ಮಧ್ಯಮ ವರ್ಗದ ಮತದಾರನೂ, ಜನನಾಯಕನೂ...

Update: 2019-07-13 15:10 GMT

ನಾಡಿನ ಹಿರಿಯ ಚಿಂತಕ, ಪತ್ರಕರ್ತ ಪಿ. ಲಂಕೇಶ್ ಅವರು 1991ರಲ್ಲಿ ಬರೆದ ರಾಜಕೀಯ ಲೇಖನ ಇದು. ಮತದಾರರ ಮನಸ್ಥಿತಿ ಮತ್ತು ಜನಪ್ರತಿನಿಧಿಗಳ ಸಮಯ ಸಾಧಕತನ, ದುರ್ಬಲಗೊಳ್ಳುತ್ತಿರುವ ಜನತಂತ್ರ ವ್ಯವಸ್ಥೆ ಇವುಗಳನ್ನು ಇಟ್ಟುಕೊಂಡು ಬರೆದ ಟೀಕೆ-ಟಿಪ್ಪಣಿ, ಸದ್ಯದ ಕರ್ನಾಟಕ ರಾಜಕೀಯಕ್ಕೆ ಕನ್ನಡಿ ಹಿಡಿಯುವಂತಿದೆ.

ಮೊನ್ನೆ ಎಚ್.ಡಿ. ದೇವೇಗೌಡರ ಕಡೆಯವರೊಬ್ಬರು ಬಂದರು. ಸೊಮ್ಮನೆ ಲೋಕಾಭಿರಾಮದ ಮಾತಾಡಲೂ ಬಂದಿರಬೇಕೆಂದು ತಿಳಿದಿದೆ. ಆತ ಕೆಲವು ನಿಮಿಷಗಳಲ್ಲೇ ಬಂದಿದ್ದಕ್ಕೆ ಕಾರಣ ನೀಡಿದರು. ‘‘ಸದ್ಯದಲ್ಲೇ ದೇವೇಗೌಡರನ್ನು ಅಭಿನಂದಿಸಲು ಒಂದು ಪುಟ್ಟ ಸಭೆ ಏರ್ಪಡಿಸುತ್ತಿದ್ದೇವೆ. ತುಂಬ ಪುಟ್ಟ, ಅಭಿಮಾನಿಗಳುಳ್ಳ ಸಭೆ. ಅದನ್ನು ಉದ್ದೇಶಿಸಿ ನೀವು ಮಾತಾಡಬೇಕು’’ ಅಂದರು. ನಾನು ಹೇಳಬೇಕೆಂದಿದ್ದೆ. ‘‘ನಾನು ದೇವೇಗೌಡರ ಕಟ್ಟಾ ಅಭಿಮಾನಿ ಏನಲ್ಲ. ಅಲ್ಲದೇ ಒಬ್ಬ ಸೊತ್ತಿದ್ದಾಗ ನನಗೆ ಅಯ್ಯಾ ಏನಿಸಿದರೂ ಆತ ಗೆದ್ದೊಡನೆ ಅವನ ಬಗ್ಗೆ ನಿಷ್ಟುರತೆ ಬೆಳೆಯುತ್ತೆ. ಅಷ್ಟಕ್ಕೂ ನಾನು ಮಾತಾನಾಡುವುದೇನಿದೆ ಹೇಳಿ.’’

ಆದರೆ ಹಾಗೆಂದು ಹೇಳಲಿಲ್ಲ. ಅನಗತ್ಯವಾಗಿ ಮನ ನೋಯಿಸುವುದಾಗಲಿ, ‘‘ಸುಮ್ಮನೇ ಹೋಗಿ’’ ಎಂದು ಆತನಿಗೆ ಬಾಗಿಲು ತೋರಿಸುವುದಾಗಲಿ ಇಷ್ಟವಾಗಲಿಲ್ಲ. ಸುಮ್ಮನೇ ಕೂತು ಯೋಚಿಸಿದೆ. ನಾನು ಆ ಸಭೆಗೆ ಹೋದರೆ ಏನೇನೂ ಹೇಳಬಹುದೆಂದು ನೋಡಿದೆ. ದೇವೇಗೌಡರನ್ನು ನನಗಿಂತ ಚೆನ್ನಾಗಿ ಬಲ್ಲವರು ಭಾಷಣಕಾರರಾಗಿ ಬರುವಂತೆ ಕಾಣುತ್ತದೆ. ಅವರು ಹೇಳಬಹುದಾದ್ದನ್ನೇ ನಾನು ಹೇಳಿ ಉಪಯೋಗವಿಲ್ಲ. ಹಾಸನ, ಹೊಳೆನರಸೀಪುರದ ಜನರೊಂದಿಗೆ ಬೆರೆತು ಹೊಗಿರುವ ದೇವೇಗೌಡರು ಈ ಸಲ ಎಚ್.ಸಿ.ಶ್ರೀಕಂಠಯ್ಯನವರಂತಹ ದೊಡ್ಡ ಆಸಾಮಿಯನ್ನು ಸೋಲಿಸಿದ್ದಾರೆ. ಇತ್ತೀಚೆಗೆ ಶ್ರೀಕಂಠಯ್ಯ ಸೊತೇ ಇರಲಿಲ್ಲ. ದೇವೇಗೌಡ, ಶ್ರೀಕಂಠಯ್ಯ ಒಂದೇ ಜಿಲ್ಲೆ ಮತ್ತು ಜಾತಿಗೆ ಸೇರಿದ್ದರು. ಇಬ್ಬರ ನಡುವೆ ಅಪಾರ ವ್ಯತ್ಯಾಸವಿದೆ. ದೇವೇಗೌಡರು ವಿರೋಧಿ ರಾಜಕಾರಣದಿಂದ ಬಂದವರು; ಕುಡಿಯುವ, ಸೇದುವ, ವ್ಯಭಿಚಾರ ಮಾಡುವ ಅಭ್ಯಾಸವೇ ಇಲ್ಲದವರು. ಹಾಗೆಯೇ ದೇವೇಗೌಡ ಯಾವ ಕ್ರೀಡೆಯಲ್ಲ್ಲೂ ಆಸಕ್ತಿ ಇಲ್ಲದ, ರಸಿಕತೆಗೆ ಸೊಲ್ಲದ, ಸಾಹಿತ್ಯದ ಬಗ್ಗೆ ತಲೆಕೆಡಿಸಿಕೊಳ್ಳದಿರುವ ಮನುಷ್ಯ. ಆದರೆ ಶ್ರೀಕಂಠಯ್ಯನವರ ಬಗ್ಗೆ ನಾನು ಕೇಳಿಬಲ್ಲಂತೆ ಆತ ಟಿನ್ನಿಸ್ ಆಡುವ, ಬದುಕನ್ನು ಇಡೀ ಇಡಿಯಾಗಿ ಸವಿಯುವ, ಹಾಸ್ಯ, ದುಃಖ, ಠೇಂಕಾರ-ಎಲ್ಲವನ್ನೂ ತೋರುವ ಮನುಷ್ಯ. ದೇವೇಗೌಡ ಹಸುವಿನ ರೀತಿಯಾದರೆ ಶ್ರೀಕಂಠಯ್ಯ ಹುಲಿಯ ಥರ. ಹುಲಿಗಿರುವ ಆಕರ್ಷಣೆ, ಸಿಟ್ಟು ಆರ್ಭಟವನ್ನೆಲ್ಲ ಶ್ರೀ ಕಂಠಯ್ಯ ಹೊಂದಿದ್ದಾರೆ. ದೇವೇಗೌಡ ಹಸುವಿನಂತೆ ಎಂದು ಹೇಳಿದರೆ ಹಸುವಿಗೆ ಅನ್ಯಾಯವಾಗುತ್ತದೆ. ಯಾವುದೇ ಹುಲಿ ಅಥವಾ ಆಕಳಿಗೆ ಇಲ್ಲದ ಅಧಿಕಾರದಾಹ, ಮಹತ್ವಾಕಾಂಕ್ಷೆ ದೇವೇಗೌಡರಿಗಿದೆ. ಅನೇಕರಿಗನ್ನಿಸುವಂತೆ ದೇವೇಗೌಡರ ಬದುಕಿನ ಏಕಮಾತ್ರ ಉದ್ದೇಶ ನಾಯಕನಾಗುವುದು. ಹಾಗೆಯೇ ಅವರ ಬದುಕಿನ ದ್ವಂದ್ವವೇನೆಂದರೆ 1970ರಿಂದ ಇಲ್ಲಿಯವರೆಗೆ ದೇವೇಗೌಡರು ಅಧಿಕಾರಕ್ಕಾಗಿ ಕೈಚಾಚಿದಷ್ಟೂ ಅದು ಮರೀಚಿಕೆಯಾಗಿಯೇ ಉಳಿದಿದೆ. 1977ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಅವರ ಪಕ್ಷದ ಮುಖಂಡರಿಗೆ ಗೌಡರ ಈ ಛಾನ್ಸ್ ಕಂಡು ಹೊಟ್ಟೆಯುರಿ ಹುಟ್ಟಿಕೊಂಡು ಒಳಜಗಳ ಶುರುವಾಗಿ ಅವರ ಜನತಾ ಪಕ್ಷ ಅಧಿಕಾರದಿಂದ ಹೊರಗೇ ಉಳಿಯಿತು. 1983ರ ಹೊತ್ತಿಗೆ ಕರ್ನಾಟಕದ ಜನತೆಯ ಮನೋಭಾವವೇ ಬದಲಾಗಿತ್ತು. ಯಾವುದೇ ಜಾತಿಯನ್ನು ಪ್ರತಿನಿಧಿಸುವ ನಾಯಕನಿಗೆ ಬದಲು ಯಾರಲ್ಲೂ ಅಸೂಯೆ ಹುಟ್ಟಿಸದಿರುವ ಅಲ್ಪಸಂಖ್ಯಾತರ ನಾಯಕನಿಗಾಗಿ ಈ ನಾಡು ಹಂಬಲಿಸಿತು. ಅಂತಹ ವೇಳೆಯಲ್ಲಿ ರಾಚಯ್ಯ, ನಝೀರ್‌ಸಾಬ್ ತರಹದವರು ನಾಯಕರಾಗುವುದು ಸಾಧ್ಯವಾಯಿತು. ಹೆಗಡೆ ಒಳಗೊಳಗೆ ತಂತ್ರ ಹೂಡಿ ಕುರ್ಚಿ ಪಡೆದುಕೊಂಡರು. ಒಮ್ಮೆ ಕುರ್ಚಿ ಹಿಡಿದ ಹೆಗಡೆಯವರನ್ನು ಅಲ್ಲಾಡಿಸುವುದರಲ್ಲೇ ದೇವೇಗೌಡ, ಬೊಮ್ಮಾಯಿ ಮುಂತಾದವರ ಶಕ್ತಿ ವ್ಯಯವಾಯಿತು. ಸುಮಾರು ಕಾಲು ಶತಮಾನದಿಂದ ಕನಸುತ್ತಲೇ ಇರುವ ದೇವೇಗೌಡರು ಮತ್ತು ಇವರಂತಹವರು ಇವತ್ತು ಸ್ವಲ್ಪ ನಿಂತು ಯೋಚಿಸುವುದು ಒಳ್ಳೆಯದು. ಮತದಾರ ಬದಲಾಗಿದ್ದಾನೆ. ಹೊಸ ಜನಾಂಗವೊಂದು ಭವಿಷ್ಯದ ಬಾಗಿಲನ್ನು ತಟ್ಟುತ್ತಿದೆ. ಈ ಹೊಸ ಜನಾಂಗ ಮತ್ತು ಮಧ್ಯಮ ವರ್ಗದತ್ತ ನಾವು ಸರಿಯಾಗಿ ನೋಡದಿದ್ದರೆ ದೊಡ್ಡ ತಪ್ಪು ಮಾಡುತ್ತೇವೆ. 1984ರಲ್ಲಿ ಅಧಿಕಾರಕ್ಕೆ ಬಂದ ರಾಜೀವ್‌ಗಾಂಧಿ ಮುಕ್ತ ಆರ್ಥಿಕತೆಯ ಬಗ್ಗೆ, ಇಪ್ಪತ್ತೊಂದನೇ ಶತಮಾನದ ಬಗ್ಗೆ ಮಾತನಾಡಿದಾಗ ಜನ ತಮಾಷೆ ಮಾಡಿದರೂ ಅದರ ಇಂಗಿತವನ್ನು ಅವರು ಗ್ರಹಿಸಿದ್ದರು. ಸುಮಾರು ಅರ್ಧ ಶತಮಾನದಷ್ಟು ಕಾಲ ಈ ದೇಶದಲ್ಲಿ ಓಡಾಡಿದ ಕಾರು ಎರಡೇ -ಒಂದು ಫಿಯೆಟ್, ಇನ್ನೊಂದು ಅಂಬಾಸಿಡರ್. ಇದು ಈ ದೇಶದಲ್ಲಿ ನಡೆಯುತ್ತಿದ್ದ ರಾಜಕಾರಣಿಗಳ, ಅಧಿಕಾರಿಗಳ, ಶ್ರೀಮಂತರ ಕುಚೋದ್ಯ ತೋರಿತು. ನಮ್ಮ ಯುವಕರು ವಿಜ್ಞಾನದಲ್ಲಿ ಪ್ರತಿಭಾವಂತರಾದರೂ ಅವರು ಕಾರು ತಯಾರಿಸುವಂತಿಲ್ಲ. ಲೈಸನ್ಸ್, ಪರ್ಮಿಟ್ ರಾಜ್ಯದಲ್ಲಿ ಪ್ರೀಮಿಯರ್ ಮತ್ತು ಹಿಂದೂಸ್ತಾನ್ ಮೋಟಾರ್ಸ್‌ಗೆ ಮಾತ್ರ ತಯಾರಿಕೆಯ ಲೈಸೆನ್ಸ್. ಈ ಕಾರ್ ಕೈಗಾರಿಕೆ ಸಾಂಕೇತಿಕವಾದ್ದರಿಂದ ಹೇಳುತ್ತಿದ್ದೇನೆ- ಸರಕಾರದ ಸ್ವಾರ್ಥದಿಂದಾಗಿ ಇಲ್ಲಿ ಆಟೊಮೊಬೈಲ್ ಇಂಡಸ್ಟ್ರಿ ತಲೆಯೆತ್ತಲೇ ಇಲ್ಲ. ಇವತ್ತಿಗೂ ಲಾರಿ ತಂತ್ರಜ್ಞಾನವನ್ನು ಕೂಡ ಬೆಳೆಸಿಕೊಳ್ಳದ ನಮ್ಮ ಜನ ವಿದೇಶದಿಂದ ಕಾರಿನ ಎಲ್ಲ ಭಾಗಗಳನ್ನೂ ತಂದು ಜೋಡಿಸುವುದು ಮಾತ್ರ ಸಾಧ್ಯವಾಗಿದೆ. ಇದೇ ಎಲ್ಲಾ ವಲಯಗಳಲ್ಲೂ ಆಯಿತು. ಸರಕಾರ ದೊಡ್ಡ ಉದ್ಯಮಿ; ಮುಖ್ಯ ಕಾರ್ಖಾನೆಗಳೆಲ್ಲ ಸರಕಾರದ ಹಿಡಿತದಲ್ಲಿ ಬರುಬರುತ್ತ ಬೆಳೆದ ಭ್ರಷ್ಟತೆಯಿಂದಾಗಿ, ಸರಕಾರಕ್ಕೆ ಪ್ರತಿಭೆ ಎನ್ನುವುದು ಇರಲು ಸಾಧ್ಯವಿಲ್ಲವಾದ್ದರಿಂದಾಗಿ ಇಡೀ ದೇಶ ದಿವಾಳಿಯ ಅಂಚು ತಲುಪಿತು. ಭಾರತದಲ್ಲೀಗ ನಾಲ್ಕು ಕೋಟಿಯಷ್ಟು ಜನ ತರುಣತರುಣಿಯರು ನಿರುದ್ಯೋಗಿಗಳು.

ರಾಜೀವ್ ಖಾಸಗೀಕರಣ, ಆಧುನಿಕತೆ, ಇಪ್ಪತ್ತೊಂದನೇ ಶತಮಾನ- ಈ ಬಗ್ಗೆ ಹೇಳಿದ್ದಕ್ಕೇ ದೇಶ ರೋಮಾಂಚನಗೊಂಡಿತು. ಕಾಂಗ್ರೆಸ್ ಪಕ್ಷ ಮತ್ತು ಅಧಿಕಾರ ಶಾಹಿ ಈ ರಾಜೀವರ ಕನಸಿಗೆ ಬದ್ಧವಾಗುವ ಸ್ಥಿತಿಯಲ್ಲಿರಲಿಲ್ಲ. ಇದರಿಂದಾಗಿ ರಾಜೀವ್ ತಮ್ಮ ಪಕ್ಷ ಮತ್ತು ದೇಶವನ್ನು ಬದಲಿಸುವುದಕ್ಕೆ ಬದಲು ತಾವೇ ಬದಲಾದರು.

ಇವತ್ತಿನ ಪರಿಸ್ಥಿತಿಯ ಕಠೋರ ವಾಸ್ತವತೆಯನ್ನು ಅರಿಯದ ಯಾವನೂ ರಾಜಕೀಯ ಮಾಡಲಾಗುವುದಿಲ್ಲ. ಇದು ಎಲ್ಲ ರಾಜಕಾರಣಿಗಳಿಗೆ ಗೊತ್ತಾಗಬೇಕು. ವಿದೇಶಗಳಲ್ಲಿ ಏನಾಗುತ್ತಿದೆ ಎಂಬುದು ನಮ್ಮ ಮಧ್ಯಮವರ್ಗಕ್ಕೆ ಗೊತ್ತಾಗಿದೆ; ರೇಡಿಯೋ, ಟೆಲಿವಿಶನ್, ವೃತ್ತಪತ್ರಿಕೆಗಳು ದಿನನಿತ್ಯ ಈ ಬಗ್ಗೆ ಹೇಳುತ್ತಿವೆ. ಜಪಾನ್ ಕೇವಲ ಐವತ್ತು ವರ್ಷಗಳಲ್ಲಿ ಅಮೆರಿಕಕ್ಕೆ ಸವಾಲೊಡ್ಡುವ ಗೈರತ್ತು ಗಳಿಸಿದೆ; ದಕ್ಷಿಣ ಕೊರಿಯಾ, ಮಲೇಶಿಯಾ, ಇಂಡೋನೇಶಿಯಾ, ಥಾಯ್ಲೆಂಡ್‌ಗಳಂಥ ದೇಶಗಳು ಕೂಡ ತ್ರಾಣವುಳ್ಳ ದೇಶಗಳಾಗುತ್ತಿವೆ. ಅಮೆರಿಕ ತನ್ನ ಸಂಪತ್ತಿನ ಜೊತೆಗೆ ಹೊಸ ಅನುಭವದತ್ತ ಹೋಗುತ್ತಿದ್ದರೆ ನಾರ್ವೆ, ಸ್ವೀಡನ್ ತರಹದ ದೇಶಗಳ ಸಮಾನತೆ, ಸಾಮಾಜಿಕ ನ್ಯಾಯವನ್ನು ದಕ್ಕಿಸಿಕೊಂಡು ಸಂಪತ್ತು, ಸೌಖ್ಯ ಎರಡನ್ನೂ ಪಡೆದುಕೊಳ್ಳುತ್ತಿವೆ. ಆದ್ದರಿಂದಲೇ ನಮ್ಮ ಜನಕ್ಕೆ ಯಥಾಪ್ರಕಾರದ ರಾಜಕಾರಣಿಗಳ ಮಾತೆಲ್ಲ ಸುಳ್ಳುಗಳಂತೆ, ಬೊಗಳೆಯಂತೆ ಕೇಳುತ್ತಿವೆ. ನಮ್ಮ ರಾಜಕೀಯಕ್ಕೆ ಮಾರ್ಗದರ್ಶನ ಮಾಡುವ ಶಿಕ್ಷಕರು, ಇಂಜಿನಿಯರ್, ವೈದ್ಯರು, ಗುಮಾಸ್ತರು, ವಿದ್ಯಾರ್ಥಿಗಳು ಮತ್ತು ಕೈಗಾರಿಕೋದ್ಯಮಿಗಳನ್ನೊಳಗೊಂಡ ಮಧ್ಯಮವರ್ಗ ಇವತ್ತು ಹೊಸ ಜೀವನಕ್ಕಾಗಿ, ಹೊಸ ರಾಜಕೀಯಕ್ಕಾಗಿ ಕಾತರಿಸುತ್ತದೆ. ಕಳೆದ ನಾಲ್ಕು ದಶಕದಿಂದ ಇದು ಉಪ್ಪಾರ್ರ ಓಟು, ಇದು ಕುರುಬರ ಓಟು- ಎಂದು ಹತಾಶೆ ಭುಗಿಲೆದ್ದು ನಿಂತಿದೆ. ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಕೂಡ ಮಧ್ಯಮವರ್ಗವಿದೆ. ಅವರು ಕೂಡ ಹೊಸ ಬದುಕಿಗಾಗಿ ಹಂಬಲಿಸುತ್ತಿದ್ದಾರೆ ಎಂಬುದನ್ನು ರಾಜಕಾರಣಿ ಕೂಡಲೇ ಅರಿತರೆ ಒಳ್ಳೆಯದು. ಅತ್ಯಂತ ಪ್ರತಿಭಾವಂತ ಮಕ್ಕಳನ್ನು ಹೆರುವ ಎಲ್ಲಾ ಸ್ತರದ, ಜಾತಿಯ ಜನಕ್ಕೆ ಈ ರಾಜಕಾಣಿಗಳ ಆದಿಮಾನವ ಸ್ವರೂಪ ಕಂಡು ಸಿಟ್ಟು ಬರುತ್ತದೆ. ಆದ್ದರಿಂದಲೇ ಅತ್ಯಂತ ನಾಜೂಕಾದ, ಪ್ರಿಯವಾದ ಬಲೆಬೀಸಿದ್ದೇವೆಂದು ಮಂಡಲ್ ಹಿಡಿದು ಓಡಾಡಿದ ವಿ.ಪಿ.ಸಿಂಗ್ ಮತ್ತು ಗೆಳೆಯರು ಹೊಡೆತ ತಿಂದಿದ್ದಾರೆ. ಸರಕಾರ ಮಾಡಲಾಗ ದಿದ್ದರೆ ತಾನೇ ಮಾಡಿಕೊಳ್ಳುವ ಆತುರ, ಹುಮ್ಮಸ್ಸನ್ನುಳ್ಳ ಈ ಮಧ್ಯಮ ವರ್ಗ ಭ್ರಷ್ಟಗೊಳ್ಳಲು ಇದೂ ಒಂದು ಕಾರಣ. ಹಣವಿಲ್ಲದೆ ಇಲ್ಲಿ ವಾಸಿಸಲು ಸೂರು ಕೂಡ ಸಿಕ್ಕುವುದಿಲ್ಲವಾದರೆ ಈ ಮಧ್ಯಮವರ್ಗ ಶತಾಯ ಗತಾಯ ಹಣ ಪಡೆದುಕೊಳ್ಳುತ್ತದೆ. ಹೀಗೆ ಹಣ ಪಡೆದು ಪಾಪಪ್ರಜ್ಞೆಯಿಂದ ನರಳುತ್ತಲೇ ಯಾವುದಾದರೊಂದು ಗಟ್ಟಿ, ದಿಟ್ಟ ಪಕ್ಷಕ್ಕಾಗಿ ಕಾಯತೊಡಗುತ್ತದೆ. ಬಿಜೆಪಿ ಎಂಬ ಪಕ್ಷದ ‘ಅಯೋಧ್ಯೆ’ಗೆ ಮರುಳಾಗುವುದಕ್ಕಿಂತ ಹೆಚ್ಚಾಗಿ ಈ ಹೆಗಡೆ, ರಘುಪತಿ, ಗುಂಡೂರಾವ್, ಬಂಗಾರಪ್ಪ, ದೇವೇಗೌಡರ ಚದುರಂಗದಾಟ ಕಂಡು ರೋಸಿ ಹೋಗಿ ಅವರ ಮೇಲಿನ ಸಿಟ್ಟು ವ್ಯಕ್ತಪಡಿಸಲು, ತಮ್ಮ ಶಕ್ತಿ ತೋರಲು ಈ ಬಿಜೆಪಿಯನ್ನು ಕೂಡ ಸಹಿಸುತ್ತದೆ. ಮಧ್ಯಮವರ್ಗವೆನ್ನುವುದು ಕೇವಲ ಮೇಲುಜಾತಿಯ ಗುಂಪಲ್ಲ, ಎಲ್ಲಾ ಜಾತಿಯಲ್ಲಿರುವ ದಿಗ್ಭ್ರಮೆಗೊಂಡ, ಹತಾಶಗೊಂಡ ಜನ. ಇವರೇ ಅಭಿಪ್ರಾಯ ರೂಪಿಸುವವರು. ಇವರೇ ಚುನಾವಣೆಯ ಹೊಸ ವಾತಾವರಣ ನಿರ್ಮಿಸುವವರು. ಇವರು ಎಚ್ಚರಗೊಂಡಿದ್ದಾರೆ.

ಇವತ್ತಿನ ರಾಜಕೀಯ ಅವಾಸ್ತವ ಧೋರಣೆಯ ಮೇಲೆ ನಿಂತಿದೆ. ಇಂಥ ನೂರಾರು ನಿದರ್ಶನ ಕೊಡಬಹುದಾದರೂ ಒಂದನ್ನು ಹೇಳುತ್ತೇನೆ. ಅನೇಕರು ‘‘ಈ ಲೋಕಸಭಾ ಸದಸ್ಯ ತನ್ನ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ’’ ಎಂದು ಟೀಕಿಸುತ್ತಾರೆ. ಒಂದೊಂದು ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ ಹನ್ನೆರಡು ಲಕ್ಷ ಮತದಾರರಿದ್ದರೆ ಹದಿನೆಂಟು ಲಕ್ಷ ಜನಸಂಖ್ಯೆ ಇರುತ್ತದೆ; ಅಂದರೆ ಮೂರು ಲಕ್ಷ ಕುಟುಂಬಗಳಿರುತ್ತವೆ. ಒಬ್ಬ ಲೋಕಸಭಾ ಸದಸ್ಯ ಕ್ಷೇತ್ರಕ್ಕೆ ಕೆಲಸ ಮಾಡುವುದಿರಲಿ, ವರ್ಷಕೊಮ್ಮೆ ಕ್ಷೇತ್ರದ ಎಲ್ಲರಿಗೂ ಮುಖ ತೋರಿಸುವುದೂ ಕಷ್ಟ. ಅದೇ ಇಂಗ್ಲೆಂಡಿನ ಉದಾಹರಣೆ ತೆಗೆದುಕೊಳ್ಳಿ; ಅಲ್ಲಿಯ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ ಇಪ್ಪತ್ತೈದರಿಂದ ಮೂವತ್ತು ಸಾವಿರ. ಇದು ನಮ್ಮ ಜಿಲ್ಲಾ ಪರಿಷತ್ತಿನ ಕ್ಷೇತ್ರದ ಮತದಾರರಷ್ಟು. ಅಂದರೆ, ಜಿಲ್ಲಾ ಪರಿಷತ್ತು ಇಲ್ಲಿ ಲೋಕಸಭೆಯ ಅಧಿಕಾರ, ಆರ್ಥಿಕತೆ ಪಡೆಯದಿದ್ದರೆ ಏನನ್ನೂ ಮಾಡಲಾಗುವುದಿಲ್ಲ. ಈ ಸಮಸ್ಯೆಗಿರುವ ಪರಿಹಾರ ಒಂದೇ. ದಿಲ್ಲಿಯಿಂದ ಹಳ್ಳಿಯವರೆಗೆ ವಿಕೇಂದ್ರೀಕರಣವಾಗುವುದು; ಪ್ರತಿಯೊಂದು ತಾಲೂಕು, ಜಿಲ್ಲೆಯೂ ಶಿಕ್ಷಣ, ತರಬೇತಿ, ಉತ್ಪಾದನೆಯ ಕೇಂದ್ರಗಳಾಗುವುದು. ಈಗಿರುವಂತೆ ಹಳ್ಳಿ, ತಾಲೂಕು, ಜಿಲ್ಲೆಗಳೆಲ್ಲ ಬಡವಾಗಿವೆ. ಇಲ್ಲಿ ಲೋಕಸಭೆಗೆ ಚುನಾಯಿತನಾಗುವ ವ್ಯಕ್ತಿ ಸುಳ್ಳುಗಳ ಮೂಲಕ ಆಯ್ಕೆಗೊಂಡು ನಿರರ್ಥಕ ಅಧಿಕಾರಕ್ಕಾಗಿ ಹಂಬಲಿಸಿ ಸ್ವಂತಕ್ಕಷ್ಟಿಷ್ಟು ದುಡ್ಡು ಮಾಡಿಕೊಂಡು ಕೃತಾರ್ಥನಾಗುತ್ತಾನೆ. ನಮ್ಮ ವಿಧಾನಸಭೆ ಮತ್ತು ಲೋಕಸಭೆಯ ಸದಸ್ಯರು ಜನತೆಯ ಮತ್ತು ತಮ್ಮ ಕಷ್ಟಗಳ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದಾರೆ. ಯಾಕೆಂದರೆ ಅವರಿಗೂ ಗೊತ್ತು, ನಿಮಗೂ ಗೊತ್ತು, ತಮ್ಮಿಂದ ಏನೂ ಆಗುವುದಿಲ್ಲ ಎಂದು. ಇದರಿಂದಾಗಿ ಎಲ್ಲವೂ ನಿರೀಕ್ಷೆಗೆ ತಕ್ಕಂತೆ ಆಗುತ್ತಿದೆ. ಪಕ್ಷವೊಂದು ಅಧಿಕಾರಕ್ಕೆ ಬರಲು ಏನೂ ಮಾಡಲೂ ಸಿದ್ಧ್ದವಾಗುತ್ತದೆ. ಹಣವಿಲ್ಲದೆ ಚುನಾವಣೆ ಆಗುವುದಿಲ್ಲ; ಎದುರಾಳಿ ತನಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾನೆ. ಮೊದಲು ಹೇಗಾದರೂ ಮಾಡಿ ಹಣ ಕೂಡಿಸಿಕೊಳ್ಳಬೇಕು. ಲಕ್ಷಾಂತರ ಮಂದಿ ನಿರುದ್ಯೋಗಿಗಳು ಹಣ ಪಡೆದು ಪಕ್ಷಗಳ ಕಾರ್ಯಕರ್ತರಾಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ಇಲ್ಲಿ ಯಾವುದೇ ನಂಬಿಕೆ, ಛಲ, ಕಾರ್ಯಕ್ರಮದ ಅಗತ್ಯವಿಲ್ಲ. ಎದುರಾಳಿಗಿಂತ ತಾನು ಉತ್ತಮ ಅಭ್ಯರ್ಥಿ ಎಂದು ತೋರುವ ಅಗತ್ಯ ಕೂಡ ಇಲ್ಲ. ಇದು ಹಿಂಸೆ, ರಕ್ತಪಾತಕ್ಕೆ ಹೇಳಿ ಮಾಡಿಸಿದ ಪರಿಸ್ಥಿತಿ. ಅದೆಲ್ಲಾ ಶುರುವಾಗುತ್ತಿದೆ. ಪೊಲೀಸರು, ಅಧಿಕಾರಿಗಳು, ಉದ್ಯಮಿಗಳು ಎಲ್ಲರೂ ಇದನ್ನು ಬಲ್ಲರು. ಆದ್ದರಿಂದ ಒಮ್ಮೆ ರಾಜಕಾರಣಿಗಳ ಬಗ್ಗೆ ಗೌರವ ಇಟ್ಟುಕೊಂಡಿದ್ದ ಅವರೆಲ್ಲಾ ಸಿನಿಕರಾಗುತ್ತಿದ್ದಾರೆ. ಈ ಸಿನಿಕತನದಿಂದಲ್ಲೇ ತಮ್ಮ ಪ್ರಾಮಾಣಿಕತೆ ಕಳೆದುಕೊಂಡು ರಾಜಕಾರಣಿಗಳೊಂದಿಗೆ ಶಾಮೀಲಾಗತೊಡಗಿದ್ದಾರೆ. ಪ್ರಜಾಪ್ರಭುತ್ವದ ಎಲ್ಲ ಕೀಲುಗಳೂ ಸಡಿಲಗೊಳ್ಳುತ್ತಿವೆ. ಇದರಿಂದಾಗಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕೇವಲ ಮೂರು ತಿಂಗಳಲ್ಲಿ ಕೆಟ್ಟ ಹೆಸರು ಪಡೆಯತೊಡಗುತ್ತದೆ. ಅಧಿಕಾರಿಗಳು ತಮ್ಮ ಸಂಪ್ರದಾಯವನ್ನು ಸುಲಭವಾಗಿ ಬದಲಾ ಯಿಸಿಕೊಳ್ಳುವುದಿಲ್ಲ. ಕೇರಳದಲ್ಲಿ ಕಮ್ಯುನಿಸ್ಟ್‌ರು ಅಧಿಕಾರಕ್ಕೆ ಬರಲಿ, ಮಧ್ಯಪ್ರದೇಶದಲ್ಲಿ ಬಿಜೆಪಿಗಳು ಅಧಿಕಾರಕ್ಕೆ ಬರಲಿ ಅವರೆಲ್ಲ ಅಧಿಕಾರಿಗಳ ದಾರಿಗೆ ಹೊಂದಿಕೊಳ್ಳುತ್ತಾರೆ.

ಆದ್ದರಿಂದ ಈಗ ಅಧಿಕಾರಕ್ಕೆ ಬರುವುದು ಜನತೆಗಾಗಿ ಕೆಲಸ ಮಾಡುವುದಕ್ಕಾಗಿ ಅನ್ನುವುದಕ್ಕೆ ಬದಲು ಜನರ ಕೋಪ, ತಾತ್ಸಾರ ಪಡೆಯಲು ಎಂದಾಗಿಬಿಟ್ಟಿದೆ. ಪಶ್ಚಿಮ ಬಂಗಾಲದ ಅಸಂಖ್ಯಾತ ಹಳ್ಳಿಗಳಲ್ಲಿ ಒಂದೇ ಒಂದು ಕಾಳು ಹೆಚ್ಚು ಬೆಳೆಯದಿದ್ದರೂ, ಒಂದೇ ಒಂದು ಉದ್ಯೋಗ ಸೃಷ್ಟಿಯಾಗದಿದ್ದರೂ ಕಮ್ಯುನಿಸ್ಟರು ತಮ್ಮ ಕುಖ್ಯಾತಿಯನ್ನು ಕೂಡ ಬಳಸಿಕೊಂಡು ಮುಂದುವರಿಯಬೇಕಾಗಿದೆ. ಅದೊಂದು ಕೇರಳಕ್ಕಿಂತ, ಮಧ್ಯಪ್ರದೇಶಕ್ಕಿಂತ ಸ್ಫೋಟಕ ಸ್ಥಿತಿ.

ಇಂಥ ಸಂದರ್ಭದಲ್ಲಿ ದೇವೇಗೌಡರು ಚುನಾಯಿತ ರಾಗಿದ್ದಾರೆ. ಅವರಿಗೆ ಗೊತ್ತಿರಬೇಕು. ಇವತ್ತು 1983ರಲ್ಲಿದ್ದ ಆಶೆ, ಆದರ್ಶ ಕೂಡ ಇಲ್ಲ. ಈ ಆಸೆ, ಆದರ್ಶ ಮಾಯವಾಗಲೂ ಕಾಂಗ್ರೆಸ್‌ಗಳಂತೆಯೇ ದೇವೇಗೌಡರ ಪಕ್ಷಗಳೂ ಕಾರಣವಾಗಿದೆ.

ತರುಣ ಜನಾಂಗದ, ಮಧ್ಯಮ ವರ್ಗದ ಆಕ್ರೋಶ ಮತ್ತು ಈ ಆಕ್ರೋಶವನ್ನು ತಡೆದುಕೊಳ್ಳಲಾರದಷ್ಟು ದುರ್ಬಲಗೊಳ್ಳುತ್ತಿರುವ ಜನತಂತ್ರ ವ್ಯವಸ್ಥೆ ಇದು ನಾನು ಹೇಳಬೇಕೆಂದಿದ್ದುದು. ರಾಜಕಾರಣಿಗಳಷ್ಟೇ ಜನತೆ ದುರ್ಬಲರೂ ಹುಂಬರೂ ಆಗುತ್ತಿದ್ದಾರೆ. ಒಂದು ಜನತೆಗೆ ಬೇಕಾದದ್ದು ಕೇವಲ ದಕ್ಷ ಸರಕಾರ ಎಂದು ತಿಳಿದವರು ತಪ್ಪು ಮಾಡುತ್ತಾರೆ. ಜನತೆಗೆ ಬೇಕಾದ್ದು ತಮ್ಮ ವ್ಯಕ್ತಿತ್ವದಿಂದಲೇ ಕಟ್ಟಿದ ಸರಕಾರ. ಜನತೆಯನ್ನು ಮುನ್ನಡೆಸುವ, ಅವರಿಗೆ ನೀಡುವಷ್ಟೇ, ಅವರಿಂದ ಪಡೆಯುವ, ಅವರ ಎಲ್ಲ ಭೌತಿಕ, ಮಾನಸಿಕ ಅವಶ್ಯಕತೆಗಳನ್ನು ಪರಿಗಣಿಸುವ ಸರಕಾರ. ಪಾಕಿಸ್ತಾನದ ಸಮಾಜಸೇವಕನೊಬ್ಬ ಇದನ್ನು ತೋರಿದ್ದಾನೆ. ಎಲ್ಲೆಲ್ಲೂ ಭ್ರಷ್ಟತೆ, ಸಣ್ಣತನ, ಅಪನಂಬಿಕೆ ತುಂಬಿರುವಾಗ ಈ ಸಮಾಜ ಸೇವಕ ತನ್ನ ಸುತ್ತಣ ಬಡವರು, ನಿರ್ಗತಿಕರನ್ನು ನೋಡಿ ಮರುಗಿ ‘‘ಗೆಳೆಯ ಗೆಳತಿಯರೇ, ನಿಮಗೆ ನಿಜಕ್ಕೂ ಅಗತ್ಯವಿಲ್ಲದ ವಸ್ತುಗಳನ್ನು ನಿಮ್ಮ ಬಡಜನತೆಗಾಗಿ ಕೊಡಿ’’ ಎಂದು ಕೇಳಿದ. ಜನತೆ ಆತನನ್ನು ನಂಬಿದರು, ತಮಗೆ ನಿಜಕ್ಕೂ ಅಗತ್ಯವಲ್ಲದ ಬಟ್ಟೆ, ಪಾತ್ರೆ, ಕುರ್ಚಿ, ಮೇಜು, ಹಣ- ಎಲ್ಲವನ್ನೂ ಕೊಡತೊಡಗಿದರು. ಉದಾರಿಯೂ, ಪ್ರಾಮಾಣೆಕನೂ ಆದ ಆ ಸಮಾಜಸೇವಕ ಸಹಸ್ರಾರು ಬಡವರಿಗೆ ಸೂರು, ಶಿಕ್ಷಣ, ವೈದ್ಯಕೀಯ ಒದಗಿಸತೊಡಗಿದ. ಲಕ್ಷಾಂತರ ಪಾಕಿಸ್ತಾನಿಗಳು, ವಿದೇಶದಲ್ಲಿರುವ ಅವರ ಮಿತ್ರರು ಕೋಟ್ಯಂತರ ಹಣ, ವಸ್ತು ನೀಡಿದರು. ಪಡೆದವರಿಗೆ, ನೀಡಿದವರಿಗೆ ವಿಚಿತ್ರ ನೆಮ್ಮದಿ ದೊರೆಯತೊಡಗಿತು. ಈ ಸಮಾಜ ಸೇವಕನೀಗ ಸರಕಾರಕ್ಕಿಂತ ಅರ್ಥಪೂರ್ಣ.

ಇದನ್ನೆಲ್ಲ ನಮ್ಮ ದೇವೇಗೌಡರ ತರಹದವರು ಚಿಂತಿಸುವಂತಾಲಿ ಎಂದು ಮಾತ್ರ ಹೇಳುತ್ತಿದ್ದೇನೆ.

ಪಕ್ಷವೊಂದು ಅಧಿಕಾರಕ್ಕೆ ಬರಲು ಏನೂ ಮಾಡಲೂ ಸಿದ್ಧವಾಗುತ್ತದೆ. ಹಣವಿಲ್ಲದೆ ಚುನಾವಣೆ ಆಗುವುದಿಲ್ಲ; ಎದುರಾಳಿ ತನಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾನೆ. ಮೊದಲು ಹೇಗಾದರೂ ಮಾಡಿ ಹಣ ಕೂಡಿಸಿಕೊಳ್ಳಬೇಕು. ಲಕ್ಷಾಂತರ ಮಂದಿ ನಿರುದ್ಯೋಗಿಗಳು ಹಣ ಪಡೆದು ಪಕ್ಷಗಳ ಕಾರ್ಯಕರ್ತರಾಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ಇಲ್ಲಿ ಯಾವುದೇ ನಂಬಿಕೆ, ಛಲ, ಕಾರ್ಯಕ್ರಮದ ಅಗತ್ಯವಿಲ್ಲ. ಎದುರಾಳಿಗಿಂತ ತಾನು ಉತ್ತಮ ಅಭ್ಯರ್ಥಿ ಎಂದು ತೋರುವ ಅಗತ್ಯ ಕೂಡ ಇಲ್ಲ. ಇದು ಹಿಂಸೆ, ರಕ್ತಪಾತಕ್ಕೆ ಹೇಳಿ ಮಾಡಿಸಿದ ಪರಿಸ್ಥಿತಿ. ಅದೆಲ್ಲಾ ಶುರುವಾಗುತ್ತಿದೆ.

Writer - ಪಿ. ಲಂಕೇಶ್

contributor

Editor - ಪಿ. ಲಂಕೇಶ್

contributor

Similar News