ಜುಗುಣಮ್ಮನ ಜಿಗಿತ
ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಜುಗುಣಮ್ಮ ಬಹಳ ಸಂಕೋಚದ ಹುಡುಗಿ. ತನ್ನ ತರಗತಿಯ ಸಹಪಾಠಿಗಳೊಂದಿಗೆ ಸಹ ಬೆರೆತು ಮಾತನಾಡಿದವಳಲ್ಲ. ಹುಡುಗರನ್ನು ಮುಖವೆತ್ತಿ ನೋಡಿದವಳಲ್ಲ. ಸುಭದ್ರ ಮೇಡಂ ಹತ್ತಿರ ಮಾತ್ರ ತನ್ನ ಸುಖ ದುಃಖ ಹೇಳಿಕೊಳ್ಳುತ್ತಿದ್ದಳು. ಅವಳು ಹಾಗೆ ಸಂಕೋಚದ ಮುದ್ದೆಯಾಗಲು ಅವಳು ಹುಟ್ಟಿ ಬಂದ ಪರಿಸರ ಮತ್ತು ಹಲವು ಸನ್ನಿವೇಶಗಳು ಕಾರಣವಾಗಿದ್ದವು. ಹುಟ್ಟಿನಿಂದ ಬಡತನ ಅವಳಿಗೆ ಬೆನ್ನತ್ತಿ ಬಂದಿತ್ತು. ನವಿಲೆಹಾಳಿನಲ್ಲಿ ಹುಟ್ಟಿದ ಆಕೆ ಬಾಲ್ಯದಲ್ಲಿಯೇ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ಗತಿಯಿಲ್ಲದೆ ಚಳ್ಳಕೆರೆಯ ಚಿಗಪ್ಪ, ಚಿಗವ್ವರ ಮನೆ ಸೇರಬೇಕಾಯಿತು. ಹೊಸ ಮನೆಯಲ್ಲಾದರೂ ಜುಗುಣಮ್ಮ ಸುಖವಾಗಿದ್ದಳೇ ಎಂದರೆ ಅದೂ ಇಲ್ಲ. ಚಿಗವ್ವ ಎಂಬವಳು ಜುಗುಣಮ್ಮನ ಪಾಲಿಗೆ ನಿಧಾನ ವಿಷದಂತಿದ್ದಳು. ಕಂಡವರೆದುರು ಸಜ್ಜನಳಂತಿರುತ್ತಿದ್ದ ಆಕೆ ಒಳಶುಂಠಿ ಕೊಡುವುದರಲ್ಲಿ ನಿಸ್ಸೀಮಳಾಗಿದ್ದಳು. ಮಕ್ಕಳಿಲ್ಲದ ಆಕೆ ತೊಟ್ಟಿಲು ತೂಗುವುದೂ, ಜಿಗುಟುವುದೂ ಏಕಕಾಲದಲ್ಲಿ ಮಾಡುತ್ತಿದ್ದಳು. ಅವಳು ಕೊಡುವ ಹಿಂಸೆಯು ಜುಗುಣಮ್ಮನಿಗೆ ಮಾತ್ರ ಗೊತ್ತಾಗುವಂತಿರುತ್ತಿತ್ತು. ನೋಡುವವರಿಗೆ ಬೇರೆಯವರ ಮಕ್ಕಳನ್ನು ಸ್ವಂತ ಮಕ್ಕಳಂತೆ ಸಾಕುತ್ತಿದ್ದ ಮಹಾತಾಯಿಯಂತಿದ್ದಳು. ಚಿಗಪ್ಪನಂತೂ ಎಂದೂ ಯಾರನ್ನೂ ವಿಶ್ವಾಸದಿಂದ ಮಾತನಾಡಿಸದವನಾಗಿದ್ದು ತಾನಾಯಿತು, ತನ್ನ ಅಂಗಡಿಯ ವ್ಯಾಪಾರವಾಯಿತು ಎಂಬಂತಿದ್ದ. ಆ ಗಂಡ ಹೆಂಡತಿಯರು ಎಂದೆಂದೂ ಜುಗುಣಮ್ಮನೆದುರು ಒಬ್ಬರಿಗೊಬ್ಬರು ಮಾತನಾಡಿದವರೇ ಅಲ್ಲ. ಒಮ್ಮಾಮ್ಮೆ ವಾರಗಟ್ಟಲೆ ಆ ಮನೆಯೆಂಬುದು ಮನುಷ್ಯರ ಮಾತು, ನಗು, ಅಳು, ಬೈಗಳು ಮುಂತಾಗಿ ಏನೊಂದೂ ಇಲ್ಲದೆ ತೂಕಡಿಸುತ್ತಾ ನಿಂತಿರುತ್ತಿತ್ತು. ಸ್ವಂತ ಮನೆಯಲ್ಲಿ ತಂದೆ ತಾಯಿಯರ ಜೊತೆ ಜಿಂಕೆಯ ಮರಿಯಂತೆ ಜಿಗಿದಾಡಿಕೊಂಡು ಬೆಳೆದಿದ್ದ ಜುಗುಣಮ್ಮ ಬದಲಾದ ಪರಿಸರದಲ್ಲಿ ಆಘಾತಕ್ಕೊಳಗಾಗಿ ಮೂಕಳಂತಾಗಿಬಿಟ್ಟಿದ್ದಳು. ಮತ್ತೊಂದು ಅವಳಿಗೆ ಸಂಕೋಚಕ್ಕೊಳಪಡಿಸುತ್ತಿದ್ದದ್ದು ಅವಳ ಹೆಸರು. ಜುಗುಣಮ್ಮ ಎಂದು ಹೆಸರು ಹೇಳಿದ ಕೂಡಲೆ ಕೇಳಿದವರು ನಂಬದವರಂತೆ ನಿಂತುಬಿಡುತ್ತಿದ್ದರು. ಏನಂದೆ? ಇನ್ನೊಂದ್ಸಲ ಹೇಳು ಎನ್ನುತ್ತಿದ್ದರು. ಮತ್ತೆ ಕೆಲವರು ಅಂಗೂ ಹೆಸರಿಡ್ತಾರೇನವ್ವ? ಯಾವ ಜಾತಿ? ಎನ್ನುತ್ತಿದ್ದರು. ನಾವು ಪಿಂಜಾರ್ರು ಎಂದರೆ ಅದೂ ಗೊತ್ತಾಗದೆ ಯಾವುದೋ ಕೀಳು ಜಾತಿಯಿರಬೇಕು ಅಂದುಕೊಂಡು ಸುಮ್ಮನಾಗುತ್ತಿದ್ದರು. ಮುಸ್ಲಿಮರು ಉರ್ದುವಿನಲ್ಲಿ ಮಾತನಾಡಿಸಿದರೆ ಜುಗುಣಮ್ಮ ಹೆದರಿಯೇ ಬಿಡುತ್ತಿದ್ದಳು. ಯಾಕೆಂದರೆ ಅವಳಿಗೆ ಉರ್ದು ಭಾಷೆಯ ಒಂದು ಶಬ್ದವೂ ಬರುತ್ತಿರಲಿಲ್ಲ. ‘ನಮಾಝ್ ಬರಾಕಿಲ್ಲ ರೋಜಾ ಮಾಡಾಕಿಲ್ಲ ನಮ್ದು ಭಾಷೆ ಆಡಾಕಿಲ್ಲ’ ಎಂದು ಸಾಬರು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ಹುಟ್ಟಿದ ನವಿಲೇಹಾಳಿನಲ್ಲಿ ಪಿಂಜಾರರೆಂಬ ಮುಸ್ಲಿಮರು ಕನ್ನಡದಲ್ಲಿ ಮಾತಾಡುವುದು ಸಹಜವಾಗಿತ್ತು. ಅಲ್ಲಿ ಭಾಷಾ ಗೊಂದಲವಿರಲಿಲ್ಲ. ಬಾಲ್ಯದ ಹತ್ತನ್ನೆರಡು ವರ್ಷದ ಹಳ್ಳಿಯ ವಾಸದಲ್ಲಿ ಸರ್ವರೊಂದಿಗಿನ ಸಂಪರ್ಕ, ವಿಶ್ವಾಸಗಳು ಪಟ್ಟಣದ ಬದುಕಲ್ಲಿ ಇಲ್ಲವಾಗಿದ್ದವು. ಜನರೆಲ್ಲ ಹಿಂದೂ, ಮುಸ್ಲಿಂ ಎಂದು ತಮ್ಮನ್ನು ತಾವು ಬೇರೆ ಬೇರೆಯಾಗಿ ಗುರುತಿಸಿಕೊಂಡಿದ್ದರು. ಅವರಲ್ಲಿ ಅವಿಶ್ವಾಸ, ಅನುಮಾನಗಳು ಹೊಗೆಯಾಡುತ್ತಿದ್ದವು. ಇದೆಲ್ಲದರಿಂದ ಜುಗುಣಮ್ಮ ಚಳ್ಳಕೆರೆಗೆ ಬಂದವಳೇ ಜಂಗುರಿದುಕೊಂಡಳು. ಅದು 1990ರ ದಶಕದ ಪೂರ್ವಾರ್ಧವಾಗಿತ್ತು.
ಅಪ್ಪ ಅಮ್ಮ ತೀರಿಕೊಂಡು, ಒಂದೆರಡು ವರ್ಷ ಮನೆಯಲ್ಲಿದ್ದು, ಶಾಲೆ ಬಿಟ್ಟು ಮತ್ತೆ ಸೇರಿ ಹಾಗೂ ಹೀಗೂ ಒಂಬತ್ತನೇ ಕ್ಲಾಸಿಗೆ ಬರುವಷ್ಟರಲ್ಲಿ ಜುಗುಣಮ್ಮನಿಗೆ ಹದಿನಾರು ವರ್ಷವಾಗಿತ್ತಲ್ಲದೆ ದೈಹಿಕವಾಗಿ ತರಗತಿಯಲ್ಲಿ ಎಲ್ಲರಿಗಿಂತ ಬಲವಾಗಿದ್ದಳು. ಊಟ ತಿಂಡಿಗಳಲ್ಲಿ ಅಂಥ ಹೆಚ್ಚುಗಾರಿಕೆಯಿಲ್ಲದಿದ್ದರೂ ಜುಗುಣಮ್ಮ ಗಂಡಸರ ಕಣ್ಣು ಕುಕ್ಕುವಂತಿದ್ದಳು. ಜುಗುಣಮ್ಮ ಎಂಟನೇ ಕ್ಲಾಸಿನಲ್ಲಿದ್ದಾಗ ಮತ್ತೊಂದು ಎಡವಟ್ಟು ನಡೆದಿತ್ತು. ಜುಗುಣಮ್ಮ ಕನ್ನಡ ಮೀಡಿಯಂನಲ್ಲಿದ್ದು, ಅವಳ ತರಗತಿಯಲ್ಲಿ ಸುಮಾರು ನೂರು ಜನ ವಿದ್ಯಾರ್ಥಿಗಳಿದ್ದರು. ಅವಳ ಜೊತೆ ಬಡವರು, ರೈತರ ಮಕ್ಕಳು, ಅವಿದ್ಯಾವಂತರ ಮಕ್ಕಳು, ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಲೇ ಓದುತ್ತಿದ್ದವರು ಬಹಳಷ್ಟಿದ್ದರು. ಇಂಗ್ಲಿಷ್ ಮೀಡಿಯಂ ಎಂಬುದು ಸಾಹುಕಾರರ ಮತ್ತು ಸರಕಾರಿ ನೌಕರರ ಮಕ್ಕಳು, ತಾವು ಕನ್ನಡದಲ್ಲಿ ವೀಕ್ ಎಂದು ತಿಳಿದಿದ್ದ ಉರ್ದು ಭಾಷಿಕ ಸಾಹೇಬರು, ಇಂಗ್ಲಿಷ್ ಈಸಿ-ಕನ್ನಡ ಕಷ್ಟ ಎಂದು ತಿಳಿದಿದ್ದ ಕನ್ನಡದ ಸುಪುತ್ರರು ಹಾಗೂ ಇಂಗ್ಲಿಷ್ ಭವಿಷ್ಯದ ಭಾಷೆ ಎಂಬ ಮುಂಗಾಣ್ಕೆ ಇದ್ದ ಸಮಾಜದ ಕೆನೆಪದರದ ತಳಿಗಳಿಂದ ತುಂಬಿ ತುಳುಕುತ್ತಿತ್ತು. ಕನ್ನಡ ಮೀಡಿಯಮ್ಮಿನ ಹುಡುಗರೆದುರು ಇಂಗ್ಲಿಷ್ ಮೀಡಿಯಮ್ಮಿನ ಹುಡುಗರು ಜಂಬದಿಂದ ಓಡಾಡುತ್ತಿದ್ದರು. ಒಂದು ದಿನ ಒಂದಿಬ್ಬರು ಮೇಷ್ಟ್ರುಗಳು ರಜೆಯಿದ್ದುದರಿಂದ ಎಂಟನೇ ಕ್ಲಾಸಿನ ಎಲ್ಲ ಹುಡುಗರನ್ನೂ ಒಂದೇ ರೂಮಿನಲ್ಲಿ ಒಟ್ಟಾಕಿಕೊಂಡು ಹಿಂದಿ ಪಂಡಿತರು ತರಗತಿ ತೆಗೆದುಕೊಂಡಿದ್ದರು. ತರಗತಿಯ ಎಡಗಡೆ ಮುಂದಿನ ಐದಾರು ಡೆಸ್ಕಿನಲ್ಲಿ ಹುಡುಗಿಯರು ಕುಳಿತಿದ್ದು ಮಿಕ್ಕಂತೆ ಹುಡುಗರು ಕುಳಿತಿದ್ದರು. ಹಿಂದಿ ಪಂಡಿತರು ಹುಡುಗ ಹುಡುಗಿಯರೆನ್ನದೆ ಎಗ್ಗಿಲ್ಲದೆ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಹುಡುಗಿಯರ ಬೆಂಚಿನಿಂದ ಗುಜುಗುಜು ಪ್ರಾರಂಭವಾಯಿತು. ಹಿಂದಿ ಪಂಡಿತ : ‘‘ಏನ್ರೇ ಅದು ಗಲಾಟೆ?’’
ಹುಡುಗರು ಸಾಮೂಹಿಕವಾಗಿ ಜೋರಾಗಿ ನಗತೊಡಗಿದರು.
ಹುಡುಗಿಯರು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದರೇ ವಿನಃ ಮೇಷ್ಟ್ರಿಗೆ ಏನೂ ಸ್ಪಷ್ಟವಾಗಿ ಹೇಳಲಿಲ್ಲ. ಹಿಂದಿ ಪಂಡಿತ : ‘‘ಹುಡುಗ್ಯರೇ ನಿಮಗೆ ಅರ್ಜೆಂಟಾಗಿ ಏನು ಬೇಕ್ರೇ?’’
ಹುಡುಗರಲ್ಲಿ ಕೆಲವರಿಗಾಗಲೇ ಮೀಸೆ ಬಂದಿದ್ದವು. ಅವರಿಗೆ ಮೇಷ್ಟ್ರ ಮಾತುಗಳು ಚಕ್ಕರಗುಳ್ಳಿ ಕೊಟ್ಟಂತಾಗಿ ಬಿದ್ದು ಬಿದ್ದು ನಗತೊಡಗಿದರು. ಮೇಷ್ಟ್ರ ಆಂಗಿಕ ಭಾಷೆ ಹುಡುಗಿಯರಿಗೆ ಅಸಹ್ಯ ಹುಟ್ಟಿಸುತ್ತಿತ್ತು.
ದೊಡ್ಡ ದೇಹದ ಜುಗುಣಮ್ಮ ಹುಡುಗಿಯರ ಕೊನೆಯ ಬೆಂಚಿನಲ್ಲಿ ಕುಳಿತುಕೊಂಡಿದ್ದಳು. ಅವಳ ಮುಖದ ತುಂಬ ಗಾಬರಿ ತುಂಬಿತ್ತು. ಅವಳು ಅಳುತ್ತಿದ್ದಳು. ಲಂಗ ಜಾಕೀಟು ಉಟ್ಟು ದಾವಣಿ ಹೊದ್ದುಕೊಂಡಿದ್ದ ಆಕೆ ಡೆಸ್ಕಿಗೆ ತಲೆಕೊಟ್ಟು ಬಿಕ್ಕುವುದು, ಮುಸುಮುಸು ಅಳುವುದು ಮುಂದುವರಿಸಿದಳು. ಅವಳ ಲಂಗದಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಅವಳ ಹೊಟ್ಟೆ ಕಿವುಚತೊಡಗಿ ವಿಪರೀತ ನೋವು ಕಾಣಿಸಿತು. ಹುಡುಗಿಯರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಹುಡುಗ ಸಾರ್ ಇವಳ ಲಂಗದಿಂದ ರಕ್ತ ತೊಟ್ಟಿಕ್ತಾ ಐತೆ ಎಂದು ಜುಗುಣಮ್ಮನನ್ನು ತೋರಿಸಿದ. ಮೊದಲೇ ಸಂಕೋಚದ ಹುಡುಗಿ ಜುಗುಣಮ್ಮನಿಗೆ ಸಾಯುವಂತಾಯಿತು. ಒಬ್ಬ ಹುಡುಗಿಯನ್ನು ಜೊತೆಯಲ್ಲಿ ಕರೆದುಕೊಂಡು, ಹೊಟ್ಟೆ ಹಿಡಿದುಕೊಂಡು ಮನೆಕಡೆ ನಡೆದಳು. ತರಗತಿ ದಾಟುತ್ತಿದ್ದಂತೆ ಹುಡುಗರು, ಮೇಷ್ಟ್ರು ಜೋರಾಗಿ ನಕ್ಕಂತಾಯಿತು. ನೂರಾರು ಹುಡುಗ, ಹುಡುಗಿಯರೆದರು ಮಾನ ಮರ್ಯಾದೆ ಹರಾಜಾದಂತಾಯಿತು ಜುಗುಣಮ್ಮನಿಗೆ. ಮನೆಯಲ್ಲಿ ಮತ್ತಿನ್ನೇನು ಕಾದಿದೆಯೋ ಎಂದುಕೊಳ್ಳುತ್ತ ಸ್ನೇಹಿತೆಯ ಕೈ ಹಿಡಿದುಕೊಂಡು ನಡೆಯತೊಡಗಿದಳು. ಜುಗುಣಮ್ಮನ ಅದೃಷ್ಟಕ್ಕೆ ಎದುರು ಸಿಕ್ಕ ಸುಭದ್ರ ಮೇಡಮ್ಮರು ವಿಷಯ ತಿಳಿದುಕೊಂಡು ಜುಗುಣಮ್ಮನ ಕೈಹಿಡಿದುಕೊಂಡು ಹೆದರಬೇಡ ಮನೆಗೆ ಹೋಗು, ಬೆಂಚನ್ನೆಲ್ಲ ಯಾರಿಗಾದರೂ ಹೇಳಿ ತೊಳೆಸುತ್ತೇನೆ ಎಂದು ಧೈರ್ಯ ತುಂಬಿದರು. ರಸ್ತೆಯಲ್ಲಿ ಜನರೆಲ್ಲ ಜುಗುಣಮ್ಮ ಮತ್ತು ಕೆಂಪು ಲಂಗವನ್ನು ನೋಡುವವರೇ! ಅದಾಗಿ ಎರಡು ವಾರವಾದರೂ ಜುಗುಣಮ್ಮ ಶಾಲೆಗೆ ಬರಲಿಲ್ಲ. ಕೊನೆಗೆ ಸುಭದ್ರ ಮೇಡಂರವರೇ ಜುಗುಣಮ್ಮನ ಮನೆಗೋಗಿ, ಬೈದು, ಶಾಲೆಗೆ ಬರುವಂತೆ ಮಾಡಿದ್ದರು. ನಾಚಿಕೆ, ಅವಮಾನ, ಭಯದಿಂದ ತಾನು ಇನ್ನು ಶಾಲೆಗೇ ಬರುವುದಿಲ್ಲವೆಂದು ಹಟ ಹಿಡಿದುಬಿಟ್ಟಿದ್ದಳು. ಶಾಲೆಯಲ್ಲೇ ದೊಡ್ಡವಳಾದ ಘಟನೆಯಿಂದ ಪ್ರಸಿದ್ಧಿಯಾಗಿದ್ದ ಜುಗುಣಮ್ಮ ಎಷ್ಟು ಆಘಾತ ಅನುಭವಿಸಿದಳೆಂದರೆ ಮುಗ್ಧಳಾದ ಅವಳಿಗೆ ಅದರಿಂದ ಹೊರಬರಲಾಗಲೇ ಇಲ್ಲ. ಅವಳ ಜೊತೆಗೇ ಎಂಟು, ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಅನೇಕ ದೊಡ್ಡವರಾದ ಹುಡುಗಿಯರಿದ್ದರೂ ಜುಗುಣಮ್ಮನಂತೆ ಆ ಸುದ್ದಿ ಜಗಜ್ಜಾಹೀರಾಗಿರಲಿಲ್ಲ. ಶಾಲೆಗೆ ಹೋಗುವಾಗ, ಬರುವಾಗ, ಒಬ್ಬಳೇ ಎದುರು ಸಿಕ್ಕಾಗ ಕೆಲವು ಪೋಲಿ ಹುಡುಗರು ಚುಡಾಯಿಸುವುದು ಇನ್ನೂ ಹೆಚ್ಚಾಯಿತು.
ಒಂದು ದಿನ ಡ್ರಿಲ್ ಮೇಷ್ಟ್ರು ಹನುಮಂತಪ್ಪನವರು ಈ ಸಲ ಆಟೋಟ ಸ್ಪರ್ಧೆಯಲ್ಲಿ ನಮ್ಮ ಶಾಲೆಯವರೇ ರಾಜ್ಯಮಟ್ಟದಲ್ಲಿ ಗೆಲ್ಲಬೇಕು. ಎಲ್ಲರೂ ಆಟಗಳಲ್ಲಿ ಭಾಗವಹಿಸಬೇಕು. ತಾಲೂಕು ಮಟ್ಟದ ಆಟದ ಸ್ಪರ್ಧೆಗಳು ನಮ್ಮ ಸ್ಕೂಲಿನ ಆವರಣದಲ್ಲಿಯೇ ನಡೆಯುತ್ತವೆ. ಇಂದು ಈ ಶಾಲೆಯ ಉತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದೇ ತಡ ವಿದ್ಯಾರ್ಥಿಗಳೆಲ್ಲ ಪುಟಿಯತೊಡಗಿದರು. ಓಟ, ಉದ್ದ ಮತ್ತು ಎತ್ತರ ಜಿಗಿತ, ಖೋ ಖೋ, ಕಬಡ್ಡಿ, ವಾಲಿಬಾಲ್ ಮುಂತಾದ ಆಟಗಳು ಶಾಲಾಮಟ್ಟದ ಆಟಗಾರರ ಆಯ್ಕೆಗೆ ಪ್ರಾರಂಭವಾದವು. ಮಹಾ ಮೌನಿಯಾಗಿದ್ದ ಜುಗುಣಮ್ಮಳ ಬಳಿ ಬಂದು ಡ್ರಿಲ್ ಮೇಷ್ಟ್ರು ನೀನು ಶಾಟ್‌ಪುಟ್ ಗುಂಡು ಎಸೆ ನೋಡೋಣ ಎಂದರು. ನಾಚುತ್ತ ಆಕೆ ಎಸೆದ ಕಬ್ಬಿಣದ ಗುಂಡು ದಾಖಲೆ ದೂರಕ್ಕೆ ಹೋಗಿಬಿದ್ದಿತು. ಮೇಷ್ಟ್ರಿಗೆ ಅಚ್ಚರಿ ಮತ್ತು ಖುಷಿ. ತಂದೆ ತಾಯಿಯಿಲ್ಲದ ಜುಗುಣಮ್ಮ, ಹೇಳುವವರು ಕೇಳುವವರಿಲ್ಲದ ಜುಗುಣಮ್ಮ ಅತ್ಯಂತ ಸಾಧಾರಣ ಬಟ್ಟೆ ಉಟ್ಟುಕೊಂಡಿದ್ದಳು. ಲಂಗ ಜಾಕೀಟು ಉಟ್ಟು, ಒಂದು ದಾವಣಿಯನ್ನು ಎದೆಯ ಮೇಲೆ ಹಾಕಿಕೊಂಡಿದ್ದಳು. ಎಣ್ಣೆಗೆಂಪು ಬಣ್ಣದ ಜುಗುಣಮ್ಮ ಮೂಗು ಮುಖದಲ್ಲಿ ಬಲು ನ್ಯಾರವಾಗಿದ್ದಳು. ಆದರೆ ಸಂಕೋಚದಿಂದ ಮುಖ ಮೇಲೆತ್ತದ ಆಕೆ ಮುಖೇಡಿಯಾಗಿದ್ದಳು. ಯಾರನ್ನೂ ಎದುರಿಸುವ ಧೈರ್ಯವಿಲ್ಲದೆ ಮಂಕಾಗಿದ್ದಳು. ಆದರೆ ಅವಳ ಮುಖದಲ್ಲಿ ಮಗುಸಹಜ ಮುಗ್ಧತೆಯ ಎಳೆಯೊಂದು ಢಾಳಾಗಿ ನೆಲೆಯೂರಿತ್ತು. ಬೇರೆ ಹುಡುಗಿಯರೆಲ್ಲ ಪ್ಯಾಂಟು, ನಿಕ್ಕರ್, ಟೀ ಶರ್ಟ್, ಬೂಟು ಧರಿಸಿ ಜಿಗಿದರೆ ಜುಗುಣಮ್ಮ ಮಾತ್ರ ಬರಿಗಾಲಲ್ಲಿ ಉದ್ದನೆಯ ಲಂಗ ಉಟ್ಟೇ ಆಟಗಳಲ್ಲಿ ಪಾಲ್ಗೊಂಡಿದ್ದಳು. ಮೇಷ್ಟ್ರ ಅನುಭವದಲ್ಲಿ ಜುಗುಣಮ್ಮನ ಅಂದಿನ ಸಾಧನೆ ರಾಜ್ಯಮಟ್ಟದ ದಾಖಲೆಯನ್ನೂ ಮೀರಿತ್ತು. ಅವರು ಹಿಡಿಯುವವರೇ ಇಲ್ಲದಂತಾಗಿದ್ದರು. ಜಿಗಿಯುತ್ತ ಮುಖ್ಯೋಪಾಧ್ಯಾಯ ಮಾದಪ್ಪರವರನ್ನು ಕರೆದುಕೊಂಡು ಬರಲು ಓಡಿದರು. ಆದರೆ ಆಟದಲ್ಲಿ ಮೊದಲ ಸ್ಥಾನ ಗಳಿಸಿ ಮೈಮರೆತಿದ್ದ ಜುಗುಣಮ್ಮನಿಗೆ ಇದ್ದಕ್ಕಿದ್ದಂತೆ ಮನೆಯ ನೆನಪಾಯಿತು. ಚಿಗವ್ವನ ಸಣ್ಣಬುದ್ಧಿ, ಮತ್ಸರಗಳು, ಚಿಗಪ್ಪನ ಉದಾಸೀನತೆ, ನಕಾರಾತ್ಮಕ ಮನೋಭಾವಗಳು ನೆನಪಾದವು. ನನ್ನನ್ನು ಆಡಲು, ಸ್ಪರ್ಧಿಸಲು ಚಿತ್ರದುರ್ಗಕ್ಕೋ, ಬೆಂಗಳೂರಿಗೋ ಹೋಗಲು ಇವರು ಬಿಡುತ್ತಾರೆಯೇ ಎಂದು ಚಿಂತಿಸಿದಳು. ಉದ್ದ ಜಿಗಿತಕ್ಕೆ ಎಲ್ಲರೂ ಸಿದ್ಧರಾದರೆ ಜುಗುಣಮ್ಮ ಮೈದಾನದ ಮೂಲೆಯಲ್ಲಿ ಅಂತರ್ಮುಖಿಯಾಗಿ ತಲೆತಗ್ಗಿಸಿ ಕುಳಿತುಬಿಟ್ಟಳು. ಗೆಳತಿಯರು ಅಲ್ಲಿಗೇ ಬಂದು ಕರೆದರು. ಜುಗುಣಮ್ಮ ಆಂ ಎನ್ನಲ್ಲಿಲ್ಲ, ಊಂ ಎನ್ನಲಿಲ್ಲ. ಡ್ರಿಲ್ ಮೇಷ್ಟ್ರು ಬಂದು ಕರೆದರೂ ಜುಪ್ಪೆನ್ನಲ್ಲಿಲ್ಲ. ಮುಖ್ಯೋಪಾಧ್ಯಾಯರು ಬಂದ ಮೇಲೆ ಎದ್ದುನಿಂತ ಜುಗುಣಮ್ಮ ‘‘ಸರ್, ಆಟ ಆಡಲು ಮನೇಲಿ ಒಪ್ಪಿಗೆ ಕೊಡಲ್ಲ, ಇವತ್ತು ಮರ್ತು ಆಡ್ಬಿಟ್ಟೆ. ಮನೇಲಿ ಗೊತ್ತಾದ್ರೆ ನನ್ನನ್ನೋಡಿಸಿಬಿಡ್ತಾರೆ, ನಾನು ನಿರ್ಗತಿಕಳಾಗ್ತೀನಿ ಸರ್’’ ಎಂದಳು. ಡ್ರಿಲ್ ಮೇಷ್ಟ್ರ ಜೀವ ಒದ್ದಾಡಿಹೋಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುತ್ತಲ್ಲಾ ಎಂದು ಸುಭದ್ರ ಮೇಡಮ್ಮರನ್ನು ಕರೆದುಕೊಂಡು ಬಂದರು. ಮೇಡಮ್ಮರನ್ನು ಅಪ್ಪಿ ಹಿಡಿದ ಜುಗುಣಮ್ಮ ಪರಿಸ್ಥಿತಿಯನ್ನು ವಿವರಿಸಿ ಕುಸಿದು ಕೂತಳು. ಅವಳ ಪಾಲಿಗೆ ಸಾಕ್ಷಾತ್ ದೇವತೆಯೇ ಆಗಿದ್ದ ಸುಭದ್ರ ಮೇಡಂ ತಾನೇ ಮನೆಗೆ ಬಂದು ಒಪ್ಪಿಸುತ್ತೇನೆ ಎಂದ ಮೇಲೆ ಜುಗುಣಮ್ಮ ಸುಭದ್ರ ಮೇಡಂ ಕಿವಿಯಲ್ಲಿ ನಾಚುತ್ತ ‘‘ನನಗೆ ಒಳಗೆ ನಿಕ್ಕರಾಗಲೀ, ಚಡ್ಡಿಯಾಗಲೀ ಇಲ್ಲ ಮೇಡಂ, ಹೀಗೆ ಲಂಗದಲ್ಲಿಯೇ ಆಡುತ್ತೇನೆ’’ ಎಂದಳು.
ಉದ್ದ ಜಿಗಿತ ಪ್ರಾರಂಭವಾಯಿತು. ಸ್ಪರ್ಧಿಗಳು ಸಿದ್ಧಪಡಿಸಿದ್ದ ಜಾಗದಲ್ಲಿ ಜಿಗಿಯತೊಡಗಿದರು. ಜುಗುಣಮ್ಮನ ಸರದಿ ಬಂತು. ಅವಳು ಜಿಗಿತಕ್ಕೆ ಓಡುವ ಶೈಲಿಯಲ್ಲಿಯೇ ಡ್ರಿಲ್ ಮೇಷ್ಟ್ರಿಗೆ ಗೊತ್ತಾಗಿ ಹೋಯಿತು ಇದು ಅಸಾಮಾನ್ಯ ಪ್ರತಿಭೆ, ಇವಳು ಯಾರಿಗೂ ಎರಡನೆಯವಳಲ್ಲ. ದೇವರೇ ಇವಳ ದಾರಿಯನ್ನು ಸುಗಮಗೊಳಿಸು ಎಂದು ಬೇಡಿಕೊಂಡರು. ಜುಗುಣಮ್ಮ ಎಲ್ಲರಿಗಿಂತ ಮಾರುದೂರ ಹೆಚ್ಚು ಹಾರಿದ್ದಳು. ಸುಭದ್ರ ಮೇಡಂ ಜುಗುಣಮ್ಮನನ್ನು ಅಪ್ಪಿಕೊಂಡರು. ಎಲ್ಲರ ಬಾಯಲ್ಲೂ ಜುಗುಣಮ್ಮನದೇ ಮಾತು. ಜುಗುಣಮ್ಮ ತನ್ನಲ್ಲಿರುವ ಶಕ್ತಿಗೆ ತಾನೇ ಬೆರಗಾದಳು. ಎಚ್ಚೆಮ್ ಮಾತು ರಹಿತರಾಗಿದ್ದರು.
ಅಂದೇ ಸುಭದ್ರ ಮೇಡಮ್ಮರು ಜುಗುಣಮ್ಮನ ಮನೆಗೆ ಹೋಗಿ ಚಿಗವ್ವನನ್ನು ಕಂಡು ಜುಗುಣಮ್ಮನದು ಅಪ್ರತಿಮ ಪ್ರತಿಭೆ ಎಂದೂ, ಆಟಗಳಲ್ಲಿ ಭಾಗವಹಿಸಲು ಅವಕಾಶ ಕೊಡಬೇಕೆಂದೂ ಇನ್ನಿಲ್ಲದಂತೆ ಕೇಳಿಕೊಂಡರು. ಮೇಡಮ್ಮರೆದುರು ಚಿಗವ್ವ ಏನು ಮಾಡುತ್ತಾಳೋ ಎಂದು ಜುಗುಣಮ್ಮನಿಗೆ ಹೆದರಿಕೆಯಿದ್ದೇ ಇತ್ತು.
‘‘ಆಯ್ತು ನೋಡಾನ. ಅವಳ ಚಿಗಪ್ಪ ಬಂದ್ಮೇಲೆ ಹೇಳಿ ನೋಡ್ತೀನಿ ಮೇಡಮ್ಮರೇ’’ ಎಂದ ಚಿಗವ್ವ ಅಡ್ಡಗೋಡೆ ಮೇಲೆ ದೀಪವಿಟ್ಟಳು.
ಚಿಗಪ್ಪ ಬಂದ ಮೇಲೆ ವಿಷಯ ಎತ್ತುತ್ತಿದ್ದಂತೆಯೇ ‘‘ಏನಂದೆ? ಮುಸಲ್ಮಾನರಾದ ನಮ್ಮ ಹೆಣ್ಮಕ್ಕಳು ಸಾವಿರಾರು ಜನರ ಎದುರು ಕುಣಿಯಾದು ನೆಗಿಯಾದು ಸಾಧ್ಯವಿಲ್ಲ. ಇನ್ಮೇಲಿಂದ ಬುರ್ಕಾ ಧರಿಸಿ ಸ್ಕೂಲಿಗೋಗ್ಲಿ. ಲಾಂಗ್ ಜಂಪ್, ಹೈ ಜಂಪ್ ಅಂತ ಏನಾದ್ರೂ ಚಡ್ಡಿ ಹಾಕ್ಕೊಂಡು ಎಗರಾಡಿದರೆ ಜುಗುಣಿ ನಮ್ಮನೇಲಿರೋದು ಬ್ಯಾಡ. ನಾವು ಮರ್ಯಾದಸ್ತರು. ನಾಳೆಯೇ ಬುರ್ಕಾ ತಂದುಕೊಡ್ತೀನಿ’’ ಎಂದು ಸಿಟ್ಟು ಸಿಟ್ಟು ಮಾಡುತ್ತ ಉಂಡು ಮಲಗಿದ.
ಹೆಣ್ಣುಮಕ್ಕಳು ಬುರ್ಕಾ ಧರಿಸಬೇಕು, ಒಬ್ಬಂಟಿಯಾಗಿ ಹೊರಗೆ ಹೋಗಬಾರದು, ಸಿನೆಮಾ ನೋಡಬಾರದು ಮುಂತಾದವುಗಳನ್ನು ಬಲವಾಗಿ ನಂಬಿದ್ದ ಖಾಜಾ ಸಾಹೇಬ, ಅವನಿಂದ ಬೇರೇನೇನ್ನು ಕೇಳಲು ಸಾಧ್ಯವಿತ್ತು? ಅವನಿತ್ತೀಚೆಗೆ ಗಡ್ಡಬಿಟ್ಟು ತಲೆಯ ಮೇಲೊಂದು ಟೋಪಿ ಯಾವಾಗಲೂ ಧರಿಸುತ್ತಿದ್ದ. ಧರ್ಮವೆಂದರೆ ಇಷ್ಟೇ ಎಂಬುದು ಅವನ ಅಂತಿಮ ತೀರ್ಮಾನವಾಗಿತ್ತು.
ಚಿಗಪ್ಪನ ಮಾತಿನಿಂದ ಜುಗುಣಮ್ಮನ ಕನಸಿನ ಗುಳ್ಳೆ ಪಟ್ ಎಂದು ಒಡೆದುಹೋಯಿತು. ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಅವಳು ಮತ್ತೊಮ್ಮೆ ಅಸಹಾಯಕ ಮೌನಕ್ಕೆ ಶರಣಾದಳು. ಅವಳ ಸ್ನೇಹಿತೆಯರೆಲ್ಲ ಆಟೋಟದಲ್ಲಿ ಅಭ್ಯಾಸ ಮುಂದುವರಿಸಿದರು. ಚಿಗಪ್ಪ ಮರುದಿನವೇ ಎರಡು ಬುರ್ಖಾಗಳನ್ನು ಅಂಗಡಿಯಿಂದ ಕೊಂಡು ತಂದ. ಅಲ್ಲೇ ನೇತಾಡುತ್ತಿದ್ದ ನಿಕ್ಕರುಗಳನ್ನಾತ ಕಣ್ಣೆತ್ತಿಯೂ ನೋಡಲಿಲ್ಲ. ಇದಾದ ಒಂದೆರಡು ದಿನದಲ್ಲಿ ಡ್ರಿಲ್ ಮೇಷ್ಟ್ರು, ಎಚ್ಚೆಮ್, ಸುಭದ್ರ ಮೇಡಂ ಜುಗುಣಮ್ಮನ ಮನೆಗೆ ಬಂದರು. ಆಟಗಳಲ್ಲಿ ಜುಗುಣಮ್ಮನ ಸಾಧನೆಗಳು ಹೇಗೆ ರಾಜ್ಯಮಟ್ಟದ ದಾಖಲೆಗಳಿಗೆ ಸಮವಾಗಿವೆ ಎಂದು ಪೇಪರ್‌ಗಳನ್ನು ತೋರಿಸಿ ಚಿಗಪ್ಪನಿಗೆ ಒಪ್ಪಿಸಲು ಪ್ರಯತ್ನಿಸಿದರು. ಸುಭದ್ರ ಮೇಡಮ್ಮರು ‘‘ನಾವಾರೂ ಯಾವ ಧರ್ಮಕ್ಕೂ ವಿರುದ್ಧವಿಲ್ಲ. ಯಾವ ಧರ್ಮವೂ ಆಟಪಾಠಗಳಿಗೆ ವಿರುದ್ಧವಿಲ್ಲ’’ ಎಂದರು. ಇದನ್ನೆಲ್ಲ ಚಿಗಪ್ಪ ನಂಬದೇ ಹೋದರೂ ಪ್ರತಿಭಾವಂತ ಆಟಗಾರರಿಗೆ ಮುಂದೆ ಸರಕಾರಿ ಕೆಲಸ ಸಿಗುತ್ತದೆ ಎಂಬ ಮೇಡಮ್ಮರ ಮಾತು ಅವನನ್ನು ಮೆತ್ತಗಾಗಿಸಿತು.
‘‘ಆಯ್ತು, ಜುಗುಣಮ್ಮ ನಿಕ್ಕರು ಪ್ಯಾಂಟು ಹಾಕಿಕೊಳ್ಳಕೂಡದು. ಲಂಗದಲ್ಲಿಯೇ ಅವಳು ಆಟ ಆಡಬೇಕು’’ ಎಂಬ ಕರಾರಿನ ಮೇಲೆ ಒಪ್ಪಿದ. ಅಭ್ಯಾಸ ನಡೆಸಲು ಬೇರೆಯವರಿಗೆ ಸಿಕ್ಕಷ್ಟು ಸಮಯ ಜುಗುಣಮ್ಮನಿಗೆ ಸಿಗಲಿಲ್ಲ. ಆದರೆ ಸಿಕ್ಕಷ್ಟೇ ಸಮಯ ಜುಗುಣಮ್ಮನಿಗೆ ಸಾಕಾಗುತ್ತಿತ್ತು. ಅವಳು ಓಡಿಬಂದು ಜಿಗಿದಳೆಂದರೆ ಮೋಡದಂತೆ ಹಗುರವಾಗಿ ಮೇಲಕ್ಕೇರುತ್ತಿದ್ದಳು. ಅವಳು ಓಡಿಬಂದು ಜಿಗಿದಳೆಂದರೆ ಭೂಮಿಯೇ ತನ್ನ ಗುರುತ್ವಾಕರ್ಷಣೆಯನ್ನು ಮರೆತು ಎಷ್ಟು ದೂರಕ್ಕೂ ಜಿಗಿಯುವಂತೆ ಅನುವು ಮಾಡಿಕೊಡುತ್ತಿದ್ದಿತು. ಸುಭದ್ರ ಮೇಡಂ ಹೇಳುತ್ತಾರೆ. ‘‘ಜುಗುಣಿ ನೀನು ಆಟಗಳಲ್ಲಿ ಭಾಗಿಯಾಗೇ. ನೀನು ಹುಟ್ಟಿರುವುದೇ ಆಡಲಿಕ್ಕೆ. ಆಟದಲ್ಲೇ ನಿನ್ನ ಪ್ರತಿಭೆ. ನಿನ್ನ ಜಿಗಿತ ಬರೀ ಉದ್ದ ಜಿಗಿತವಲ್ಲ. ಅದು ನಿನ್ನನ್ನು ಎಲ್ಲ ಸಂಕಷ್ಟಗಳಿಂದ ಪಾರುಮಾಡುವ ಜಿಗಿತ. ನಿನ್ನ ಜಿಗಿತವೆಂದರೆ ನಿನ್ನ ಎಲ್ಲ ಸಂಕೋಲೆಗಳ ತುಂಡರಿಸುವ ಜಿಗಿತ. ನಿನ್ನ ಜಿಗಿತ ನಿನ್ನ ಸ್ವಾತಂತ್ರದ ಜಿಗಿತ. ಈ ಮಾತುಗಳ ಮುಂದೆ ಜುಗುಣಮ್ಮನಿಗೆ ಅಭ್ಯಾಸವೇ ಬೇಕಿರಲಿಲ್ಲ. ಈ ಮಾತುಗಳೇ ಅವಳಿಗೆ ಶಕ್ತಿ ಸ್ಫೂರ್ತಿ ದಿಕ್ಕು ದೆಸೆ. ಬಂದೇ ಬಂತು ತಾಲೂಕು ಮಟ್ಟದ ಸ್ಪರ್ಧಾವಳಿಯ ದಿನ. ಜುಗುಣಮ್ಮನಿಗೆ ಬೂಟಿಲ್ಲ, ಪ್ಯಾಂಟಿಲ್ಲ, ನಿಕ್ಕರಿಲ್ಲ, ಚಡ್ಡಿಯಿಲ್ಲ. ಅವಳು ಅದೇ ಲಂಗ ಜಾಕೀಟು ಉಟ್ಟಿದ್ದಾಳೆ. ಅಂಚಿನಲ್ಲಿ ಲಂಗ ಜೂಲುಜೂಲಾಗಿದೆ. ದೂರದಲ್ಲಿ ಅಂಗಡಿ ವ್ಯಾಪಾರ ಬಿಟ್ಟು ಚಿಗಪ್ಪ ಬಂದು ನಿಂತಿದ್ದಾನೆ. ಜುಗುಣಮ್ಮನ್ನ ಪರೀಕ್ಷಿಸುತ್ತಿದ್ದಾನೆ. ಜುಗುಣಮ್ಮ ಎದೆ ಮೇಲೆ ದಾವಣಿ ಹಾಕಿಕೊಂಡಳು. ಈಗಾಗಲೇ ಗುಂಡು ಎಸೆತದಲ್ಲಿ ಜುಗುಣಮ್ಮ ತಾಲೂಕಿಗೇ ಮೊದಲನೆಯವಳಾಗಿ ಸುಲಭವಾಗಿ ಗೆದ್ದಿದ್ದಾಳೆ. ಎರಡನೆಯ ಸ್ಪರ್ಧೆ ಉದ್ದ ಜಿಗಿತಕ್ಕೆ ತಾಲೂಕಿನ ಬೇರೆ ಬೇರೆ ಶಾಲೆಯ ಸ್ಪರ್ಧಾಳುಗಳು ಸಿದ್ಧರಾಗಿ ನಿಂತಿದ್ದಾರೆ. ಒಬ್ಬೊಬ್ಬರೇ ಓಡೋಡಿ ಬಂದು ಜಿಗಿಯುತ್ತಿದ್ದಾರೆ. ಸಾವಿರಾರು ಜನ ವಿದ್ಯಾರ್ಥಿಗಳು, ಊರಜನ ಉಸಿರು ಬಿಗಿಹಿಡಿದು ನೋಡುತ್ತಿದ್ದಾರೆ. ಆಟದ ಮೈದಾನ ತುಂಬಿ ತುಳುಕುತ್ತಿದೆ. ಅಂಪೈರ್‌ಗಳು ವಿಷಲ್ ಊದುತ್ತಾ ಜಿಗಿದ ದೂರ ಗುರುತು ಮಾಡಿ ಅಳೆದು ಬರೆದುಕೊಳ್ಳುತ್ತಿದ್ದಾರೆ. ಕೊನೆಯ ಹೆಸರು ಜುಗುಣಮ್ಮನದು. ಜುಗುಣಮ್ಮ ಜಿಗಿಯಲು ಓಡುತ್ತಿದ್ದಾಳೆ. ಅವಳ ಮನಸ್ಸಲ್ಲಿ ಸುಭದ್ರ ಮೇಡಮ್ಮರ ಮಾತುಗಳು ರಿಂಗಣಿಸುತ್ತಿವೆ. ಜುಗುಣಿ ಓಡು. ಜಿಗಿ. ಈ ಜಿಗಿತ ಬರೀ ಉದ್ದಜಿಗಿತವಲ್ಲ. ನಿನ್ನೆಲ್ಲ ಕಷ್ಟಕೋಟಲೆಗಳಿಂದ ಪಾರುಮಾಡುವ ಜಿಗಿತ. ಸ್ವಾತಂತ್ರದ ಜಿಗಿತ. ನಿನಗೆ ರಾಜ್ಯ ಪ್ರಶಸ್ತಿ ನಿಶ್ಚಿತ. ಆಟಗಾರರ ಲೆಕ್ಕದಲ್ಲಿ ಮುಂದಿನ ವಿದ್ಯಾಭ್ಯಾಸ, ಭವ್ಯ ಭವಿಷ್ಯ ನಿಶ್ಚಿತ.
ಓಡಿದಳು ಜುಗುಣಮ್ಮ. ಲಂಗದ ಸರಬರ ಶಬ್ದ ಕೇಳಿಸುತ್ತಿಲ್ಲ. ಓಡುವ ಕಾಲುಗಳಿಗೆ ಲಂಗ ಅಡ್ಡ ಬರುತ್ತಿಲ್ಲ. ನೂರಾರು ಜನರ ಸೀಟಿ, ಚಪ್ಪಾಳೆ ಕೇಳಿಸುತ್ತಿಲ್ಲ. ತನ್ನ ಸಹಪಾಠಿಗಳು ಚಪ್ಪಾಳೆ ತಟ್ಟುತ್ತಾ ರಾಗವಾಗಿ ಜುಗುಣಿ ಜುಗುಣಿ ಎಂದು ಹಾಡುತ್ತಿರುವುದು ಕೇಳಿಸುತ್ತಿಲ್ಲ. ಬಾಣದಂತೆ ಓಡಿದಳು. ಅವುಡುಗಚ್ಚಿದ್ದಾಳೆ. ಮರಳು ತುಂಬಿದ ಗುಂಡಿಯ ಮುಂದಿದ್ದ ಬಿಳಿಪಟ್ಟೆಯನ್ನು ಎಡಗಾಲಲ್ಲಿ ಮೆಟ್ಟಿದವಳೇ ಮೇಲಕ್ಕೆ ನೆಗೆದಳು. ಆ ಜಿಗಿತವೇ ಅವಳ ಪ್ರಾರ್ಥನೆಯಾಗಿತ್ತು. ಮರಳು ಹಾಕಿದ್ದ ಗುಂಡಿಯ ಉದ್ದಕ್ಕೂ ಹಕ್ಕಿಯಂತೆ ತೇಲಿದಳು. ಅಂತರದಲ್ಲಿಯೇ ಕಾಲು ಕೈ ಎರಡನ್ನೂ ಮುಂದಕ್�