ಬೆಳಕೆಂಬ ಮಾಯಾಲೋಕದಲ್ಲಿ...

Update: 2019-07-20 14:47 GMT

‘ಬೆಳಕು’ ಇಲ್ಲದೆ ಜೀವಜಗತ್ತಿನ ವ್ಯಾಪಾರ ನಡೆಯಲಾರದು. ಬೆಳಕಿಲ್ಲದೆ ಛಾಯಾಚಿತ್ರಕ್ಕೆ ಆಸ್ಪದವೂ ಇಲ್ಲ. ಬೆಳಕಿಲ್ಲದೆ ಯಾವುದೇ ಜೀವಜಾಲಕ್ಕೂ ಜೀವನ ಇರುವುದೇ ಇಲ್ಲ. ಸಕಲ ಜೀವ ಸಂಕುಲಕ್ಕೂ ಬೆಳಕು ಅತ್ಯಗತ್ಯವಾಗಿ ಬೇಕೇ ಬೇಕು. ಹಾಗೇಯೇ ಛಾಯಾಗ್ರಹಣಕ್ಕೂ ಕೂಡ. ಬೆಳಕನ್ನು ನಾವು ಹಲವು ವಿಧಗಳಲ್ಲಿ ಹಲವು ರೂಪಗಳಲ್ಲಿ ಗ್ರಹಿಸಿದ್ದೇವೆ.ನೈಸರ್ಗಿಕ ಬೆಳಕು - ಕೃತಕ ಬೆಳಕು ಎಂದು ಪ್ರಧಾನವಾಗಿ ಪ್ರತ್ಯೇಕಿಸಿದರೂ ನಿಸರ್ಗ ಸಹಜ ಬೆಳಕನ್ನು ಮತ್ತೆ ಮತ್ತೆ ವಿಂಗಡಿಸಿ ಬೆಳಕನ್ನು ಹಲವು ರೀತಿಯಲ್ಲಿ ಪ್ರತ್ಯೇಕಿಸಬಹು ದಾಗಿದೆ. ಸೂರ್ಯ ಮೂಡುವ ಸಮಯದಿಂದ ಹಿಡಿದು ಮುಳುಗುವವರೆಗೆ ಭಿನ್ನ ಅಳತೆಯ ಮಾಪನ (ಡಿಗ್ರಿ)ದಲ್ಲಿ ಕಾಣಬಹುದು. ಸೊನ್ನೆ ಡಿಗ್ರಿಯಿಂದ ಹಿಡಿದು 180 ಡಿಗ್ರಿಯವರೆಗೆ ಇದನ್ನು ವಿಂಗಡಿಸಲಾಗಿದೆ. ಸೂರ್ಯನ ಹುಟ್ಟು ಸೊನ್ನೆ ಡಿಗ್ರಿಯ ಬೆಳಕೆಂದೂ ಮಧ್ಯಾಹ್ನದ ಬೆಳಕನ್ನು 90 ಡಿಗ್ರಿಯ ಬೆಳಕೆಂತಲೂ ಸಂಜೆಯ ಸೂರ್ಯಾಸ್ತವನ್ನು 180 ಡಿಗ್ರಿ ಬೆಳಕೆಂದೂ ವಿಂಗಡಿಸಲಾಗಿದೆ.

ನೈಸರ್ಗಿಕ ಬೆಳಕನ್ನು ಛಾಯಾಗ್ರಹಣದಲ್ಲಿ ಬಳಸುವಾಗ ಸೊನ್ನೆ ಡಿಗ್ರಿ ಬೆಳಕಿನಿಂದ 40 ಡಿಗ್ರಿ ಬೆಳಕಿನವರೆಗೂ ನೇರ ಬೆಳಕು (direct light) ಎಂತಲೂ 40 ಡಿಗ್ರಿ ಬೆಳಕಿನಿಂದ 140 ಡಿಗ್ರಿಯವರೆಗೆ ಬೀಳುವ ಬೆಳಕನ್ನು ನೆತ್ತಿಯ ಮೇಲಿನ (top light) ಬೆಳಕೆಂದೂ 140 ಡಿಗ್ರಿಯಿಂದ 180 ಡಿಗ್ರಿಯವರೆಗೆ (ಸೂರ್ಯಾಸ್ತ) ಮತ್ತೊಮ್ಮೆ ನೇರ ಬೆಳಕೆಂದು ಕರೆಯುತ್ತೇವೆ.

ನೇರ ಬೆಳಕಿನ ಛಾಯಾಗ್ರಹಣದಲ್ಲಿ ಬೆಳಕು ಮನುಷ್ಯನ ಕಣ್ಣೋಟದ ಅಳತೆಗೆ ಬೀಳುವುದರಿಂದ ನಾವು ಚಿತ್ರಿಸ ಬಯಸುವ ವಿಷಯ(subject)ದ ಮೇಲೆ ಸ್ಪಷ್ಟವಾಗಿ ಬೀಳುವುದರಿಂದ (ಎಲ್ಲ ವಸ್ತುಗಳನ್ನು ಮನುಷ್ಯ ತನ್ನ ಕಣ್ಣಳತೆಯ ‘‘ದೃಷ್ಟಿಕೋನ’’ದಲ್ಲಿ ಗ್ರಹಿಸುವುದರಿಂದ ಬೆಳಗಿನ ಮತ್ತು ಸಂಜೆಯ ನೈಸರ್ಗಿಕ ಬೆಳಕು ಕೂಡ ಮನುಷ್ಯ ಗ್ರಹಿಸುವ ವಸ್ತುಗಳ/ವಿಷಯ (subject) ಗಳ ಮೇಲೆ ಬೀಳುವ ನೇರ ಬೆಳಕನ್ನು ಒಳ್ಳೆಯ ಬೆಳಕು ಎಂದು ಗ್ರಹಿಸಿಕೊಂಡಿದ್ದಾನೆ) ಚಿತ್ರ ಸುಂದರವಾಗಿ ಮತ್ತು ಉತ್ತಮವಾಗಿ ಮೂಡಿಬರುತ್ತದೆ. ಬೆಳಕಿನಲ್ಲಿ ಒಳ್ಳೆಯ ಬೆಳಕು (good night), ಕೆಟ್ಟ ಬೆಳಕು ಎಂಬುದು ಇಲ್ಲವಾದರೂ ಮಧ್ಯಾಹ್ನದ ಬೆಳಕನ್ನು ಛಾಯಾಗ್ರಹಣದ ಭಾಷೆಯಲ್ಲಿ ಕೆಟ್ಟ ಬೆಳಕೆಂದು ಪರಿಗಣಿತವಾಗಿದೆ.

ನೈಸರ್ಗಿಕ ಬೆಳಕನ್ನೇ ಛಾಯಾಗ್ರಹಣದಲ್ಲಿ ಎರಡು ರೀತಿಯಲ್ಲಿ ಬಳಸಬಹುದಾಗಿದೆ. ನೇರ ಬೆಳಕು (Direct light) (Indirect light) ಪಾರ್ಶ್ವ ಬೆಳಕು . ನೇರ ಬೆಳಕೆಂದರೆ ಸೂರ್ಯನ ಬೆಳಕನ್ನು ನೇರವಾಗಿ ಉಪಯೋಗಿಸಿಕೊಳ್ಳುವ ಬೆಳಕು. ಉದಾಹರಣೆಗೆ ಲ್ಯಾಂಡ್ ಸ್ಕೇಪ್ ಚಿತ್ರಗಳು, ಕಟ್ಟಡಗಳು, ರಸ್ತೆ, ಕಾಡಿನ ಗಿಡ ಮರಗಳ ಭೂಪ್ರದೇಶ, ಕೆರೆ-ಹೊಳೆ- ಜಲಪಾತ-ಸಮುದ್ರ ತೀರದ ಚಿತ್ರಗಳನ್ನು ತಗೆಯುವಾಗ ಬಳಸುವಂಥ ಬೆಳಕನ್ನು ನೇರ ಬೆಳಕೆಂದು ಭಾವಿಸಿಕೊಳ್ಳಬಹುದು.

ಹಾಗೆಯೇ ಕಟ್ಟಡದ ಒಳಗೆ, ಕಿಟಕಿ, ಬಾಗಿಲು, ಮನೆಯ ಪಡಸಾಲೆ, ಗಾಜಿನ ಹೆಂಚುಗಳ ಮೂಲಕ ಪ್ರತಿಫಲಿಸಬ ಹುದಾದ ಬೆಳಕನ್ನು ಪಾರ್ಶ್ವ ಬೆಳಕು (indirect light) ಎಂದು ಕರೆಯುತ್ತೇವೆ. ಸೂರ್ಯನ ಬೆಳಕಿನಿಂದ ಪ್ರತಿಫಲಿಸ ಬಹುದಾದ ಬೆಳಕು ನೇರ ಬೆಳಕಿಗಿಂತ ಮೃದು ಬೆಳಕಾಗಿ (soft light)  ಪ್ರತಿಫಲಿಸುತ್ತಿರುತ್ತದೆ. ಈ ಮೃದು ಬೆಳಕಿನ ಸಹಾಯದಿಂದ ಮೂಡುವ ಚಿತ್ರಗಳಲ್ಲಿ ನಾಟಕೀಯ ಅಂಶಗಳು ಬೆರೆತಿರುತ್ತವೆ.ನೇರ ಬೆಳಕು ಸಾಮಾನ್ಯವಾಗಿ ಚದುರಿದ ಬೆಕಾಗಿದ್ದರೆ, ಪ್ರತಿಫಲಿತ (ಪಾರ್ಶ್ವ)ಬೆಳಕು ನಿರ್ದಿಷ್ಟ ಮೂಲದಿಂದ ನಿರ್ದಿಷ್ಟ ಸ್ಥಳ (place)ಹಾಗೂ ವಿಷಯ (subject)ದ ಮೇಲೆ ಹದವಾಗಿ ಚೆಲ್ಲಿರುತ್ತದೆ. ಹೀಗಾಗಿ ಬೆಳಕು ಕತ್ತಲೆಯ ಸಮಾಗಮ ಪ್ರತಿಫಲಿತ ಬೆಳಕಿನಲ್ಲಿ ಗಾಢವಾಗಿರುತ್ತದೆ.

ಬೆಳಕಿಗೊಂದು ಟಿಪ್ಪಣಿ:

► ನೈಸರ್ಗಿಕ ಬೆಳಕಿನಲ್ಲಿ ತೆಗೆದ ಚಿತ್ರಗಳು ನೈಜ ಚಿತ್ರಗಳ ಭಾವನೆ ಹೊಮ್ಮಿಸುತ್ತವೆ.

► ನೈಸರ್ಗಿಕ ಬೆಳಕಿನಲ್ಲಿ ವರ್ಣ ಸಂಯೋಜನೆ, ಬೆಳಕಿನಲ್ಲಿರುವ ಸೌಂದರ್ಯ, ಚಿತ್ರಕ್ಕಿರಬೇಕಾದ ‘ಮೂಡ್’ ಮತ್ತು ವಿಭಿನ್ನ ಆಯಾಮಗಳನ್ನು ದೊರಕಿಸಿ ಚಿತ್ರದ ಕಲಾತ್ಮಕ ಸೌಂದರ್ಯವನ್ನು (aesthetic sence)  ಹೆಚ್ಚಿಸುತ್ತದೆ. (ಚಿತ್ರಗಾರನ ಒಳಗಣ್ಣು ಇಲ್ಲಿ ಮುಖ್ಯವಾಗಿ ಕೆಲಸ ಮಾಡಬೇಕು.)

► ಕತ್ತಲು-ಬೆಳಕಿನ ಸಂಯೋಜನೆ ಮೂಲಕ ಚಿತ್ರವೊಂದಕ್ಕೆ ನಾಟಕೀಯ ಅಂಶಗಳನ್ನು ಬೆರೆಸಬಹುದು.

► ಕತ್ತಲು-ಬೆಳಕಿನ ಜೊತೆಗೆ ಧೂಳು, ಹೊಗೆ, ಮೋಡ, ಮಳೆ, ಇಬ್ಬನಿ, ಮಂಜು ಮುಂತಾದ ನೈಸರ್ಗಿಕ ಅಂಶಗಳನ್ನು ಬಳಸಿಕೊಂಡರೆ ವಿಭಿನ್ನ ನೋಟ, ವಿಶೇಷ ದೃಷ್ಟಿಕೋನಗಳಿಂದ ಜೀವಂತಿಕೆಯ ಚಿತ್ರಗಳನ್ನಾಗಿಸಬಹುದು.

► ಬೆಳಕು-ಕತ್ತಲೆಯ ಸಮಾಗಮದಿಂದಲೇ ಅಸಂಗತ ಚಿತ್ರಗಳಾಗಿಸಬಹುದು.

► ಕಲಾತ್ಮಕ ಚಿತ್ರವನ್ನಾಗಿಸಲು ಬೆಳಕು-ಕತ್ತಲೆ (Light & Shadow) ಸಂಯೋಜನೆಯಿಂದ ಚಿತ್ರದ ಮೂಡ್‌ನೊಂದಿಗೆ ನೋಡುಗರ ಭಾವನೆ (mood) ಯನ್ನೂ ಬದಲಿಸಬಹುದು.

ಛಾಯಾಗ್ರಾಹಕನಿಗೆ ಬೆಳಕಿನ ಮೂಲ, ಬೆಳಕಿನಲ್ಲಿರುವ ಸೌಂದರ್ಯ, ಬೆಳಕಿನ ಗುಣಮಟ್ಟಗಳ ಬಗೆಗೆ ಅರಿವಿದ್ದರೆ ಚಿತ್ರದ ಒಳನೋಟ (inner sight) ತೆರೆದುಕೊಳ್ಳುತ್ತದೆ. ಆಗ ಮಾತ್ರ ಕ್ರಿಯಾಶಾಲಿ ಛಾಯಾಗ್ರಾಹಕ ಹುಟ್ಟಲು ಸಾಧ್ಯ. ಬೆಳಕು ಯಾವುದೇ ಇರಲಿ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆ ಛಾಯಾಗ್ರಾಹಕನಿಗಿರಬೇಕು. ಆಗ ಮಾತ್ರ ಅತ್ಯುತ್ತಮ ಚಿತ್ರವೊಂದು ಮೂಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News