ನಿಮಗಿನ್ನೆಷ್ಟು ಬೇಕು? ಪುರುಷ ಪ್ರಜ್ಞೆಗೊಂದು ಪ್ರಶ್ನೆ
ಮೂಲತಃ ನಾವು ಪ್ರಜ್ಞೆ, ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಈ ಅಸೂಕ್ಷ್ಮತೆಯ ನಡುವೆ ಸಾಂಪ್ರದಾಯಿಕ ಸಮಾಜ ಇನ್ನೂ ಹೆಚ್ಚು ಸಂಕುಚಿತವಾಗುತ್ತಿದೆ. ಸಾವನ್ನು ಸಂಭ್ರಮಿಸುವ ಮನಸುಗಳು ಅತ್ಯಾಚಾರವನ್ನು ಸಂಭ್ರಮಿಸುವುದಿಲ್ಲವೇ ? ಇದು ಸಹಜವಾಗಿ ಮೂಡುವ ಪ್ರಶ್ನೆಯಾಗಿದ್ದು ಕೋಮುಗಲಭೆಗಳ ಸಂದರ್ಭದಲ್ಲಿ ಈ ಸಂಭ್ರಮವನ್ನು ನೇರವಾಗಿಯೇ ಕಂಡಿದ್ದೇವೆ. ಇಲ್ಲಿ ಮತಧರ್ಮ, ಸಮವಸ್ತ್ರ ಮತ್ತು ಪೋಷಾಕುಗಳಿಗಿಂತಲೂ ಮಹಿಳೆಯರ ಅಸ್ಮಿತೆ ಮತ್ತು ಹೆಣ್ತನದ ಅಸ್ತಿತ್ವ ಪ್ರಧಾನವಾಗುತ್ತದೆ.
ಕಳೆದ ವರ್ಷ ಎಪ್ರಿಲ್ ತಿಂಗಳ ಒಂದು ಕರಾಳ ದಿನ ಕಾಶ್ಮೀರದ ಕಥುವಾ ಗ್ರಾಮದಲ್ಲಿ ಆಸಿಫಾ ಬಾನು ಎಂಬ 8 ವರ್ಷದ ಹಸುಳೆ ವಿಕೃತ ಕಾಮಿಗಳ ಅಟ್ಟಹಾಸಕ್ಕೆ ಬಲಿಯಾಗಿ, ಅತ್ಯಾಚಾರಕ್ಕೀಡಾಗಿ ತನ್ನ ಪಯಣ ಮುಗಿಸಿತ್ತು. ಒಂದು ವರ್ಷದ ನಂತರ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಈ ಘಟನೆಯ ಸಂದರ್ಭದಲ್ಲಿ ಆಸಿಫಾಗೆ ನ್ಯಾಯ ಒದಗಿಸುವ ಆಗ್ರಹಗಳಿಗೆ ಬಲಪಂಥೀಯ ಮನಸುಗಳು ಪ್ರತಿಕ್ರಯಿಸಿದ್ದು ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಪಟ್ಟಿಯೊಂದಿಗೆ. ‘‘ಈ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ನೀವೆಲ್ಲಿದ್ದಿರಿ ? ಏನು ಮಾಡ್ತಿದ್ರೀ ?’’ ಇಂತಹ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಆಸಿಫಾ ಬಲಿಯಾಗಿದ್ದು ಕ್ರಿಯೆ-ಪ್ರತಿಕ್ರಿಯೆಯ ಚೌಕಟ್ಟಿನಲ್ಲಿ ಎಂದು ಬಿಂಬಿಸಲು ಯತ್ನಿಸಿದ್ದುಂಟು. ಗುಜರಾತ್ ಹತ್ಯಾಕಾಂಡದಂತಹ ಘೋರ ಅಪರಾಧವನ್ನೇ ಕ್ರಿಯೆ-ಪ್ರತಿಕ್ರಿಯೆಯ ಚೌಕಟ್ಟಿನಲ್ಲಿ ನೋಡುವ ಈ ದೇಶದಲ್ಲಿ ಆಸಿಫಾ ಯಾವ ಲೆಕ್ಕ ಅಲ್ಲವೇ? ಮತ್ತೊಂದು ಘಟನೆಯನ್ನು ನೋಡೋಣ. 2012ರಲ್ಲಿ ದಿಲ್ಲಿಯಲ್ಲಿ ನಿರ್ಭಯ ಪ್ರಕರಣ ಸಂಭವಿಸಿದಾಗ ಕೆಲವು ಬಲಪಂಥೀಯ ನಾಯಕರು ಮುಂದಿಟ್ಟ ಪ್ರಶ್ನೆಗಳು ಇನ್ನೂ ಜಟಿಲ ಮತ್ತು ಸಂಕೀರ್ಣವಾದದ್ದು. ರಾತ್ರಿ ವೇಳೆಯಲ್ಲಿ ಆಕೆ ಏಕೆ ಸಂಚರಿಸಬೇಕಿತ್ತು ? ಅತ್ಯಾಚಾರಕ್ಕೆ ಪ್ರೇರಣೆ ನೀಡುವಂತೆ ಏಕೆ ವರ್ತಿಸಬೇಕಿತ್ತು ? ಹೀಗೆ. ಅಣ್ಣಾ ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದಿದ್ದರೆ ಚೆನ್ನಿತ್ತು ಎಂದ ಮಹನೀಯರೂ ಇದ್ದರು.
ಈಗ ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರಕ್ಕೊಳಗಾಗಿದ್ದಾಳೆ. ಬಿಜೆಪಿಯ ವಿದ್ಯಾರ್ಥಿ ಸಂಘಟನೆಗೆ ಸೇರಿದ ಈ ಬಾಲಕಿಯನ್ನು ಅವಳ ಸಹಪಾಠಿಗಳೇ ಅಪಹರಿಸಿ, ಅತ್ಯಾಚಾರವೆಸಗಿರುವುದೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಕತಾಳೀಯ ಎಂದರೆ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಸುನೀತಾ ಸಿಂಗ್ ಗೌಡ್ (ಈಗ ಇವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ, ಶೀಘ್ರದಲ್ಲೇ ಹಿಂದಿರುಗಿದರೂ ಅಚ್ಚರಿಯೇನಿಲ್ಲ) ಹಿಂದೂಗಳು ಮುಸ್ಲಿಂ ಮನೆಗಳಿಗೆ ನುಗ್ಗಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಕರೆ ನೀಡಿರುವ ಸಂದರ್ಭದಲ್ಲೇ ಪುತ್ತೂರಿನ ಘಟನೆ ಬಹಿರಂಗವಾಗಿದೆ. ಭಾರತದ ಯಾವುದೇ ಮೂಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಸಂಭವಿಸಿದರೂ ಸಾಂಪ್ರದಾಯಿಕ ಮನಸುಗಳು ಸಂತ್ರಸ್ತ ಹೆಣ್ಣಿನ ಚಾರಿತ್ರ್ಯವನ್ನೇ ಪ್ರಶ್ನಿಸಲು ಮುಂದಾಗುವುದನ್ನು ಕಂಡಿದ್ದೇವೆ. ಮಹಿಳೆಯರು ಧರಿಸುವ ಉಡುಪು ಚರ್ಚೆಯ ವಿಷಯವಾಗುತ್ತದೆ. ಅಂಗಾಂಗ ಪ್ರದರ್ಶನವೇ ಅತ್ಯಾಚಾರವನ್ನು ಪ್ರಚೋದಿಸುತ್ತದೆ ಎಂಬ ವಾದ ಮಂಡಿಸಲಾಗುತ್ತದೆ. ‘‘ಹೆಣ್ಣು ಹೆಣ್ಣಾಗಿದ್ದರೆ ಚೆನ್ನ’’ ಎಂದು ಹೇಳುವ ಮೂಲಕ ಹೆಣ್ಣೆಂದರೆ ಹೀಗೆಯೇ ಇರಬೇಕು ಎಂಬ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ವಿಧಿಸುವ ವೈದಿಕ ಮನಸುಗಳು ವಿಜೃಂಭಿಸುತ್ತವೆ. ಈ ಸಾಂಪ್ರದಾಯಿಕ ಮನಸ್ಸುಗಳಿಂದಲೇ ನಿಯಂತ್ರಿಸಲ್ಪಡುವ ಒಂದು ಸಂಘಟನೆಯ ಯುವ ನಾಯಕಿ ಈಗ ಅದೇ ಸಂಘಟನೆಯ ಪುರುಷ ಕಾಮಕ್ಕೆ ಗುರಿಯಾಗಿರುವುದು ವಿಡಂಬನೆ ಅಲ್ಲವೇ?
ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ನಮ್ಮವರಲ್ಲ ಎಂದು ಎಬಿವಿಪಿ, ಸಂಘಪರಿವಾರ ಕೈತೊಳೆದುಕೊಳ್ಳಲು ಯತ್ನಿಸುತ್ತಿದೆ. ತಾವೆಸಗಿದ ಕೃತ್ಯವನ್ನು ತಾವೇ ಚಿತ್ರೀಕರಣ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿರುವ ಯುವಕರ ಗುಂಪು ಗಾಂಜಾ ಸೇವನೆಗೆ ಬಲಿಯಾದ ಯುವಕರು ಎಂಬ ಆರೋಪವೂ ಕೇಳಿಬರುತ್ತಿದೆ. ಭಾರತದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಯಾವ ಅಮಲಿನ ಅವಶ್ಯಕತೆಯೂ ಇಲ್ಲ ಎಂದು ಈ ದೇಶದ ಪುರುಷ ಸಮಾಜ ಪದೇ ಪದೇ ನಿರೂಪಿಸುತ್ತಲೇ ಇದೆ. ಸೀಸೆಯಲ್ಲಿರುವ ಮದ್ಯವನ್ನು ಕುಡಿದು ಬಂದು ಮಹಿಳೆಯನ್ನು ವಿವಸ್ತ್ರಗೊಳಿಸುವ ಸಿನೆಮಾದ ಖಳನಾಯಕ ಪರದೆಯ ಮೇಲೆ ತೋರಿಸುವ ಸಾಂಕೇತಿಕ ಅಭಿವ್ಯಕ್ತಿ. ವಾಸ್ತವ ಸಮಾಜದಲ್ಲಿ ಕಾಮುಕ ಪುರುಷರಿಗೆ ಇಂತಹ ಕೃತಕ ಅಮಲು ಅಗತ್ಯವಿಲ್ಲ. ಅಸಹಾಯಕ ಮಹಿಳೆಯೇ ಕಾಮುಕ ಮನಸುಗಳಲ್ಲಿ ಮತ್ತೇರಿಸುವ ವಸ್ತುಗಳಾಗುತ್ತಿದ್ದಾರೆ. ನಿರ್ಭಯ, ಸೌಜನ್ಯ, ದಾನಮ್ಮ, ಆಸಿಫಾ ಇನ್ನೆಷ್ಟು ಬೇಕು?
ಹೌದು ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಪುತ್ತೂರಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ಸಂಘಪರಿವಾರದ ಸಂಘಟನೆಗೆ ಸೇರಿದವರು ಎಂಬ ಆರೋಪ ಹೆಚ್ಚು ಪ್ರಚಾರವಾಗುತ್ತಿದೆ. ಸಂಘಟನೆಯ ನಾಯಕರ ನಿರಾಕರಣೆಯ ಹೊರತಾಗಿಯೂ ಅವರ ವೇಷಭೂಷಣಗಳು ವಾಸ್ತವವನ್ನು ಹೊರಗೆಡಹುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತ ಯುವತಿಯ ವೇದನೆಗಿಂತಲೂ ಹೆಚ್ಚಾಗಿ ಕೇಸರಿ ಪಡೆಗಳ ಅಟ್ಟಹಾಸವೇ ಹೆಚ್ಚಾಗಿ ಗಮನ ಸೆಳೆಯುತ್ತಿರುವುದು, ಬಹುಶಃ ನಮ್ಮಿಳಗಿನ ಅಸೂಕ್ಷ್ಮತೆಯ ಸಂಕೇತವೇನೋ ಎನಿಸುತ್ತದೆ. ನಿಜ, ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯೊಡನೆ ಮಾತನಾಡಿದರೂ ಲವ್ ಜಿಹಾದ್ ಎಂದು ಅಬ್ಬರಿಸಿ ಇಡೀ ಸಮುದಾಯವನ್ನೇ ಕಳಂಕಿತರನ್ನಾಗಿ ಮಾಡುತ್ತಿದ್ದ ಕೇಸರಿ ಪಡೆಗಳು ಇಂದು ‘‘ಅವ ನಮ್ಮನವಲ್ಲ’’ ತತ್ವಕ್ಕೆ ಬದ್ಧವಾಗಿ ನಿರಾಕರಣೆಯಲ್ಲಿ ತೊಡಗಿವೆ. ಇರಲಿ, ಅತ್ಯಾಚಾರ ಎಸಗಿದವರು ಕೇಸರಿ ಸಂಘಟನೆಯ ಸದಸ್ಯರಲ್ಲದ ಮಾತ್ರಕ್ಕೆ ಆ ಸಂಘಟನೆಯ ಹೊಣೆಗಾರಿಕೆ ಇಲ್ಲವಾಗುವುದೇ? ಹಿಂದೂ ಯುವಕರಲ್ಲಿ ಸಂಯಮ, ಶಿಸ್ತು, ಸೌಹಾರ್ದ ಮತ್ತು ನಾಗರಿಕ ಗುಣಲಕ್ಷಣಗಳನ್ನು ಬೆಳೆಸಲು ಶ್ರಮಿಸುವ ಎಬಿವಿಪಿ, ಈ ಅತ್ಯಾಚಾರಿಗಳನ್ನು ಲವ್ ಜಿಹಾದ್ ಆರೋಪಿಗಳಿಗಿಂತಲೂ ಭಿನ್ನವಾಗಿ ಕಾಣಲು ಹೇಗೆ ಸಾಧ್ಯ ?
ಇದು ಸಾಧ್ಯವಿದೆ, ಏಕೆಂದರೆ ಇಲ್ಲಿ ಹಲ್ಲೆಗೊಳಗಾಗಿರುವುದು ಹೆಣ್ಣು. ವೇದನೆಗೊಳಗಾಗಿರುವುದು ಹೆಣ್ತನ. ಅತ್ಯಾಚಾರಕ್ಕೀಡಾಗಿರುವುದು ಹೆಣ್ಣಿನ ಅಸ್ತಿತ್ವ. ನಿರಾಕರಣೆಗೊಳಗಾಗಿರುವುದು ಹೆಣ್ಣಿನ ಅಸ್ಮಿತೆ. ಒಮ್ಮೆ ಹಿಂದಿರುಗಿ ನೋಡೋಣ. ಮನೋರಮಾ, ನಿರ್ಭಯ, ಸೌಜನ್ಯ, ದಾನಮ್ಮ ಪ್ರಕರಣಗಳು ಸಂಭವಿಸಿದಾಗಲೂ ಸಂಘಪರಿವಾರ ಬೀದಿಗಿಳಿದು ಹೋರಾಟ ನಡೆಸಲಿಲ್ಲ ಅಲ್ಲವೇ? ಈ ನಾಲ್ವರೂ ಹಿಂದೂ ಹೆಣ್ಣುಮಕ್ಕಳೇ ಆಗಿದ್ದರು. ಸಂಘಪರಿವಾರದ ಪರಿಭಾಷೆಯಲ್ಲಿ ಹಲ್ಲೆಗೆ ಅರ್ಹರಾದ ನಗರ ನಕ್ಸಲರೂ ಆಗಿರಲಿಲ್ಲ, ಅಕ್ರಮ ವಲಸಿಗರೂ ಆಗಿರಲಿಲ್ಲ, ಅಲ್ಪಸಂಖ್ಯಾತರೂ ಆಗಿರಲಿಲ್ಲ. ಆದರೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಈ ಘಟನೆಗಳು ಪರಿವಾರವನ್ನು ಅಲುಗಾಡಿಸಲೂ ಇಲ್ಲ. ಇದಕ್ಕೂ ಕಾರಣ ಅಲ್ಲಿ ಸಂತ್ರಸ್ತರಾದವರು ಹೆಣ್ಣು. ಸೋಮನಾಥ ರಥಯಾತ್ರೆಯ ಸಂದರ್ಭದಲ್ಲಿ, ಬಾಬರಿ ಮಸೀದಿಯ ಧ್ವಂಸವಾದ ನಂತರದಲ್ಲಿ ಮತ್ತು ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮತಧಾರ್ಮಿಕ ಅಸ್ಮಿತೆಗಳಷ್ಟೇ ಪ್ರಬಲವಾಗಿ ಹಲ್ಲೆಗೊಳಗಾಗಿದ್ದು ಹೆಣ್ಣಿನ ಅಸ್ಮಿತೆ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ. ಶ್ರೇಷ್ಠತೆಯ ವ್ಯಸನ ಮತ್ತು ಶುದ್ಧೀಕರಣದ ವ್ಯಾಧಿಯ ಚೌಕಟ್ಟಿನಲ್ಲೇ ಸಾಂಪ್ರದಾಯಿಕ ಕಟ್ಟುಪಾಡುಗಳೊಡನೆ ಸಮಾಜ ಕಟ್ಟುವ ಮನಸುಗಳಿಗೆ ಆಧುನಿಕ ಸ್ತ್ರೀ ಸದಾ ‘ನಗರ ನಕ್ಸಲ್’ ಆಗಿಯೇ ಕಾಣುವುದು ಅಚ್ಚರಿಯೇನಲ್ಲ. ಹಾಗಾಗಿ ಅತ್ಯಾಚಾರದ ಪ್ರಕರಣಗಳು ಹಿಂದುತ್ವದ ಮನಸ್ಸುಗಳನ್ನು ವಿಚಲಿತಗೊಳಿಸುವುದೂ ಇಲ್ಲ. ಲವ್ ಜಿಹಾದ್ ಸೂಕ್ಷ್ಮ ಸಂವೇದನೆಯೇ ಇಲ್ಲದ ಒಂದು ರಾಜಕೀಯ ಅಸ್ತ್ರ ಎನ್ನಲು ಇನ್ನೇನು ಪುರಾವೆ ಬೇಕು.
ಪುತ್ತೂರು ಘಟನೆಯಲ್ಲಿ ಆರೋಪಿಗಳು ಸಂಘಪರಿವಾರದವರೋ ಅಲ್ಲವೋ ಎನ್ನುವುದಕ್ಕಿಂತಲೂ ಮತ್ತೋರ್ವ ಬಾಲಕಿ ಏಕೆ ಪುರುಷ ಸಮಾಜದ ವಿಕೃತಿಗೆ ಗುರಿಯಾಗಿದ್ದಾಳೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಕಳೆದ ಮೂರೂವರೆ ದಶಕದ ಸಾಂಸ್ಕೃತಿಕ ರಾಜಕಾರಣದಲ್ಲಿ ಇಂತಹ ಅತ್ಯಾಚಾರಗಳು ಹೇರಳವಾಗಿ ನಡೆದಿವೆ. ಎಲ್ಲವೂ ಸ್ವೀಕೃತ ಎನ್ನುವಂತೆ ನೇಪಥ್ಯಕ್ಕೆ ಸರಿದಿವೆ. ಗುರಿಯಾದ ಮಹಿಳೆ/ಯುವತಿ ಯಾವ ಧರ್ಮಕ್ಕೆ ಸೇರಿದವರು ಎನ್ನುವುದೂ ಇಲ್ಲಿ ನಗಣ್ಯವಾಗುತ್ತದೆ. ಏಕೆಂದರೆ ಕೋಮು ಗಲಭೆಗಳ ಸಂದರ್ಭದಲ್ಲಿ ಸೇಡು, ಮತ್ಸರ, ದ್ವೇಷ, ಅಸೂಯೆ ಪ್ರಧಾನವಾಗುತ್ತವೆ. ಈ ಕಾಮತೃಷೆಗೆ/ವಿಕೃತಿಗಳಿಗೆ ಬಲಿಯಾಗುವವರು ಕೇವಲ ನಿಮಿತ್ತ ಮಾತ್ರ. ದುರಂತ ಎಂದರೆ 21ನೆಯ ಶತಮಾನದ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೂ ಇದೇ ನಿಮಿತ್ತ ಮಾತ್ರ ಸ್ಥಾನ ನೀಡಲಾಗುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಪೋಕ್ಸೋ ಕಾಯ್ದೆಯಡಿ 908 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದರೆ, 238 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ಪುತ್ತೂರು ಮತ್ತೊಂದಿರಬಹುದು.
ಇಲ್ಲಿ ಸಮಸ್ಯೆ ಇರುವುದು ನಮ್ಮ ಸಮಾಜದ ಬೌದ್ಧಿಕ ಚಿಂತನೆಯಲ್ಲಿ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ. ಮಠಾಧೀಶರಿಂದ ಹಿಡಿದು ಪಡ್ಡೆ ಹುಡುಗರವರೆಗೂ ಅತ್ಯಾಚಾರಿಗಳು ಮೆರೆಯುತ್ತಿದ್ದಾರೆ. ವಿಧಾನಸಭೆಗಳಲ್ಲಿ, ಸಂಸತ್ತಿನಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಇವರ ಅಸ್ತಿತ್ವ ಅಬಾಧಿತವಾಗಿ ಮುಂದುವರಿಯುತ್ತಿದೆ. ಗಾಂಜಾ ಸಹ ನಿಮಿತ್ತ ಮಾತ್ರ. ಇದು ಮನೋಭಾವದ ಪ್ರಶ್ನೆ, ದೃಷ್ಟಿಕೋನದ ಪ್ರಶ್ನೆ ಮತ್ತು ಅಸ್ಮಿತೆ ಅಸ್ತಿತ್ವಗಳ ಸಂಘರ್ಷದ ಪ್ರಶ್ನೆ. ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬೆಳೆಸಲು ಟೊಂಕಕಟ್ಟಿ ನಿಂತಿರುವ ಹಿಂದುತ್ವದ ಕೇಸರಿಪಡೆಗಳಿಗೆ ಸಂಸ್ಕೃತಿಯ ಚೌಕಟ್ಟಿನಲ್ಲಿ ಸಂವೇದನೆ ಮತ್ತು ಸೂಕ್ಷ್ಮತೆ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಮುನ್ನೆಲೆಗೆ ಬರುತ್ತದೆ. ಪ್ರತಿಯೊಂದು ಅತ್ಯಾಚಾರ ಸಂಭವಿಸಿದಾಗಲೂ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಂಘಪರಿವಾರದ/ಬಿಜೆಪಿಯ ನಾಯಕರ ಅಸೂಕ್ಷ್ಮ ಹೇಳಿಕೆಗಳು ಪುತ್ತೂರಿನ ಪಡ್ಡೆ ಹುಡುಗರಿಗೆ, ಕೇಸರಿ ಪಡೆಗಳಿಗೆ ಸ್ಪೂರ್ತಿಯಾಗಿರಲಿಕ್ಕೂ ಸಾಕು. ಅಲ್ಲವೇ ?
ಮೀರತ್‌ನಿಂದ ಪುತ್ತೂರಿನವರೆಗೆ ಭಾರತದಲ್ಲಿ ಹೆಣ್ತನ ಅಗ್ನಿಪರೀಕ್ಷೆಯನ್ನು ಎದುರಿಸುತ್ತಲೇ ಬಂದಿದೆ. ಇದೇ ವೇಳೆ ಈ ದೇಶದ ಸಮಾಜೋ ಸಾಂಸ್ಕೃತಿಕ ಚೌಕಟ್ಟನ್ನು ನಿಯಂತ್ರಿಸುವ ಪುರುಷ ಪ್ರಧಾನ ಸಮಾಜ ಮತ್ತು ಪಿತೃ ಪ್ರಧಾನ ವ್ಯವಸ್ಥೆ ತನ್ನ ಅಟ್ಟಹಾಸವನ್ನು ಮೆರೆಯುತ್ತಲೇ ಬಂದಿದೆ. ಈ ದೇಶದ ಕಠಿಣ ಕಾನೂನುಗಳು, ಕರಾಳ ಶಾಸನಗಳು ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಗಟ್ಟಲಾಗುತ್ತಿಲ್ಲ. ಹೆಣ್ತನದ ಮೇಲಿನ ಆಕ್ರಮಣವನ್ನೂ ತಡೆಗಟ್ಟಲಾಗಿಲ್ಲ. ಏಕೆಂದರೆ ಕಾನೂನು ಕಟ್ಟಲೆಗಳ ಪಾಲನೆ ಪುರುಷಾಧಿಪತ್ಯಕ್ಕೆ ಒಳಗಾಗಿದೆ. ನ್ಯಾಯಾಂಗ ಮತ್ತು ಶಾಸಕಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗುತ್ತಿಲ್ಲ, ಹೆಚ್ಚಾಗುವ ಅವಕಾಶವನ್ನೂ ನೀಡಲಾಗುತ್ತಿಲ್ಲ. ಒಂದು ವೇಳೆ ಶಾಸಕಾಂಗದಲ್ಲಿ ಹೆಚ್ಚಾಗಿದ್ದರೂ ಮಹಿಳಾ ನಾಯಕಿಯರು ತೊಟ್ಟ ಮಸೂರಗಳು ಅವರ ಬೌದ್ಧಿಕ ಚಿಂತನೆಯನ್ನು ಮಸುಕು ಮಾಡಿರುತ್ತವೆ. ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ನಿದರ್ಶನವಷ್ಟೆ.
ಮೂಲತಃ ನಾವು ಪ್ರಜ್ಞೆ, ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಈ ಅಸೂಕ್ಷ್ಮತೆಯ ನಡುವೆ ಸಾಂಪ್ರದಾಯಿಕ ಸಮಾಜ ಇನ್ನೂ ಹೆಚ್ಚು ಸಂಕುಚಿತವಾಗುತ್ತಿದೆ. ಸಾವನ್ನು ಸಂಭ್ರಮಿಸುವ ಮನಸುಗಳು ಅತ್ಯಾಚಾರವನ್ನು ಸಂಭ್ರಮಿಸುವುದಿಲ್ಲವೇ? ಇದು ಸಹಜವಾಗಿ ಮೂಡುವ ಪ್ರಶ್ನೆಯಾಗಿದ್ದು ಕೋಮುಗಲಭೆಗಳ ಸಂದರ್ಭದಲ್ಲಿ ಈ ಸಂಭ್ರಮವನ್ನು ನೇರವಾಗಿಯೇ ಕಂಡಿದ್ದೇವೆ. ಇಲ್ಲಿ ಮತಧರ್ಮ, ಸಮವಸ್ತ್ರ ಮತ್ತು ಪೋಷಾಕುಗಳಿಗಿಂತಲೂ ಮಹಿಳೆಯರ ಅಸ್ಮಿತೆ ಮತ್ತು ಹೆಣ್ತನದ ಅಸ್ತಿತ್ವ ಪ್ರಧಾನವಾಗುತ್ತದೆ. ಈ ಅಸ್ಮಿತೆ ಮತ್ತು ಅಸ್ತಿತ್ವವನ್ನು ಗೌರವಿಸುವಂತಹ ಸ್ವಾಸ್ಯ ಸಮಾಜವನ್ನು ನಿರ್ಮಿಸಲು ಪ್ರಜ್ಞಾವಂತ ನಾಗರಿಕರು ಮುಂದಾಗಬೇಕಿದೆ. ಅತ್ಯಾಚಾರಿಗಳಿಗೆ ಮರಣದಂಡನೆಯಾಗಬೇಕು ಎಂಬ ಆಗ್ರಹ ಆ ಕ್ಷಣದ ಆಕ್ರೋಶದ ದ್ಯೋತಕ. ಆದರೆ ಸಾಯಬೇಕಿರುವುದು ಭಾರತದ ಪುರುಷ ಸಮಾಜದಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆ, ಪೌರುಷದ ಅಹಮಿಕೆ ಮತ್ತು ಶ್ರೇಷ್ಠತೆಯ ವ್ಯಸನ. ಇದನ್ನು ಸಾಧಿಸಲು ಬೇಕಿರುವುದು ಶಾಸನಗಳಲ್ಲ ಸೂಕ್ಷ್ಮ ಸಂವೇದನೆಯ ಮನಸ್ಸು.