ಜಾತಿಯೇ ಧರ್ಮವಾದಾಗ

Update: 2019-07-19 08:45 GMT

ಜಾತಿಯ ಒಳಸುಳಿಗಳು ಗುಪ್ತಗಾಮಿನಿಯಾಗಿ ನಡೆಯುತ್ತಲೇ ಇರುತ್ತವೆ. ಪರಿಣಾಮವಾಗಿ ಜಾತಿಯನ್ನು ಲೆಕ್ಕಿಸದೆ ಗಂಡು ಹೆಣ್ಣುಗಳು ಪರಸ್ಪರ ಪ್ರೀತಿಸುವುದು, ವಿಶೇಷವಾಗಿ ಮೇಲ್ಜಾತಿಯ ಹೆಣ್ಣೊಬ್ಬಳು ದಲಿತನನ್ನು ಅಥವಾ ಅನ್ಯ ಧರ್ಮೀಯನನ್ನು ಪ್ರೀತಿಸುವುದು, ಜಾತಿ- ಧರ್ಮ ದ್ವೇಷದಿಂದಾಗಿ ಇಬ್ಬರ ಪಾಲಿಗೂ ಮಾರಣಾಂತಿಕ ಆಗಬಹುದಾಗಿದೆ. ಆಗೊಮ್ಮೆ ಈಗೊಮ್ಮೆ ಅಲ್ಲೊಮ್ಮೆ ಇಲ್ಲೊಮ್ಮೆ ಜಾತಿ ವಿನಾಶ ಸಮ್ಮೇಳನಗಳು ನಡೆದರೂ, ಸರಕಾರಗಳು ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದರೂ ಜಾತಿಯ ಉಗ್ರ ಸ್ವರೂಪ ಬಹಳ ಬದಲಾದಂತೆ ಕಾಣುವುದಿಲ್ಲ.

"what is caste?''
 ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಸಾಮಾಜಿಕ ಭಾಷಾ ವಿಜ್ಞಾನ ತರಗತಿಯಲ್ಲಿ ನನ್ನ ಕ್ಲಾಸ್ ಮೇಟ್ ಟ್ರಿನಿಯಾ ಒಮ್ಮೆ ಈ ಪ್ರಶ್ನೆ ಕೇಳಿದಾಗ ನಾನು ಆಕೆಗೆ ಉತ್ತರಿಸಲು ಪಟ್ಟ ಪಾಡು ನೆನಪಾಗುತ್ತದೆ. ಹೌದು, ಜಾತಿ ಎಂದರೇನು ಅದನ್ನು ವ್ಯಾಖ್ಯಾನಿಸುವುದು, ಅರ್ಥೈಸುವುದು ಹೇಗೆ? ಪ್ರೀತಿ, ದ್ವೇಷ, ಮಿತ್ರತ್ವ, ಶತ್ರುತ್ವ, ಸಾವು, ದೇವರು, ಮಮತೆ, ಮಮಕಾರದ ಹಾಗೆ ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಜಾತಿಯನ್ನು ಹೇಗೆ ಗುರುತಿಸುವುದು? ಕಣ್ಣಿಗೆ ಕಾಣದ, ಕೈಯಲ್ಲಿ ಹಿಡಿಯಲು ಸಿಗದ ಜಾತಿಗೆ ಪೊಲೀಸರು, ವಕೀಲರು, ನ್ಯಾಯಾಧೀಶರು, ಶಾಲಾ ಮಕ್ಕಳು, ಸೈನಿಕರು ಮತ್ತು ಸನ್ಯಾಸಿಗಳಿಗೆ ಇರುವ ಹಾಗೆ ದೂರದಿಂದಲೇ ಗುರುತಿಸಬಹುದಾದ ಸಮವಸ್ತ್ರ ಇದೆಯೇ? ಜಾತಿ ಎಲ್ಲಿದೆ? ನಮ್ಮ ಆಹಾರ ಪದ್ಧತಿಯಲ್ಲೋ? ಆರಾಧನೆ ಪದ್ಧತಿಯಲ್ಲೋ? ನಾವು ಹುಟ್ಟಿದಾಗ ಆಚರಿಸುವ, ಸತ್ತಾಗ ಸುಡುವ, ಹುಗಿಯುವ ಕ್ರಮದಲ್ಲೋ? ಯಾಕಾಗಿ ನಾವು ಮಹಾನ್ ಭಾರತದ ಹೆಮ್ಮೆಯ ಭಾರತೀಯರು ಜಾತಿ ಜಾತಿ ಎಂದು ಬೊಬ್ಬೆ ಹೊಡೆಯುತ್ತೇವೆ? ಜಾತಿಗಾಗಿ ಬಡಿದಾಡಿಕೊಂಡು ಸಾಯುತ್ತೇವೆ? ಒಬ್ಬ ಯುವಕನೋ ಯುವತಿಯೋ ಅನ್ಯ ಜಾತಿಯ ಮನುಷ್ಯನನ್ನು ಮದುವೆಯಾದಾಗ ಯಾಕೆ ಅವರನ್ನು ಕಂಬಕ್ಕೆ ಬಿಗಿದು ಹುಚ್ಚುನಾಯಿಯನ್ನು ಬಡಿದುಕೊಲ್ಲುವ ಹಾಗೆ ಬಡಿದು ಸಾಯಿಸುತ್ತೇವೆ? ಮರ್ಯಾದಾ ಹತ್ಯೆ ಎಂದುಕೊಂಡು ಯಾವ ಸುಡುಗಾಡಿನ ಮರ್ಯಾದೆಗಾಗಿ ಹಸಿಹಸಿ ಜೀವಗಳನ್ನು ಬಿಸಿ ಬೆಂಕಿಯಲ್ಲಿ ಸುಟ್ಟು ಸಾಯಿಸುತ್ತೇವೆ? ಏನಾಗಿದೆ ನಮಗೆ?
ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಬರೇಲಿಯ ಶಾಸಕ, ಜನಪ್ರತಿನಿಧಿಯ ಪುತ್ರಿ ಸಾಕ್ಷಿಮಿಶ್ರಾ ತನಗೂ ತಾನು ಮದುವೆಯಾಗಿರುವ ತನ್ನ ದಲಿತ ಪತಿ ಅಜಿತೇಶ್ ಕುಮಾರ್‌ಗೆ ಜೀವ ಬೆದರಿಕೆ ಇದೆ, ತಮಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಮೊರೆ ಹೋಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ವರದಿಯ ಬೆನ್ನಿಗೆ ನ್ಯಾಯಾಲಯದ ಆವರಣದಲ್ಲಿ ಅಜಿತ್ ಕುಮಾರ್ ಮೇಲೆ ಹಲ್ಲೆ ನಡೆದ ವರದಿ ಬಂದಿದೆ. ಗುಜರಾತಿನಲ್ಲಿ ನಡೆದ ಅಂತರ್ಜಾತಿ ವಿವಾಹ ಪ್ರಕರಣವೊಂದರಲ್ಲಿ ಪೊಲೀಸರು ಸಮಾಲೋಚನೆ ನಡೆಸುತ್ತಿರುವಾಗ ಅವರು ಎದುರಲ್ಲಿ ವಧುವಿನ ಕಡೆಯವರು ಆ ದಲಿತ ಪತಿಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಯಾಕಾಗಿ ಭಾರತೀಯ ಸಮಾಜ ಇಷ್ಟೊಂದು ಆಕ್ರಮಣಕಾರಿಯಾಗಿ ಜಾತಿವಾದಿಯಾಗುತ್ತಿದೆ? ಜಾತಿ ಪದ್ಧತಿಯನ್ನು ಅತ್ಯುಗ್ರವಾಗಿ ಪ್ರತಿಪಾದಿಸುವ ಎರಡು ಸಾವಿರದ ಐನೂರು ವರ್ಷಗಳ ಹಿಂದಿನ ಮನುಸ್ಮತಿಯ ಕಾಲಘಟ್ಟದಲ್ಲಿದ್ದ ಅಮಾನವೀಯವಾದ ಕ್ರೂರ ಮತ್ತು ಜೀವ ವಿರೋಧಿಯಾದ ಮನುಷ್ಯನ ಮೂಲಭೂತವಾದ ಘನತೆಯನ್ನೇ ಹೊಸಕಿ ಹಾಕುವ ಜಾತಿ ವ್ಯವಸ್ಥೆಯ ಅರ್ಥಹೀನ ಆಚರಣೆಗಳಿಗೆ ಮತ್ತೆ ನಾವು ಮರಳುತ್ತಿದ್ದೇವೆಯೇ?
ಮನುಸ್ಮತಿಯ ಹತ್ತನೇ ಅಧ್ಯಾಯದಲ್ಲಿ ಬರುವ ಜಾತಿ ವ್ಯವಸ್ಥೆಯ ತಾರತಮ್ಯ ನೀತಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಅಥವಾ ಒಂದು ಮನುಷ್ಯ ಸಮುದಾಯವನ್ನು ಎಷ್ಟೊಂದು ಬರ್ಬರವಾಗಿ, ಎಷ್ಟೊಂದು ಕೀಳಾಗಿ ಅವಮಾನಕಾರಿಯಾಗಿ ನಡೆಸಿಕೊಳ್ಳಬಹುದು ಎನ್ನುವ ವಿವರಗಳಿರುವ ಒಂದು ಮಿನಿ ವಿಶ್ವಕೋಶದಂತಿದೆ. ಆ ಕಾಲದ ಲಾಗಾಯ್ತು ಜಗತ್ತು ತನ್ನ ಹಲವು ಭಾಗಗಳಲ್ಲಿ ಗುಲಾಮಗಿರಿ, ವರ್ಣದ್ವೇಷ ನೀತಿ, ಅಸ್ಪೃಶ್ಯತಾ ಆಚರಣೆಯಂತಹ ಹಲವಾರು ಅನಾಗರಿಕ ಹಂತಗಳನ್ನು ದಾಟಿ ಬಂದಿದೆ. ಆಧುನಿಕ ಶಿಕ್ಷಣ, ನಗರೀಕರಣ ಆರ್ಥಿಕ ಸ್ವಾವಲಂಬನೆ, ರಾಜಕೀಯ ಸ್ವಾತಂತ್ರ್ಯ, ಸಾಂಸ್ಕೃತಿಕ ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಪರಿಣಾಮವಾಗಿ ಜಾತೀಯತೆ ಎಂಬ ಸಾಂಕ್ರಾಮಿಕ ರೋಗ ನಿವಾರಣೆಯಾಗಬಹುದೆಂದು ತಿಳಿಯಲಾಗಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದ ಜಾತೀಯತೆ ಅಂತರ್ಜಾತೀಯ ಅಥವಾ ಅಂತರ ಧಾರ್ಮಿಕ ವಿವಾಹಗಳ ವಿಷಯದಲ್ಲಿ ತನ್ನ ಪಟ್ಟನ್ನು ಇನ್ನೂ ಸಡಿಲಿಸಿದಂತೆ ಕಾಣುವುದಿಲ್ಲ. ಅಲ್ಲದೇ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು, ಸಂಘಟನೆಗಳು ಕೂಡ ದಿನದಿಂದ ದಿನಕ್ಕೆ ಜಾತಿಯ ನೆಲೆಯಲ್ಲಿ ಕಾರ್ಯ ವೆಸಗುವುದನ್ನು ಕಾಣುತ್ತಿದ್ದೇವೆ ಕರಾವಳಿ ಕರ್ನಾಟಕದ ಮುಖ್ಯಧಾರೆಯ ಪತ್ರಿಕೆಗಳ, ದೈನಿಕಗಳ ಒಳ ಪುಟಗಳ ಮೇಲೆ ಕಣ್ಣಾಡಿಸಿದರೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಹತ್ತು ಹಲವು ಜಾತಿಗಳಿಗೆ, ಉಪಜಾತಿಗಳಿಗೆ ಸೇರಿದ ಸಂಘಗಳು, ಸಂಘಟನೆಗಳು, ಆ ಸಂಘಟನೆಗಳಿಗೆ ಜಾತಿ ಸೂಚಕವಾದ ಅಂತ್ಯದ ಹೆಸರು (ಸರ್ನೇಮ್)ಗಳಿರುವ ವ್ಯಕ್ತಿಗಳೇ ಪದಾಧಿಕಾರಿಗಳು, ಅವುಗಳು ನಡೆಸುವ ಕಾರ್ಯಕ್ರಮಗಳಿಗೆ ಆಯಾ ಜಾತಿ ಬಾಂಧವರೇ ಮುಖ್ಯ ಅತಿಥಿಗಳು, ಮುಖ್ಯ ಭಾಷಣಕಾರರು, ಅಧ್ಯಕ್ಷರು. ಪ್ರತಿಯೊಂದು ಜಾತಿಯಲ್ಲಿ ಏನೋ ಸಾಧನೆಗೈದವರ ಹೆಸರಿನಲ್ಲಿ ಒಂದಷ್ಟು ದತ್ತಿಗಳು, ಪ್ರತಿಷ್ಠಾನಗಳು, ಅವುಗಳು ನೀಡುವ ಪ್ರಶಸ್ತಿಗಳು, ಆಯಾ ಜಾತಿಯವರೇ ಪ್ರಶಸ್ತಿ ವಿಜೇತರು, ಕೂತರೆ ನಿಂತರೆ ಅವರೇ ಸನ್ಮಾನಿತರು, ಬಹುಮಾನಿತರು...

ಜಾತೀಯತೆಯ ರುದ್ರನರ್ತನ ಇಷ್ಟಕ್ಕೇ ನಿಲ್ಲುವುದಿಲ್ಲ. ಮನೆ ನಿವೇಶನಗಳನ್ನು ಕೊಳ್ಳುವಾಗ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವಾಗ, ಮಾರುವಾಗ ಕೂಡ ಜಾತಿ ಕಾಲನಿಗಳು ನಿರ್ಮಾಣಗೊಳ್ಳುತ್ತ್ತವೆ. ಬೆಂಗಳೂರಿನಂತಹ ನಗರದಲ್ಲಿಯೂ ಒಂದು ನಿರ್ದಿಷ್ಟ ಜಾತಿಯವರಿಂದ ಆ ಜಾತಿಗೆ ಸೇರಿದವರಿಗಾಗಿಯೇ ಅಪಾರ್ಟ್‌ಮೆಂಟ್‌ಗಳು, ಗೇಟೆಡ್ ವಿಲ್ಲಾಗಳು ತಲೆ ಎತ್ತುತ್ತವೆ. ಇದನ್ನು ಕಂಡೇ ದಲಿತ ಲೇಖಕ ದೇವನೂರ ಮಹಾದೇವ ಉಡುಪಿಯಲ್ಲಿ ಪ್ರಶಸ್ತಿಯೊಂದನ್ನು ಸ್ವೀಕರಿಸಿ ಮಾತನಾಡುತ್ತಾ, ತನ್ನ ಭಾಷಣದಲ್ಲಿ ‘‘ಈ ಆಧುನಿಕ ಜಾತಿ ಕಾಲನಿಗಳಿಗೆ ಬಾಂಬ್ ಹಾಕಬೇಕು’’ ಎಂದಿದ್ದರು.
ಆದರೆ ವಿಪರ್ಯಾಸವೆಂದರೆ ಜಾತಿಯೇ ಇಂದು ಅಂತರ್ಜಾತಿಯ ವಿವಾಹವಾದ ದಲಿತರಿಗೆ, ನೂತನ ವಧುವರರ ಬದುಕಿಗೆ ಬಾಂಬ್ ಹಾಕುತ್ತಿದೆ. ಜಾತಿಯ ನೆಲೆಯಲ್ಲಷ್ಟೇ ಅಲ್ಲದೆ ಧರ್ಮದ ನೆಲೆಯಲ್ಲೂ ದ್ವೇಷದ ಹಿಂಸೆ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಿದೆ. ಇದೇ ವೇಳೆ ಧರ್ಮದ ಮುಖವಾಡ ಧರಿಸಿ ಹಿಂಸೆಗೆ ಇಳಿಯುವವರು ಜಾತಿಯ ಬಗ್ಗೆ ಜಾಣ ಮೌನ ವಹಿಸಿ ‘ನಾವೆಲ್ಲ ಒಂದು’ ಎಂದು ಘೋಷಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಮತಾಂತರ ಪ್ರಕರಣಗಳಲ್ಲಿ ಇದನ್ನು ಗಮನಿಸಬಹುದು. ‘‘ಮತಾಂತರಗೊಂಡವರು ಮರಳಿ ಮಾತೃಧರ್ಮಕ್ಕೆ’’ ಎಂದು ಕಾಣಿಸಿಕೊಳ್ಳುವ ಜಾಹೀರಾತುಗಳಲ್ಲಿ, ವರದಿಗಳಲ್ಲಿ ಹಾಗೆ ಮಾತೃಧರ್ಮಕ್ಕೆ ಬಂದವರು ಮರಳಿ ಯಾವ ಜಾತಿಗೆ ಸೇರುತ್ತಾರೆ? ಎಂಬ ಬಗ್ಗೆ ಯಾರೂ ಕೇಳುವುದಿಲ್ಲ, ಯಾರೂ ಕೂಡ ತಲೆಕೆಡಿಸಿಕೊಳ್ಳುವುದೂ ಇಲ್ಲ. ಯಾಕೆಂದರೆ ಈ ನೆಲದಲ್ಲಿ ಅಂತಿಮ ಸತ್ಯ ಜಾತಿಯೇ ಹೊರತು ಧರ್ಮವಲ್ಲ ಎಂದು ಎಲ್ಲ ಜಾತಿಯ ಜಾತಿಯವರಿಗೂ ಒಳಗೊಳಗೇ ತಿಳಿದಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ತಥಾಕಥಿತ ಆಧುನಿಕರು, ಆಧುನಿಕ (ಇಂಗ್ಲಿಷ್ ಮಾಧ್ಯಮ?) ಶಿಕ್ಷಣ ಪಡೆದವರು ಕೂಡ ತಾವು ಸಂವಹಿಸುವ ಮಂದಿ ಯಾವ ಜಾತಿಗೆ, ಉಪಜಾತಿಗೆ ಸೇರಿದವರೆಂದು ಪರೋಕ್ಷವಾಗಿ ತಿಳಿದುಕೊಳ್ಳುವ ಸೂಕ್ಷ್ಮ ವಿಧಾನಗಳನ್ನು, ತಂತ್ರಗಳನ್ನು ಕಲಿತುಕೊಂಡಿದ್ದಾರೆ!
ಹೀಗಾಗಿ ಜಾತಿಯ ಒಳಸುಳಿಗಳು ಗುಪ್ತಗಾಮಿನಿಯಾಗಿ ನಡೆಯುತ್ತಲೇ ಇರುತ್ತವೆ. ಪರಿಣಾಮವಾಗಿ ಜಾತಿಯನ್ನು ಲೆಕ್ಕಿಸದೆ ಗಂಡು ಹೆಣ್ಣುಗಳು ಪರಸ್ಪರ ಪ್ರೀತಿಸುವುದು, ವಿಶೇಷವಾಗಿ ಮೇಲ್ಜಾತಿಯ ಹೆಣ್ಣೊಬ್ಬಳು ದಲಿತನನ್ನು ಅಥವಾ ಅನ್ಯ ಧರ್ಮೀಯನನ್ನು ಪ್ರೀತಿಸುವುದು, ಜಾತಿ- ಧರ್ಮ ದ್ವೇಷದಿಂದಾಗಿ ಇಬ್ಬರ ಪಾಲಿಗೂ ಮಾರಣಾಂತಿಕ ಆಗಬಹುದಾಗಿದೆ. ಆಗೊಮ್ಮೆ ಈಗೊಮ್ಮೆ ಅಲ್ಲೊಮ್ಮೆ ಇಲ್ಲೊಮ್ಮೆ ಜಾತಿ ವಿನಾಶ ಸಮ್ಮೇಳನಗಳು ನಡೆದರೂ, ಸರಕಾರಗಳು ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದರೂ ಜಾತಿಯ ಉಗ್ರ ಸ್ವರೂಪ ಬಹಳ ಬದಲಾದಂತೆ ಕಾಣುವುದಿಲ್ಲ.
ತಮ್ಮ ಜಾತಿಯೇ ತಮ್ಮ ಧರ್ಮವೆಂದು ತಿಳಿದ ಜನರಿರುವ ಒಂದು ದೇಶದಲ್ಲಿ ಜಾತಿ ವಿನಾಶ ಸುಲಭ ಸಾಧ್ಯವಿಲ್ಲ. ರಾಜಕಾರಣದಲ್ಲಿ ಜಾತಿಯ ಪ್ರಾಬಲ್ಯ ಅನಿವಾರ್ಯವಾಗಿರಬಹುದಾದರೂ ನಾಗರಿಕರ ವೈಯಕ್ತಿಕ ಬದುಕಿನಲ್ಲಿ ಜಾತಿಯ ಪರಿಗಣನೆ ಇತರ ಎಲ್ಲ ಸಾಮಾಜಿಕ ಸಾಂಸ್ಕೃತಿಕ ಪರಿಗಣನೆಗಳಿಗಿಂತ ಮುಖ್ಯವಾಗುವುದು ಒಂದು ಸಾಮಾಜಿಕ ದುರಂತ. ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವ್ಯಕ್ತಿಗೆ ತನ್ನ ಪಾಡಿಗೆ ತಾನು ಬದುಕುವ ಹಕ್ಕು ಇರುವಂತೆಯೇ ತನಗೆ ಇಷ್ಟ ಕಂಡವರನ್ನು ಪ್ರೀತಿಸುವ ಹಕ್ಕು ಕೂಡ ಇದೆ.
ಜಾತಿ ಅಥವಾ ಧರ್ಮ ಈ ಹಕ್ಕನ್ನು ಉಲ್ಲಂಘಿಸುವ ಸರ್ವಾಧಿಕಾರಿಯಾಗದಂತೆ ತಡೆಯುವ ಜವಾಬ್ದಾರಿ ಸರಕಾರದ ಮೇಲಷ್ಟೇ ಅಲ್ಲ; ಜನರ ಮೇಲೆ ಕೂಡ ಇದೆ. ಮನುಷ್ಯ ಸಂಬಂಧಗಳಲ್ಲಿ ನಮ್ಮ ನಮ್ಮ ಜಾತಿಯೇ ನಮ್ಮ ಧರ್ಮವಾದಾಗ ಧರ್ಮವೊಂದು ಜೀವಪೋಷಕ ಶಕ್ತಿಯಾಗಿ ಉಳಿಯುವುದಿಲ್ಲ. ಅದು ಜಾತಿಯ ಕಾರಣಕ್ಕಾಗಿ ಮನುಷ್ಯನ ಮೂಲಭೂತ ಘನತೆಯನ್ನು ಆತ್ಮಗೌರವವನ್ನು ಕೊಳ್ಳುವ ಕೊಲೆಗಾರನಾಗುತ್ತದೆ.

(bhaskarrao599@gmail.com)

Writer - ಡಾ. ಬಿ. ಭಾಸ್ಕರ್ ರಾವ್

contributor

Editor - ಡಾ. ಬಿ. ಭಾಸ್ಕರ್ ರಾವ್

contributor

Similar News

ಜಗದಗಲ
ಜಗ ದಗಲ