ಹರಾಜಿಗಿರುವ ಮೌಲ್ಯಗಳೂ ಬಿಕರಿಗಿರುವ ಪೀಠಗಳೂ

Update: 2019-07-11 18:32 GMT

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಅಧಃಪತನದತ್ತ ಸಾಗುತ್ತಿದೆ. ದಶಕದ ಹಿಂದಿನ ಮಾರುಕಟ್ಟೆಯ ಪ್ರಹಸನ ಮತ್ತೊಮ್ಮೆ ಅವತರಿಸಿದ್ದು ಈ ಬಾರಿ ಇನ್ನೂ ಹೆಚ್ಚಿನ ಬಂಡವಾಳದೊಂದಿಗೆ ಹರಾಜು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದೆ. ನಿಜ, ಮೌಲ್ಯ ಎನ್ನುವ ಪದವೇ ರಾಜಕೀಯ ಸಂಕಥನದಿಂದ ಮರೆಯಾಗಿ ಹಲವು ವರ್ಷಗಳು ಕಳೆದಿವೆ. ಆದರೂ ಸಾರ್ವಜನಿಕರ ಮನದಲ್ಲಿ ರಾಜಕೀಯ ಎಂದರೆ ಇನ್ನೂ ಕೆಲವು ಮೌಲ್ಯಗಳನ್ನು ಉಳಿಸಿಕೊಂಡ ಪ್ರಕ್ರಿಯೆ ಎಂಬ ಭಾವನೆ ಇದೆ. ಯುವ ಪೀಳಿಗೆ ಹೊಸ ರಾಜಕೀಯ ದಿಶೆಯತ್ತ ಈಗಾಗಲೇ ಮುಖ ಮಾಡಿ ನಿಂತಿದ್ದು ತನ್ನದೇ ಆದ ಭ್ರಮಾಲೋಕದಲ್ಲಿ ವಿಹರಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರಕಾರ ಭಾರತದ ಯುವ ಪೀಳಿಗೆಗೆ ಒಂದು ಹೊಸ ಭಾರತವನ್ನು ತೋರಿಸುತ್ತಿದ್ದು, ಭಾರತದ ಪ್ರಜಾತಾಂತ್ರಿಕ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಲು ಯತ್ನಿಸುತ್ತಿದೆ. ಏಳು ದಶಕಗಳ ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯರು ಕಟ್ಟಲು ಬಯಸಿದ ಸಮಾನತೆ, ಸೌಹಾರ್ದ ಮತ್ತು ಸಹಬಾಳ್ವೆಯ ಸಮಾಜವನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡುವ ರೀತಿಯಲ್ಲಿ ಇಂದಿನ ಭಾರತದ ಆಳುವ ವರ್ಗಗಳು, ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ.
ಏಳು ದಶಕಗಳ ಆಡಳಿತದಲ್ಲಿ ಭಾರತ ಮುಂದುವರಿದಿದೆ. ಆರ್ಥಿಕವಾಗಿ ಅಭಿವೃದ್ಧಿ ಕಂಡಿದೆ. ವಿಜ್ಞಾನ, ಸಾಹಿತ್ಯ, ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿಶ್ವದ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮಿದೆ. ಭಾರತದ ಈ ಸಾಧನೆಗಳ ಮೆಟ್ಟಿಲುಗಳನ್ನೇರುತ್ತಲೇ ಹೊಸ ಭಾರತದ ಕನಸು ಕಟ್ಟುತ್ತಿರುವ ಹೊಸ ಆಡಳಿತ ವ್ಯವಸ್ಥೆ ಭಾರತೀಯ ಸಮಾಜದ ಶತಮಾನಗಳ ಸಂಘರ್ಷವನ್ನು ನಿರಾಕರಿಸುತ್ತಲೇ ಹೊಸ ವ್ಯವಸ್ಥೆಯ ನಿರ್ಮಾಣದತ್ತ ದಾಪುಗಾಲು ಹಾಕುತ್ತಿದೆ. ಕಳೆದ ಲೋಕಸಭಾ ಚುನಾವಣೆಗಳಲ್ಲಿ ಭಾರತದ ಮತದಾರರು ವಿಭಿನ್ನ ತೀರ್ಪು ನೀಡಿದ್ದು, ಸ್ವೀಕೃತ ಸಾಮಾಜಿಕ ಮತ್ತು ಸಾಂಸ್ಕೃತಿಕ ಭೂಮಿಕೆಗಳನ್ನು ನೇಪಥ್ಯಕ್ಕೆ ಸರಿಸುವ ಹುನ್ನಾರಗಳಿಗೆ ಮನ್ನಣೆ ನೀಡಿದ್ದಾರೆ. ಬಹುಸಂಸ್ಕೃತಿ, ಬಹುತ್ವ ಭಾರತದ ಕನಸನ್ನು ಛಿದ್ರಗೊಳಿಸುವ ಮತೀಯವಾದಕ್ಕೆ ಜನತೆ ಮಾನ್ಯತೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಜಾತ್ಯತೀತತೆಯನ್ನು ಕೇವಲ ವೇದಿಕೆಯ ಚರ್ಚೆಗಳಿಗೆ ಸೀಮಿತಗೊಳಿಸಿರುವ ಒಂದು ವರ್ಗ ರಾಜಕೀಯ ವೈಕಲ್ಯಗಳ ಪರಿಣಾಮವಾಗಿ ವಿರೂಪಗೊಂಡಿರುವ ಜಾತ್ಯತೀತತೆಯ ಪರಿಕಲ್ಪನೆಯನ್ನು ಸಾರಾಸಗಟಾಗಿ ನಿರಾಕರಿಸುವ ನಿರಂತರ ಪ್ರಯತ್ನ ನಡೆಸುತ್ತಿದೆ. ಜಾತ್ಯತೀತ ಹಣೆಪಟ್ಟಿ ಹೊತ್ತಿರುವ ಪಕ್ಷಗಳ ಸಮಯಸಾಧಕ ರಾಜಕಾರಣದಿಂದ ಭಾರತದಲ್ಲಿ ಜಾತ್ಯತೀತ ಮೌಲ್ಯಗಳು ಬಿಕರಿಯಾಗುತ್ತಿರುವುದು ಸತ್ಯ. ಹಾಗೆಂದ ಮಾತ್ರಕ್ಕೆ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯ ಪರಿಕಲ್ಪನೆಯನ್ನೇ ನಿರಾಕರಿಸುವುದು ಸಮರ್ಥನೀಯವಲ್ಲ. ಹಿಂದುತ್ವ ಮತ್ತು ಬಲಪಂಥೀಯ ರಾಜಕಾರಣದ ಸಮರ್ಥಕರು ಈ ನಿರಾಕರಣೆಯ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು ಮಧ್ಯಮ ಮಾರ್ಗವನ್ನು ಪ್ರತಿಪಾದಿಸುತ್ತಿದ್ದಾರೆ. ಜನಪಂಥೀಯ ಎನ್ನುವುದು ಇದರ ವಿಕೃತ ರೂಪ.
ಯಾವ ಜನರನ್ನು ಉದ್ದೇಶಿಸಿ ನಮ್ಮ ಪಂಥವನ್ನು ರೂಪಿಸಿಕೊಳ್ಳಬೇಕು? ಕರ್ನಾಟಕದ ವಿಧಾನಸಭೆಯಲ್ಲಿ ನಡೆಯುತ್ತಿರುವ ಬೃಹನ್ನಾಟಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಳುವ ವರ್ಗಗಳಿಗೆ, ಜನಪ್ರತಿನಿಧಿಗಳಿಗೆ ‘ಪ್ರಜೆ’ ಎಂಬ ಪದದ ಅರ್ಥ ತಿಳಿದಿದೆಯೇ ಎಂದು ಅನುಮಾನವಾಗುತ್ತದೆ. ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಸ್ಥಾಪಿಸಲು ಫ್ಯಾಶಿಸ್ಟ್ ಶಕ್ತಿಗಳು ಭೂಮಿಕೆಯನ್ನು ನಿರ್ಮಿಸುತ್ತಿದ್ದರೆ ಕರ್ನಾಟಕದಲ್ಲಿ ಈ ಅಪಾಯವನ್ನು ಎದುರಿಸುವ ನೆಪದಲ್ಲಿ ಅರಾಜಕತೆಯನ್ನು ಸೃಷ್ಟಿಸಲಾಗುತ್ತಿದೆ. 13 ತಿಂಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಯಾವ ಜಾತ್ಯತೀತತೆಯನ್ನು ಪ್ರತಿಪಾದಿಸಿದೆ? ಯಾವ ಮೌಲ್ಯಗಳನ್ನು ರಕ್ಷಿಸಿದೆ? ಯಾವ ಫ್ಯಾಶಿಸಂ ವಿರುದ್ಧ ಹೋರಾಡುತ್ತಿದೆ ? ಜಾತ್ಯತೀತತೆಯ ಸಂರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಸಲುವಾಗಿಯೇ ಸರಕಾರ ರಚಿಸಿದ ಮೈತ್ರಿಕೂಟಕ್ಕೆ ತಮ್ಮದೇ ಶಾಸಕರು, ನಾಯಕರು ಕಳೆದ ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರ ಬೆಂಬಲಿಗರಾಗಿದ್ದುದು ತಿಳಿದಿಲ್ಲವೇ ? ಈಗ ನಡೆಯುತ್ತಿರುವ ಪ್ರಹಸನಕ್ಕೆ ಭೂಮಿಕೆ ಸಿದ್ಧವಾಗಿದ್ದು ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲೇ ಎಂಬ ವಾಸ್ತವ ಅರಿವಿಲ್ಲವೇ?
ಖಂಡಿತವಾಗಿಯೂ ಇದೆ. ಆದರೆ ಅಧಿಕಾರ ರಾಜಕಾರಣ ಎಲ್ಲ ತಾತ್ವಿಕ ಮೌಲ್ಯಗಳನ್ನೂ ನುಂಗಿಹಾಕಿದೆ. ಸರಕಾರದ ವಿರುದ್ಧ ಬಂಡಾಯ ಹೂಡುವ ಶಾಸಕರು, ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ರೆಸಾರ್ಟ್‌ಗಳಿಗೆ ಹೋಗುವುದೇಕೆ? ಹೊರರಾಜ್ಯಗಳಲ್ಲಿ ಬಚ್ಚಿಟ್ಟುಕೊಳ್ಳುವುದೇಕೆ ? ಜನಪ್ರತಿನಿಧಿಗಳ ಉತ್ತರದಾಯಿತ್ವ ಇರುವುದು ಅವರನ್ನು ಚುನಾಯಿಸಿದ ಜನತೆಗೋ ಪಕ್ಷದ ನಾಯಕರಿಗೋ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಕ್ಷಗಳು ನಿಮಿತ್ತ ಮಾತ್ರ, ಪ್ರಜೆಗಳೇ ಅಂತಿಮ ಅಲ್ಲವೇ ? ಇರಲಿ ಬಿಡಿ, ಭಾರತದ ಪ್ರಜಾತಂತ್ರ ವ್ಯವಸ್ಥೆ ಇನ್ನೂ ಅಷ್ಟೊಂದು ಪ್ರಬುದ್ಧತೆ ಪಡೆದಿಲ್ಲವೆಂದೇ ಇಟ್ಟುಕೊಳ್ಳೋಣ. ಆದರೆ ತಾವು ಶಾಸಕರಾಗಿಯೋ, ಸಚಿವರಾಗಿಯೋ ಮುಂದುವರಿಯಲು ಸಾಧ್ಯವಿಲ್ಲ ಎಂದು ಸರಕಾರವನ್ನು ಧಿಕ್ಕರಿಸುವ ಪ್ರತಿನಿಧಿಗಳು ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಜನರ ನಡುವೆ ಬಂದು ತಮ್ಮ ಸಮಸ್ಯೆಗಳನ್ನೋ, ಬಿಕ್ಕಟ್ಟುಗಳನ್ನೋ, ಸಂಕಟವನ್ನೋ ಹೇಳಿಕೊಳ್ಳಬೇಕಲ್ಲವೇ? ಆಯ್ಕೆ ಮಾಡುವುದಷ್ಟೇ ನಿಮ್ಮ ಹಕ್ಕು ನಂತರದ್ದೆಲ್ಲವೂ ನಮ್ಮ ಆದ್ಯತೆ ಎನ್ನುವ ವಿಕೃತ ಧೋರಣೆ ಜನಪ್ರತಿನಿಧಿಗಳಿಗೆ ಶೋಭಿಸುವಂತಹುದೇ ?
ಇಂತಹ ಹಲವಾರು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಕರ್ನಾಟಕದ ಭಿನ್ನಮತೀಯ ಶಾಸಕರು ಮುಂಬೈ, ಗೋವಾ, ಕೊಚ್ಚಿ ಮುಂತಾದ ನಗರಗಳ ಐಷಾರಾಮಿ ರೆಸಾರ್ಟ್, ಹೋಟೆಲುಗಳಲ್ಲಿ ತಂಗುವ ಮೂಲಕವೇ ತಮ್ಮ ವಿರೋಧವನ್ನು ವ್ಯಕ್ತಪಡಿಸುವುದೇಕೆ? ಯಾವುದೋ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಜನರ ರಕ್ಷಣೆಯನ್ನೇ ಪಡೆಯಬಹುದಲ್ಲವೇ? ಇದು ನಮ್ಮ ಜನಪ್ರತಿನಿಧಿಗಳಿಂದ ಸಾಧ್ಯವಾಗದ ಮಾತು. ಏಕೆಂದರೆ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಮಾತ್ರವೇ ಇವರು ಜನರ ಮುಂದೆ ಕೈ ಚಾಚುತ್ತಾರೆ. ಇನ್ನುಳಿದ ಸಮಯದಲ್ಲಿ ಪಕ್ಷಗಳ ಮುಂದೆ ಕೈ ಚಾಚುತ್ತಾರೆ. ಪ್ರಜೆಗಳು ಏನು ನೀಡಬಲ್ಲರು? ಒಂದು ಅಮೂಲ್ಯ ಮತ. ಆದರೆ ಪ್ರಬಲ ರಾಜಕೀಯ ಪಕ್ಷಗಳು, ಕಾರ್ಪೊರೇಟ್ ರಾಜಕಾರಣಿಗಳು ಹಣದ ಥೈಲಿಗಳನ್ನೇ ನೀಡುತ್ತಾರೆ. ರಾಜಪ್ರಭುತ್ವದ ಕಾಲದಲ್ಲಿ ರಾಜನಾದವನು ಕೈಚಾಚುವ ವಂದಿಮಾಗಧರಿಗೆ ಇಂತಿಷ್ಟು ವರಹಗಳ ಥೈಲಿಯನ್ನು ನೀಡುತ್ತಿದ್ದುದನ್ನು ನೆನಪಿಸಿಕೊಳ್ಳೋಣ. ಇಂದು ಕಾರ್ಪೊರೇಟ್ ರಾಜಕಾರಣ ರಾಜನ ಸ್ಥಾನದಲ್ಲಿದೆ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ವಂದಿಮಾಗಧರಾಗಿದ್ದಾರೆ. ಎಲ್ಲವೂ ಅಧಿಕಾರ ಪೀಠಕ್ಕಾಗಿ.
 ಇಷ್ಟೆಲ್ಲಾ ರಾದ್ಧಾಂತ ಮಾಡಿದ ಕರ್ನಾಟಕದ ರಾಜಕೀಯ ನಾಯಕರು ಏನನ್ನು ಸಾಧಿಸುತ್ತಾರೆ? ಹೆಚ್ಚೆಂದರೆ ಅಧಿಕಾರ ಪೀಠದ ಹಸ್ತಾಂತರ ನಂತರ ಮತ್ತೊಂದು ಪಕ್ಷದಿಂದ ಆಡಳಿತ. ಮತದಾರರಿಗೆ ಮತ್ತೊಂದು ಚುನಾವಣೆ ಬೇಕಿಲ್ಲ ಎಂದೂ ಜನಪ್ರತಿನಿಧಿಗಳೇ ನಿರ್ಧರಿಸಿಬಿಡುತ್ತಾರೆ. ಕಾರಣ, ಜನಾಭಿಪ್ರಾಯ ಎಂಬ ಪ್ರಕ್ರಿಯೆಗೆ ನಮ್ಮ ದೇಶದಲ್ಲಿ ಮನ್ನಣೆಯೇ ದೊರೆತಿಲ್ಲ. ಜನತೆ ಹೇಗಿದ್ದರೂ ಸ್ವೀಕರಿಸುತ್ತಾರೆ ಎನ್ನುವ ಅಹಮಿಕೆ ಆಳುವ ವರ್ಗಗಳಲ್ಲಿ ಎದ್ದು ಕಾಣುವುದೂ ಈ ಕಾರಣಕ್ಕಾಗಿಯೇ. ಇನ್ನು ಹತಾಶರಾದ ಜನಸಾಮಾನ್ಯರಲ್ಲೂ ಸಹ ‘‘ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಷ್ಟೇ’’ ಎನ್ನುವ ನಿರಾಶೆಯ ಮಾತುಗಳು ಸಾಮಾನ್ಯ. ಇದೇಕೆ ಹೀಗೆ ಎಂದು ಪ್ರಶ್ನಿಸಿಕೊಂಡಾಗ ನಮ್ಮ ಮುಂದೆ ಇಡೀ ರಾಜಕೀಯ ಜಗತ್ತೇ ನಗ್ನವಾಗಿ ನಿಂತುಬಿಡುತ್ತದೆ. ಕಾರ್ಪೊರೇಟ್ ಜಗತ್ತು ಮತ್ತು ಈ ಜಗತ್ತಿನಲ್ಲಿ ಸೃಷ್ಟಿಯಾಗುವ ಹಣಕಾಸು ಬಂಡವಾಳ ದೇಶದ ರಾಜಕೀಯ ಲೋಕವನ್ನು ಹೇಗೆ ಆಕ್ರಮಿಸಿಕೊಂಡಿದೆ ಎಂದು ಕಳೆದ ಲೋಕಸಭಾ ಚುನಾವಣೆಗಳು ನಿರೂಪಿಸಿವೆ. ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಿ ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲು ವೇದಿಕೆಯಾಗಬೇಕಾದ ಮಾಧ್ಯಮಗಳು (ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು) ಕಾರ್ಪೊರೇಟ್ ರಾಜಕಾರಣದ ವಶದಲ್ಲಿರುವುದು ಈ ಆಕ್ರಮಣ ಮತ್ತು ಅತಿಕ್ರಮಣವನ್ನು ಮತ್ತಷ್ಟು ಬಲಪಡಿಸಿದೆ ಎನ್ನಬಹುದು.
ರಾಜಕೀಯ ಪಕ್ಷಗಳು ಮತ್ತು ನಾಯಕರ ಆದ್ಯತೆಗಳು ಈಗ ಸ್ಪಷ್ಟವಾಗಿದೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಕಾರ್ಪೊರೇಟ್ ಧಣಿಗಳಿಗೆ ಒಪ್ಪಿಸಿ, ದೇಶದ ಅರ್ಥವ್ಯವಸ್ಥೆಯನ್ನು ಜಾಗತಿಕ ಹಣಕಾಸು ಬಂಡವಾಳದ ವಾರಸುದಾರರಿಗೆ ಒಪ್ಪಿಸಿ, ಶಾಸನ ಸಭೆಗಳಲ್ಲಿ ಕುಳಿತು ಕಾರ್ಪೊರೇಟ್ ಉದ್ಯಮಿಗಳಿಗೆ ನೆರವಾಗುವಂತಹ ಶಾಸನಗಳನ್ನು, ಕಾನೂನುಗಳನ್ನು ಜಾರಿಗೊಳಿಸುವುದು ಮೊದಲ ಆದ್ಯತೆ. ಈ ಶಾಸನಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ, 70 ವರ್ಷಗಳ ಕಾಲ ಜಾರಿಯಲ್ಲಿದ್ದ, ದುಡಿಯುವ ವರ್ಗಗಳನ್ನು, ಕಾರ್ಮಿಕರನ್ನು ರಕ್ಷಿಸುವಂತಹ, ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಬಂಡವಾಳಿಗರಿಗೆ ಸುಗಮ ಹಾದಿ ಕಲ್ಪಿಸುವುದು ಎರಡನೆಯ ಆದ್ಯತೆ. ಈ ನೀತಿಗಳ ವಿರುದ್ಧ ಹೋರಾಡುವ, ಪ್ರತಿರೋಧ ವ್ಯಕ್ತಪಡಿಸುವ, ಪ್ರತಿಭಟಿಸುವ ಜನಸಾಮಾನ್ಯರನ್ನು ದಮನಿಸಲು ಸೂಕ್ತ ಕಾನೂನು ರಚಿಸುವುದು ಮತ್ತು ಕರಾಳ ಶಾಸನಗಳನ್ನು ಮುಕ್ತವಾಗಿ ಬಳಸುವುದು ಮೂರನೆಯ ಆದ್ಯತೆ. ಕೆಳಸ್ತರದ ಜನತೆ ಯಾವುದೇ ಹೋರಾಟ ನಡೆಸದಂತೆ, ಪ್ರತಿರೋಧ ವ್ಯಕ್ತಪಡಿಸದಂತೆ, ಆಕ್ರೋಶಕ್ಕೆ ಒಳಗಾಗದಂತೆ ತಡೆಗಟ್ಟಲು ಬಜೆಟ್ ಮೂಲಕ ಕೆಲವು ಸವಲತ್ತು, ರಿಯಾಯಿತಿ, ವಿನಾಯಿತಿ ಮತ್ತು ಸೌಕರ್ಯಗಳನ್ನು ಬಳುವಳಿಯಂತೆ ನೀಡಿ ತೆಪ್ಪಗಾಗಿಸುವುದು ನಾಲ್ಕನೆಯ ಆದ್ಯತೆ. ಇಷ್ಟೆಲ್ಲಾ ಮಾಡಿದರೂ ಎಲ್ಲೋ ಒಂದೆಡೆ ಜನತೆಯ ಆಕ್ರೋಶದ ಕಿಡಿ ಕಂಡುಬಂದರೆ ದೇಶಭಕ್ತಿ, ಅಖಂಡತೆ ಮತ್ತು ರಾಷ್ಟ್ರಹಿತದ ಹೆಸರಿನಲ್ಲಿ ಅಂತಹ ಆಕ್ರೋಶದ ಕಿಡಿಗಳನ್ನು ನಂದಿಸಲು ದೇಶದ್ರೋಹದ ಆರೋಪವನ್ನು ಹೊರಿಸುವುದು ಐದನೆಯ ಆದ್ಯತೆ. ಇದು ಕಳೆದ ಐದು ವರ್ಷಗಳಲ್ಲಿ ಕಂಡಂತಹ ಸತ್ಯ.
ಈ ಆದ್ಯತೆ ಮತ್ತು ಆಯ್ಕೆಗಳ ನಡುವೆಯೇ ಕರ್ನಾಟಕದ ಶಾಸಕರು ವಿಧಾನಸಭೆಯನ್ನು ಮತ್ತೊಮ್ಮೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದ್ದಾರೆ. ಈಗ ಪ್ರಜ್ಞಾವಂತ ನಾಗರಿಕ ಸಮಾಜ ತನ್ನ ಆದ್ಯತೆ ಮತ್ತು ಆಯ್ಕೆಗಳನ್ನು ಕುರಿತು ಆಲೋಚಿಸಬೇಕಿದೆ. ನಮ್ಮ ಮುಂದಿರುವ ಪ್ರಶ್ನೆ ಯಾವ ಪಕ್ಷ ಆಳಬೇಕು ಎನ್ನುವುದಲ್ಲ. ಎಂತಹ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಬೇಕು ಎನ್ನುವುದು. ಈಗಾಗಲೇ ಭಯೋತ್ಪಾದನೆಯ ಆರೋಪ ಹೊತ್ತವರನ್ನು, ತಲೆ ಕಡಿಯುವವರನ್ನು, ಭ್ರಷ್ಟಾಚಾರಿಗಳನ್ನು, ಸಂವಿಧಾನ ವಿರೋಧಿಗಳನ್ನು, ಸೆರೆವಾಸ ಕಂಡ ಅಪರಾಧಿಗಳನ್ನು, ಸಾಮೂಹಿಕ ಹತ್ಯೆಯ ರೂವಾರಿಗಳನ್ನು ಸಂಸತ್ತಿನಲ್ಲಿ ವಿರಾಜಮಾನರಾಗಲು ಅವಕಾಶ ನೀಡಿದ್ದೇವೆ. ಇನ್ನು ಐದು ವರ್ಷ ಅನ್ಯ ಮಾರ್ಗವಿಲ್ಲದೆ ಮೌನ ಪ್ರೇಕ್ಷಕರಂತೆ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿಯಾದರೂ ನಮ್ಮ ಆಯ್ಕೆಯ ಹಕ್ಕನ್ನು ಸಾರ್ಥಕಪಡಿಸಿಕೊಳ್ಳಬಹುದಲ್ಲವೇ? ಇಲ್ಲಿಯೂ ಸೆರೆಮನೆಯ ಅತಿಥಿಗಳಿದ್ದಾರೆ. ಭ್ರಷ್ಟರಿದ್ದಾರೆ. ಜನದ್ರೋಹಿಗಳಿದ್ದಾರೆ. ಸಮಾಜ ದ್ರೋಹಿಗಳಿದ್ದಾರೆ. ಇವರೇ ನಮ್ಮ ಮುಂದೆ ಮತ್ತೊಮ್ಮೆ ಕೈಚಾಚುತ್ತಾರೆ. ಬಾವುಟ, ಬ್ಯಾನರ್ ಮತ್ತು ಬಣ್ಣ ಬದಲಾಗಿರುತ್ತದೆ. ಒಳಸುಳಿ ಯಥಾವತ್ತಾಗಿರುತ್ತದೆ. ಈ ಒಳಸುಳಿಯನ್ನು ಗ್ರಹಿಸುವ ಒಳನೋಟ ನಮ್ಮಾಳಗಿರಬೇಕಲ್ಲವೇ? ಶರಾವತಿಯನ್ನೇ ನುಂಗಲು ಸಿದ್ಧರಾಗುತ್ತಿರುವ ಕಾರ್ಪೊರೇಟ್ ಉದ್ಯಮಿಗಳು, ಅರಣ್ಯ ಪ್ರದೇಶವನ್ನು ಮರುಭೂಮಿಯನ್ನಾಗಿ ವಾಡಲು ಸಜ್ಜಾಗುತ್ತಿರುವ ಬಂಡವಾಳಿಗರು, ಜಲಸಂಪನ್ಮೂಲಗಳನ್ನು ನಿಯಂತ್ರಿಸಲು ತಯಾರಾಗುತ್ತಿರುವ ವಾಣಿಜ್ಯೋದ್ಯಮಿಗಳು ನಮ್ಮ ಮುಂದೆ ರಾಜಕೀಯ ಆಯ್ಕೆಗಳನ್ನು ಮಂಡಿಸುತ್ತಾರೆ. ನಾವು ನಮ್ಮ ಆದ್ಯತೆಗಳಿಗೆ ಸ್ಪಂದಿಸಬೇಕೋ, ಅವರ ಆದ್ಯತೆಗಳಿಗೆ ಮನ್ನಣೆ ನೀಡಬೇಕೋ ಎಂದು ನಿರ್ಧರಿಸಬೇಕಾಗುತ್ತದೆ.
ಸಾಮಾಜಿಕ ನ್ಯಾಯ, ಭ್ರಾತೃತ್ವ, ಸಹಬಾಳ್ವೆ, ಸಮ ಸಮಾಜ, ಪರಿಸರ ಸಂರಕ್ಷಣೆ, ದುರ್ಬಲ ವರ್ಗಗಳ ಹಿತಾಸಕ್ತಿ, ಶೋಷಿತ ವರ್ಗಗಳ ಏಳಿಗೆ ಮತ್ತು ಜನಸಾಮಾನ್ಯರ ಹಸನಾದ ಬದುಕು ನಮ್ಮ ಆದ್ಯತೆಯಾದರೆ ಮಾತ್ರ ವಿಧಾನಸೌಧ ತನ್ನ ವರ್ಚಸ್ಸು ಮತ್ತು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಸಮಸ್ತ ಕರ್ನಾಟಕದ ಜನತೆ ರಾಜಕೀಯ ಸಂತೆಯಲ್ಲಿ ನಿಂತ ನಗ್ನ ಸಂತರಾಗಿಬಿಡುತ್ತೇವೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News

ಜಗದಗಲ
ಜಗ ದಗಲ