ಆರೋಗ್ಯ, ಪರಿಸರ ಲಾಭಗಳ ಹೊರತಾಗಿಯೂ ಆಧುನಿಕ ಒಲೆಗಳನ್ನು ಬಳಸಲೊಲ್ಲದ ಭಾರತೀಯರು

Update: 2019-07-09 18:30 GMT

ಸರಕಾರಿ ದಾಖಲೆಗಳು ತೋರಿಸುವಂತೆ, ಭಾರತದ 24 ಕೋಟಿ ಕುಟುಂಬಗಳ ಪೈಕಿ 10 ಕೋಟಿ ಕುಟುಂಬಗಳು ಎಲ್‌ಪಿಜಿ ಸಂಪರ್ಕ ವಂಚಿತವಾಗಿವೆ. ಇದರಿಂದ ಕಟ್ಟಿಗೆ, ಕಲ್ಲಿದ್ದಲು ಮತ್ತು ಸೆಗಣಿಯಿಂದ ಮಾಡಿದ ಬೆರಣಿಯನ್ನು ಒಲೆ ಹಚ್ಚಲು ಹೆಚ್ಚಾಗಿ ಬಳಸುತ್ತಾರೆ.
ಇಂತಹ ಇಂಧನಗಳನ್ನು ಉರಿಸುವುದರಿಂದ ಮನೆಯಲ್ಲಿ ಮಾಲಿನ್ಯ ಉಂಟಾಗಿ ಮನೆಯ ಮಹಿಳೆಯರು ಮತ್ತು ಮಕ್ಕಳು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಈಡಾಗಬೇಕಾಗುತ್ತದೆ ಮತ್ತು ಇತರ ಕಾಯಿಲೆಗಳಿಗೂ ತುತ್ತಾಗುತ್ತಾರೆ. ಕಟ್ಟಿಗೆಯನ್ನು ಸಂಗ್ರಹಿಸುವ ಕಾರ್ಯ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆ.

ಜಗತ್ತಿನಾದ್ಯಂತ ಕೋಟ್ಯಂತರ ಜನರು ಸಾಂಪ್ರದಾಯಿಕ ಅಡುಗೆ ಒಲೆಗಳನ್ನು ಮತ್ತು ಘನ ಇಂಧನಗಳನ್ನು ಅವಲಂಬಿಸಿಕೊಂಡಿದ್ದು ಇವು ಹೊರಸೂಸುವ ಹೆಚ್ಚುವರಿ ಕಾರ್ಬನ್ ಮೊನೊಕ್ಸೈಡ್ ಜಾಗತಿಕ ಹವಾಮಾನದ ಮೇಲೆ ಭೀಕರ ಪರಿಣಾಮಗಳನ್ನುಂಟು ಮಾಡುತ್ತಿದೆ ಜೊತೆಗೆ ಬಳಕೆದಾರರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಪೂರೈಕೆ ಸರಪಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವ ಮತ್ತು ದರದಲ್ಲಿ ಕಡಿತ ಮಾಡುವ ಮೂಲಕ ಸುಧಾರಿತ ಅಡುಗೆ ಒಲೆಗಳ ಅಳವಡಿಕೆಯನ್ನು ಗಮನಾರ್ಹವಾಗಿ ಸುಧಾರಿಸಬಹುದಾಗಿದೆ.
ಸರಕಾರಿ ದಾಖಲೆಗಳು ತೋರಿಸುವಂತೆ, ಭಾರತದ 24 ಕೋಟಿ ಕುಟುಂಬಗಳ ಪೈಕಿ 10 ಕೋಟಿ ಕುಟುಂಬಗಳು ಎಲ್‌ಪಿಜಿ ಸಂಪರ್ಕ ವಂಚಿತವಾಗಿವೆ. ಇದರಿಂದ ಕಟ್ಟಿಗೆ, ಕಲ್ಲಿದ್ದಲು ಮತ್ತು ಸೆಗಣಿಯಿಂದ ಮಾಡಿದ ಬೆರಣಿಯನ್ನು ಒಲೆ ಹಚ್ಚಲು ಹೆಚ್ಚಾಗಿ ಬಳಸುತ್ತಾರೆ.
ಇಂತಹ ಇಂಧನಗಳನ್ನು ಉರಿಸುವುದರಿಂದ ಮನೆಯಲ್ಲಿ ಮಾಲಿನ್ಯ ಉಂಟಾಗಿ ಮನೆಯ ಮಹಿಳೆಯರು ಮತ್ತು ಮಕ್ಕಳು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಈಡಾಗಬೇಕಾಗುತ್ತದೆ ಮತ್ತು ಇತರ ಕಾಯಿಲೆಗಳಿಗೂ ತುತ್ತಾಗುತ್ತಾರೆ. ಕಟ್ಟಿಗೆಯನ್ನು ಸಂಗ್ರಹಿಸುವ ಕಾರ್ಯ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆ.
ಭಾರತ ಮತ್ತು ಅಮೆರಿಕದ ಸಂಶೋಧಕರು ನಡೆಸಿದ ನೂತನ ಅಧ್ಯಯನದಲ್ಲಿ, ಜಗತ್ತಿನಾದ್ಯಂತ 300 ಕೋಟಿ ಜನರು ಸಾಂಪ್ರದಾಯಿಕ ಒಲೆಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಧ್ಯಯನದಲ್ಲಿ ಈ ರೀತಿಯ ಸಂಪನ್ಮೂಲಗಳ ಬಳಕೆಯ ತ್ರಿವಳಿ ಹೊರೆಯನ್ನು ವಿವರಿಸಲಾಗಿದೆ: ಇದು ಹೆಚ್ಚು ಇಂಗಾಲ ಹೊರಸೂಸುವ ಮೂಲಕ ಜಾಗತಿಕ ಹವಾಮಾನದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಪ್ರತಿದಿನ ಇಂಧನಕ್ಕಾಗಿ ಕಟ್ಟಿಗೆ ಸಂಗ್ರಹಿಸುವ ಮೂಲಕ ಅರಣ್ಯ ಗುಣಮಟ್ಟ ಇಳಿಕೆ ಅಥವಾ ಅರಣ್ಯನಾಶಕ್ಕೆ ಕಾರಣವಾಗುತ್ತದೆ ಹಾಗೂ ಈ ಕೊಳಕು ಇಂಧನದಿಂದ ಉಂಟಾಗುವ ಮಾಲಿನ್ಯದಿಂದ ಕೋಟ್ಯಂತರ ಮಂದಿ ವಿಷಾನಿಲ ಸೇವಿಸುವಂತೆ ಮಾಡುತ್ತದೆ.
ಸ್ವಚ್ಛ ಇಂಧನ ಅಥವಾ ಹೆಚ್ಚು ಸಮರ್ಥವಾಗಿ ಘನ ಇಂಧನವನ್ನು ಸುಡುವ ಸುಧಾರಿತ ಅಡುಗೆ ಒಲೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ತ್ರಿವಳಿ ಹೊರೆಯನ್ನು ಹೋಗಲಾಡಿಸಿ, ಕುಟುಂಬದ ಆರೋಗ್ಯ, ಸ್ಥಳೀಯ ವಾತಾವರಣ ಮತ್ತು ಜಾಗತಿಕ ಹವಾಮಾನ ಸುಧಾರಿಸುವ ಮೂಲಕ ತ್ರಿವಳಿ ಗೆಲುವನ್ನು ಸಾಧಿಸಬಹುದಾಗಿದೆ.
ಆದರೆ, ಉತ್ತಮ ಆರೋಗ್ಯ ಮತ್ತು ಪರಿಸರ ಲಾಭಗಳ ಭರವಸೆಯ ಹೊರತಾಗಿಯೂ ಸುಧಾರಿತ ಅಡುಗೆ ಒಲೆಗಳ ಬಳಕೆ ಬಹಳ ಕಡಿಮೆಯಾಗಿದೆ ಎಂದು ಅಧ್ಯಯನ ಅಸಮಾಧಾನ ವ್ಯಕ್ತಪಡಿಸುತ್ತದೆ. ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳು ಈ ನೂತನ ಒಲೆಗಳಿಗೆ ಪಾವತಿ ಮಾಡಲು ಅಥವಾ ಬಳಸಲು ಉದಾಸೀನ ತೋರುತ್ತವೆ.
ಪೂರೈಕೆ ಸರಪಳಿಯ ಉನ್ನತೀಕರಣ, ಮಾರುಕಟ್ಟೆಯ ಸೂಕ್ಷ್ಮ ವಿಶ್ಲೇಷಣೆ ಮತ್ತು ದರ ವಿನಾಯಿತಿ ನೀಡುವಿಕೆ ಇತ್ಯಾದಿಗಳ ಅಳವಡಿಕೆಗೆ ಅಧ್ಯಯನ ಸಲಹೆ ನೀಡುತ್ತದೆ. ಇದರಿಂದ ಗ್ರಾಮೀಣ ಭಾರತದಲ್ಲಿ ಸುಧಾರಿತ ಅಡುಗೆ ಒಲೆಗಳ ಖರೀದಿ ಮತ್ತು ಅಳವಡಿಕೆಯಲ್ಲಿ ಶೇ.50ರಷ್ಟು ಏರಿಕೆಯಾಗಬಹುದು ಎಂದು ಅಧ್ಯಯನ ತಿಳಿಸಿದೆ.
ಮೂರು ಹಂತಗಳಲ್ಲಿ ಐದು ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಭಾರತೀಯ ಹಿಮಾಲಯ ಪ್ರದೇಶದ 1,000 ಕುಟುಂಬಗಳನ್ನು ಬಳಸಿಕೊಳ್ಳಲಾಗಿತ್ತು. ಇದರಲ್ಲಿ, ಪೂರೈಕೆ, ಚಿಲ್ಲರೆ, ಮಾರುಕಟ್ಟೆ, ಮಾರಾಟ ಮತ್ತು ಹಣದ ಸಂಯೋಜನೆ ಹೊಂದಿರುವ ಸ್ಥಳೀಯ ಪೂರೈಕೆದಾರರ ನಿರ್ದಿಷ್ಟ ಮಾದರಿಯ ನಿಯಂತ್ರಿತ ಕುಟುಂಬಗಳು ಮತ್ತು ದರ ವಿನಾಯಿತಿ ಮತ್ತು ಸುಧಾರಿತ ಪೂರೈಕೆ ಸರಪಳಿಯನ್ನು ಅಳವಡಿಸಲಾಗಿರುವ ಹಸ್ತಕ್ಷೇಪಿತ ಕುಟುಂಬಗಳು ಸೇರಿದ್ದವು.
ಸುಧಾರಿತ ಅಡುಗೆ ಒಲೆಗಳ ಮೇಲೆ ವಿನಾಯಿತಿಗಳಂತಹ ಕೊಡುಗೆ ನೀಡಲಾಗಿದ್ದ ಅರ್ಧಕ್ಕೂ ಅಧಿಕ ಹಸ್ತಕ್ಷೇಪಿತ ಕುಟುಂಬಗಳು ಸುಧಾರಿತ ಅಡುಗೆ ಒಲೆಗಳನ್ನು ಖರೀದಿಸಿದ್ದರೆ ನಿಯಂತ್ರಿತ ಕುಟುಂಬಗಳಲ್ಲಿ ಈ ಪ್ರಮಾಣ ಶೂನ್ಯವಾಗಿತ್ತು.
ಸಮೀಕ್ಷೆ ನಡೆಸಿದ ಕುಟುಂಬಗಳಲ್ಲಿ ಹೊಗೆಯಿಲ್ಲದಿರುವುದು, ಶೀಘ್ರ ಅಡುಗೆ ಮಾಡಲು ಸಾಧ್ಯತೆ, ಸಾಗಾಟಯೋಗ್ಯ ಮತ್ತು ಆಕರ್ಷಣೆಯ ಇತ್ಯಾದಿ ಕಾರಣಗಳಿಂದಾಗಿ ಬಯೊಮಾಸ್ ಅಡುಗೆ ಒಲೆಗಳಿಗೆ ಹೋಲಿಸಿದರೆ ವಿದ್ಯುತ್ ಒಲೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು.


ವಿದ್ಯುತ್ ಒಲೆಗಳಿಗೆ ಬೇಡಿಕೆ ಹೆಚ್ಚಿರುವುದು ಸ್ಥಿರ ವಿದ್ಯುತ್ ಮೂಲಗಳ ಕೊರತೆಯ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಲೇಖಕರು ಬೆಟ್ಟು ಮಾಡುತ್ತಾರೆ. ಭಾರತದಲ್ಲಿ ಗ್ರಾಮೀಣ ವಿದ್ಯುತೀಕರಣ ದರ ಗಮನಾರ್ಹ ರೀತಿಯಲ್ಲಿ ಏರಿಕೆ ಕಂಡಿದ್ದು 2005 ಮತ್ತು 2015ರ ಮಧ್ಯೆ ಶೇ.57ರಿಂದ ಶೇ.83ಕ್ಕೆ ಏರಿದೆ.
ಪೂರೈಕೆ ಸರಪಳಿಯ ಸಾಮರ್ಥ್ಯ ಮತ್ತೊಂದು ಪ್ರಮುಖ ಅಂಶವಾಗಿದೆ. ಕನಿಷ್ಠ ದರ ಕಡಿತದ ಹೊರತಾಗಿಯೂ ಸುಧಾರಿತ ಪೂರೈಕೆ ಸರಪಳಿಯಿಂದಾಗಿ ಸುಧಾರಿತ ಅಡುಗೆ ಒಲೆಯನ್ನು ಖರೀದಿಸುವವರ ಸಂಖ್ಯೆಯಲ್ಲಿ ಶೇ.28 ಏರಿಕೆಯಾಗಿದೆ.
ಅಮೆರಿಕ ಮೂಲದ ಡ್ಯೂಕ್ ವಿಶ್ವವಿದ್ಯಾನಿಲಯದ ಸ್ಯಾಫೊರ್ಡ್ ಸರಕಾರಿ ನೀತಿಗಳ ಶಾಲೆಯ ಎಸ್.ಕೆ. ಪಟ್ಟನಾಯಕ್ ಹೇಳುವಂತೆ, ಮಾಹಿತಿಯ ಕೊರತೆ, ಸಾಕಷ್ಟು ಆದಾಯ ಇಲ್ಲದಿರುವುದು ಮತ್ತು ಪರಿಸರ ಹಾಗೂ ಹವಾಮಾನ ಸಂಬಂಧಿ ಸಮಸ್ಯೆಗಳ ಜೊತೆ ಸಂಬಂಧ ಕಲ್ಪಿಸಿಕೊಳ್ಳುವಲ್ಲಿನ ಅಸಮರ್ಥತೆ ಜನರು ಸುಧಾರಿತ ಅಡುಗೆ ಒಲೆಗಳಿಗೆ ಪರಿವರ್ತನೆಗೊಳ್ಳಲು ಇರುವ ಪ್ರಮುಖ ತಡೆಯಾಗಿದೆ.
ದರ, ಒಂದು ಪ್ರಮುಖ ಅಂಶ
2019ರ ಒಳಗಾಗಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಒದಗಿಸಲು ಮುಂದಿನ ಮೂರು ವರ್ಷಗಳ ಕಾಲ ಪ್ರತಿ ಸಂಪರ್ಕಕ್ಕೆ 1,600 ರೂ. ಸಹಾಯಧನವನ್ನು ನೀಡುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಮೇ 2016ರಲ್ಲಿ ಎನ್‌ಡಿಎ ಸರಕಾರ ಚಾಲನೆ ನೀಡಿತ್ತು. ನಂತರ ಈ ಗುರಿಯನ್ನು 2020ರ ವೇಳೆ 8 ಕೋಟಿ ಸಂಪರ್ಕಗಳಿಗೆ ಏರಿಸಲಾಗಿತ್ತು.
ಈ ಯೋಜನೆಗೆ ಎಲ್ಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾದರೂ ಸಿಲಿಂಡರ್‌ನ ಮರುಹೂರಣಕ್ಕೆ ಪಡೆಯಲಾಗುವ ಹೆಚ್ಚಿನ ದರ ದೊಡ್ಡ ಸಮಸ್ಯೆಯಾಗಿದೆ ಎಂದು ವರದಿಗಳು ಬಂದವು. ವಾಸ್ತವದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಸೀಮಿತ ಸಮುದಾಯಗಳಿಗೆ ಸೌರ ಅಡುಗೆ ಒಲೆಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಲು ಸರಕಾರ ಮುಂದಾಗಿತ್ತು.
 ಅಧ್ಯಯನದ ಪ್ರಮುಖ ಲೇಖಕರೂ ಆಗಿರುವ ಎಸ್.ಕೆ ಪಟ್ಟನಾಯಕ್ ಅವರು, ದರ ಒಂದು ಪ್ರಮುಖ ಅಂಶವಾಗಿದೆ ಎಂದು ಬೆಟ್ಟು ಮಾಡಿದ್ದರು. ಕೇವಲ ಪ್ರಾಥಮಿಕ ಅಳವಡಿಕೆ (ಎಲ್‌ಪಿಜಿ ಸಂಪರ್ಕ ಪಡೆಯುವಿಕೆ, ಹೊಸ ಒಲೆಗಳ ಖರೀದಿ)ಗೆ ಮಾತ್ರವಲ್ಲ, ಶಾಶ್ವತ ಬಳಕೆಗೂ (ಸಿಲಿಂಡರ್ ಮರುಹೂರಣ ಮತ್ತು ಒಲೆಗಳ ನಿರ್ವಹಣೆ)ದರ ಒಂದು ಪ್ರಮುಖ ಅಂಶವಾಗಿದೆ ಎಂದು ಅವರು ತಿಳಿಸಿದ್ದರು. ಇದಕ್ಕೆ ಸುಲಭ ಉತ್ತರವಿಲ್ಲ, ಆದರೆ, ಕೇವಲ ಪ್ರಾಥಮಿಕ ಉತ್ತೇಜನ ಮತ್ತು ಸಬ್ಸಿಡಿ ನೆರವು ಖಂಡಿತವಾಗಿಯೂ ಸಾಕಾಗುವುದಿಲ್ಲ. ಆರಂಭಿಕ ಅಳವಡಿಕೆಯನ್ನು ಮೀರಿ ಹೆಚ್ಚು ತಾಂತ್ರಿಕ ಮತ್ತು ಸ್ವಲ್ಪ ಆರ್ಥಿಕ ನೆರವೂ ನೀಡುವ ಅಗತ್ಯವಿದೆ.
ಹೆಚ್ಚಿನ ಮಟ್ಟದಲ್ಲಿ ಸುಧಾರಿತ ಅಡುಗೆ ಒಲೆಯನ್ನು ಅಳವಡಿಸಿಕೊಳ್ಳಲು ಕೊಡುಗೆ ಅಥವಾ ಸಬ್ಸಿಡಿ ನೀಡುವ ಅಗತ್ಯವಿದೆಯೇ ಎಂದು ಕೇಳಿದಾಗ ಅವರು ಹೌದೆಂದು ಉತ್ತರಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸುಧಾರಿತ ಅಡುಗೆ ಒಲೆಯನ್ನು ಅಳವಡಿಸಿಕೊಳ್ಳುವುದರಿಂದ ಎಲ್ಲ ರೀತಿಯ ಭಯಾನಕ ಪರಿಸರ ಮತ್ತು ಆರೋಗ್ಯ ಪ್ರತಿಫಲಗಳು ನಿವಾರಣೆಯಾಗುತ್ತವೆ ಮತ್ತು ಅದಕ್ಕಾಗಿ ನಮಗೆ ಸಬ್ಸಿಡಿಯ ಅಗತ್ಯವಿದೆ. ಇದರಲ್ಲಿರುವ ಅಪಾಯವೆಂದರೆ ಗ್ರಾಮೀಣ ಭಾಗಗಳಲ್ಲಿರುವ ಮಧ್ಯಮ ಮತ್ತು ಮೇಲ್ವರ್ಗದ ಜನರು ಸಬ್ಸಿಡಿಯನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಗುರಿಯಾಗಿಸುವುದು ಮತ್ತು ಗುರುತಿಸುವುದು ಬಹಳ ಮುಖ್ಯವಾಗುತ್ತದೆ. ಭಾರತ ಸರಕಾರ ಇದರಲ್ಲಿ ನಿಪುಣವಾಗಿದೆ. ಹಾಗಾಗಿ ನಾವು ಯಶಸ್ವಿಯಾಗಲೇಬೇಕು ಎಂದು ಪಟ್ಟನಾಯಕ್ ಅಭಿಪ್ರಾಯಿಸುತ್ತಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಕಾರ, ಜೂನ್ 19ರವರೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ತೈಲ ಮಾರಾಟ ಕಂಪೆನಿಗಳು 7.23 ಕೋಟಿ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಬಿಡುಗಡೆ ಮಾಡಿದೆ.
ಮೇ ತಿಂಗಳವರೆಗೆ 1.67 ಕೋಟಿ ಮತ್ತು 1.45 ಕೋಟಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಬಾರಿ ಸಿಲಿಂಡರ್ ಮರುಹೂರಣ ಮಾಡಿಸಿಕೊಂಡಿದ್ದಾರೆ ಎಂದು ತೈಲ ಮಾರಾಟ ಕಂಪೆನಿಗಳು ತಿಳಿಸಿವೆ ಎಂದು ಜೂನ್ 24, 2019ರಂದು ಸಂಸತ್‌ನಲ್ಲಿ ಪ್ರಧಾನ್ ಮಾಹಿತಿ ನೀಡಿದ್ದರು. ಕನಿಷ್ಠ ಒಂದು ವರ್ಷ ಹಳೆಯ ಸುಮಾರು ಶೇ.86 ಪಿಎಂಯುವೈ ಫಲಾನುಭವಿಗಳು ಎರಡನೇ ಬಾರಿ ಸಿಲಿಂಡರ್ ಮರುಹೂರಣಕ್ಕೆ ನೀಡಿದ್ದಾರೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
ಪಿಎಂಯುವೈ ಫಲಾನುಭವಿಗಳಿಂದ ಎಲ್‌ಪಿಜಿ ಅಳವಡಿಕೆ ಮತ್ತು ಸಮರ್ಪಕ ಬಳಕೆಯು ಹಲವು ವಿಷಯಗಳನ್ನು ಆಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಮುಖವಾಗಿ ಆಹಾರಭ್ಯಾಸ, ಅಡುಗೆ ಹವ್ಯಾಸ, ಎಲ್‌ಪಿಜಿ ದರ, ಕಟ್ಟಿಗೆ ಮತ್ತು ಸೆಗಣಿಯ ಒದಗುವಿಕೆ ಇತ್ಯಾದಿಗಳ ಮೇಲೆ ಫಲಾನುಭವಿಗಳು ಎಲ್‌ಪಿಜಿ ಅಳವಡಿಸುವುದು ಮತ್ತು ಸಮರ್ಪಕವಾಗಿ ಉಪಯೋಗಿಸುವುದು ನಿರ್ಧರಿತವಾಗುತ್ತದೆ.
ಸದ್ಯ ಅಗತ್ಯವಿರುವುದು ಕುಟುಂಬಗಳ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮಗಳ ಆಯೋಜನೆ ಎಂದು ದಿಲ್ಲಿ ಮೂಲದ ಪರಿಸರ ಸಂಸ್ಥೆ ವಿಜ್ಞಾನ ಮತ್ತು ಪರಿಸರ ಕೇಂದ್ರದ ಅನುಮಿತ ರಾಯ್‌ಚೌದರಿ ಅಭಿಪ್ರಾಯಿಸುತ್ತಾರೆ. ಜನರು ಸ್ವಚ್ಛ ಇಂಧನಗಳಿಗೆ ಬದಲಿಸಿಕೊಳ್ಳಲು ಮತ್ತು ಅವುಗಳ ಬಳಕೆಯನ್ನು ಮುಂದುವರಿಸಲು ಪ್ರೋತ್ಸಾಹ ನೀಡಲು ಈ ರೀತಿ ಮಾಡುವ ಅಗತ್ಯವಿದೆ. ಸದ್ಯ ನಡೆಯುತ್ತಿರುವ ಯೋಜನೆಯ ಮುಂದಿರುವ ಸವಾಲೆಂದರೆ ಸಮಯೋಚಿತ ಮರುಹೂರಣ ಮತ್ತು ಅವಲಂಬನೆಯ ಭರವಸೆ. ಅಂತಿಮವಾಗಿ ಎಲ್ಲವೂ ಅವಲಂಬಿಸಿರುವುದು ಅರ್ಥಶಾಸ್ತ್ರದ ಮೇಲೆ. ಶ್ರೀಮಂತರಿಂದ ಬಡವರಿಗೆ ಸಬ್ಸಿಡಿಯ ಪರಿಣಾಮಕಾರಿ ವರ್ಗಾವಣೆಯ ಅಗತ್ಯವಿದೆ. ಮಿಶ್ರ ಇಂಧನ ಬಳಕೆಯನ್ನು ಅಳವಡಿಸಿಕೊಂಡಿರುವ ಕುಟುಂಬಗಳು, ಎಲ್‌ಪಿಜಿ ಸಂಪರ್ಕವನ್ನು ಎರಡನೇ ಆಯ್ಕೆಯಾಗಿ ತೆಗೆದಿಟ್ಟು ಅಗ್ಗ ಅಥವಾ ಉಚಿತವಾಗಿ ದೊರಕುವ ಘನ ಇಂಧನಗಳನ್ನು ಬಳಸುತ್ತಿರುವುದರತ್ತ ಈ ಅಭಿಯಾನ ಗಮನಹರಿಸಬೇಕಿದೆ. ಬಡವರಲ್ಲಿ ಜಾಗೃತಿಯನ್ನು ಮೂಡಿಸಲು ಆರೋಗ್ಯ ಸುರಕ್ಷಾ ಸೇವೆಗಳನ್ನೂ ಬಳಸಿಕೊಳ್ಳುವ ಅಗತ್ಯವಿದೆ.
scroll.in

Writer - ಮಯಾಂಕ್ ಅಗರ್ವಾಲ್

contributor

Editor - ಮಯಾಂಕ್ ಅಗರ್ವಾಲ್

contributor

Similar News

ಜಗದಗಲ
ಜಗ ದಗಲ