ಬೆಳಕು-ಬಣ್ಣ ಗಳ ಸಮಾಗಮ

Update: 2019-07-06 14:17 GMT

ಭಾಗ-24

ಕ್ಯಾಮರಾ ಹಾಗೂ ಮಸೂರ (lens)ಗಳ ಸಹಾಯದಿಂದ ಬೆಳಕನ್ನು ಹೇಗೆ ನಿಯಂತ್ರಿಸಬಹುದೆಂದು ಕಳೆದ ಕೆಲವು ಸಂಚಿಕೆಗಳಲ್ಲಿ ತಿಳಿದುಕೊಂಡಿದ್ದೇವೆ. ಕ್ಯಾಮರಾ-ಮಸೂರಗಳ ಸಮರ್ಥ ತಾಂತ್ರಿಕ ಬಳಕೆಯಿಂದ ಬೆಳಕನ್ನು ನಮಗೆ ಬೇಕಾದ ರೀತಿಯಲ್ಲಿ ಸದ್ಬಳಕೆ ಮಾಡಿ ಪರಿಣಾಮಕಾರಿಯಾದ ಚಿತ್ರಗಳನ್ನು ತೆಗಯಬಹುದು.

ಬೆಳಕನ್ನು ನಾವು ಸರಿಯಾಗಿ ಅವಲೋಕಿಸಿದರೆ ಅದರಲ್ಲಿ ಹಲವು ಬಗೆಗಳಿರುವುದನ್ನು ಕಾಣಬಹುದು. ಅದರಲ್ಲಿ ಪ್ರಮುಖವಾದವು- ನೈಸರ್ಗಿಕ ಬೆಳಕು ಹಾಗೂ ನಾವುಗಳೇ ಸೃಷ್ಟಿಸಿಕೊಳ್ಳುವಂಥ ಕೃತಕ ಬೆಳಕು. ಸೃಷ್ಟಿಸಿಕೊಳ್ಳುವ ಬೆಳಕೆಂದರೆ ವಿದ್ಯುತ್ ದೀಪಗಳಿಂದ, ಬ್ಯಾಟರಿ -ಇಂಜಿನ್‌ಗಳಿಂದ ಸೃಷ್ಟಿಸಿಕೊಳ್ಳುವಂಥದ್ದು. ಹೀಗೆ ಪ್ರಧಾನವಾಗಿ ಎರಡು ಬಗೆಯ ಬೆಳಕುಗಳನ್ನಾಗಿ ವಿಂಗಡಿಸಿಕೊಳ್ಳಬಹುದಾಗಿದೆ.

ಮೊದಲು ನೈಸರ್ಗಿಕ ಬೆಳಕಿನ ಬಗ್ಗೆ ತಿಳಿದುಕೊಳ್ಳೋಣ. ಸೂರ್ಯನಿಂದ ಮತ್ತು ಚಂದಿರನಿಂದ ನಿಸರ್ಗದತ್ತವಾಗಿ ಪಡೆಯುವ ಬೆಳಕನ್ನು ನೈಸರ್ಗಿಕ ಬೆಳಕೆಂದೂ ವಿಜ್ಞಾನದ ಬೆಳವಣೆಗೆಯಿಂದ ಮಾನವ ನಿರ್ಮಿತ ಬೆಳಕನ್ನು ಕೃತಕ ಬೆಳಕೆಂದೂ (artificial light) ಕರೆಯಲಾಗುತ್ತದೆ.

ನೈಸರ್ಗಿಕ ಬೆಳಕಿನಲ್ಲಾಗಲಿ -ಕೃತಕ ಬೆಳಕಿನಲ್ಲಾಗಲಿ ಬೆಳಕಿನ ಪ್ರಖರತೆ (brightness)  ಮತ್ತು ಸಾಂದ್ರತೆ (density)  ಯನ್ನು ಗುರುತಿಸಬಹುದು. ಇದನ್ನು ಅಳೆಯುವ ಸಾಧನವನ್ನು ಕೆಲ್ವಿನ್ ಮಾಪನ ಎಂದು ಕರೆಯಲಾಗುತ್ತದೆ. ಈ ಮಾಪನದಿಂದ ಗುರುತಿಸುವ ಬೆಳಕಿನ ತೀವ್ರತೆಯನ್ನು ಕ್ಯಾಮರಾದ ಮೂಲಕ ನಾವು ಚಿತ್ರ ಮೂಡಿಸಬೇಕಾದರೆ ವೈಟ್ ಬ್ಯಾಲೆನ್ಸ್ (white balance) ಎನ್ನುವ ತಾಂತ್ರಿಕತೆಯನ್ನು ಕ್ಯಾಮರಾದಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದು ಚಿತ್ರ ಕ್ಲಿಕ್ಕಿಸುವಾಗಲೆಲ್ಲ ಈ ವೈಟ್ ಬ್ಯಾಲೆನ್ಸ್ ಅನ್ನು ನಾವು ನಿಯಂತ್ರಿಸಬೇಕಾಗುತ್ತದೆ. ಏಕೆಂದರೆ ನಾವು ತೆಗೆಯುವ ಚಿತ್ರಗಳಿಗೆ ಬೆಳಕೇ ಪ್ರಧಾನವಾದುದು. (ಫೋಟೊಗ್ರಫಿ ಎಂಬ ಪದದಲ್ಲಿ ಫೋಟೊ ಎಂದರೆ ಬೆಳಕು ಎಂದೇ ಅರ್ಥವಲ್ಲವೇ) ಹೀಗಾಗಿ ಹೊಳೆವ ಬಿಳುಪಿನಿಂದ ಗಾಢ ಕಪ್ಪು ಬಣ್ಣದವರೆಗೆ ಕೋಟ್ಯಂತರ ಬಣ್ಣದ ಸಮ್ಮಿಶ್ರಣವಿರುತ್ತದೆ. ಹೀಗಾಗಿಯೇ ಕನ್ನಡದ ಒಂದು ಸಿನೆಮಾ ಹಾಡಿನಲ್ಲಿ ಏಳು ಬಣ್ಣ ಸೇರಿ ಒಂದು ಬಿಳಿಯ ಬಣ್ಣವಾಯಿತು ಎಂಬ ಸಾಲಿನ ಮೂಲಕ ವೈಜ್ಞಾನಿಕ ಸಂಗತಿಯನ್ನು ಹೇಳಿದ್ದಾರೆ. ನಿಸರ್ಗದಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಿಲ್ಲದೇ ಯಾವುದೇ ಬಣ್ಣಗಳು ಹುಟ್ಟುವುದೇ ಇಲ್ಲ ಎಂಬುದು ವಿಜ್ಞಾನ ಹೇಳಿದ ಸತ್ಯವಾಗಿದೆ. ಈ ಎಲ್ಲಾ ಬಣ್ಣಗಳು ನಮ್ಮ ಕಣ್ಣಿಗೆ ಗೋಚರಿಸುವುದೇ ಬೆಳಕಿನ ಸಹಾಯದಿಂದ ಎಂಬುದನ್ನು ನಾವು ಪ್ರಮುಖವಾಗಿ ಅರಿಯಬೇಕಾದ ಸಂಗತಿಯಾಗಿದೆ. ಹೀಗಾಗಿ ಬೆಳಕಿನ ಪ್ರಖರತೆಯನ್ನು ಮತ್ತು ಬೆಳಕಿನಲ್ಲಿರುವ ವೈವಿಧ್ಯಮಯ ವರ್ಣಗಳನ್ನು ಅಳೆಯಲು ಫೋಟೊ ಮೀಟರ್ ಎಂಬ ಸಾಧನವೂ ಇದೆ. ಹಾಗೆಯೇ ಏಳು ಬಣ್ಣಗಳ ನ್ಯೂಟನ್‌ನ ಚಕ್ರ ಜೋರಾಗಿ ತಿರುಗಿಸಿದಾಗ ಬಿಳಿ ಬಣ್ಣವನ್ನು ತೋರುವುದನ್ನು ನೀವೆಲ್ಲ ಶಾಲಾ ಪ್ರಯೋಗಗಳಲ್ಲಿ ನೋಡಿರಬಹುದು. ಈ ಏಳು ಬಣ್ಣಗಳನ್ನು  (Vibgyor Colours)  ಎಂದು ಕರೆಯುತ್ತಾರೆ.

ಈ ಎಲ್ಲ ಬಣ್ಣಗಳು ಬಿಳಿ ಬಣ್ಣದೊಂದಿಗೆ ಬೆರೆತಿರುತ್ತದೆ ಎಂಬುದು ಕುತೂಹಲದ ಸಂಗತಿಯಾಗಿದೆ. (Vibgyor) ಎಂಬುದು (Voilet, Indigo, Blue, Green, Yellow, Orange) ಮತ್ತು (Red) ಏಳು ಬಣ್ಣಗಳ ಸಮೂಹ ಇವೇ ಏಳು ಬಣ್ಣ ಕಾಮನ ಬಿಲ್ಲಿನಲೂ ನಾವು ಕಾಣಬಹುದು. ಕೆಂಪು, ಹಳದಿ, ನೀಲಿ ಬಣ್ಣಗಳನ್ನು ಪ್ರಾಥಮಿಕ ಬಣ್ಣಗಳೆಂದು, ಹಸಿರು, ಕೇಸರಿ, ನೇರಳೆ ಬಣ್ಣಗಳನ್ನು ಸೆಕೆಂಡರಿ ಬಣ್ಣಗಳೆಂದು ವರ್ಗೀಕರಿಸಲಾಗಿದೆ. ಬಣ್ಣಗಳ ಲೋಕವೇ ನಮ್ಮನ್ನು ಇನ್ನೊಂದು ಆಯಾಮಕ್ಕೆ ಕರೆದೊಯ್ಯುತ್ತದೆಯಾದರೂ ಛಾಯಾಗ್ರಹಣದಲ್ಲಿ ಬೆಳಕು ಮತ್ತು ಬಣ್ಣಗಳ ಹದವರಿತ ಸಮ್ಮಿಶ್ರಣವೇ ನಮ್ಮ ಕಲ್ಪನೆಗೆ ಸುಲಭಕ್ಕೆ ನಿಲುಕದ ಸಂಗತಿಯಾಗಿದೆ. ಛಾಯಾಗ್ರಹಣದಲ್ಲಿ ಬೆಳಕಿಲ್ಲದೆ- ಬಣ್ಣಗಳಿಲ್ಲದೆ ಚಿತ್ರವೊಂದು ಹುಟ್ಟಲಾರದು. ಈ ಹಿನ್ನೆಲೆಯಲ್ಲಿ ಛಾಯಾಗ್ರಹಣವನ್ನು ("draw with lights'') ಎನ್ನುವುದು. ಬೆಳಕು ಎಂಬುದು ಇನ್ನೊಂದು ಆಯಾಮದಲ್ಲಿ ಬಣ್ಣ ಎನ್ನುವುದೇ ಆಗಿರುತ್ತದೆ. ಬಣ್ಣ ಮತ್ತು ಬೆಳಕನ್ನು ಪ್ರತ್ಯೇಕಗೊಳಿಸಲು ಛಾಯಾಗ್ರಹಣದಲ್ಲಿ ಸಾಧ್ಯವೇ ಇಲ್ಲ. ಹೀಗಾಗಿ ಬೆಳಕೆಂದರೆ ಬಣ್ಣ- ಬಣ್ಣವೆಂದರೆ ಬೆಳಕು. ಅದುವೇ ನೆಳಲು (ಕಪ್ಪು) ಮತ್ತು ಬೆಳಕು(ಬಿಳುಪು). ಇಂತಹ ನೆಳಲು ಬೆಳಕಿನ ಆಟವೇ ಛಾಯಾಗ್ರಹಣ.

ನಿಸರ್ಗ ಸಹಜ ಬೆಳಕಿನಲ್ಲಿ ಚಿತ್ರಗಳನ್ನು ಸೃಷ್ಟಿಸಬೇಕಾದರೆ ಅದರದ್ದೇ ಆದ ಸಹಜತೆಯಿಂದ ಕೂಡಿದ ಸುಂದರ ನೋಟಗಳ ಚಿತ್ರಗಳು ಲಭಿಸುತ್ತವೆ. ಎಷ್ಟೋ ಬಾರಿ ನಿಸರ್ಗದ ಬೆಳಕಿನಲ್ಲಿ ಕುರೂಪತನವನ್ನೂ ಸೃಷ್ಟಿಸಲು ಸಾಧ್ಯವಿದೆ.

ನೈಸರ್ಗಿಕ ಬೆಳಕನ್ನು ಉಪಯೋಗಿಸುವ ಒಂದಷ್ಟು ವಿಧಾನಗಳನ್ನು ಮುಂದಿನ ವಾರದಲ್ಲಿ ಚರ್ಚಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News