ಹೈಪರ್ ಸೋನಿಕ್ ಕ್ಷಿಪಣಿಗಳು ಮತ್ತು ಹೊಸ ಜಾಗತಿಕ ಶಸ್ತ್ರಾಸ್ತ್ರ ಪೈಪೋಟಿ

Update: 2019-07-07 03:55 GMT

ಹೊಸ ಶಸ್ತ್ರಗಳು ಶಬ್ಧದ ವೇಗಕ್ಕಿಂತ ಹದಿನೈದು ಪಟ್ಟು ವೇಗದಲ್ಲಿ ಚಲಿಸುತ್ತ ಆಧುನಿಕ ಸಮರದ ಸ್ವರೂಪವನ್ನೇ ಬದಲಿಸುವ ಬೆದರಿಕೆಯೊಡ್ಡುತ್ತಿವೆ. ತಾವು ತಲುಪಬೇಕಾದ ಗುರಿಯನ್ನು ಭಯಾನಕ ಖಚಿತತೆಯಿಂದ ತಲುಪುವ ಈ ಶಸ್ತ್ರಗಳೇ ಹೈಪರ್ ಸೋನಿಕ್ ಕ್ಷಿಪಣಿಗಳು. ಇವುಗಳ ವಿವರಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಇಂಟರ್‌ನ್ಯಾಶನಲ್ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ಆರ್. ಜೆಫ್ರಿ ಸ್ಮಿತ್ ಬರೆದಿರುವ ಮೈ ನವಿರೇಳಿಸುವ ಲೇಖನದ ಮುಖ್ಯಾಂಶಗಳು ಇಲ್ಲಿವೆ.

2018ರ ಮಾರ್ಚ್ 6ರಂದು ವಾಶಿಂಗ್ಟನ್‌ನಲ್ಲಿರುವ ಸ್ಫಿಂಕ್ಸ್ ಕ್ಲಬ್‌ನ ಅದ್ದೂರಿಯ ಬಾಲ್‌ರೂಂ, ಬಾಹ್ಯಾಕಾಶ ಉದ್ಯಮದ ಉನ್ನತಾಧಿಕಾರಿಗಳಿಂದ ಕಿಕ್ಕಿರಿದಿತ್ತು. ಅವರೆಲ್ಲ ಮೈಕೆಲ್ ಡಿ ಗ್ರಿಫಿನ್ ಏನು ಹೇಳುತ್ತಾನೆಂದು ಕೇಳಲು ಅಲ್ಲಿ ನೆರೆದಿದ್ದರು. 69ರ ಹರೆಯದ ಗ್ರಿಫಿನ್ ಅಮೆರಿಕನ್ ಮಿಲಿಟರಿ ಮತ್ತು ರಾಜಕೀಯ ಪಾರಮ್ಯದ ಎಗ್ಗಿಲ್ಲದ ಪ್ರತಿಪಾದಕ. ಐದು ಸ್ನಾತಕೋತ್ತರ ಹಾಗೂ ಬಾಹ್ಯಾಕಾಶ ಇಂಜಿನಿಯರಿಂಗ್‌ನಲ್ಲಿ ಒಂದು ಡಾಕ್ಟರೇಟ್ ಪದವಿಯನ್ನು ಪಡೆದಿರುವ ಆತ ಅಧ್ಯಕ್ಷ ರೇಗನ್‌ರವರ ಸ್ಟಾರ್ ವಾರ್ರ್ಸ್‌ ಯೋಜನೆಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ. ಓರ್ವ ‘ವೈಜ್ಞಾನಿಕ ಆಶಾವಾದಿ’ ಎಂದು ಖ್ಯಾತನಾದ ಗ್ರಿಫಿನ್ ಎಲ್ಲಕ್ಕಿಂತ ಮಿಗಿಲಾಗಿ ವೇಗಕ್ಕೆ ಪ್ರಾಮುಖ್ಯತೆ ಕೊಡುವಾತ. ಬಾಲ್‌ರೂಂನಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಆತ ಹೇಳಿದ ಮಾತು: ‘‘ಯಾವುದೋ ತಾಂತ್ರಿಕ ವಿಷಯಕ್ಕೆ, ಇನ್ಯಾವುದೋ ಒಂದು ಆದ್ಯತೆಗೆ ಮಹತ್ವ ನೀಡುವ ಎಲ್ಲರ ಬಗ್ಗೆ ನನಗೆ ಅಯ್ಯೋ ಪಾಪ ಅನಿಸುತ್ತದೆ. ಅವುಗಳೆಲ್ಲ ಮುಖ್ಯವೆಂದು ನಾನು ಒಪ್ಪುವುದಿಲ್ಲ ಅಂತಲ್ಲ. ಆದರೆ ಯಾವುದೋ ಒಂದಕ್ಕೆ ಪ್ರಥಮ ಸ್ಥಾನ ಇರಬೇಕು, ನನ್ನ ಪ್ರಥಮ ಆದ್ಯತೆ ಹೈಪರ್‌ಸೋನಿಕ್ಸ್.’’

ಗ್ರಿಫಿನ್ ಉಲ್ಲೇಖಿಸಿದ ಹೈಪರ್‌ಸೋನಿಕ್ ಎಂದರೆ ಅದೊಂದು ಕ್ರಾಂತಿಕಾರಕವಾದ ಹೊಸ ಅಸ್ತ್ರ. ಅದಕ್ಕೆ ಅಭೂತಪೂರ್ವವಾದ ಶಕ್ತಿ ಇರುತ್ತದೆ. ಅದನ್ನು ಬಳಸಿದಾಗ ಅದು ತಾನು ಹೊರಟಲ್ಲಿಂದ ತಲುಪಬೇಕಾದ, ವಿಶ್ವದ ಯಾವುದೇ ಮೂಲೆಯಲ್ಲಿರಬಹುದಾದ ಗುರಿಯನ್ನು ಕೆಲವೇ ನಿಮಿಷಗಳೊಳಗಾಗಿ ತಲುಪಿ ಅಪ್ಪಳಿಸುತ್ತದೆ. ಶಬ್ದದ ವೇಗಕ್ಕಿಂತ 15 ಪಟ್ಟು ವೇಗದಲ್ಲಿ ಚಲಿಸುವ ಹೈಪರ್‌ಸೋನಿಕ್ ಕ್ಷಿಪಣಿಗಳು ಕಣ್ಣುಕೋರೈಸುವ, ಮಿಂಚಿನಂತಹ ಬೆಳಕಿನೊಂದಿಗೆ ಗುರಿಯ ಮೇಲೆರಗುತ್ತವೆ. ಇಂತಹ ಕ್ಷಿಪಣಿಗಳನ್ನು ಅಮೆರಿಕ ಮಾತ್ರವಲ್ಲದೆ ಚೀನಾ, ರಶ್ಯ ಮತ್ತಿತರ ರಾಷ್ಟ್ರಗಳು ಕೂಡ ಅಭಿವೃದ್ಧಿ ಪಡಿಸುತ್ತಿವೆ.

2022ರ ಅಕ್ಟೋಬರ್ ವೇಳೆಗೆ ಸಿದ್ಧವಾಗಬೇಕೆಂದು ಅಂದಾಜಿಸಿರುವ ಅಮೆರಿಕ ಈ ವರ್ಷ ಹೈಪರ್‌ಸೋನಿಕ್ ಗಾಗಿ ತನ್ನ ರಕ್ಷಣಾ ಬಜೆಟ್‌ನಲ್ಲಿ 206ಬಿಲಿಯನ್ ಡಾಲರ್ ತೆಗೆದಿರಿಸಿದೆ. ಅಲ್ಲದೆ ಈ ಕ್ಷಿಪಣಿಗಳ ಉತ್ಪಾದನೆಯನ್ನು ‘ಔದ್ಯೋಗೀಕರಿಸುವ’ ಯೋಜನೆ ಕೂಡ ಟ್ರಂಪ್ ಆಡಳಿತಕ್ಕೆ ಇದೆ.

ಹೈಪರ್ ಸೋನಿಕ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಎಷ್ಟೊಂದು ವೇಗವಾಗಿ ನಡೆಯುತ್ತಿದೆ ಎಂದರೆ ಅಂತಹ ಅತ್ಯಂತ ಅಪಾಯಕಾರಿಯಾದ, ವಿನಾಶಕಾರಿಯಾದ ಅಸ್ತ್ರಗಳು ಉಂಟುಮಾಡಬಹುದಾದ ಅನಾಹುತಗಳ ಬಗ್ಗೆ ಚರ್ಚೆಕೂಡ ನಡೆಸಲು ಅವಕಾಶವಿಲ್ಲವಾಗಿದೆ.

ಸಂದರ್ಭಗಳಲ್ಲಿ ಮತ್ತು ಹೇಗೆ ಅವುಗಳನ್ನು ಒಂದು ದೇಶ ಬಳಸಬಹುದು ಎಂಬ ಕುರಿತು ಈಗ ಯಾವುದೇ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಲ್ಲ. ಬದಲಾಗಿ, ನಂಬಲು ಸಾಧ್ಯವಿಲ್ಲದ ಭಾರೀ ವೇಗದ ಈ ಅಸ್ತ್ರಗಳನ್ನು ಆದಷ್ಟು ಬೇಗ ಹೊಂದಬೇಕು ಎಂಬ ಅವಸರ, ತರಾತುರಿ ಅಮೆರಿಕವನ್ನು ರಶ್ಯ ಮತ್ತು ಚೀನಾದೊಂದಿಗೆ ಒಂದು ಹೊಸ ಶಸ್ತ್ರಾಸ್ತ್ರ ಪೈಪೋಟಿಗೆ ತಳ್ಳಿದೆ. ಕೆಲವು ತಜ್ಞರ ಪ್ರಕಾರ ಇದು ಹೊಸ ಒಂದು ಶೀತಲ ಸಮರದ ಬಿಗಿತಗಳಿಗೆ ಕಾರಣವಾಗಬಹುದು.

ಹೈಪರ್‌ಸೋನಿಕ್ ಕ್ಷಿಪಣಿಗಳು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಬಲ್ಲವಾದರೂ, ಅಮೆರಿಕ ಈಗ ಸಿದ್ಧಪಡಿಸುತ್ತಿರುವ ಕ್ಷಿಪಣಿಗಳನ್ನು ಚಿಕ್ಕ ಸಾಂಪ್ರದಾಯಿಕ ಸ್ಫೋಟಕಗಳನ್ನು ಹೊರಬಲ್ಲ ಕ್ಷಿಪಣಿಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಐದರಿಂದ ಹತ್ತು ಅಡಿಗಳಷ್ಟು ಉದ್ದವಿದ್ದು ಸುಮಾರು 500ಪೌಂಡ್ (227 ಕಿಲೊಗ್ರಾಂ) ಭಾರವಿರುವ ಈ ಕ್ಷಿಪಣಿಗಳು ಅದೃಶ್ಯ ಪವರ್ ಡ್ರಿಲ್ (ತೂತುಕೊರೆಯುವ ಯಂತ್ರ)ಗಳಂತೆ ಕಾರ್ಯನಿರ್ವಹಿಸುತ್ತವೆ. ತಾವು ಅಪ್ಪಳಿಸುವ ಗುರಿಯ ಮೇಲೆ ( ಶತ್ರುಗಳ ಯುದ್ಧ ವಿಮಾನಗಳು, ಹಡಗುಗಳು, ಆಯಕಟ್ಟಿನ ಕಟ್ಟಡಗಳು) ಅನೂಹ್ಯ ಪರಿಣಾಮ ಬೀರುವಂತಹ ತೂತುಗಳನ್ನು ಉಂಟುಮಾಡುತ್ತವೆ.

ಭೂಮಿಯ ಮೇಲಿನಿಂದ, ವಿಮಾನಗಳಿಂದ ಅಥವಾ ಜಲಾಂತರ್ಗಾಮಿಗಳಿಂದ ಅವುಗಳನ್ನು ಹಾರಿಸಿಬಿಟ್ಟ ಬಳಿಕ, ಅವುಗಳು ಗಂಟೆಗೆ ಕನಿಷ್ಠ 1,150 ಮೈಲುಗಳ ವೇಗದಲ್ಲಿ ಸಾಗಿ ತಮ್ಮ ಗುರಿಯ ಮೇಲೆ ಅಪ್ಪಳಿಸುವಾಗ ಅವುಗಳ ಕೈನೆಟಿಕ್ ಎನರ್ಜಿ (ಶಕ್ತಿ) ಎಷ್ಟಿರುತ್ತದೆಂದರೆ ಅವುಗಳು ಯಾವುದೇ ಕಟ್ಟಡ ನಿರ್ಮಾಣ (ಬಿಲ್ಡಿಂಗ್) ಸಾಮಗ್ರಿಯನ್ನು ಅಥವಾ ಶಸ್ತ್ರ ನಿರೋಧಕ ಕವಚವನ್ನು ಮೂರರಿಂದ ನಾಲ್ಕು ಟನ್‌ಗಳಷ್ಟು ಟಿಎಸ್‌ಟಿ (ಸ್ಫೋಟಕ) ಶಕ್ತಿಯಿಂದ ಭೇದಿಸಿ ತೂತುಕೊರೆದು ಒಳಹೊಕ್ಕುವ ಸಾಮರ್ಥ್ಯ ಹೊಂದಿರುತ್ತವೆ.

ಹೈಪರ್ ಸೋನಿಕ್‌ಗಳನ್ನು ಟ್ರಕ್ ಅಥವಾ ರೈಲುಗಳಲ್ಲಿ ಸಾಗಿಸಲಾಗುತ್ತಿರುವ ಅಣ್ವಸ್ತ್ರ ಸಿಡಿತಲೆ ಕ್ಷಿಪಣಿಗಳನ್ನು ಹೊಂದಿರುವ ರಶ್ಯನ್ ಸೇನಾ ವಾಹನಗಳ ಮೇಲೆ ಉಡಾಯಿಸಬಹುದು. ಅಥವಾ ಚೀನೀಯರು ಹೈಪರ್ ಸೋನಿಕ್‌ಗಳ ತಮ್ಮದೇ ಆದ ಮಾದರಿಗಳನ್ನು ಅಮೆರಿಕದ ಯುದ್ಧ ವಿಮಾನಗಳ ಮೇಲೆ ಮತ್ತು ಜಪಾನ್ ಅಥವಾ ಗುಪಾಮ್‌ನಲ್ಲಿರುವ ಇತರ ವಿಮಾನ ನಲೆಗಳ ಮೇಲೆ ಉಡಾಯಿಸಬಹುದು. ಪ್ರಪಂಚದ ಎಲ್ಲೇ ಇರುವ ಭೂ ಅಥವಾ ಸಾಗರ ನೆಲೆಯಲ್ಲಿರುವ ರಾಡಾರ್‌ಗಳ ಮೇಲೆ ಅಥವಾ ಏಶ್ಯಾದ ಬಂದರುಗಳ ಅಥವಾ ಯುರೋಪಿಯನ್ ನಗರಗಳಲ್ಲಿರುವ ಮಿಲಿಟರಿ ಮುಖ್ಯಕೇಂದ್ರಗಳ ಮೇಲೆ ಹೈಪರ್ ಸೋನಿಕ್ ಕ್ಷಿಪಣಿಗಳು ದಾಳಿ ನಡೆಸಬಲ್ಲವು. ಅಲ್ಲದೆ ಈ ಕ್ಷಿಪಣಿಗಳು ಒಂದು ‘ಡಿ ಕ್ಯಾಪಿಟೇಶನ್’ ದಾಳಿ ನಡೆಸಲು ಕೂಡ ಹೇಳಿ ಮಾಡಿಸಿದಂತಿರುತ್ತವೆ. ಡಿ ಕ್ಯಾಪಿಟೇಶನ್ ದಾಳಿ ಎಂದರೆ ಒಂದು ದೇಶದ ಉನ್ನತ ಮಿಲಿಟರಿ ಅಥವಾ ರಾಜಕೀಯ ಅಧಿಕಾರಿಗಳ ಹತ್ಯೆ ಮಾಡುವುದು. ಒಬಾಮಾ ಆಡಳಿತದಲ್ಲಿದ್ದ ಓರ್ವ ಶ್ವೇತ ಭವನ ಅಧಿಕಾರಿ ಹೇಳಿದಂತೆ ಈ ಕ್ಷಿಪಣಿಗಳು ಇನ್‌ಸ್ಟಂಟ್ ಲೀಡರ್-ಕಿಲ್ಲರ್ಸ್‌.

 ಮುಂದಿನ ದಶಕದೊಳಗಾಗಿ ಈ ಹೊಸ ಅಸ್ತ್ರಗಳು, ಪರಮಾಣು ಅಸ್ತ್ರಗಳು ಮಾಡಬೇಕೆಂದು ಬಹಳ ಸಮಯದಿಂದ ಮಿಲಿಟರಿ ತಜ್ಞರು ಕಲ್ಪಿಸಿಕೊಂಡಿದ್ದ ಒಂದು ಕಾರ್ಯವನ್ನು ಸಾಧಿಸಬಲ್ಲವು: ಅಂದರೆ ಇನ್ನೊಂದು ರಾಷ್ಟ್ರದ ಸರಕಾರ ಅಥವಾ ಶಸ್ತ್ರಾಸ್ತ್ರ ಉಗ್ರಾಣಗಳ ಮೇಲೆ ಮೊದಲು ತಾವೇ ದಾಳಿ ಮಾಡುವುದು, ಪ್ರಮುಖ ಸಂಪರ್ಕ ಜಾಲಗಳನ್ನು ಕಡಿದು ಹಾಕುವುದು ಮತ್ತು ಪ್ರತಿದಾಳಿ ಮಾಡುವ ಅದರ ಪಡೆಗಳನ್ನು ಅಸಹಾಯಕವಾಗಿಸುವುದು ಮತ್ತು ಪರಮಾಣು ಸಿಡಿತಲೆಗಳು ಸ್ಫೋಟಗೊಂಡಾಗ ಉಂಟಾಗುವ ಅಣುವಿಕಿರಣದ ಕಪ್ಪುಹೊಗೆಯ ಮೋಡ ಉಂಟಾಗಿ ವಿಶ್ವದ ರಾಷ್ಟ್ರಗಳು ಇದನ್ನೆಲ್ಲ ಖಂಡಿಸಿದಂತೆ ನೋಡಿಕೊಳ್ಳುವುದು. ಆದ್ದರಿಂದಲೇ ಹೈಪರ್‌ಸೋನಿಕ್‌ಗಳು ಅಮೆರಿಕಕ್ಕೆ ‘ಕೇವಲ ವಿಕಾಸಹೊಂದುತ್ತಿರುವ ಬೆದರಿಕೆಗಳಲ್ಲ’, ಬದಲಾಗಿ ಶತ್ರುಗಳ ಕೈಯಲ್ಲಿ ಇವುಗಳು ಅಮೆರಿಕದ ತಾನೊಬ್ಬ ಜಾಗತಿಕ ಕಾವಲುಗಾರ ಮತ್ತು ಜಾಗತಿಕ ಮಿಲಿಟರಿ ಶಕ್ತಿ ಎಂಬ ಹೊಗಳಿಕೆಗೆ ಒಂದು ಸವಾಲು ಆಗಬಹುದು.

ಯಾವುದೇ ದೇಶದಲ್ಲಿ ಮಿಲಿಟರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಒಂದು ದಾಳಿಯ ಸ್ವರೂಪ ಹೇಗಿರಬೇಕು, ರಕ್ಷಣಾ ಕ್ರಮಗಳ ವ್ಯಾಪ್ತಿಎಷ್ಟು, ತಾವು ನಡೆಸುವ ದಾಳಿಯಿಂದಾಗುವ ಪರಿಣಾಮಗಳೇನು ಎಂದು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದರೆ ಹೈಪರ್‌ಸೋನಿಕ್ ಕ್ಷಿಪಣಿಗಳಂತಹ ಅಸ್ತ್ರಗಳ ಆಗಮನದಿಂದಾಗಿ ಈ ಕಾಲಾವಕಾಶವು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ. ಏನು? ಎತ್ತ? ಎಂದು ಯೋಚಿಸುತ್ತ ಕುಳಿತುಕೊಳ್ಳುವಷ್ಟು ಸಮಯವೇ ಅವರಿಗೆ ಸಿಗುವುದಿಲ್ಲ. ಪ್ರತಿದಾಳಿ ನಡೆಸಲು ಬಳಸುವ ಶಸ್ತ್ರಗಳಿಗೆ ಹೈಪರ್‌ಸೋನಿಕ್‌ಗಳು (ಸಮಯದ ದೃಷ್ಟಿಯಿಂದ)ಯಾವ ರೀತಿಯ ಬೆದರಿಕೆಯೊಡ್ಡುತ್ತವೆಂದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಗಳು ‘ಯೂಸ್ ಇಟ್‌ಆರ್ ಲೂಸ್ ಇಟ್’ (ಒಂದೋ ಅದನ್ನು ಬಳಸಿ ಅಥವಾ ಯುದ್ಧದಲ್ಲಿ ಸೋಲು ಅನುಭವಿಸಿ) ಎಂಬ ಒತ್ತಡಕ್ಕೆ ಗುರಿಯಾಗುತ್ತವೆ. ಪರಿಣಾಮವಾಗಿ ಅವು ತಾವೇ ಮೊದಲು ದಾಳಿ (ಫಸ್ಟ್ ಸ್ಟ್ರೈಕ್) ನಡೆಸಬೇಕಾಗುತ್ತದೆ. ತಮ್ಮ ಎದುರಾಳಿಗೆ ತಮ್ಮನ್ನು ಸರ್ವನಾಶ ಮಾಡುವ ಸಾಮರ್ಥ್ಯವಿದೆ ಎಂದು ಯುದ್ಧನಿರತ ದೇಶಗಳಿಗೆ ಅನ್ನಿಸಿದಾಗ ಜಗತ್ತನ್ನೆ ಬದಲಿಸಿಬಿಡಬಹುದಾದ ಯುದ್ಧ ನಡೆಯಲಾರದು; ಯಾಕೆಂದರೆ ಅಂತಹ ಯುದ್ಧ ಪರಸ್ಪರ ವಿನಾಶದ ಖಾತರಿಯಾಗಿರುತ್ತದೆ ಎಂಬುದು ಪರಮಾಣು ಯುಗದ ತುಂಬ ದೃಢವಾದ, ಪ್ರಬಲವಾದ ಮಿಲಿಟರಿ ಸಿದ್ಧಾಂತವಾಗಿತ್ತು. ಆದರೆ ಹೈಪರ್ ಸೋನಿಕ್ ಕ್ಷಿಪಣಿಗಳು ಈ ಸಿದ್ಧಾಂತವನ್ನು ಬುಡಮೇಲು ಮಾಡಬಹುದು ಎನ್ನುತ್ತಾರೆ ತಜ್ಞರು.

ಆದರೂ ಕೂಡ ಇಂದು ನಿರ್ಧಾರ ತೆಗೆದು ಕೊಳ್ಳುತ್ತಿರುವ ನಾಯಕರು ಈ ಅಪಾಯಗಳನ್ನು ಉಪೇಕ್ಷಿಸುತ್ತಿರುವಂತೆ ಕಾಣುತ್ತಿದೆ. ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ, ಪರಮಾಣು ಸಿಡಿತಲೆಗಳನ್ನು ಹೊತ್ತ ಕ್ಷಿಪಣಿಗಳ ಸೃಷ್ಟಿ ಹಿಂದಿನ ಮಿಲಿಟರಿ ತಂತ್ರಜ್ಞಾನದ ಸಾಧನೆಯಾಗಿತ್ತು. ಇವುಗಳ ತಯಾರಿಕೆಯನ್ನು ಸೂಪರ್ ಪವರ್‌ಗಳ ಅಂತರ್‌ರಾಷ್ಟ್ರೀಯ ಒಪ್ಪಂದದ ಮೂಲಕ ಸೀಮಿತಗೊಳಿಸಲಾಗಿತ್ತು. ಆದರೆ ಈಗ ರಶ್ಯ, ಅಮೆರಿಕ ಮತ್ತು ಚೀನಾ ಹೈಪರ್ ಸೋನಿಕ್ ತಂತ್ರಜ್ಞಾನದ ಅಭಿವೃದ್ಧಿ, ಬಳಕೆಯ ಕುರಿತು ಯಾವುದೇ ರೀತಿಯ ಒಪ್ಪಂದದ ಬಗ್ಗೆ ಗಂಭೀರವಾಗಿ ಯೋಚಿಸಿಯೇ ಇಲ್ಲ.

ಇದು ಥಾಮಸ್ ಎಮ್ ಕಂಟ್ರಿಮನ್‌ನಂತಹ ಶಸ್ತ್ರಾಸ್ತ್ರ ನಿಯಂತ್ರಣ ತಜ್ಞರನ್ನು ಚಿಂತೆಗೀಡು ಮಾಡಿದೆ. ಒಂದು ದೇಶ ಉತ್ಪಾದಿಸಬಹುದಾದ ಹೈಪರ್‌ಸೋನಿಕ್ ಕ್ಷಿಪಣಿಗಳ ಸಂಖ್ಯೆಯ ಮೇಲೆ ಹಾಗೂ ಅವು ಹೊತ್ತುಕೊಂಡೊಯ್ಯುವ ಸಿಡಿತಲೆಗಳು ಯಾವ ರೀತಿಯದ್ದಾಬೇಕು ಎಂಬುದರ ಮೇಲೆ ಮಿತಿ ಹೇರಬೇಕು ಇಲ್ಲವಾದಲ್ಲಿ ವಿಶ್ವದ ಮೇಲೆ ಸರಿಪಡಿಸಲಾಗದ ಪರಿಣಾಮಗಳಾಗಬಹುದು ಎನ್ನುತ್ತಾರೆ ಕಂಟ್ರಿಮನ್.

ವೇಗವಾಗಿ ಹಾರುವ ಹೈಪರ್‌ಸೋನಿಕ್ ಪವರ್ ಡ್ರಿಲ್‌ಗಳಲ್ಲಿ ರಶ್ಯ,ಚೀನಾ, ಮತ್ತು ಅಮೆರಿಕವಷ್ಟೇ ಅಲ್ಲದೆ ಇತರ ಚಿಕ್ಕ ರಾಷ್ಟ್ರಗಳು ಆಸಕ್ತವಾಗಿವೆ. ಫ್ರಾನ್ಸ್ ಮತ್ತು ಭಾರತ ಕೂಡ ಸಕ್ರಿಯ ಹೈಪರ್‌ಸೋನಿಕ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಆಸ್ಟ್ರೇಲಿಯ,ಜಪಾನ್, ಮತ್ತು ಯುರೋಪಿಯನ್ ಒಕ್ಕೂಟ ಈಗ ನಾಗರಿಕ ಅಥವಾ ಮಿಲಿಟರಿ ಹೈಪರ್‌ಸೋನಿಕ್ ಸಂಶೋಧನೆಯಲ್ಲಿ ನಿರತವಾಗಿವೆ. ಹೈಪರ್‌ಸೋನಿಕ್ ತಂತ್ರಜ್ಞಾನ ಬಳಸಿ ವಿಶ್ವದ ಯಾವ ಮೂಲೆಗಾದರೂ ಕೆಲವೇ ಗಂಟೆಗಳಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯಬಲ್ಲಷ್ಟು ದೊಡ್ಡದಾದ ವಿಮಾನಗಳನ್ನು ತಯಾರಿಸಬಹುದೆಂಬ ಆಕರ್ಷಣೆ, ಆಲೋಚನೆ ಅವುಗಳಿಗಿದೆ. ಆದರೆ 2025ರ ವೇಳೆಗೆ ಪ್ರಯೋಗಾರ್ಥ ಉಡ್ಡಯನಕ್ಕೆ ಸಿದ್ಧವಾಗಬಹುದಾದ ಹೈಪರ್‌ಸೋನಿಕ್ ಅಸ್ತ್ರವೊಂದನ್ನು ತಯಾರುಮಾಡುವುದು ಜಪಾನಿನ ತತ್‌ಕ್ಷಣದ ಪ್ರಯತ್ನವಾಗಿದೆ.

ಮಿಲಿಟರಿ ಬೆದರಿಕೆಯೊಂದಕ್ಕೆ ಹೊಸ ಹಾಗೂ ಮಾಂತ್ರಿಕ ಪರಿಹಾರ ಕಂಡು ಹಿಡಿಯುವ ಓಟದಲ್ಲಿ ಮುಂದೆ ಎದುರಾಗಬಹುದಾದ ಅಪಾಯಗಳನ್ನು, ಗಂಡಾಂತರಗಳನ್ನು ಅಮೆರಿಕ ಮತ್ತು ಇತರ ದೇಶಗಳು ಉಪೇಕ್ಷಿಸುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ. ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಮತ್ತು ರಶ್ಯ ಕೆಲವು ಗಂಟೆಗಳಲ್ಲಿ ಸಾಗರಗಳನ್ನು ದಾಟಿ ಶತ್ರು ದೇಶದ ಗುರಿಗಳ ಮೇಲೆ ದಾಳಿ ಮಾಡಬಹುದಾದ ಯುದ್ಧ ವಿಮಾನಗಳನ್ನು ಹಾಗೂ ಕೇವಲ ಮೂವತ್ತು ನಿಮಿಷಗಳಲ್ಲಿ ತಮ್ಮ ಗುರಿಗಳ ಮೇಲೆ ಎರಗಬಲ್ಲ ಸಿಡಿತಲೆಗಳನ್ನು ಹೊತ್ತ ಕ್ಷಿಪಣಿಗಳನ್ನು ಬಳಸಿ ಪರಸ್ಪರ ಶತ್ರು ವಿನಾಶದ ಬೆದರಿಕೆ ಹಾಕಿದ್ದವು. ಅಂತಿಮವಾಗಿ ಎರಡು ದೇಶಗಳು 31 ಸಾವಿರಕ್ಕೂ ಹೆಚ್ಚು ಸಿಡಿತಲೆಗಳನ್ನು ಸಿದ್ಧ ಮಾಡಿ ವಿನಾಶದ ಮುಹೂರ್ತಕ್ಕಾಗಿ ಕಾದು ಕುಳಿತಿದ್ದವು. ಬಳಿಕ, ಭಾಗಶಃ ಸೋವಿಯತ್ ಒಕ್ಕೂಟದ ವಿಸರ್ಜನೆಯಿಂದಾಗಿ, ಏರಿದ್ದ ಜ್ವರ ಇಳಿದು ಎರಡು ರಾಷ್ಟ್ರಗಳು ಪರಸ್ಪರ ಸಂಧಾನದ ಮೂಲಕ ತಮ್ಮ ಈ ಶಸ್ತ್ರಾಸ್ತ್ರಗಳ (ಸಿಡಿತಲೆಗಳ) ಸಂಖ್ಯೆಯನ್ನು ಸುಮಾರು 6,500ಕ್ಕೆ ಇಳಿಸಿದ್ದವು.

ಅಂದಿನಿಂದ ಲಾಗಾಯಿತು ತೀವ್ರ ಸ್ವರೂಪದ ಶಸ್ತ್ರಾಸ್ತ್ರ ಓಟಗಳು ಆರಂಭವಾಗಿದ್ದವು. ಕಳೆದ ಎಪ್ಪತ್ತು ವರುಷಗಳ ಅವಧಿಯಲ್ಲಿ ನಾವು ಅಣ್ವಸ್ತ್ರಗಳು ತರಬಹುದಾದ ವಿನಾಶಕ್ಕೆ ಒತ್ತೆಯಾಳುಗಳಾಗಿ ಉಳಿದಿದ್ದೇವೆ. ಅಧ್ಯಕ್ಷ ಟ್ರಂಪ್‌ರ ಅಧಿಕಾರಿಗಳು ಅಣ್ವಸ್ತ್ರಗಳು ಉಂಟು ಮಾಡುವ ‘ಪರಸ್ಪರ ವಿನಾಶದ ಖಾತರಿ’ ನೀತಿಯನ್ನು ಬೆಂಬಲಿಸುವುದನ್ನು ವಿರೋಧಿಸಿದ್ದಾರೆ. ಶತ್ರುಗಳು ಎಸೆಯುವ ಕ್ಷಿಪಣಿಗಳನ್ನು ಅವರು ಹಾರಿಸುವ ಮೊದಲೇ ಅವುಗಳನ್ನು ಸೋಲಿಸುವಂತಹ ಒಂದು ಕ್ಷಿಪಣಿ- ರಕ್ಷಣಾ ತಂತ್ರತನ್ನದಾಗಬೇಕೆಂದು ಅಮೆರಿಕ ಈಗ ಯೋಜನೆ ಹಾಕಿಕೊಂಡಿದೆ.

 ಹೈಪರ್‌ಸೋನಿಕ್‌ಗಳನ್ನು ನಿಯಂತ್ರಿಸುವುದರಲ್ಲಿ ಅಮೆರಿಕನ್ ಆಡಳಿತ ತೋರಿಸುತ್ತಿರುವ ನಿರಾಸಕ್ತಿ ಹೊಸತೇನೂ ಅಲ್ಲ. ಈ ನಿಟ್ಟಿನಲ್ಲಿ ಒಬಾಮಾ ಆಡಳಿತ ತೋರಿದ ನಿಷ್ಕ್ರಿಯೆಯು 31ನೇ ಶತಮಾನದ ಹೈಪರ್‌ಸೊನಿಕ್ ಸ್ಪರ್ಧೆಗೆ ಬಾಗಿಲು ತೆರೆದಂತಾಗಿದೆ; ಈ ಸ್ಪರ್ಧೆಯಲ್ಲಿ ಅಮೆರಿಕ ಭಾಗಿಯಾಗುವಂತೆ ಮಾಡಿದೆ.

ಕಾಲ ಇನ್ನೂ ಮಿಂಚಿಹೋಗಿಲ್ಲ. ಶಸ್ತ್ರಾಸ್ತ್ರ ಪೈಪೋಟಿಗೆ ಹಸಿರು ನಿಶಾನೆ ತೋರಿಸುವುದು, ಕಿಡಿಕೊಡುವುದು ಸುಲಭ. ಪೈಪೋಟಿಯನ್ನು ತಡೆಯುವುದು ತುಂಬ ಕಷ್ಟದ ಕೆಲಸವೆಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಈ ಪೈಪೋಟಿಯಲ್ಲಿ ಅಂತಿಮವಾಗಿ ಅಮೆರಿಕ ಗೆಲ್ಲುತ್ತದೆಂದು ಗ್ರಿಫಿನ್ ಹೇಳುತ್ತಾನೆ. 2018ರ ಎಪ್ರಿಲ್‌ನಲ್ಲಿ ಆತ ಹೇಳಿದ, ಚೀನಾ ಮತ್ತು ರಶ್ಯದ ಹೈಪರ್‌ಸೋನಿಕ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಉತ್ತರವೆಂದರೆ ‘‘ಅವರು ತಯಾರಿಸುತ್ತಿರುವ ವ್ಯವಸ್ಥೆ (ಹೈಪರ್ ಸೋನಿಕ್ಸ್)ಯನ್ನು ಹೋಲುವ, ಆದರೆ ಅದಕ್ಕಿಂತ ಉತ್ತಮವಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಅವರ ಆಸ್ತಿ (ಅಸೆಟ್ಸ್)ಗಳನ್ನು ಅಪಾಯಕ್ಕೆ ಒಡ್ಡುವುದು ’’ ಮಿಲಿಟರಿ ಸೂಪರ್ ಪವರ್‌ಗಳು ಈಗ ದಾಪುಗಾಲು ಹಾಕಿ ಮುನ್ನುಗ್ಗಲು ನಿರ್ಧರಿಸಿರುವುದರಿಂದ ಏನಾಗಲಿದೆ ಎಂಬುದು ಜಗತ್ತಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿಲ್ಲ.

Writer - ಆರ್. ಜೆಫ್ರಿ ಸ್ಮಿತ್

contributor

Editor - ಆರ್. ಜೆಫ್ರಿ ಸ್ಮಿತ್

contributor

Similar News