ಕರೆನ್ಸಿ ವಿನಿಮಯದಲ್ಲಿ ಹಣ ಉಳಿಸುವುದು ಹೇಗೆ?

Update: 2019-07-08 18:33 GMT

ವಿದೇಶಕ್ಕೆ ತೆರಳುವವರು ಅಲ್ಲಿಯ ಕರೆನ್ಸಿಯನ್ನು ಇಲ್ಲಿಯೇ ಪಡೆದುಕೊಂಡು ಹೋಗಬೇಕಾಗುತ್ತದೆ. ಇದಕ್ಕಾಗಿ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ರೂಪಾಯಿಗಳನ್ನು ತಾವು ಹೋಗಬಯಸುವ ದೇಶದ ಕರೆನ್ಸಿಗೆ ಪರಿವರ್ತನೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ, ಕರೆನ್ಸಿ ಪರಿವರ್ತನೆ ಶುಲ್ಕಗಳು ನಿಮ್ಮ ಒಟ್ಟಾರೆ ಪ್ರವಾಸ ವೆಚ್ಚದಲ್ಲಿ ಗಮನಾರ್ಹ ಪಾಲು ಹೊಂದಿರುತ್ತವೆ. ಹೀಗಾಗಿ ವಿದೇಶಕ್ಕೆ ತೆರಳುವವರು ಈ ಬಗ್ಗೆ ಸ್ವಲ್ಪ ಸಂಶೋಧನೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಕರೆನ್ಸಿ ಪರಿವರ್ತನೆಗಾಗಿಯೇ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ಕರೆನ್ಸಿ ವಿನಿಮಯದಲ್ಲಿ ಹಣವನ್ನುಳಿಸಲು ನಿಮಗೆ ನೆರವಾಗುವ ಕೆಲವು ಮಾರ್ಗಗಳಿಲ್ಲಿವೆ....

♦ ಸೂಕ್ತ ಕರೆನ್ಸಿಯನ್ನು ಆಯ್ದುಕೊಳ್ಳಿ
ನೀವು ಯಾವ ದೇಶಕ್ಕೆ ಭೇಟಿ ನೀಡುತ್ತೀರೋ ಅಲ್ಲಿಯ ಕರೆನ್ಸಿಯನ್ನು ಪಡೆದುಕೊಳ್ಳುವುದು ಅಗತ್ಯ ಹೌದು. ಆದರೆ ಕೆಲವು ದೇಶಗಳಿಗೆ ನೀವು ಹೆಚ್ಚು ಸಾಮಾನ್ಯ ಕರೆನ್ಸಿಗಳಾಗಿರುವ ಅಮೆರಿಕನ್ ಡಾಲರ್ ಮತ್ತು ಯುರೋಗಳೊಂದಿಗೂ ಹೋಗಬಹುದಾಗಿದೆ ಮತ್ತು ಅಲ್ಲಿಯ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ಸ್ಥಳೀಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಬಹುದು. ಏಕೆಂದರೆ ಭಾರತದಲ್ಲಿ ಟರ್ಕಿಯ ಲಿರಾದಂತಹ ಕೆಲವು ವಿದೇಶಿ ಕರೆನ್ಸಿಗಳು ಸಿದ್ಧ ಸ್ಥಿತಿಯಲ್ಲಿ ಸಿಗುವುದಿಲ್ಲ ಮತ್ತು ಬೇಡಿಕೆ-ಪೂರೈಕೆ ನಡುವಿನ ಅಂತರಗಳು ಅವುಗಳ ವಿನಿಮಯ ದರವನ್ನು ಹೆಚ್ಚಿಸುತ್ತವೆ. ಹೆಚ್ಚಿನ ಜನರು ಭೇಟಿ ನೀಡುವ ಮಾಲ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಕರೆನ್ಸಿ ವಿನಿಮಯಕ್ಕೆ ದುಬಾರಿ ಶುಲ್ಕವನ್ನು ವಿಧಿಸುವುದರಿಂದ ನೀವು ಭೇಟಿ ನೀಡುವ ದೇಶದಲ್ಲಿ ಕರೆನ್ಸಿ ವಿನಿಮಯಕ್ಕೆ ಸಾಧ್ಯವಿರುವ ಉತ್ತಮ ದರವನ್ನು ಪಡೆಯಲು ಪೂರ್ವಭಾವಿ ಅಧ್ಯಯನವು ಲಾಭದಾಯಕವಾಗುತ್ತದೆ.

♦  ವಿನಿಮಯ ದರಗಳ ಸೂಚನೆಗಳ ಬಗ್ಗೆ ಗಮನವಿರಲಿ
 ಹಲವಾರು ಆನ್‌ಲೈನ್ ಸೇವಾ ಪೂರೈಕೆದಾರರು ನೀವು ಅವರಲ್ಲಿ ವಿನಿಮಯ ದರ ಅಲರ್ಟ್‌ಗಳನ್ನು ಸೆಟ್ ಮಾಡಿದರೆ ಕರೆನ್ಸಿಯ ಇತ್ತೀಚಿನ ವಿನಿಮಯ ದರಗಳು ನಿಮ್ಮ ಮೊಬೈಲ್‌ಗೆ ಬರುತ್ತಿರುತ್ತವೆ. ಇದರಿಂದಾಗಿ ನೀವು ಕರೆನ್ಸಿ ವಿನಿಮಯ ದರಕ್ಕಾಗಿ ವಿವಿಧ ಜಾಲತಾಣಗಳಲ್ಲಿ ಹುಡುಕಾಡಬೇಕಿಲ್ಲ. ಅಲರ್ಟ್‌ಗಳಲ್ಲಿ ನಿಮಗೆ ಸೂಕ್ತವಾದ ದರವು ದೊರಕಿದಾಗ ಸಾಂಕೇತಿಕ ಮೊತ್ತವನ್ನು ಠೇವಣಿಯನ್ನಾಗಿ ನೀಡಿ ಆನ್‌ಲೈನ್‌ನಲ್ಲಿ ಆ ದರವನ್ನು ಸ್ವಲ್ಪ ಸಮಯದವರೆಗೆ ‘ಲಾಕ್-ಇನ್’ ಮಾಡಬಹುದು. ‘ಲಾಕ್ ಇನ್’ನಿಂದ ಹೊರಬಂದರೆ ಈ ಠೇವಣಿಯನ್ನು ನೀವು ವಾಪಸ್ ಪಡೆಯಬಹುದಾಗಿದೆ. ಅಲ್ಲದೆ ಪ್ರತಿ ಕೆಲವು ಸೆಕೆಂಡ್‌ಗಳಿಗೆ ಬದಲಾಗುತ್ತಲೇ ಇರುವ ವಿದೇಶಿ ಕರೆನ್ಸಿ ವಿನಿಮಯ ದರಗಳ ನಾಡಿಯನ್ನು ನೀವು ಅರಿತುಕೊಂಡರೆ ನೀವು ಸರಿಯಾದ ಸಮಯದಲ್ಲಿ ಗಾಳ ಬೀಸಿ ಅತ್ಯುತ್ತಮ ದರವನ್ನು ಪಡೆಯಲು ಪ್ರಯತ್ನಿಸ ಬಹುದಾಗಿದೆ. ಇದಕ್ಕಾಗಿ ನೀವು ವಿನಿಮಯ ದರಗಳ ಏರಿಳಿತ ಪ್ರವೃತ್ತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ, ಹೀಗಾಗಿ ನೀವು ವಿದೇಶಕ್ಕೆ ತೆರಳುವ ಕನಿಷ್ಠ 15 ದಿನಗಳಿಗೆ ಮೊದಲು ವಿನಿಮಯ ದರಗಳ ಮೇಲೆ ಗಮನವಿಡಲು ಆರಂಭಿಸಬೇಕಾಗುತ್ತದೆ.


♦  ಬಚ್ಚಿಟ್ಟ ಶುಲ್ಕಗಳ ಮೇಲೆ ನಿಗಾಯಿರಲಿ
ವಿದೇಶಿ ಕರೆನ್ಸಿ ವಿನಿಮಯಕ್ಕೆ ಮುಂದಾದಾಗ ಪರಿವರ್ತನೆ ಶುಲ್ಕಗಳನ್ನು ಬಿಡಿ ಬಿಡಿಯಾಗಿ ಸರಿಯಾಗಿ ತಿಳಿದುಕೊಳ್ಳಿ. ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮುನ್ನ ವಹಿವಾಟು ಶುಲ್ಕಗಳು ಮತ್ತು ಏನಾದರೂ ರಹಸ್ಯ ಶುಲ್ಕಗಳಿದ್ದರೆ ಆ ಬಗ್ಗೆ ತೃಪ್ತಿಕರವಾದ ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳಿ.
♦  ಆನ್‌ಲೈನ್ ವಿದೇಶಿ ಕರೆನ್ಸಿ ಮಾರಾಟ ತಾಣಗಳು
ಇತ್ತೀಚಿಗೆ ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಆನ್‌ಲೈನ್ ಕಂಪೆನಿಗಳೂ ಕಾಲಿರಿಸಿರುವುದು ಗ್ರಾಹಕರಿಗೆ ವಿದೇಶಿ ವಿನಿಮಯ ಪ್ರಕ್ರಿಯೆಯನ್ನು ಸರಳಗೊಳಿಸಿದೆ, ಇದರಿಂದಾಗಿ ಅವರು ಕಡಿಮೆ ಶ್ರಮದೊಂದಿಗೆ ಅತ್ಯುತ್ತಮ ಕೊಡುಗೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದಾಗ್ಯೂ ನೀವು ಆಯ್ಕೆ ಮಾಡಿಕೊಂಡ ಆನ್‌ಲೈನ್ ಕರೆನ್ಸಿ ಮಾರಾಟ ತಾಣವು ವಿಶ್ವಾಸಯೋಗ್ಯ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ನೀವು ಕರೆನ್ಸಿ ವಿನಿಮಯಕ್ಕೆಂದು ಬ್ಯಾಂಕುಗಳು ಅಥವಾ ಕರೆನ್ಸಿ ವಿನಿಮಯ ಕೇಂದ್ರಗಳು ಅಥವಾ ಮನಿ ಚೇಂಜರ್‌ಗಳ ಬಳಿ ತೆರಳಿದಾಗ ಅತ್ಯುತ್ತಮ ಆಯ್ಕ್ಕೆಗಾಗಿ ಪರಿಶೀಲಿಸಿಕೊಳ್ಳಬೇಕು, ಇಲ್ಲದಿದ್ದರೆ ಮಾಮೂಲು ಅಂತರ್ ಬ್ಯಾಂಕ್ ದರಕ್ಕಿಂತ ಶೇ.5-10ರಷ್ಟನ್ನು ನೀವು ಹೆಚ್ಚು ಪಾವತಿಸುವಂತಾಗಬಹುದು. ವಿಮಾನ ನಿಲ್ದಾಣಗಳಂತಹ ಹೆಚ್ಚಿನ ಜನರು ಭೇಟಿ ನೀಡುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಕರೆನ್ಸಿ ಪರಿವರ್ತನೆ ಶುಲ್ಕವು ಮಾರುಕಟ್ಟೆ ದರಕ್ಕಿಂತ ಶೇ.30ರಷ್ಟು ಅಧಿಕವಾಗಿರುತ್ತದೆ ಎನ್ನುವುದು ನಿಮಗೆ ನೆನಪಿರಲಿ.
 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ