ಅಂತೂ ಇಂತೂ ಬಸ್ಯಾ ಪಾಸಾದ...

Update: 2019-07-20 15:48 GMT

ನಮ್ಮ ಬಸ್ಯಾ ಬಾಳ ಉಡಾಳ ಹುಡುಗರಿ. ಆದರೂ ಎಲ್ಲರಿಗೂ ಬೇಕಾದವ. ಯಾರು ಏನೇ ಕೆಲಸ ಹೇಳಲಿ ಚಾಚೂ ತಪ್ಪದೆ ಮಾಡವ. ಊರಾಗೆಲ್ಲಾ ನಮ್ಮ ಬಸ್ಯಾ ಅಂದ್ರ ಬಾಳಾ ಫೇಮಸ್ಸು. ಎಲ್ರೂ ಅವನು ಮ್ಯಾಲೆ ಜೋಕ್ ಮಾಡೋವ್ರ. ಆದ್ರೂ ಅವಾ ಬೇಜಾರು ಮಾಡ್ಕೊಳವಲ್ಲ. ಚಿಕ್ಕವರಿಂದ ಹಿಡಿದು ವಯಸ್ಸಾದವರೊಂದಿಗೂ ಒಳ್ಳೆ ಬಾಂಧವ್ಯ ಇಟ್ಕೊಂಡಾವ. ಇವ ಊರಾನವ್ರ ಹತ್ರ ಕೆಲಸ ಮಾಡೋದು ನೋಡಿ ಬಸ್ಯಾನ ಅಪ್ಪ ಅವ್ವಗ ಸಾಕಾಗಿ ಹೋಗಿತ್ತು. ಮನ್ಯಾಗ ದಿನ ಬೈಸಿಕೊತ್ತಿದ್ದ. ಆದ್ರೂ ಅಪ್ಪ ಅವ್ವಾಗ ಬಸ್ಯಾ ಅಂದ್ರೆ ಬಾಳ ಪ್ರೀತಿ. ಒಂದಿನ ಅಪ್ಪ ಬೈದ ಅಂತ ಹುಣಸಿಮರದ ಮ್ಯಾಗ ಹೋಗಿ ಕುತ್ಗೊಂಡಿದ್ದ. ಬಾರ್ಲೆ ಕೆಳಗ ಮಗನ ಅಂದ್ರು ಒಂದು ದಿನ ಪೂರ್ತಿ ಗಿಡದ ಮ್ಯಾಲ ಇದ್ದ. ಅವನ ಫೇವರಿಟ್ ಬೇಸನ್ ಉಂಡಿ. ಅವ್ವ, ಬೇಸನ್ ಉಂಡಿ ತಂದಿನಿ ಬಾರ್ಲೆ ಅಂದಾಗ ಮರದಿಂದ ಪಟಪಟ ಅಂತ ಕೆಳಗಿಳಿದು ಕೊಡುಬೇ ಲಗೂನ ಅಂತ ಬೇಸನ್ ಉಂಡಿ ಕಸ ಗೊಂಡಿದ್ದ.

ಶ್ಯಾಲ್ಯಾಗೂ ಬಸ್ಯಾ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಉಡಾಳತನ ಇದ್ದರೂ ಶಾಲೆಯ ಮಾಸ್ತರ್ ಹೇಳಿದ ಕೆಲಸ ತಪ್ಪದಂಗ ಮಾಡ್ತಾನ. ಓದೂದ್ರಾಗ ಬಾಳ ಡಲ್. ಓದಾಕ ಕುಂದುರ್ಲೆ ಅಂದ್ರ ಇನ್ನೊಬ್ಬರು ಓದೋದನ್ನು ಕೆಡಸಾವ. ಏನಾದ್ರೂ ತರ್ಲೆ ಮಾತಾಡಿ ಯಾರು ಓದಲಾರದಂಗ ಮಾಡುತ್ತಿದ್ದ. ಇವನ ಕಿಡಿಗೇಡಿತನ ಕಂಡ ಮಾಸ್ತರು ಇವನನ್ನು ಸಪರೇಟ್ ಓದಕ್ಕೆ ಬಿಡ್ತಿದ್ದರು. ಇಲ್ಲಾಂದ್ರೆ ಗಿಡಕ್ಕೆ ನೀರು ಬಿಡು ಹೋಗು ಅಂತ ಕಳಿಸುತ್ತಿದ್ದರು. ಊರಾನ ಗದ್ಯಮ್ಮದೇವಿ ಜಾತ್ರೆ ಬಂತು ಅಂದ್ರ ಕಾಯಿ ಒಡೆಯೋ ಕೆಲಸ ಇವನಗ ಫಿಕ್ಸ್.

ಹೀಗಿರುವಾಗ ಬಸ್ಯಾ ಈ ವರ್ಷ ಎಸೆಸೆಲ್ಸಿ ಹೆಂಗೋ ಮಾಡಿ ಮಾಸ್ಟರ್ ಕೃಪಾಕಟಾಕ್ಷದಿಂದ 9ನೇ ತರಗತಿ ತನಕ ಪಾಸ್ ಆಗಿ ಎಸೆಸೆಲ್ಸಿಗೆ ಬಂದಾನ. ಆ ಊರಿನ ಶಾಲಿ ಫಲಿತಾಂಶ ಪ್ರತೀ ವರ್ಷ ನೂರಕ್ಕೆ ನೂರು ಆಗ್ತಿತ್ತು. ಈ ವರ್ಷ ಬಸ್ಯಾ ಬಂದನಲ್ಲ ಬಸ್ಯಾ ಫೇಲಾದ್ರ ಹೆಂಗಪ್ಪ ಅಂತ ಶಾಲೆ ಮಾಸ್ತರರಿಗೆ ದಿಗಿಲಾತು. ಆದರೂ ಹೆಂಗಾದ್ರೂ ಸರಿ ಬಸ್ಯಾನ ಓದ್ಸಿ ಪಾಸ್ ಮಾಡಿಸಬೇಕು ಅಂತ ಶಾಲೆ ಮಾಸ್ತರ್ ಎಲ್ಲರೂ ದೃಢಸಂಕಲ್ಪ ಮಾಡಿದರು. ಮನ್ಯಾಗ ಅಪ್ಪ ಅವ್ವನೂ ಬಡುವ್ರ. ಎಸೆಸೆಲ್ಸಿ ಪಾಸಾದ್ರ ಅವನ್ಗ ಏನಾದ್ರೂ ನೌಕರಿ ಸಿಕ್ಕು ಚಲೋ ಆಗತೈತಿ. ಇಲ್ಲ ಅಂದ್ರೆ ಹಿಂಗ ಉಡಾಳತನ ಮಾಡ್ಕೊತಾ ಕಾಲ ಕಳೆಯುತ್ತಾನ. ಹೊಲ ಮನಿ ಅಂದ್ರ ಬ್ಯಾಸರ . ಅದಕ್ಕ ಏನಾದರೂ ಮಾಡಿ ಬಸ್ಯಾನ ಎಸೆಸೆಲ್ಸಿ ಮಾಡಿಸಬೇಕು ಅಂತ ಮನಸ್ಸು ಮಾಡಿದ್ರು. ಆಗಾಗ ಶಾಲಿ ಮಾಸ್ತಾರನ್ನ ಭೇಟಿ ಆಗಿ ನಮ್ ಬಸ್ಯಾ ಓದಾಕ ಏನ್ ಬೇಕು ಹೇಳ್ರಿ ಕೊಡಿಸ್ತೀವಿ ನನ್ನ ಮಗ ಎಸೆಸೆಲ್ಸಿ ಪಾಸ್ ಆಗಬೇಕು ಅಂತ ಅಪ್ಪ-ಅವ್ವ ಹೇಳುತ್ತಾ ಇದ್ದರು . ಶ್ಯಾಲಿ ಮಾಸ್ತರ ಪ್ರೀತಿಯ ಶಿಷ್ಯ ಬಸ್ಯಾ. ಅವ್ನ ಪಾಸ್ ಮಾಡೇ ಮಾಡ್ತೀವಿ ನೀವು ಚಿಂತೆ ಮಾಡಬ್ಯಾಡ್ರಿ.ಆದ್ರೂ . ಇವ ಮನ್ಯಾಗ ಕುಂತು ಓದಾವಲ್ಲ. ಮನ್ಯಾಗ ಓದುದಕ್ಕ ಜಬರಿಸಿ ಹಚ್ಚಿದ್ರ, ಓದೋತರ ನಾಟಕ ಮಾಡಿ ಅಪ್ಪಹೊರಗೆ ಹೋಗುತ್ತಿದ್ದಾಗ ಇವ್ನ ಹೊರಾಗ ಓಡಿ ಬಿಡಾವ. ಅಪ್ಪನಿಂದ ಬಾಳ ಸಾರಿ ಬಡತ ತಿಂದಿದ್ದ. ಅವ್ವ ಮಾತ್ರ ಹೊಡಿಬೇಡ್ರೀ ಮಗನ್ನ ಅಂತ ಕಣ್ಣೀರು ಹಾಕಿದ್ರೂ ಓದ್ಲೆ ಮಗನ ಚಂದಾಗಿ ಅಂತ ತಾನು ಎರಡು ಏಟು ಹಾಕಿ ಊಟ ಮಾಡಿಸ್ತಿದ್ಲು.

ಇವ ಬಾಳ ಕಿತಬಿ ಅದಾನ ಅಂತ ಗೆಳೆಯರು ಯಾರೂ ಓದೋ ಟೈಮ್ ನಾಗ ಇವನನ್ನ ತಮ್ಮ ಜೋಡಿ ಸೇರಿಸ್ಕೊತಿದ್ದಿಲ್ಲ. ಆಟಕ್ಕ, ಊರು ಕೇರಿ ತಿರುಗಾಕ ಮಾತ್ರ ಮನಿಗೆ ಬಂದು ಕರ್ಕೊಂಡು ಹೋಗ್ತಿದ್ರು. ಆದ್ರ ಅವ್ರಿಗೂ ಬಸ್ಯಾನ ಹೆಂಗಾದ್ರೂ ಮಾಡಿ ಪಾಸ್ ಮಾಡಿಸ್ಬೇಕು ಅಂತಾ ಅವಾಗವಾಗ ಓದೋಕ ಕರ್ಕೋಂಡು ಹೋಗ್ತಿದ್ರು. ಇವ ಜೋಕು ಮಾಡೋದು ತರ್ಲೆ ಮಾಡೋದು ನೋಡಿ ಬಸ್ಯಾ, ನಿಮ್ಮವ್ವ ಬೇಶನ್ ಉಂಡಿ ಕೊಡ್ತಾಳಂತ ಹೋಗ್ಲೆ ಅಂತ ಅಂದ ಕೂಡ್ಲೆ ಮನಿಗೆ ಓಡಿ ಹೋಗಾಂವ. ಬಸ್ಯಾನ ಗೆಳೆಯರು ಮಲ್ಯಾ ಮತ್ತು ಸೋಮ್ಯಾ . ಬಸ್ಯಾಗ ಸಣ್ಣ ಪುಟ್ಟ ಪ್ರಶ್ನೋತ್ತರ ಹೇಳಿ ಕೊಡ್ತಿದ್ರು . ಇಂತಹ ವನ್ನ ಬಸ್ಯಾ ಮರಿತಿದ್ದಿಲ್ಲ. ಬಾಯಿಪಾಟ ಮಾಡ್ಲೆ ಅಂದ್ರ ಮಾಡಿಬಿಡಾಂವ. ಎಲ್ಲರ ಬಾಯಲ್ಲೂ ಬಸ್ಯಾ, ಎಲ್ಲಿದಿಲೇ ಓದಾಕ ಕುತ್ಗೋ ಬಾ ಅನ್ನೋದ ಮಾತು. ಶಾಲಿ ಮಾಸ್ತಾರ್ರು ಬಾಳ ಕಷ್ಟ ಪಟ್ರು ಬಸ್ಯಾಗೋಸ್ಕರ. ಪ್ರತಿ ವರ್ಷ ಶಾಲಿ ರಿಜಲ್ಟ್ ನೂರಕ್ಕ ನೂರು ಆಗಾಕ ಹತೈತಿ. ಬಸ್ಯಾನಿಂದ ಆ ಕ್ರೆಡಿಟ್ ಎಲ್ಲಿ ಆಳಾಗ್ತೈತಿ ಅಂತ ಶಾಲ್ಯಾನ ಮಾಸ್ತಾರು ಎಲ್ರೂ ಇವನಿಗೋಸ್ಕರ ಸ್ಪೆಶಲ್ ಕ್ಲಾಸ್ ತಗೋತಿದ್ರು. ಆದ್ರೂ ಮಗ ತರ್ಲೆ ಮಾಡೋದು ಬಿಡ್ತಿದ್ದಿಲ್ಲ. ಗಣಿತಾ ಮಾಸ್ತಾರಂತೂ ಈ ಪರಿ ಹೊಡಿತಿದ್ರಂದ್ರ ಅವ್ರಿಗ ಮಾತ್ರ ಬಸ್ಯಾ ಹೆದರತ್ತಿದ್ದ. ಸುಮ್ನ ಓದ್ಕೋತ ಕುತ್ಗೊತಿದ್ದ. ಬಸ್ಯಾಗ ಓದುಸಾಕ ಹೋಗಿ ಅವನ ಜೊತೆಗೆ ಇರೋರೆಲ್ಲರಿಗೂ ಎಸೆಸೆಲ್ಸಿ ಸಿಲೆಬಸ್ ಎಬಿಸಿಡಿ ತರ ಬಾಯಿಪಾಟ್ ಆಗಿ ಬಿಟ್ಟಿತ್ತು. ಇವ ಬಗ್ಗೆ ಎಲ್ರೂ ಕಾಳಜಿ ತಗೊಳೋದು ನೋಡಿ ಊರಾನ ಜನರೆಲ್ಲ ಬಸ್ಯಾ ಈ ವರ್ಷ ಶಾಲಿಗೆ ಟಾಪ್ ಬರ್ತಾನ ಅಂತ ಮಾತಾಡ್ತಿದ್ರು. ಊರಾನ ಗೌಡ್ರಂತೂ ಬಸ್ಯಾ ಎಸೆಸೆಲ್ಸಿ ಪಾಸ್ ಆದ್ರ ಛಲೋ ಸೈಕಲ್ ಕೊಡಿಸ್ತೀನಿ ಅಂತ ಆಸೆ ತೋರಿಸಿದ್ರು. ಪಕ್ಕದ ಮನಿ ಯಂಕಜ್ಜಿ’ ಬಸ್ಯಾ ಪಾಸ್ ಆದ್ರ ನಾನ ಅವ್ನ ಮದುವಿ ಆಗ್ತಿನಿ ಅಂತ ನಗಸ್ಯಾಟಿ ಮಾಡ್ತಿದ್ಲು.

ಅಂತೂ ಇಂತೂ ಪರೀಕ್ಷೆ ಬರೆದು ಬಂದ ಕೆಲ ದಿನಗಳ ನಂತ್ರ ರಿಜಲ್ಟ್ ಬಂದೇ ಬಿಡ್ತು. ಊರಾನ ಜನಕ್ಕ, ಮಕ್ಕಳ ಅಪ್ಪ ಅವ್ವಗ , ಶಾಲಿ ಮಾಸ್ತಾರಿಗೂ ಒಂದೇ ಟೆನ್ಷನ್ನು ಬಸ್ಯಾ ಪಾಸಾದ್ನಾ ಇಲ್ಲಾ? ದಾರ್ಯಾಗ ಹೋಗುವಾಗ ಮಾಸ್ತಾರಿಗೆ ಊರಾನ ಜನ ಸರ, ಬಸ್ಯಾ ಏನಾದ್ರಿ? ಅಂತ ಕೇಳ್ತಿದ್ರು. ಮಾಸ್ತಾರ್ರು ಮಾತ್ರ ಇನ್ನೂ ರಿಜಲ್ಟ್ ಕೈಗೆ ಬಂದಿಲ್ಲ ಇರ್ರೆಪ ಅಂತ ಉತ್ತರ ಕೊಟ್ಟು ಕೊಟ್ಟು ಸಾಕಾಗಿತ್ತು. ಬಸ್ಯಾನ ಅಪ್ಪ ಅವ್ವಗೂ ಬಾಳ ಟೆನ್ಷನ್ ಆಗಿತ್ತು. ಅಪ್ಪಮಾತ್ರ ಮಗನ ನೀ ಪಾಸಾಗ್ಲಿಲ್ಲ ಅಂದ್ರ ಕಾಲ ಮುರೀತೀನಿ ಅಂತ ಬಸ್ಯಾಗ ಅವಾಜ್ ಹಾಕಿದ್ದ. ಅವ್ವ ಬಸ್ಯಾ ಪಾಸಾಗ್ಲಿ ಅಂತ ಮನಿ ಜಗಲಿ ಮ್ಯಾಲಿನ ದೇವ್ರಿಗೆ ದೀಪ ಹಚ್ಚಿದ್ಲು. ಬಸ್ಯಾಗ ಮಾತ್ರ ಯಾವುದೇ ಟೆನ್ಷನ್ ಇರಲಿಲ್ಲ. ಬೆಳಗ್ಗೆ ಎದ್ದು ಊರಾಗ ತಿರುಗಾಕ ಹೋದಾವ ಪತ್ತೇನೆ ಇಲ್ಲ.

ಅಂತೂ ರಿಜಲ್ಟ್ ಮಾಸ್ತಾರ್ ಕೈಗೆ ಬಂದಿತ್ತು. ಎಲ್ಲರ ಮುಖದಾಗ ನಗು. ಶಾಲಿ ರಿಜಲ್ಟ್ ನೂರಕ್ಕೆ ನೂರು ಆಗೈತಿ. ಅಂದ್ರ ಬಸ್ಯಾ ನೂ ಪಾಸಾಗ್ಯಾನ. ಮಾಸ್ತಾರೆಲ್ಲರಿಗೂ ಖುಷಿನೋ ಖುಷಿ. ಹೆಡ್ ಮಾಸ್ತಾರ್ರು ಸಿಹಿ ತರಿಸಿ ಎಲ್ಲರಿಗೂ ಹಂಚಿದ್ರು. ಮಾಸ್ತಾರ್ರು ಹುಡುಗುರ್ರು ಎಲ್ರೂ ಸೇರಿ ಸೇರಿ ಪಟಾಕಿ ಹೊಡೆದ್ರು, ಶಾಲಿ ರಿಜಲ್ಟ್ ನೂರಕ್ಕ ನೂರು ಬಂದಿದ್ದಕ್ಕಲ್ಲ; ಬಸ್ಯಾ ಪಾಸಾಗಿದ್ದಕ್ಕ. ಹುಡುಗುರೆಲ್ಲಾ ಖುಷಿಯಾಗಿ ತಮ್ಮ ರಿಜಲ್ಟ್ ಕ್ಕಿಂತ ಬಸ್ಯಾನ ರಿಜಲ್ಟ್ ಊರಾಗ ಹೇಳಾಕ ಓಡಿ ಓದ್ರು. ಅಂತೂ ಇಂತೂ ಬಸ್ಯಾ ಪಾಸಾದ. ಊರಾನ ಗೌಡ್ರು ಸೈಕಲ್ ಅಂಗಡಿ ಮಾಬುಸಾಬ ಗ ಒಂದು ಛಲೋ ಸೈಕಲ್ ಖರೀದಿ ಮಾಡೋಕ ಹೇಳಿದ್ರು. ಪಕ್ಕದ ಮನಿ ಯಂಕಜ್ಜಿ ಬಸ್ಯಾನ ಮದುವಿ ಆಗಾಕ ಬಾಳ ಚಂದಾಗಿ ರೆಡಿ ಆದ್ಲು. ಎಲ್ರೂ ಯಂಕಜ್ಜಿನ ನಗಸ್ಯಾಟಿ ಮಾಡೋವ್ರ. ಆದ್ರ ಬಸ್ಯಾ ಮಾತ್ರ ಎಲ್ಲೂ ಕಾಣಾವಲ್ಲ. ಬಸ್ಯಾ ಎಲ್ಲಿದಿಯಪ್ಪಾ? ಅಂತ ಎಲ್ರೂ ಹುಡುಕೊದಕ್ಕ ಶುರು ಮಾಡಿದ್ರು. ಬಸ್ಯಾನ ಚೆಡ್ಡಿ ದೋಸ್ತ್ರು ಎಲ್ಲ ಕಡೆ ಬಸ್ಯಾ ಎಲ್ಲಿದಿಯಪ್ಪಾ? ಅಂತ ಹುಡುಕಾಟ ಪ್ರಾರಂಭ ಮಾಡಿದ್ರು. ತಮ್ಮ ತಮ್ಮ ಸೀಕ್ರೆಟ್ ಸ್ಥಳಗಳಿಗೆಲ್ಲ ಹೋಗಿ ಹುಡುಕಿದ್ರೂ ಬಸ್ಯಾ ಸಿಗಲಿಲ್ಲ. ಈ ನನ್ನ ಮಗ ಎಲ್ಲಿ ಹೋದ ಅಂತ ಅಪ್ಪಖುಷಿಯಿಂದ ಹುಡುಕಾಟ ನಡೆಸಿದ. ಫೆಲಾಗೆನಿ ಅಂತ ಮತ್ತೆನಾದ್ರೂ ಕೆರೆಕಡೆ, ಬಾವಿಕಡೆ ಏನಾದ್ರೂ ಹೋದ್ನಾ ಅಂತ ಎಲ್ಲರ ಮನದಾಗ ಸಣ್ಣ ವಿಚಾರ ಶುರುವಾತು. ಅವ್ವ ಅಂತೂ ಕೈಯಾಗ ನಾಲ್ಕು ಬೇಸನ್ ಉಂಡಿ ಹಿಡಿದು ಬಸ್ಯಾ ಎಲ್ಲಿದಿಯಪ್ಪಾ? ಅಂತ ಹುಡುಕಾಟ ಶುರು ಮಾಡಿದ್ಲು. ಕೊನೆಗೂ ಬಸ್ಯಾ ತನ್ನ ಹಳೆ ಚಾಳಿಯಂಗ ಹುಣಸಿ ಗಿಡದ ಮ್ಯಾಲ ಹೋಗಿ ಕುತ್ಗೊಂಡಿದ್ದ. ಅವ್ವ ಬಸ್ಯಾ ಎಲ್ಲಿದಿಯಪ್ಪಾ? ನಿಂಗ ಬೇಷನ್ ಉಂಡಿ ತಂದೀನಿ ಬಾಪ್ಪಾ ಅಂತ ಗಿಡದ ಹತ್ತಿರ ಬಂದಾಗ ಬಸ್ಯಾ ನಾನು ಇಲ್ಲಿದಿನಿ ಬೇ ಅಂತ ಸಣ್ಣ ದನಿಲೆ ಅಂದ. ಅವ್ವ ಖುಷಿಯಿಂದ ಬಾರೋ ನನ್ನ ಮಗನ ನೀ ಪರೀಕ್ಷೆ ದಾಗ ಪಾಸಾಗಿ. ತಗೋ ಬಾ ಬೇಷನ್ ಉಂಡಿ ಅಂತ ಅಂತಿದ್ದಂಗ ಸರಸರ ಅಂತ ಮರದಿಂದ ಕೆಳಗಿಳಿದು ಬೇಸನ್ ಉಂಡಿ ಇಸ್ಗೊಂಡ. ಬಸ್ಯಾಗ ಪಾಸಾಗಿದ್ದು ಖುಷಿ ಇದ್ದಿಲ್ಲ ಅವ್ವ ಬೇಸನ್ ಉಂಡಿ ಕೊಟ್ಟಿದ್ದು ಖುಷಿ ಇತ್ತು. ಚಡ್ಡಿ ದೋಸ್ತುರೆಲ್ಲಾ ಬಂದು ಬಸ್ಯಾ ನೀ ಇಲ್ಲಿದಿಯೇನ್ಲೆ ನೀ ಪಾಸಾಗಿಲೇ ಅಂತ ಬಸ್ಯಾನ ಎತ್ತಿಕೊಂಡು ಕುಣಿದಾಡಿದ್ರು. ಬಸ್ಯಾ ಮಾತ್ರ ಅವ್ವ ಕೊಟ್ಟ ಬೇಸನ್ ಉಂಡಿ ತಿಂತಾ ಇದ್ದ. ಅಂತೂ ಬಸ್ಯಾ ಜಸ್ಟ್ ಪಾಸ್ ಆದ್ರೂ ಬಸ್ಯಾನ ಪ್ಯಾನ್ಸಿಗೆಲ್ಲಾ ಬಸ್ಯಾ ಫಸ್ಟ್ ರ್ಯಾಂಕು.

ಬಸ್ಯಾನ ಹಾಗೆ ನಮ್ಮಲ್ಲೂ ಅನೇಕ ಮಕ್ಕಳಿದ್ದಾರೆ. ಅಪಹಾಸ್ಯ ಮಾಡಿ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದೆವೆ. ಅರ್ಧಕ್ಕೆ ಶಾಲೆ ಯನ್ನು ಬಿಟ್ಟು ಕೆಲಸಕ್ಕೆ ಸೇರುವ ಇಂತಹ ಅನೇಕ ಮಕ್ಕಳಿದ್ದಾರೆ. ಬಸ್ಯಾ ನಿಗೆ ಸಿಕ್ಕಂತಹ ಕಾಳಜಿ ಇಂತಹ ಮಕ್ಕಳಿಗೆ ದೊರೆತಲ್ಲಿ ಪರೀಕ್ಷೆ ಗಳಲ್ಲಿ ಪಾಸಾಗಿ ಓದನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

Writer - ವೆಂಕಟೇಶ ಚಾಗಿ, ಲಿಂಗಸುಗೂರ

contributor

Editor - ವೆಂಕಟೇಶ ಚಾಗಿ, ಲಿಂಗಸುಗೂರ

contributor

Similar News