಚಿತ್ರದಷ್ಟೇ ಜನಪ್ರಿಯತೆ ಪಡೆದಿರುತ್ತವೆ. ಇದನ್ನು ಹಾಡುವವರು ಸಹ ಆಯಾ ಕಾಲದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಗಾಯಕ-ಗಾಯಕಿಯರೇ ಆಗಿರುತ್ತಾರೆ. ಶರ್ಲಿ ಬ್ಯಾಸಿ (ಗೋಲ್ಡ್ ಫಿಂಗರ್), ನ್ಯಾನ್ಸಿ ಸಿನೆಟ್ರಾ (ಯು ಲಿವ್ ಓನ್ಲಿ ಟ್ವೈಸ್), ಲುಲು (ಮ್ಯಾನ್ ವಿತ್ ದಿ ಗೋಲ್ಡನ್ ಗನ್), ಟಿನಾ ಟರ್ನರ್ (ಗೋಲ್ಡನ್ ಐ), ಶೆರಿಲ್ ಕ್ರೋ (ಟುಮಾರೋ ನೆವರ್ ಡೈಸ್), ಮಡೋನ (ಡೈ ಅನದರ್ ಡೇ), ಕ್ರಿಸ್ ಕಾರ್ನೆಲ್ (ಕ್ಯಾಸಿನೋ ರೊಯಾಲೆ), ಅಲಿಸಿಯ ಕೀ ಅಲ್ಲದೆ ಪಾಲ್ ಮ್ಯಾಕರ್ತಿನಿಯಂಥ ಪ್ರಸಿದ್ಧ ಪುರುಷ ಗಾಯಕರು (ಲಿನ್‌ಅಂಡ್) ಹಾಡಿದ್ದಾರೆ. ಬಹುತೇಕ ಮಹಿಳೆಯರ ಗಾಯನ ಲೈಂಗಿಕತೆಯನ್ನು ಪ್ರಚೋದಿಸುವ, ಉದ್ದೀಪಿಸುವ ರೀತಿಯಲ್ಲಿಯೇ ಮಾದಕ ದನಿಯಲ್ಲಿರುತ್ತದೆ. ಕಾರ್ಲಿ ಸೈಮನ್ಸ್ (ದಿ ಸ್ಕೈ ಹೂಲಟ್‌ಲೆ) ಶೀರ್ಷಿಕೆಗಳನ್ನು ಪ್ರೇಕ್ಷಕ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಯಶಸ್ಸು ಬಾಂಡ್ ಸರಣಿಯ ಚಿತ್ರಗಳಿಗೆ ಸಲ್ಲಬೇಕು.
ಶೀರ್ಷಿಕೆಯ ನಂತರ ಎಲ್ಲಾ ಬಾಂಡ್ ಚಿತ್ರಗಳೂ ಹೆಚ್ಚು ಕಡಿಮೆ ಒಂದೇ ಬಗೆಯ ದೃಶ್ಯ ಸರಣಿಯಲ್ಲಿ ಕಥನವನ್ನು ಹೇಳುತ್ತವೆ. ಕಥನದ ಉದ್ದೇಶವೂ ಒಂದೇ: ಜಗತ್ತಿನ ಮೂಲೆ ಮೂಲೆಯಲ್ಲಿರುವ ದುಷ್ಟರು, ಜಗತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಉಗ್ರ ಅಸ್ತ್ರಗಳನ್ನು ತಯಾರಿಸುವುದು ಅಥವಾ ತಮ್ಮ ಕನಸಿನ ಹೊಸ ಜಗತ್ತಿನ ನಿರ್ಮಾಣಕ್ಕೆ ಸದ್ಯದ ಜಗತ್ತನ್ನು ನಾಶಪಡಿಸುವುದು ಅಥವಾ ಜಗತ್ತಿಗೆ ನಾನಾ ರೀತಿಯ ಕಂಟಕಗಳನ್ನು ತಂದೊಡ್ಡಲು ನಿರತವಾಗಿರುವುದು. ಇವರ ಯತ್ನಗಳನ್ನು ನಿರರ್ಥಕಗೊಳಿಸಿ, ಶತ್ರುವನ್ನು ನಿರ್ನಾಮ ಮಾಡುವುದನ್ನು ಬ್ರಿಟನ್ ದೇಶದ ರಹಸ್ಯ ಸೇವಾ ಸಂಸ್ಥೆ (ಸೀಕ್ರೆಟ್ ಸರ್ವೀಸ್ ಇಂಟಲಿಜೆನ್ಸ್) ಹೊಣೆ ಹೊತ್ತುಕೊಳ್ಳುತ್ತದೆ. ಆ ಕಾರ್ಯಾಚರಣೆಯನ್ನು ವಹಿಸುವುದು 007 ಎಂಬ ರಹಸ್ಯ ಸಂಕೇತವಿರುವ ಬ್ರಿಟನ್ ಪತ್ತೇದಾರಿ ಜೇಮ್ಸ್ ಬಾಂಡ್. ಬ್ರಿಟನ್ ದೇಶದ ರಹಸ್ಯ ಕಾರ್ಯಾಚರಣೆ ಸಂಸ್ಥೆಯಲ್ಲಿ ಅಧಿಕಾರಿಯಾಗಿದ್ದ ಇಯಾನ್ ಫ್ಲೆಮಿಂಗ್ ಸೃಷ್ಟಿಸಿದ ನಾಯಕನೇ ಜೇಮ್ಸ್ ಬಾಂಡ್. ಜೇಮ್ಸ್ ಬಾಂಡ್‌ನ ಸಾಹಸಿ ಕತೆಗಳನ್ನು ಎಳೆದು ರಚಿಸಿದ ಕಾದಂಬರಿಗಳು ಜನಪ್ರಿಯತೆ ಪಡೆದ ಮೇಲೆ ಆ ಪಾತ್ರವನ್ನು ತೆರೆಗೆ ತಂದು ನಿರ್ಮಾಪಕರು ಯಶಸ್ಸು ಕಂಡರು. ಈ ಬಾಂಡ್‌ಗೆ ಕೆಲವು ವಿಶೇಷತೆಗಳಿವೆ. ಆತ ಚೆಸ್ಟರ್‌ಫೀಲ್ಡ್ ಸಿಗರೇಟು ಸೇದುತ್ತಾನೆ. ಯಾರನ್ನಾದರೂ ಕೊಲ್ಲುವ ಮುಕ್ತ ಪರವಾನಗಿ ಹೊಂದಿರುತ್ತಾನೆ. ಹೆಣ್ಣುಗಳನ್ನು ಮರಳು ಮಾಡಬಲ್ಲ ಆಕರ್ಷಕ ವ್ಯಕ್ತಿತ್ವ. ಅಪಾಯಗಳಿಗೆ ಎದೆಯೊಡ್ಡಬಲ್ಲ ಸಾಹಸಿ. ತನಗಿಂತ ಸಮರ್ಥರಾದವರನ್ನು ಉಪಾಯದಿಂದ ಮೇಲುಗೈ ಸಾಧಿಸಿ ಕೊಲ್ಲುವ ಕುಶಲಿ. ಎಲ್ಲಕ್ಕಿಂತ ಹೆಚ್ಚಾಗಿ ಅವನಿಗೂ ಭಾರತಕ್ಕೂ ಒಂದು ನಂಟಿದೆ. ಆತ ಮದ್ರಾಸ್ ಬ್ಲೀಡಿಂಗ್ ಶರ್ಟ್‌ಗಳನ್ನು ಧರಿಸುತ್ತಾನೆ! ಗ್ಲಾಸಿನಲ್ಲಿ ಗಾಜು ಕಡ್ಡಿಯಲ್ಲಿ ಕೆದಕದ, ಆದರೆ ಅಲ್ಲಾಡಿಸಿದ ಮಾರ್ಟಿನಿ ಬ್ರಾಂಡ್‌ನ ಮದ್ಯಪ್ರಿಯ.


ಇಂಥ ವಿಶಿಷ್ಟ ವ್ಯಕ್ತಿ ಶೀರ್ಷಿಕೆ ಪೂರ್ವ ಸಾಹಸವನ್ನು ಮುಗಿಸಿ ಬಂದ ನಂತರ ಕಚೇರಿಗೆ ಬರುತ್ತಾನೆ. ಆ ಕಚೇರಿಯ ಸ್ವಾಗತಕಾರಣಿ ಮೊನಿಪೆನಿಯ ಜೊತೆ ಹರಟೆ ಹೊಡೆಯುತ್ತಾನೆ. ಎಂದಾದರೂ ತನ್ನನ್ನು ಪ್ರೀತಿಸಬಹುದೆಂಬ ಶಾಶ್ವತ ನಿರೀಕ್ಷೆಯ ಮೊನಿಪೆನಿ ಬಾಂಡ್‌ನ ಲೈಂಗಿಕ ಪ್ರಚೋದನೆಯ ಮಾತುಗಳನ್ನು ಸ್ವೀಕರಿಸುತ್ತಾ, ಅಷ್ಟೇ ಮಾದಕವಾದ ಉತ್ತರ ನೀಡುತ್ತಾ ಕಚೇರಿಯ ಮುಖ್ಯಸ್ಥ ‘ಎಂ’ ಹತ್ತಿರ ಕಳಿಸುತ್ತಾಳೆ. ಅಲ್ಲಿ ‘ಎಂ’ ತಲೆ ಮೇಲೆ ಕೈಹೊತ್ತು ಜಗತ್ತಿಗೆ ಎದುರಾಗಿರುವ ಸಂಕಷ್ಟ ವಿವರಿಸಿ ನಿವಾರಣೆಯ ಹೊಣೆಯನ್ನು ಬಾಂಡ್‌ಗೆ ವಹಿಸುತ್ತಾನೆ. ಪತ್ತೇದಾರರಿಗೆ ನೆರವಾಗುವ ಸ್ಪೈ ಸಲಕರಣೆಗಳಲ್ಲಿ ನಿಷ್ಣಾತನಾದ ‘ಕ್ಯೂ’ನ ಪ್ರಯೋಗಾಲಯ ದರ್ಶನವಾಗುತ್ತದೆ. ಬಳಿಕ ಬಾಂಡ್‌ನ ಕಾರ್ಯಾಚರಣೆಗೆ ಅಗತ್ಯವಾದ ವಿಶೇಷ ಸಲಕರಣೆಗಳನ್ನು ‘ಕ್ಯೂ’ ನೀಡಿ ಬಾಂಡ್‌ಗೆ ವಿದಾಯ ಹೇಳುತ್ತಾನೆ.
ಅಲ್ಲಿಂದಾಚೆಗೆ ಬಾಂಡ್‌ನ ಪತ್ತೇದಾರಿ ಕೆಲಸ ಆರಂಭ. ವಿಶೇಷ ವಾಹನಗಳು, ಗನ್‌ಗಳು, ಏರ್‌ಕ್ರಾಫ್ಟ್‌ಗಳು ಅವನ ಸಂಗಾತಿಗಳು. ಅವನ ಯಾತ್ರೆಯುದ್ದಕ್ಕೂ ಎದುರಾಳಿಗಳು ಅವನನ್ನು ಕೆಣಕುತ್ತಾರೆ. ಹತರಾಗುತ್ತಾರೆ. ವಿದೇಶದ ನೆಲಕ್ಕೆ ಹೋದಾಗ ಅಲ್ಲಿನ ಪತ್ತೇದಾರಿಗಳು ನೆಪಮಾತ್ರಕ್ಕೆ ನೆರವಾಗುತ್ತಾರೆ. ಎದುರಾಳಿಗೆ ಬಾಂಡ್ ತನ್ನನ್ನು ‘‘ಮೈ ನೇಮ್ ಈಸ್ ಬಾಂಡ್... ಜೇಮ್ಸ್ ಬಾಂಡ್’’ ಎಂಬ ಸುಪ್ರಸಿದ್ಧ ಸಾಲಿನಿಂದಲೇ ಪರಿಚಯ ಮಾಡಿಕೊಳ್ಳುತ್ತಾನೆ. ನಿಯತವಾಗಿ ಕಾಣುವ ಬಗೆಬಗೆಯ ಮುಷ್ಠಿ ಕಾಳಗ, ಮೈನವೀರೇಳಿಸುವ ಚೇಸಿಂಗ್ ದೃಶ್ಯಗಳು, ಹೆಣ್ಣಿನೊಡನೆ ಒಡನಾಟಗಳು ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ಅಂದಹಾಗೆ ಜೇಮ್ಸ್ ಬಾಂಡ್ ಚಿತ್ರಗಳಲ್ಲಿನ ‘ಬಾಂಡ್ ಗರ್ಲ್ಸ್’ ಚಿತ್ರದ ವಿಶೇಷ ಆಕರ್ಷಣೆ. ಬಾಂಡ್ ಚಿತ್ರಗಳಲ್ಲಿ ಬಗೆಬಗೆಯ ಹೆಣ್ಣುಗಳಿರುತ್ತಾರೆ. ಆದರೆ ಬಾಂಡ್ ಭಾವರಾಹಿತ್ಯದ ಕಾಮದಾಟದ ವ್ಯಕ್ತಿತ್ವದ ಪಾತ್ರ. ಎಲ್ಲಾ ಬಗೆಯ ಹೆಣ್ಣುಗಳು- ಮೊನಿಪೆನಿಯಿಂದ ಹಿಡಿದು-ಅವನಿಗೆ-ಒಂದು ಬಗೆಯ ಸೆಕ್ಸ್ ಆಬ್ಜೆಕ್ಟ್. ಭೋಗವಸ್ತುಗಳು. ಕ್ಯಾಸಿನೋ ರೊಯೇಲ್‌ನಲ್ಲಿ ಮಾತ್ರ ಬಾಂಡ್ ಸ್ವಲ್ಪಮಟ್ಟಿಗೆ ತನಗೆ ಮೋಸ ಮಾಡಿದ ಹೆಣ್ಣಿಗೆ ಕರಗುತ್ತಾನೆ. ಅದು ಹೊರತುಪಡಿಸಿದರೆ ಉಳಿದೆಲ್ಲ ಚಿತ್ರಗಳಲ್ಲೂ ಬಾಂಡ್ ಹುಡುಗಿಯರು ನಿರ್ವಹಿಸುವ ಪಾತ್ರ ಬೇರೆ ಬೇರೆಯಾದರೂ, ಬಾಂಡ್‌ನ ಆಸಕ್ತಿ ಅವರ ದೇಹವನ್ನು ಕೇಂದ್ರೀಕರಿಸಿರುತ್ತದೆ. ಬಾಂಡ್‌ಗೆ ಎದುರಾಗುವ ಇಲ್ಲವೇ ಜೊತೆಗಾರರಾಗುವ ಹೆಣ್ಣುಗಳಲ್ಲಿ ಒಂದು ಮಾತ್ರ ಕೇಂದ್ರ ಪಾತ್ರ. ಅದು ಅವನ ಜೊತೆಯಲ್ಲಿ ಕೊನೆಯವರೆಗೂ ಉಳಿದಿರುತ್ತದೆ. ಉಳಿದವರೆಲ್ಲ ಅವನಿಗೆ ನೆರವಾಗುವ ಹಾದಿಯಲ್ಲಿ ಅಥವಾ ಅವನನ್ನು ಮುಗಿಸುವ ಯತ್ನದಲ್ಲಿ ಹತರಾಗುತ್ತಾರೆ. ಆದರೆ ತಮ್ಮ ಬದುಕಿನ ಅಂತ್ಯದ ಮೊದಲು ಬಾಂಡ್ ಜೊತೆ ಮಲಗಿಯೇ ತೀರುತ್ತಾರೆ. ಬಾಂಡ್‌ನ ಈ ಸ್ತ್ರೀ ದ್ವೇಷಿ (ಮೀಸೊಜಿನಿ) ಅಥವಾ ಸ್ತ್ರೀಯರ ಬಗೆಗಿನ ಭಾವರಾಹಿತ್ಯ ವ್ಯಕ್ತಿತ್ವ ಸಾಕಷ್ಟು ಟೀಕೆಗೆ ಒಳಗಾಗಿದೆ. ಬಾಂಡ್ ಪಾತ್ರದಲ್ಲಿ ಬ್ರಿಟನ್ ಪುರುಷರು ಸ್ತ್ರೀಯರ ಮೇಲೆ ಇರುವ ನೀಚ ಭಾವನೆಗಳ ಪ್ರತಿನಿಧಿ ಎನ್ನುವುದರಿಂದ ಹಿಡಿದು, ಇದು ಮಹಿಳೆಯರಿಗೆ ಸಂಬಂಧಿಸಿದಂತೆ ಸ್ಯಾಡಿಸ್ಟ್ ಮನೋಭಾವದ ಪಾತ್ರ ಎನ್ನುವವರೆಗೂ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಹೆಣ್ಣಿನ ಬಗೆಗಿನ ಇಂಥ ಪುರುಷ ಕ್ರೌರ್ಯವು ಪ್ರೇಕ್ಷಕರ ಮನಸ್ಸಿಗೆ ತಟ್ಟದಂತೆ, ಅವರ ಅಂಗಾಂಗ ಪ್ರದರ್ಶನ, ಅವರ ದುಷ್ಟತನ ಇಲ್ಲವೇ ಪೆದ್ದುತನ, ಸಾಹಸಿಯಾದರೂ ಪುರುಷರ ಅವಲಂಬನೆಯಲ್ಲಿ ಕಾರ್ಯಸಾಧಿಸುವ ಚತುರತೆಯನ್ನು ಮೇಲುಗೈ ಮಾಡಿ ಚಿತ್ರದಲ್ಲಿ ಪ್ರೇಕ್ಷಕ ತಲ್ಲೀನವಾಗುವಂತೆ ಮಾಡುವುದರಲ್ಲಿ ನಿರ್ದೇಶನದ ಚಾಕಚಕ್ಯತೆಯಿದೆ.
ಬಾಂಡ್ ಪಾತ್ರವು ಪಾಶ್ಚಿಮಾತ್ಯ ಸಮಾಜದ ಪುರುಷ ಪ್ರಾಧಾನ್ಯ, ವೈಯಕ್ತಿಕ ಸಂಸ್ಕೃತಿಯ, ಲೈಂಗಿಕ ದಾಹದ ವರ್ತನೆಯ ಪಡಿಯಚ್ಚು. ಅಲ್ಲದೆ ಬಾಂಡ್ ಹುಡುಗಿಯರ ಹೆಸರುಗಳನ್ನು ಸಹ ಲೈಂಗಿಕ ಪ್ರಚೋದನೆಯ, ದ್ವಂದ್ವಾರ್ಥ ನೀಡುವಂತೆ ನಾಮಕರಣ ಮಾಡುತ್ತಾರೆ. ಗೋಲ್ಡ್ ಫಿಂಗರ್‌ನ ಒಂದು ಪಾತ್ರ ‘ಪುಸಿ ಗ್ಯಾಲೋರ್’ ಎಂಬ ಹೆಸರಿತ್ತು. ಅಮೆರಿಕದ ಸೆನ್ಸಾರ್ ಸಂಸ್ಥೆ ಆ ಹೆಸರಿಗೆ ಆಕ್ಷೇಪಣೆ ಎತ್ತಿದ್ದರಿಂದ ಅದು ಚಿತ್ರದಲ್ಲಿ ‘ಮಿಸ್ ಗ್ಯಾಲೋರ್’ ಆಯಿತು. ಹಾಗೆಯೇ ಹಾಲಿಗುಡ್ ಹೆಡ್ (ಮೂನ್‌ರೇಕರ್), ಚ್ಯೂ ಮೀ (ದ ಮ್ಯಾನ್ ವಿತ್ ದಿ ಗೆ), ಹನಿ ರೈಚರ್ (ಡಾ. ನೋ), ಪ್ಲೆಂಟಿ ಗಟೂಲ್ (ಡೈಮಂಡ್), ಕ್ಸೆನಿಯಾ ಆನ್ ಅಟಾಪ್ (ಗೋಲ್ಡನ್ ಐ) ಹೀಗೆ ದ್ವಂದ್ವಾರ್ಥದ ಹೆಸರುಗಳಿವೆ.
ಬಾಂಡ್ ಚಿತ್ರಗಳ ಮತ್ತೊಂದು ವಿಶೇಷತೆಯೆಂದರೆ ಹಾಸ್ಯ. ಅದು ಮಾತಿನಲ್ಲೂ, ಸಾಹಸದಲ್ಲೂ ವ್ಯಕ್ತವಾಗುವ ಭಾವ. ಬಾಂಡ್ ಚಿತ್ರಗಳು ಒಂದು ಸಾಲಿನ (ಒನ್‌ಲೈನರ್) ಮಾತುಗಳಿಗೆ ಪ್ರಸಿದ್ಧ. ಹಲವಾರು ಬಾರಿ ಗಂಭೀರ ಸನ್ನಿವೇಶಗಳನ್ನು ಈ ಮಾತುಗಳು ತಿಳಿಗೊಳಿಸಿದರೆ, ಕೆಲವು ಬಾರಿ ಲೈಂಗಿಕತೆಯನ್ನು ಬಿಂಬಿಸುತ್ತವೆ. ಹಲವೊಮ್ಮೆ ಮಾತಿಲ್ಲದೆಯೂ ದೃಶ್ಯದ ಮೂಲಕ ರಂಜಿಸುತ್ತವೆ. ‘ಸ್ಪೈಹೂ ಲವ್‌ಡ್ ಮಿ’ ಚಿತ್ರದಲ್ಲಿ ಖಳನ ಸಂಗಾತಿ ‘ಜಾ’ ಅನ್ನು ಶಾರ್ಕ್‌ಗಳ ಕೊಳಕ್ಕೆ ತಳ್ಳಿದಾಗ ಶಾರ್ಕ್ ಅವನನ್ನು ಕಚ್ಚುವ ಬದಲು ಶಾರ್ಕ್ ಅನ್ನು ‘ಜಾ’ ಕಚ್ಚುತ್ತಾನೆ. ‘ನೆವರ್ ಸೇ ನೆವರ್ ಎಗೇನ್’ ಚಿತ್ರದಲ್ಲಿ ಖಳನನ್ನು ಸದೆಬಡಿಯಲು ಎಲ್ಲ ಸಾಹಸ, ಸಲಕರಣೆಗಳು ವಿಫಲವಾದಾಗ, ಪ್ರಯೋಗಾಲಯಕ್ಕೆ ಕಳಿಸಿದ್ದ ತನ್ನ ಮೂತ್ರದ ಮಾದರಿಯನ್ನು ಖಳನ ಮುಖಕ್ಕೆ ಎರಚಿದಾಗ ಆತ ಕುಸಿದುಬೀಳುತ್ತಾನೆ. ‘‘ಸೋ ಸ್ಟ್ರಾಂಗ್’’ ಎಂದು ಬಾಂಡ್ ಉದ್ಗರಿಸುತ್ತಾನೆ.
ಬಾಂಡ್ ಚಿತ್ರಗಳು ಅನೇಕ ಮಾದರಿಗಳಿಗೆ ಜನ್ಮ ನೀಡಿವೆ. ಬಾಂಡ್ ಚಿತ್ರಗಳ ಮುಖ್ಯ ಖಳರು ದೈಹಿಕವಾಗಿ ದುರ್ಬಲರು. ಅವರಿಗೆ ವಿಶೇಷ ಸಾಮರ್ಥ್ಯದ ಸೈಡ್‌ಕಿಕ್‌ಗಳ ನೆರವಿರುತ್ತದೆ. ಬೆಂಬಲಕ್ಕೆ ಅತ್ಯಾಧುನಿಕ ಅಸ್ತ್ರಗಳಿರುತ್ತವೆ. ಬಹುತೇಕ ಚಿತ್ರಗಳಲ್ಲಿ ಬಾಂಡ್ ಮುಖ್ಯ ಖಳನಿಗೆ ಒಂದು ಹಂತದಲ್ಲಿ ಬಂಧಿಯಾಗುತ್ತಾನೆ. ಖಳ ಅವನನ್ನು ಒಂದೇ ಬಾರಿಗೆ ಮುಗಿಸದೆ ಬೇರೆ ಬೇರೆ ಸಲಕರಣೆಗಳನ್ನು ಪ್ರಯೋಗಿಸುತ್ತಾನೆ. ಈ ಅಗ್ನಿ ಪರೀಕ್ಷೆಗಳನ್ನೆಲ್ಲ ಗೆದ್ದು ಬಾಂಡ್ ಜಯಶಾಲಿಯಾಗುತ್ತಾನೆ. ಜಗತ್ತಿನ ನಾನಾ ದೇಶ-ಭಾಷೆಗಳಲ್ಲಿ ತಯಾರಾಗುವ ಚಿತ್ರಗಳಿಗೆ ಇಂಥ ಖಳರು, ನಾಯಕರು, ಬಗೆಬಗೆಯ ಹಿಂಸಾ ಸಲಕರಣೆಗಳು, ಅನಿವಾರ್ಯವಾಗುವಂಥ ಮಾದರಿಯನ್ನು ಬಾಂಡ್ ಚಿತ್ರಗಳು ರೂಪಿಸಿವೆ.
ಹೀಗೆ ಒಂದರ ಪಡಿಯಚ್ಚಿನಂತೆ ಮತ್ತೊಂದು ಇರುವ ಇಪ್ಪತ್ತೈದು ಅಧಿಕೃತ ಬಾಂಡ್ ಚಿತ್ರಗಳು ಬಿಡುಗಡೆಯಾಗಿವೆ. ನಟರಾದ ಷಾನ್ ಕಾನರಿ (8), ರೋಜರ್ ಮೂರ್ (7), ತಿಮೋತಿ ಡಾಲ್ಟನ್ (2), ಪಿಯರ್ಸ್ ಬ್ರಾನ್ಸನ್ (4), ಡೇನಿಯಲ್ ಕ್ರೇಗ್ (4) ಬಾಂಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ಜಗತ್ತಿನ ಅಪ್ರತಿಮ ಸುಂದರಿಯರೆನಿಸಿಕೊಂಡ ನಟಿಯರು ಬಾಂಡ್‌ಗರ್ಲ್ ಆಗಿ ಪಾತ್ರವಹಿಸಿದ್ದಾರೆ. ಬೇರೆ ಬೇರೆ ದೇಶಗಳ ನಟರು ಖಳನ ಪಾತ್ರಗಳನ್ನು ವಹಿಸಿದ್ದಾರೆ. ಬಾಂಡ್ ಪಾತ್ರ ಹೊರತುಪಡಿಸಿದರೆ, ‘ಎಂ’ ಮತ್ತು ‘ಕ್ಯೂ’, ‘ಮೊನಿಪೆನಿ’ ಪಾತ್ರವಹಿಸಿದ ಕಲಾವಿದರು ಮಾತ್ರ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ರಿಪೀಟ್ ಆಗಿದ್ದಾರೆ.
ಆದರೆ ಒಂದೇ ಬಗೆಯ ನಿರೂಪಣೆ ಮತ್ತೆ ಮತ್ತೆ ಪುನರಾವೃತ್ತಿಗೊಳ್ಳುವ ದೃಶ್ಯಾವಳಿಗಳು ಇದ್ದರೂ ಬಾಂಡ್ ಚಿತ್ರಗಳ ಯಶಸ್ಸು ಅಬಾಧಿತವಾಗಿರುವುದು ಬಹಳ ಸರಳವಾದ ಅಂಶಗಳಿಂದ ಎಂಬುದು ಅಚ್ಚರಿಯ ವಿಷಯ. ಜಗತ್ತಿಗೆ ಎದುರಾಗುವ ಆಪತ್ತನ್ನು ನಿವಾರಿಸಲು ಬಾಂಡ್ ಕೈಗೊಳ್ಳುವ ಮೈನವಿರೇಳಿಸುವ ಸಾಹಸ, ಬಾಂಡ್ ಹುಡುಗಿಯರ ಪ್ರದರ್ಶನ, ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದು ಕೂರಿಸುವ ಬಿಗಿಯಾದ ನಿರೂಪಣೆ, ಸಮಕಾಲೀನತೆಯ ಲಕ್ಷಣಗಳ ಸಂಗೀತ, ಪಾತ್ರಗಳ ವರ್ತನೆ ಮತ್ತು ಸಲಕರಣೆಗಳ ನಾವೀನ್ಯ ಇವಿಷ್ಟೇ ಬಾಂಡ್ ಚಿತ್ರಗಳ ಯಶಸ್ಸಿಗೆ ಕಾರಣ ಎಂಬುದು ಬಹುತೇಕ ವಿಮರ್ಶಕರ ಅಭಿಪ್ರಾಯ. ಲಾಂಗ್‌ಲಿವ್ ಬಾಂಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75