ಅಭಿವೃದ್ಧಿ ಕಾರ್ಯಗಳಿಗೆ ಸರಕಾರದೊಂದಿಗೆ ಜನರ ಸಹಭಾಗಿತ್ವವೂ ಅಗತ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ

Update: 2019-07-13 06:09 GMT

ಮೈಸೂರು, ಜು.13: ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಕೆಲಸವಷ್ಟೇ ಸಾಲದು, ಜನರ ಸಹಭಾಗಿತ್ವವೂ ಅಗತ್ಯ ಎಂದು ಗೌರವಾನ್ವಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡ ಅಭಿಪ್ರಾಯಿಸಿದ್ದಾರೆ.

ನಗರದ ಮಾನಸಗಂಗೋತ್ರಿ ಆವರಣದಲ್ಲಿರುವ  ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್.ಐ.ಇ.) ಆವರಣದಲ್ಲಿ ಶನಿವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಸಭಾಂಗಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ನಾವುಗಳು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಸಹಕಾರವು ಮುಖ್ಯವಾಗಿರುತ್ತದೆ. ಸರಕಾರ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಜನರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮಕ್ಕಳು ಒಳ್ಳೆಯ ವಿದ್ಯಾವಂತರಾಗುವ ಜೊತೆ ವ್ಯಕ್ತಿತ್ವ ವಿಕಸನ ಮತ್ತು ಕೌಶಾಭಿವೃದ್ಧಿಯನ್ನು ಹೇಗೆ ಬೆಳಸಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮೈಸೂರು ಸುಂದರ ನಗರ, ಇಷ್ಟೊಂದು ಸುಂದರವಾಗಿರಲು ಮೈಸೂರು ರಾಜರ ಕೊಡುಗೆ ಅಪಾರ, ಅವರ ದೂರದೃಷ್ಟಿತ್ವ ಕೆಲಸಗಳು ಮಾದರಿ ಎಂದರು.

ಮೈಸೂರು ಸುಂದರದ ಜೊತೆಗೆ ಸ್ವಚ್ಛ ನಗರಿ ಕೂಡ, ನಾನು ಕೇಂದ್ರ ನಗರಾಭಿವೃದ್ಧಿ ಸಚಿವನಾಗಿದ್ದ ಅವದಿಯಲ್ಲಿ ನಂ.1 ಸ್ವಚ್ಛ ನಗರಿ ಎಂಬ ಬಿರುದನ್ನು ಪಡೆದಿತ್ತು ಎಂದು ಸ್ಮರಿಸಿದರು.

ನಾನು ಬಹಳ ಸಣ್ಣವಯಸ್ಸಿನಲ್ಲಿ ಒಮ್ಮೆ ಮೈಸೂರಿಗೆ ಬಂದಿದ್ದೆ, ಇಲ್ಲಿನ ವಾತಾವರಣ ನೋಡಿ ಸಂತೋಷಗೊಂಡಿದ್ದೆ. ಅಂತಹದ್ದೇ ವಾತಾವರಣ ಈಗಲೂ ಇದೆ ಎಂದು ಸಂತಸಪಟ್ಟರು.

ಇಲ್ಲಿನ ದಾಸಪ್ರಕಾಶ್ ಹೋಟೆಲ್ ನಲ್ಲಿ ನಾನು ವಾಸ್ತವ್ಯ ಮಾಡುತಿದ್ದೆ. ಪಕ್ಕದಲ್ಲೇ ಇದ್ದ ಮಾಂಸಹಾರಿ ಹೋಟೆಲ್ ಗೆ ಹೋಗಿ ರಾಗಿ ಮುದ್ದೆ, ನಾಟಿಕೋಳಿ ಸಾರನ್ನು ಸವಿಯುತ್ತಿದ್ದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News