ಸಾಮಾಜಿಕ ಪ್ರಜ್ಞೆ ಮತ್ತು ಬಿಮಲ್ ರಾಯ್

Update: 2019-07-12 10:57 GMT

ಅರವತ್ತರ ದಶಕದಲ್ಲಿ ತೆರೆಕಂಡ ‘ಮಧುಮತಿ’, ಆ ಕಾಲಕ್ಕೇ ಸತತವಾಗಿ ಎರಡು ವರ್ಷ ಪ್ರದರ್ಶನ ಕಂಡು, ಅಪಾರ ಹಣ ಗಳಿಸಿ, ಸೂಪರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಅತ್ಯುತ್ತಮ ಚಿತ್ರವೆಂಬ ರಾಷ್ಟ್ರೀಯ ಚಿತ್ರ ಪ್ರಶಸ್ತಿ ಪುರಸ್ಕಾರದ ಜೊತೆಗೆ ಒಂಭತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು. ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರನ್ನು ಜನಪ್ರಿಯತೆಯ ತುತ್ತ ತುದಿಗೇರಿಸಿತ್ತು. ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿತ್ತು.

ಇದಕ್ಕೆ ಚಿತ್ರದ ನಿರ್ದೇಶಕ ಬಿಮಲ್ ರಾಯ್ ಎನ್ನುವುದು ಒಂದು ಕಾರಣವಾದರೂ, ಆ ಚಿತ್ರಕ್ಕಾಗಿ ಒಂದು ತಂಡವಾಗಿ ದುಡಿದ ಕಲಾವಿದರು ಮತ್ತು ತಂತ್ರಜ್ಞರ ಸೃಜನಶೀಲ ಶ್ರಮವನ್ನು ಮರೆಯುವಂತಿಲ್ಲ. ವಿದ್ಯಾವಂತ ಯುವಕ ಮತ್ತು ಬುಡಕಟ್ಟು ಜನಾಂಗದ ಯುವತಿಯ ನಡುವಿನ ಪುರಾತನ ಪ್ರೇಮದ ಕತೆ ಹೇಳುವ, ಪುನರ್ಜನ್ಮದ ಎಳೆಯೇ ಪ್ರಧಾನವಾಗಿರುವ, ಮತ್ತೆ ಮತ್ತೆ ಕೇಳಬೇಕೆನಿಸುವ ಮಧುರವಾದ ಹಾಡುಗಳಿರುವ, ಅದಕ್ಕೆ ತಕ್ಕ ಸುಂದರ ಹೊರಾಂಗಣ ಚಿತ್ರಣ, ಸೂತ್ರಬದ್ಧ ನಿರೂಪಣೆಯಿರುವ ‘ಮಧುಮತಿ’ ರೊಮ್ಯಾಂಟಿಕ್ ಚಿತ್ರವಾಗಿ ಜನಮನ್ನಣೆ ಗಳಿಸಿತ್ತು.

ಚಿತ್ರದ ನಾಯಕನಾಗಿ ದಿಲೀಪ್ ಕುಮಾರ್, ನಾಯಕಿಯಾಗಿ ವೈಜಯಂತಿಮಾಲ, ಪೋಷಕ ಪಾತ್ರಗಳಲ್ಲಿ ಪ್ರಾಣ್ ಮತ್ತು ಜಾನಿವಾಕರ್ ರ ಅಮೋಘ ಅಭಿನಯವಿತ್ತು. ಕತೆ ಮತ್ತು ಚಿತ್ರಕಥೆಯನ್ನು ಋತ್ವಿಕ್ ಘಟಕ್ ನಿರ್ವಹಿಸಿದ್ದರೆ, ಗೀತ ರಚನೆ ಶೈಲೇಂದ್ರರದ್ದಾಗಿತ್ತು. ಹೃಷಿಕೇಶ್ ಮುಖರ್ಜಿಯವರ ಸಂಕಲನವಿದ್ದರೆ, ದಿಲೀಪ್ ಗುಪ್ತಾರ ಛಾಯಾಗ್ರಹಣವಿತ್ತು. ಚಿತ್ರದ ಸಂಗೀತ ಸಲೀಲ್ ಚೌಧರಿಯವರದ್ದಾಗಿದ್ದು, ಮುಖೇಶ್, ಮನ್ನಾ ಡೇ, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಮುಬಾರಕ್ ಬೇಗಂ, ಸಬಿತಾ ಚೌಧರಿಯವರು ಹಿನ್ನೆಲೆ ಗಾಯಕ-ಗಾಯಕಿಯರಾಗಿದ್ದರು. ಕಲಾತ್ಮಕ ಮತ್ತು ಕಮರ್ಷಿಯಲ್- ಎರಡೂ ಅಂಶಗಳನ್ನು ಸಮಾನವಾಗಿ ಸಮೀಕರಿಸಿಕೊಂಡ ಫಲವಾಗಿ ‘ಮಧುಮತಿ’ ಜನಪ್ರಿಯ ಚಿತ್ರವಾಗಿ ಹೊರಹೊಮ್ಮಿತ್ತು.

ಈಗ, ಅರವತ್ತರ ದಶಕದ ಕಪ್ಪು ಬಿಳುಪಿನ ಚಿತ್ರವನ್ನು ಅರವತ್ತು ವರ್ಷಗಳ ನಂತರ, ಕಳೆದ ಜನವರಿಯಲ್ಲಿ ಮತ್ತೆ ಬಿಡುಗಡೆ ಮಾಡಲಾಗಿತ್ತು. ಬಿಮಲ್ ರಾಯ್, ದಿಲೀಪ್ ಕುಮಾರ್, ಮೆಲೋಡಿ ಹಾಡುಗಳು ಮತ್ತೊಮ್ಮೆ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಬಿಮಲ್ ರಾಯ್ ಅವರ ಮಗಳು ರಿಂಕಿ ರಾಯ್.

ತಂದೆ ಬಗೆಗಿನ ಅತೀವ ಅಭಿಮಾನ ಮತ್ತು ಪ್ರೀತಿಯಿಂದ ‘ಬಿಮಲ್ ರಾಯ್ ಸ್ಮಾರಕ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಿಂಕಿ, ನೆರೆದಿದ್ದ ಸಭಿಕರನ್ನು ಕಂಡು ಕುತೂಹಲಗೊಂಡು, ‘ಬಿಮಲ್ ರಾಯ್ ಅವರ ಚಿತ್ರಗಳನ್ನು ಈಗಲೂ ನೋಡುವ ಉತ್ಸಾಹ ಇದೆಯೇ” ಎಂದು ಪ್ರಶ್ನಿಸಿದ್ದರು. ಹೆಚ್ಚಿನವರು ‘ಮಧುಮತಿ’ ಬಗ್ಗೆ ಆಸಕ್ತಿ ತೋರಿದಾಗ, ಮತ್ತೆ ಬಿಡುಗಡೆ ಮಾಡಿದ್ದರು. ಕಾಲದ ಮಹಿಮೆಯೋ ಏನೋ ಹೊಸಗಾಲದ ಪ್ರೇಕ್ಷಕರಿಗೆ ‘ಮಧುಮತಿ’ ರುಚಿಸಲಿಲ್ಲ.

ಈ ಕಾಲದ ಪ್ರೇಕ್ಷಕರಿರಲಿ, ಆ ಕಾಲದಲ್ಲಿಯೇ, ಅರವತ್ತು ವರ್ಷಗಳ ಹಿಂದೆಯೇ, ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಬಿಮಲ್ ರಾಯ್ ಕೂಡ, ‘ಮಧುಮತಿ ನನ್ನ ಚಿತ್ರ’ ಎಂದು ಹೇಳಿಕೊಳ್ಳಲು ಹಿಂಜರಿದಿದ್ದರಂತೆ. ಅದಾಗಲೇ 1952ರಲ್ಲಿ ‘ಮಾ’, 1953 ರಲ್ಲಿ ‘ದೋ ಬಿಘಾ ಜಮೀನ್, 1954 ರಲ್ಲಿ ‘ಬಿರಜ್ ಬಹೂ’ ಮತ್ತು 1955 ರಲ್ಲಿ ‘ದೇವದಾಸ್’ ಥರದ ಚಿತ್ರಗಳನ್ನು ಮಾಡಿ, ತಮ್ಮ ಒಲವು-ಧೋರಣೆ-ಕಾಳಜಿ-ಶೈಲಿಗಳೇನು ಎಂಬುದನ್ನು ತೆರೆದಿಟ್ಟಿದ್ದರು. ಹಾಗಾಗಿಯೇ ಪುನರ್ಜನ್ಮದ ಪ್ರೇಮ ಪ್ರಲಾಪದ ಅವಾಸ್ತವಿಕ ಕತೆಯುಳ್ಳ ‘ಮಧುಮತಿ’ಯನ್ನು ತಮ್ಮದೆಂದು ಒಪ್ಪಿಕೊಳ್ಳುವುದು ಕಷ್ಟವಾಗಿ, ಮೌನಕ್ಕೆ ಶರಣಾಗಿದ್ದರಂತೆ.

ಇಂತಹ ಮುಜುಗರ, ಮೌನಕ್ಕೆ ಸ್ವತಃ ಬಿಮಲ್ ರಾಯ್ ರೆ ಕಾರಣ ಎನ್ನುತ್ತದೆ ಮಗಳು ರಿಂಕಿ ರಾಯ್ ರಚಿತ ‘ಬಿಮಲ್ ರಾಯ್ ರ ಮಧುಮತಿ’ ಕುರಿತ ಪುಸ್ತಕ. 1909ರ ಜುಲೈ 12 ರಂದು ಜನಿಸಿದ ಬಿಮಲ್ ರಾಯ್ ಮೂಲತಃ ಪಶ್ಚಿಮ ಬಂಗಾಳದವರು, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು.

ಕಲ್ಕತ್ತಾದಲ್ಲಿ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಬೆಂಗಾಲಿ ಭಾಷೆಯ ಚಿತ್ರಗಳಲ್ಲಿ ದುಡಿದವರು. ಅಲ್ಲಿಂದ ಕೆಲಸ ಅರಸಿ 1950ರಲ್ಲಿ ಮುಂಬೈಗೆ ಬರುವಾಗ, ಜೊತೆಯಲ್ಲಿ ಹೃಷಿಕೇಶ್ ಮುಖರ್ಜಿ, ನಬೆಂದು ಘೋಷ್, ಅಸಿತ್ ಸೇನ್. ಸಲೀಲ್ ಚೌಧರಿಯಂತಹ ಪ್ರತಿಭಾನ್ವಿತರ ತಂಡವನ್ನೇ ಕರೆತಂದಿದ್ದರು. ವಿಭಿನ್ನ ಚಿತ್ರಗಳನ್ನು ಮಾಡುವ ಮೂಲಕ, ಭದ್ರ ನೆಲೆ ಕಲ್ಪಿಸಿ, ಭವ್ಯ ಪರಂಪರೆಗೆ ಕಾರಣಕರ್ತರಾಗಿ ಹಿಂದಿ ಚಿತ್ರೋದ್ಯಮವನ್ನು ಶ್ರೀಮಂತಗೊಳಿಸಿದವರು.

ಏತನ್ಮಧ್ಯೆ ಹಿಂದಿ ಚಿತ್ರೋದ್ಯಮದಲ್ಲಿ ಬಹುಬೇಡಿಕೆಯ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಬಿಮಲ್ ರಾಯ್ ರಿಗೆ ದೂರದ ಸಂಬಂಧಿಯಾದ ಋತ್ವಿಕ್ ಘಟಕ್ ಕೂಡ ಗಂಟುಬಿದ್ದರು. ಒಳ್ಳೆಯ ಕಥೆಗಾರರಾದ ಋತ್ವಿಕ್ ಗೆ ಕೆಲಸ ಕೊಡಲು, ಮುಂದಿನ ಚಿತ್ರಕ್ಕೆ ಕತೆ-ಚಿತ್ರಕತೆ ಸಿದ್ಧಪಡಿಸುವಂತೆ ಹೇಳಿದರು. ಕತೆ ಬರೆಯುವ ಕಾಲಕ್ಕೆ ಋತ್ವಿಕ್ ಹೆಚ್ಚು ಕುಡಿಯುತ್ತಿದ್ದರಂತೆ. ಆ ಮಧುಪಾನದ ಫಲವೇ ‘ಮಧುಮತಿ’. ತಾವೇ ಹೇಳಿ ಬರೆಸಿದ ಕತೆಯನ್ನು ನಿರ್ಲಕ್ಷಿಸಲಾಗದ ಬಿಮಲ್, ನಿರ್ದೇಶನದ ಜೊತೆಗೆ ನಿರ್ಮಾಪಕರೂ ಆದರು. ಚಿತ್ರದ ಮೊದಲ ದೃಶ್ಯವನ್ನು ಜೆಕೊಸ್ಲಾವಿಕಿಯಾದಲ್ಲಿ ಚಿತ್ರೀಕರಿಸಿದರು. ಚಿತ್ರದ ಬಜೆಟ್ ಏರುತ್ತಾ ಹೋಗಿ ಸಾಲಗಾರರಾದರು. ಕೊನೆಗೆ ಚಿತ್ರ ಬಿಡುಗಡೆಯಾಗಿ ಜನಮನ್ನಣೆ ಗಳಿಸಿ, ಪ್ರಶಸ್ತಿಗಳಿಗೆ ಪಾತ್ರವಾದಾಗ, ಮಾತನಾಡದೆ ಮೌನವಾದರು.

ಬಿಮಲ್ ರಾಯ್ ಮೂಲತಃ ಕ್ಯಾಮರಾಮನ್ ಆದ್ದರಿಂದ, ಸಿನೆಮಾ ವ್ಯಾಕರಣ ಸಿದ್ಧಿಸಿತ್ತು. ನಿರೂಪಣಾ ತಂತ್ರ ತಾನಾಗಿಯೇ ಒದಗಿಬಂದಿತ್ತು. ಜೊತೆಗೆ ಹಳ್ಳಿ, ಅಲೆದಾಟ, ಅನುಭವ ಬೆನ್ನಿಗಿತ್ತು. ಹೀಗಾಗಿ ಹಿಂದಿ ಚಿತ್ರೋದ್ಯಮವೆಂಬ ಮಾಯಾನಗರಿಯಲ್ಲಿ 22 ಚಿತ್ರಗಳಿಗೆ ನಿರ್ದೇಶಕರಾಗಿ, 7 ಚಿತ್ರಗಳಿಗೆ ನಿರ್ಮಾಪಕರಾಗಿ, 6 ಚಿತ್ರಗಳಿಗೆ ಸಂಕಲನಕಾರರಾಗಿ, 10 ಚಿತ್ರಗಳಿಗೆ ಕ್ಯಾಮರಾಮನ್ ಆಗಿ ಕೆಲಸ ಮಾಡುವ ಮೂಲಕ ಸಾಧಕರ ಸಾಲಿಗೆ ಸೇರಿಹೋದ ಬಿಮಲ್, ಭಾರತೀಯ ಚಿತ್ರ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದರು.

ಈ ಹೊತ್ತಿಗೂ, ಬಿಮಲ್ ರಾಯ್ ಎಂದಾಕ್ಷಣ ಎಲ್ಲರ ಕಣ್ಣಮುಂದೆ ನಿಲ್ಲುವುದು ಅವರ ‘ದೋ ಬಿಘಾ ಜಮೀನ್’ ಚಿತ್ರ. ಭಾರತೀಯ ಚಲನಚಿತ್ರರಂಗದಲ್ಲಿ ಕ್ರಾಂತಿ ಮಾಡಿದ ಚಿತ್ರಗಳ ಪೈಕಿ ಇದು ಕೂಡ ಒಂದು. ಹಳ್ಳಿಯ ಬಡ ರೈತನ ಸಮಸ್ಯೆ-ಸಂಕಷ್ಟಗಳ ಸರಮಾಲೆಯನ್ನು ಬೆಳ್ಳಿತೆರೆಯ ಮೇಲೆ ಸಮರ್ಥವಾಗಿ ಬಿಡಿಸಿಡುವ, ನೋಡುಗರ ಚಿತ್ತಕ್ಕಿಳಿದು ಚಿಂತನೆಗೆ ಹಚ್ಚುವ ಚಿತ್ರ. ಐವತ್ತರ ದಶಕದ ದೇಶದ ಸಾಮಾಜಿಕ ಸ್ಥಿತಿಯನ್ನು ಯಥಾವತ್ ತೆರೆದಿಟ್ಟ ಚಿತ್ರ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾದ ಚಿತ್ರ.

1953ರಲ್ಲಿ ಬಂದ ‘ದೊ ಬಿಘಾ ಜಮೀನ್’ ಚಿತ್ರದ ಕತೆ ನಾವು ನೀವು ಕಂಡು ಕೇಳಿರುವ ನಮ್ಮದೇ ಕತೆ. ಆದರೆ ಅದನ್ನು ಬೆಳ್ಳಿತೆರೆಗೆ ಅಳವಡಿಸಿರುವ ರೀತಿ ಅನನ್ಯವಾಗಿದೆ. ರವೀಂದ್ರನಾಥ್ ಠಾಗೋರ್ ಅವರ ಕವನದಿಂದ ಸ್ಪೂರ್ತಿ ಪಡೆದ ಸಲೀಲ್ ಚೌಧರಿ ಕತೆ ಬರೆದರು. ಆ ಕತೆಗೆ ಹೃಷಿಕೇಷ್ ಮುಖರ್ಜಿ ಚಿತ್ರಕಥೆ (ಸಂಕಲನವೂ ಇವರದೆ) ರಚಿಸಿದರು. ಸಲೀಲ್ ಚೌಧರಿ ಸಂಗೀತ ಸಂಯೋಜಿಸಿದರು, ಕಮಲ್ ಬೋಸ್ ಕ್ಯಾಮರಾಮನ್ ಕೆಲಸ ನಿರ್ವಹಿಸಿದರು. ಚಿತ್ರದ ಮುಖ್ಯ ಪಾತ್ರವಾದ ಬಡರೈತನಾಗಿ ಬಾಲರಾಜ್ ಸಹಾನಿ, ಆತನ ಮಡದಿ ಪಾರ್ವತಿಯಾಗಿ ನಿರೂಪಾ ರಾಯ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ವಿಶೇಷವೆಂದರೆ, ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಎಲ್ಲರೂ ನಟಿಸಿಲ್ಲ- ಅವರಾಗಿ, ಇನ್ನೊಬ್ಬರಾಗಿ, ಬೇರೊಬ್ಬರಾಗಿ ಬದುಕಿದ್ದಾರೆ.

ಅದೊಂದು ನೆಲ ನೆಚ್ಚಿ ಬದುಕುವ, ಶಂಭು-ಪಾರ್ವತಿ, ಮಗ ಕನ್ಹಯ್ಯಾ, ವಯೋವೃದ್ಧ ತಂದೆ ಸೇರಿ ನಾಲ್ಕು ಜನರಿರುವ ಪುಟ್ಟ ಕುಟುಂಬ. ಆ ಕುಟುಂಬಕ್ಕೆ ಆಸರೆಯಾಗಿರುವುದು ಒಂದೂವರೆ ಎಕರೆ ಜಮೀನು. ಬರಗಾಲ, ಬಡತನದಿಂದಾಗಿ ಆ ಕುಟುಂಬಕ್ಕೆ ಎದುರಾಗುವ ಸಾಲು ಸಾಲು ಸಮಸ್ಯೆಗಳು, ಸಾಹುಕಾರನ ಕಿರುಕುಳ, ಕೂಲಿಗಾಗಿ ಕೊಲ್ಕತ್ತಾ ನಗರದಲ್ಲಿ ರಿಕ್ಷಾ ಎಳೆಯುವ ರೈತ, ಕಳ್ಳನಾಗುವ ಮಗ, ಅಪಘಾತಕ್ಕೀಡಾಗುವ ಪತ್ನಿ, ದುಡಿದ ದುಡ್ಡನ್ನೆಲ್ಲ ಚಿಕಿತ್ಸೆಗೆ ಖರ್ಚು ಮಾಡಿ ಬರಿಗೈಲಿ ಹಳ್ಳಿಗೆ ವಾಪಸಾಗುವ, ಅದೇ ಸಮಯಕ್ಕೆ ಸಾಲದ ಹಣಕ್ಕಾಗಿ ಭೂಮಿ ಹರಾಜಾಗುವ, ಅದನ್ನು ಕಂಡು ಶಂಭು ಹುಚ್ಚನಾಗುವ, ಕೊನೆಗೆ ಎಲ್ಲವನ್ನು ಕಳೆದುಕೊಂಡು ಹಳ್ಳಿ ತೊರೆಯುವ… ರೈತನ ಬದುಕಿಗೇ ಕ್ಯಾಮರಾ ಇಟ್ಟು ಚಿತ್ರೀಕರಿಸಿದಂತಿರುವ ‘ದೋ ಬಿಘಾ ಜಮೀನ್’- ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರ.

ಸಾಮಾಜಿಕ ಸಮಸ್ಯೆಯನ್ನು, ವಾಸ್ತವಿಕ ಬದುಕನ್ನು ಬೆಳ್ಳಿತೆರೆಗೆ ತಂದ ಬಿಮಲ್ ರಾಯ್ ಗೆ ಆ ಸಂದರ್ಭದಲ್ಲಿ ಪ್ರೇರಣೆಯಾಗಿದ್ದು ಇಟಲಿಯ ನಿರ್ದೇಶಕ ವಿಟ್ಟೋರಿಯಾ ಡಿ ಸಿಕಾ ಅವರ ‘ಬೈಸಿಕಲ್ ಥೀವ್ಸ್’(1948) ಚಿತ್ರವೆಂಬ ವಾದವೂ ಇದೆ. ಬಡವನನ್ನು ಬಡವನೇ ದೋಚುವ, ದೋಚಿದ ಬಡವನ ದಿಕ್ಕೆಟ್ಟಸ್ಥಿತಿ ಕಂಡು ಬಡವನೇ ಸುಮ್ಮನಾಗುವ ಕತೆಯುಳ್ಳ ಈ ಚಿತ್ರ, ಬಿಮಲ್ ರಾಯ್ ಗೆ ಸ್ಫೂರ್ತಿಯಾಗಿರಬಹುದು. ಆದರೆ ‘ದೋ ಬಿಘಾ ಜಮೀನ್’ ಭಾರತದ ಮಣ್ಣಿನ ಗುಣದ ಕತೆ, ಮಣ್ಣನ್ನೇ ನೆಚ್ಚಿ ಬದುಕುವ ಅನ್ನದಾತನ ಅಸಲಿ ಕತೆ. ಹೆಚ್ಚೂಕಡಿಮೆ ಇಂಥದ್ದೇ ಕತೆಯುಳ್ಳ ‘ದಿ ಗುಡ್ ಅರ್ಥ್’ ಎಂಬ ಹಾಲಿವುಡ್ ಸಿನೆಮಾ 1937ರಲ್ಲಿಯೇ ತೆರೆಕಂಡು ಯಶಸ್ವಿಯಾಗಿತ್ತು.

ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕಿ ಪರ್ಲ್ ಬಕ್ ಅವರ ಕತೆಯಾಧರಿಸಿದ ಈ ಚಿತ್ರ ಚೀನಾದ ರೈತರ ಕತೆಯಾಗಿದ್ದು, ಸಿಡ್ನಿ ಫ್ರಾಂಕ್ಲಿನ್ ನಿರ್ದೇಶಿಸಿದ್ದರು. ಸೋಜಿಗದ ಸಂಗತಿ ಎಂದರೆ, 1957 ರಲ್ಲಿ ಬಂದ, ನರ್ಗಿಸ್, ರಾಜಕುಮಾರ್, ಸುನಿಲ್ ದತ್ ನಟಿಸಿದ್ದ, ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’ ಚಿತ್ರ ಬಿಮಲ್ ರಾಯ್ ರ ‘ದೋ ಬಿಘಾ ಜಮೀನ್’ ಚಿತ್ರದ ಮುಂದುವರೆದ ಭಾಗದಂತಿತ್ತು. ಸಾಮಾಜಿಕ ಸಮಸ್ಯೆಗಳಿಗೆ ಭಾರತೀಯ ಚಿತ್ರರಂಗ ಸ್ಪಂದಿಸುವ ನಿಟ್ಟಿನಲ್ಲಿ ಬಹಳ ಮುಖ್ಯವಾದ ನಡೆಯಾಗಿತ್ತು.

ಹಾಗೆ ನೋಡಿದರೆ, ‘ದೋ ಬಿಘಾ ಜಮೀನ್’ನಲ್ಲಿ ಕೃಷಿಕನ ಕಣ್ಣೀರಿನ ಕತೆ, ‘ಸುಜಾತಾ’ದಲ್ಲಿ ಅಸ್ಪೃಶ್ಯತಾಚರಣೆ, ‘ಬಂದಿನಿ’ಯಲ್ಲಿ ಮಹಿಳೆಯರ ತುಮುಲ-ತಳಮಳ… ಹೀಗೆ ಅವರ ಚಿತ್ರಗಳಲ್ಲಿ ಸಾಮಾಜಿಕ ಪ್ರಜ್ಞೆ ಎನ್ನುವುದು ಗುಪ್ತಗಾಮಿನಿಯಂತೆ ಹರಿದಿರುವುದನ್ನು ಗಮನಿಸಬಹುದು. ಹಾಗೆಯೇ ಇದು ಭಾರತೀಯ ಚಿತ್ರರಂಗದಲ್ಲಿ, ಇತ್ತೀಚಿನ ‘ಆರ್ಟಿಕಲ್ 15’ ಚಿತ್ರದವರೆಗೆ, ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆದಿರುವುದನ್ನೂ ನೋಡಬಹುದು. ಹೀಗಾಗಿ ಬಿಮಲ್ ರಾಯ್ ಬದಲಾದ ಕಾಲಘಟ್ಟದಲ್ಲಿಯೂ ಬಾಳುವ, ಬೆಳೆಯುತ್ತಲೇ ಹೋಗುವ ಅಸಾಮಾನ್ಯ ವ್ಯಕ್ತಿ. ಭಾರತೀಯ ಚಿತ್ರರಂಗ ಸ್ಮರಿಸಲೇಬೇಕಾದ ವ್ಯಕ್ತಿ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ