ನಿಯಂತ್ರಣಕ್ಕೆ ಬಂದೀತೇ ಜನಸಂಖ್ಯೆ?
ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯ ಆಡಳಿತ ಮಂಡಳಿಯು 1989 ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೆನೀಡಿತು.
ಒಂದು ಕೆರೆಯಲ್ಲಿ ಒಂದು ಕಮಲದ ಹೂ ಎರಡು ಆಗಲು ಒಂದೇ ದಿನ ಸಾಕು. ಅದೇ ರೀತಿ ಎರಡು ಹೂಗಳು ನಾಲ್ಕು ಆಗಲು ಒಂದೇ ದಿನ ಸಾಕು. ಹಾಗೆಯೇ ಅರ್ಧ ಕೆರೆಯಲ್ಲಿರುವ ಕಮಲಗಳು ಪೂರ್ಣ ಕೆರೆ ತುಂಬಲು ಕೂಡಾ ಒಂದೇ ದಿನ ಸಾಕು. ಈಗ ನಮ್ಮ ದೇಶದ ಜನಸಂಖ್ಯೆಯ ಪರಿಸ್ಥಿತಿಯೂ ಇದೇ ರೀತಿಯಾಗಿದೆ.
ಚೀನಾ ದೇಶವು ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ. ಆದರೆ ಚೀನಾ ದೇಶ ಜನ ಸಂಪನ್ಮೂಲವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರಿಂದ ಇಂದು ಅದು ವಿಶ್ವದಲ್ಲಿಯೇ ಮುಂದುವರಿದ ರಾಷ್ಟ್ರವಾಗಿದೆ. ನಮ್ಮ ಭಾರತ ದೇಶವು ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಇತ್ತೀಚಿನ ಗಣತಿಯ ಪ್ರಕಾರ ವಿಶ್ವದ ಜನ ಸಂಖ್ಯೆ ಸುಮಾರು 753 ಕೋಟಿ, ಭಾರತ ದೇಶದ ಜನಸಂಖ್ಯೆ 133.92 ಕೋಟಿ, ಕರ್ನಾಟಕ ರಾಜ್ಯದ ಜನಸಂಖ್ಯೆ 6.93 ಕೋಟಿ, ಬೆಂಗಳೂರಿನ ಜನಸಂಖ್ಯೆ ಸುಮಾರು 1.20 ಕೋಟಿಯಾಗಿದೆ.
1950ರಿಂದ ಈವರೆಗೆ ಜಾಗತಿಕ ಜನಸಂಖ್ಯೆ 460 ಕೋಟಿಯಷ್ಟು ಹೆಚ್ಚಾಗಿದೆ. ಅದು ಇಷ್ಟೊಂದು ವೇಗವಾಗಿ ಹೆಚ್ಚಾಗಲು ಏನು ಕಾರಣ? ಜನರ ಜನನ ಪ್ರಮಾಣ ವಿಪರೀತ ಹೆಚ್ಚಾಗಿದೆಯೇ? ಇಲ್ಲ, ಇದು ವಿಜ್ಞಾನದ ಬೆಳವಣಿಗೆಯಿಂದ. ಜನರ ಆರ್ಥಿಕ ಬೆಳವಣಿಗೆಯಿಂದ ಆರೋಗ್ಯ ರಕ್ಷಣೆ ಸುಧಾರಿಸಿದೆ. ಹೀಗಾಗಿ ಜನರ ಸಾವಿನ ಪ್ರಮಾಣ ಕಡಿಮೆಯಾಗಿದೆ. ಇದು ಒಳ್ಳೆಯ ಸುದ್ದಿಯಾದರೂ ಜನಸಂಖ್ಯೆಯ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವೆಂದು ನಂಬಲಾಗಿದೆ.
ಇಂದಿನ ಯುಗ ಪ್ರಗತಿಯ ಮತ್ತು ಅಭಿವೃದ್ಧಿಶೀಲ ಯುಗವಾಗಿದೆ. ಮಾನವನ ಸಾಧನೆಗಳು ಜೀವನದ ಪ್ರತಿಯೊಂದು ಹಂತದಲ್ಲಿಯೂ ಚಿರಸ್ಮರಣೆಯಾದಂತಹುಗಳಾಗಿವೆ. ವೈಜ್ಞಾನಿಕ ಪ್ರಗತಿಯು ಮಾನವನನ್ನು ಈ ವಿಶ್ವದ ಒಡೆಯನನ್ನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸಿಕೊಳ್ಳುವುದು ಅಸಾಧ್ಯವಾಗಿದೆ. ಅವನ ನಿಯಂತ್ರಣಕ್ಕೊಳಪಡೆದಿರುವ ಹಲವು ಸಮಸ್ಯೆಗಳಿಂದಾಗಿಯೇ ಪ್ರಪಂಚ ಅವನತಿಯೆಡೆಗೆ ಸಾಗುತ್ತಿದೆ. ಇಂತಹ ಸಮಸ್ಯೆಗಳಲ್ಲಿ ಜನಸಂಖ್ಯಾ ಸಮಸ್ಯೆಯೂ ಒಂದು. ಈ ಸಮಸ್ಯೆ ಜಗತ್ತಿನ ಬಹುತೇಕ ಭಾಗಗಳಲ್ಲಿ ಕಂಡು ಬರುವಂಥದ್ದಾಗಿದೆ. ಜನಸಂಖ್ಯಾ ಸ್ಫೋಟವು ಚಿಂತನಶೀಲರಾದ ಸಮಾಜ ಶಾಸ್ತ್ರಜ್ಞರಿಗೆ ಬಿಡಿಸಲಾಗದ ಒಗಟಾಗಿದೆ. ಜನಸಂಖ್ಯಾ ಬೆಳವಣಿಗೆಯ ಸಮಸ್ಯೆಯು ಮಾನವನ ಮೂಲಭೂತ ಸಮಸ್ಯೆಗಳಲ್ಲೊಂದಾಗಿದೆ. ಇದು ವ್ಯಕ್ತಿಯ ವೈಯಕ್ತಿಕ, ರಾಷ್ಟ್ರೀಯ, ಜಾಗತಿಕವಾಗಿ ಪ್ರತಿಯೊಂದು ಅಂಶದಲ್ಲಿಯೂ ಧಕ್ಕೆಯನ್ನುಂಟು ಮಾಡುತ್ತಿದೆ. ಈ ಸಮಸ್ಯೆಯು ಆರೋಗ್ಯ, ಆಹಾರ, ವಸತಿ, ಉಡುಪು, ಶಿಕ್ಷಣ, ಸಂಪತ್ತು, ಸುಖ-ಸಂತೋಷಗಳ ಮೇಲೆ, ರಾಷ್ಟ್ರದ ಉನ್ನತಿಯ ಮೇಲೆ ವಿಶೇಷ ಪರಿಣಾಮವನ್ನುಂಟು ಮಾಡುತ್ತದೆ.
ಜನಸಂಖ್ಯಾ ಹೆಚ್ಚಳದಿಂದಾಗಿ ಪ್ರಪಂಚದ ಅನೇಕ ರಾಷ್ಟ್ರಗಳು ಆಹಾರ ಸಾಮಗ್ರಿಗಳ ಪೂರೈಕೆ, ಜೀವನಮಟ್ಟ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ನೈಸರ್ಗಿಕ ಸಂಪನ್ಮೂಲಗಳು ಮತ್ತು ರಾಜಕೀಯವಾಗಿ ಸಮಸ್ಯೆಗಳಿಂದ ತುಂಬಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಜನಸಂಖ್ಯೆಯ ಮೇಲೆ ನಿಯಂತ್ರಣ ಮಾಡಿಕೊಳ್ಳುವುದಾಗಿದೆ.
ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯ ಆಡಳಿತ ಮಂಡಳಿಯು 1989 ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೆನೀಡಿತು. ಈ ವರ್ಷದ ಥೀಮ್ ‘ಕುಟುಂಬ ಯೋಜನೆ ಮತ್ತು ಮಾನವಹಕ್ಕು.’
ವಿಶ್ವ ಜನಸಂಖ್ಯಾ ದಿನ ಆಚರಿಸುವ ಉದ್ದೇಶಗಳು:
ಈ ಆಂದೋಲನವು ಪ್ರತಿವರ್ಷ ವಿಶ್ವದಾದ್ಯಂತ ಆರೋಗ್ಯ ಮತ್ತು ಕುಟುಂಬ ಯೋಜನೆಯ ಕಡೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಹೆಚ್ಚಿದ ಜನಸಂಖ್ಯೆಯಿಂದಾಗಿ ಕುಟುಂಬ ಯೋಜನೆಯ ಪ್ರಾಮುಖ್ಯತೆ, ಲಿಂಗ ಸಮಾನತೆ, ತಾಯಿಯ ಮತ್ತು ಮಗುವಿನ ಆರೋಗ್ಯ, ಬಡತನ, ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ಭಾಗವಹಿಸಲು ಯುವಜನತೆಯನ್ನು ಪ್ರೋತ್ಸಾಹಿಸುತ್ತದೆ. ಲೈಂಗಿಕ ಶಿಕ್ಷಣ, ಗರ್ಭ ನಿರೋಧಕಗಳು ಮತ್ತು ಕಾಂಡೋಮ್‌ಗಳಂತಹ ಸುರಕ್ಷತಾ ಕ್ರಮಗಳು, ಗರ್ಭಧಾರಣೆಯ ವಯಸ್ಸು, ಹೆಣ್ಣು ಮಗುವಿನ ಶಿಕ್ಷಣ, ಬಾಲ್ಯ ವಿವಾಹ, ಲೈಂಗಿಕ ಸೋಂಕಿನಿಂದ ಹರಡುವ ರೋಗಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಹೀಗಾಗಿ ಹದಿಹರೆಯದ ಯುವಕರು ಹಾಗೂ ಯುವತಿಯವರಿಗೆ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಡಲು ಸಾಧ್ಯವಾಗುತ್ತದೆ.
ಜನಸಂಖ್ಯಾ ಬೆಳವಣಿಗೆಗೆ ಕಾರಣಗಳು
ಈಗ ಪ್ರತಿ ಸೆಕಂಡಿಗೆ 5 ಮಂದಿ ಹುಟ್ಟುತ್ತಾರೆ. ಇಬ್ಬರು ಸಾಯುತ್ತಾರೆ ಎಂಬ ಅಂದಾಜಿದೆ. ಅಂದರೆ ಒಂದು ಸೆಕಂಡಿಗೆ ಈ ಭೂಮಿಯಲ್ಲಿ 3 ಹೊಸ ಮನುಷ್ಯರು ಜನ್ಮ ತಾಳುತ್ತಿದ್ದಾರೆ. ಈ ವೇಗದಲ್ಲಿ ಜನಸಂಖ್ಯೆ ಬೆಳೆದರೆ ಕೆಲವೇ ವರ್ಷಗಳಲ್ಲಿ ಜಾಗತಿಕ ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗುವ ಆತಂಕವಿದೆ.
ಸ್ತ್ರೀಯರ ಸ್ಥಾನಮಾನ, ಅನಕ್ಷರತೆ, ಜನನ-ಮರಣ ಪ್ರಮಾಣದಲ್ಲಿಯ ಅಂತರ, ವೈವಾಹಿಕ ಸಂಪ್ರದಾಯ, ವಿವಾಹಿತ ಸ್ತ್ರೀಯರ ಫಲವತ್ತತೆ, ಸಂತಾನೋತ್ಪತ್ತಿ ಅವಧಿ, ಪುತ್ರ ವ್ಯಾಮೋಹ ಹಾಗೂ ಕುಟುಂಬ ಯೋಜನೆಯ ವೈಫಲ್ಯ ಮುಂತಾದ ಗೊಂದಲಗಳು ಇಂದಿನ ಏರುಗತಿಯಲ್ಲಿರುವ ಜನಸಂಖ್ಯೆಗೆ ಕಾರಣವಾಗಿವೆ.
ವಿಶ್ವ ಜನಸಂಖ್ಯಾ ದಿನಾಚರಣೆಯ ಉದ್ದೇಶ ಸಫಲವಾಗಬೇಕಾದರೆ, ವಿಶ್ವದಮಾನವರೆಲ್ಲ ಜನಸಂಖ್ಯಾ ನಿಯಂತ್ರಣದಲ್ಲಿ ಸಹಕರಿಸಬೇಕು. ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ.