ಎಲ್‌ಪಿಜಿ ಯೋಜನೆಯ ಯಶಸ್ಸನ್ನು ಪ್ರಶ್ನಿಸುವ ಹೊಸ ಅಧ್ಯಯನ

Update: 2019-07-21 18:37 GMT

ಗ್ರಾಮೀಣ ಪ್ರದೇಶದ ಬಡವರು ಇನ್ನೂ ಕೂಡ ಬಹಳ ಕಡಿಮೆ ಎಲ್‌ಪಿಜಿ ಅನಿಲ ಬಳಸುತ್ತಿರುವುದು ಕಂಡುಬಂದಿದೆ. (ಹಲವರು ಒಂದು ರಿಫಿಲ್ ಕೊಂಡುಕೊಳ್ಳಲು ಕೂಡ ಅಂಗಡಿಗೆ ಮರಳಿ ಬರುವುದಿಲ್ಲ.) ಉಚಿತ ಅನಿಲ ಸಂಪರ್ಕ ನೀಡಿದ ಎರಡು, ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಕೂಡ ಗ್ರಾಹಕ ವಾರ್ಷಿಕ ಅನಿಲ ಬಳಕೆಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಯಶಸ್ಸಿನ ಕುರಿತು ಹೊಸ ಅಧ್ಯಯನವೊಂದು ಕೆಲವು ಪ್ರಶ್ನೆಗಳನ್ನು ಎತ್ತಿದೆ. ಉಚಿತ ಗ್ಯಾಸ್ ಸಂಪರ್ಕ ಮತ್ತು ಉಚಿತ ಮೊದಲ ಗ್ಯಾಸ್ ಸಿಲಿಂಡರ್ ಮೂಲಕ ಬಿಪಿಎಲ್ ಕುಟುಂಬಗಳ ಮನೆಗಳಲ್ಲಿ ಹೊಗೆ ರಹಿತ ಅಡುಗೆ ಮನೆಗಳನ್ನು ಸಾಧ್ಯವಾಗಿಸುವ ಪಿಎಂಯುವೈ ಬಗ್ಗೆ ಬಹಳ ಪ್ರಚಾರ ಮಾಡಲಾಗಿತ್ತು. ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳ ಪಾಲಿಗೆ ಈ ಯೋಜನೆ ಒಂದು ಹೊಸ ಯುಗವನ್ನೇ ಆರಂಭಿಸಲಿದೆ ಎಂದು ಹೇಳಲಾಗಿತ್ತು.

 ಆದರೆ ವ್ಯಾಂಕೂವರ್‌ನ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯ, ಆಸ್ಟ್ರೇಲಿಯದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್ ಮತ್ತು ಮೆಸಾಚುಸೆಟ್ಸ್‌ನ ಸ್ಟಾಕ್‌ಹೋಮ್ ಎನ್‌ವ್ಯಾರನ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ನಡೆಸಿದ ಮೊದಲ ‘‘ವಸ್ತುನಿಷ್ಠ’’ ಅಧ್ಯಯನದ ಪ್ರಕಾರ ಭಾರತದ ಹಳ್ಳಿಗಳಲ್ಲಿರುವ ಬಡವರು ರಿಫಿಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ನಿಗದಿತವಾಗಿ ಕೊಂಡುಕೊಳ್ಳಲು (ತಮ್ಮ ಬಡತನದಿಂದಾಗಿ) ಅಸಮರ್ಥರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಅವರು ಮನೆಗಳಲ್ಲಿ ಅಡುಗೆ ಮಾಡಲು ಹೊಗೆ ಉಗುಳುವ ಘನ ಇಂಧನ (ಕಟ್ಟಿಗೆ, ಉರುವಲು)ವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

 ಒಮ್ಮೆ ಮಹಿಳೆಯರು ಎಲ್‌ಪಿಜಿ ಅಡುಗೆಯ ಸವಲತ್ತನ್ನು, ಫಲವನ್ನು ಅನುಭವಿಸಿದರೆಂದರೆ, ಅವರು ಸಹಜವಾಗಿಯೇ ಕಟ್ಟಿಗೆ ಉರುವಲಿಗಿಂತ ಹೆಚ್ಚು ಸ್ವಚ್ಛವಾದ ಇಂಧನಕ್ಕೆ (ಗ್ಯಾಸ್‌ಗೆ) ತಮ್ಮ ಅಡುಗೆ ಮನೆಯ ಅಡುಗೆಯನ್ನು ಬದಲಿಸಿಕೊಳ್ಳುತ್ತಾರೆ. ಹಾಗಾಗಿ ಮೊದಲ ಅನಿಲ ಸಿಲಿಂಡರನ್ನು ಉಚಿತವಾಗಿ ನೀಡಿದರೆ ಮುಂದಿನ ಸಿಲಿಂಡರ್‌ಗಳನ್ನು ಅವರು ಕೊಂಡುಕೊಳ್ಳದೆ ಇರುವುದಿಲ್ಲ ಎಂಬುದು ಸರಕಾರದ ಗ್ರಹಿಕೆಯಾಗಿತ್ತು. ಆದರೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಎಲ್‌ಪಿಜಿ ಮಾರಾಟ ದತ್ತಾಂಶಗಳ ಆಧಾರದಲ್ಲಿ ವಿಶ್ಲೇಷಿಸಿದಾಗ ಈ ಗ್ರಹಿಕೆ ಈಡೇರಲಿಲ್ಲ, ಸುಳ್ಳಾಯಿತು ಎಂದು ತಿಳಿದುಬಂತು.

ಪಿಎಂಯುವೈಯಿಂದಾಗಿ ಎಲ್‌ಪಿಜಿ ಸಂಪರ್ಕವಿರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಆದರೆ ಈ ಸಂಖ್ಯೆಗೆ ಅನುಗುಣವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟದಲ್ಲಿ ಏರಿಕೆಯಾಗಲಿಲ್ಲ. ಅಂದರೆ ಅಡುಗೆ ಅನಿಲ ಸಂಪರ್ಕದ ಲಭ್ಯತೆ ಇನ್ನೂ ಕೂಡ ಸೀಮಿತವಾಗಿಯೇ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಉದಾಹರಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಕನಿಷ್ಠ ಒಂದು ವರ್ಷವನ್ನು ಪೂರ್ಣಗೊಳಿಸಿದ 5,848 ಪಿಎಂಯುವೈ ಗ್ರಾಹಕರಲ್ಲಿ 350 ಶೇ.ದಷ್ಟು ಅನಿಲ ಫಲಾನುಭವಿಗಳು ಮೊದಲ ವರ್ಷದಲ್ಲಿ ಒಂದೇ ಒಂದು ರಿಫಿಲ್ ಸಿಲಿಂಡರನ್ನು ಕೊಂಡುಕೊಳ್ಳಲಿಲ್ಲ. ಮತ್ತು 70ಶೇ. ಫಲಾನುಭವಿಗಳು ಮಾತ್ರ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಕೊಂಡಿದ್ದರು.

 ಕೊಪ್ಪಳ ಜಿಲ್ಲೆಯಲ್ಲಿ ಪಿಎಂಯುವೈ ಯೋಜನೆಯನ್ನು 2017ರ ಜೂನ್‌ನಲ್ಲಿ ಆರಂಭಿಸಲಾಗಿತ್ತು. 2018ರ ಡಿಸೆಂಬರ್ ವೇಳೆಗೆ ಜಿಲ್ಲೆಯಲ್ಲಿ ಅಂದಾಜು 15,000ಮಂದಿ ಪಿಎಂಯುವೈ ಗ್ರಾಹಕರಿದ್ದರು; ಮತ್ತು 12,500 ಮಂದಿ ಸಾಮಾನ್ಯ (ಜನರಲ್) ಗ್ರಾಹಕರಿದ್ದರು. ಆದರೆ 15,000ಮಂದಿ ಪಿಎಂಯುವೈ ಗ್ರಾಹಕರಿಗೆ ಪ್ರತಿದಿನ ಸುಮಾರು 50 ರಿಫಿಲ್‌ಗಳ ಮಾರಾಟವಾಗಿತ್ತು. ಅದೇ ವೇಳೆ 12,000 ಸಾಮಾನ್ಯ ಗ್ರಾಹಕರು ಪ್ರತಿದಿನ ಸುಮಾರು 150 ರಿಫಿಲ್‌ಗಳನ್ನು ಕೊಂಡುಕೊಂಡಿದ್ದರು.

 ರಾಷ್ಟ್ರಮಟ್ಟದಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 30 ರಾಜ್ಯಗಳಿಂದ ಸಂಗ್ರಹಿಸಿರುವ ದತ್ತಾಂಶಗಳು ಹೇಳುವಂತೆ, ಪಿಎಂಯುವೈಯ ಒಟ್ಟು ಫಲಾನುಭವಿಗಳಲ್ಲಿ ಕನಿಷ್ಠ ಪಕ್ಷ ಒಂದು ವರ್ಷ ಪೂರ್ಣಗೊಳಿಸಿದವರ ಪೈಕಿ, ತಮ್ಮ ಮೊದಲ ವರ್ಷದಲ್ಲಿ 24 ಶೇ. ಮಂದಿ ಗ್ರಾಹಕರು ಒಂದೇ ಒಂದು ರಿಫಿಲ್ ಸಿಲಿಂಡರ್‌ಕೊಳ್ಳಲು ಗ್ಯಾಸ್ ವಿತರಣಾ ಕಚೇರಿಗೆ ಬರಲಿಲ್ಲ; ಸುಮಾರು 28 ಶೇ. ಮಂದಿ ಐದು ಅಥವಾ ಐದಕ್ಕಿಂತ ಹೆಚ್ಚು ರಿಫಿಲ್ ಸಿಲಿಂಡರ್‌ಗಳನ್ನು ಕೊಂಡುಕೊಂಡಿದ್ದರು.

ತನ್ನ ಮೂಲ ಉದ್ದೇಶದಲ್ಲಿ ಪಿಎಂಯುವೈ ಉತ್ತಮವಾದ ಒಂದು ಯೋಜನೆಯೇ ಸರಿ. ಆದರೆ ಬಡಕುಟುಂಬಗಳ ಮನೆಗೆ ಒಂದು ಉಚಿತ ಸಿಲಿಂಡರ್ ಮತ್ತು ಸ್ಟವ್ ನೀಡಿದ ಕೂಡಲೇ ದೀರ್ಘಕಾಲೀನ ಬದಲಾವಣೆಯಾಗಿ ಬಿಡುವುದಿಲ್ಲ ಎನ್ನುತ್ತಾರೆ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ನಡೆಸಿದ ಅಧ್ಯಯನದ ಮೊದಲ ಲೇಖಕ ಅಭಿಶೇಕ್ ಖರ್. ‘‘ಗ್ರಾಮೀಣ ಪ್ರದೇಶದ ಬಡವರು ಇನ್ನೂ ಕೂಡ ಬಹಳ ಕಡಿಮೆ ಎಲ್‌ಪಿಜಿ ಅನಿಲ ಬಳಸುತ್ತಿರುವುದು ಕಂಡುಬಂದಿದೆ. (ಹಲವರು ಒಂದು ರಿಫಿಲ್ ಕೊಂಡುಕೊಳ್ಳಲು ಕೂಡ ಅಂಗಡಿಗೆ ಮರಳಿ ಬರುವುದಿಲ್ಲ.) ಉಚಿತ ಅನಿಲ ಸಂಪರ್ಕ ನೀಡಿದ ಎರಡು, ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಕೂಡ ಗ್ರಾಹಕ ವಾರ್ಷಿಕ ಅನಿಲ ಬಳಕೆಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ.’’

ನೇಚರ್ ಎನರ್ಜಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವು ಎಲ್‌ಪಿಜಿ ರಿಫಿಲ್ ಮಾರಾಟಗಳ ದತ್ತಾಂಶವನ್ನು ಆಧರಿಸಿದ ಪಿಎಂ ಯುವೈಯ ಮೊತ್ತ ಮೊದಲ ‘‘ವಸ್ತುನಿಷ್ಠ’’ಆಧ್ಯಯನವಾಗಿದೆ. ಯಾಕೆಂದರೆ ಈ ಯೋಜನೆಯ ಕುರಿತಾದ ಈ ಹಿಂದಿನ ಆಧ್ಯಯನಗಳು ಸಮೀಕ್ಷಾ ಪೂರ್ವಾಗ್ರಹಪೀಡಿತವಾಗಿವೆ.

ಪಿಎಂಯುವೈ ಫಲಾನುಭವಿಗಳ ವಾರ್ಷಿಕ ತಲಾ ಅನಿಲ ಬಳಕೆ ನಿಜವಾಗಿ ಗ್ರಾಮೀಣ ಎಲ್‌ಪಿಜಿ ಬಳಕೆದಾರನ ಬಳಕೆಗಿಂತ 50 ಶೇ. ಕಡಿಮೆಯಿದೆ. ಸಾಮಾನ್ಯ ಗ್ರಾಮೀಣ ಎಲ್‌ಪಿಜಿ ಬಳಕೆದಾರ ಒಂದು ವರ್ಷದಲ್ಲಿ ಐದು ಅಡುಗೆ ಸಿಲಿಂಡರ್‌ಗಳನ್ನು ಕೊಂಡುಕೊಳ್ಳುತ್ತಾನೆ. ಇದು ಭಾರತದಲ್ಲಿ ಸಾಮಾನ್ಯ ಕುಟುಂಬವೊಂದಕ್ಕೆ ಎಲ್‌ಪಿಜಿ ಬಳಸಿಯೇ ಅಡುಗೆ ಮಾಡಲು ಬೇಕಾಗುವ ಅಡುಗೆ ಅನಿಲದ ಸುಮಾರು ಅರ್ಧದಷ್ಟು ಆಗುತ್ತದೆ. ಆದರೆ ಒಂದು ಸಾಮಾನ್ಯ ಗ್ರಾಮೀಣ ಕುಟುಂಬಕ್ಕೆ ವಾರ್ಷಿಕ ಹತ್ತು ಸಿಲಿಂಡರ್‌ಗಳು ಬೇಕಾಗುತ್ತವೆ.

ಹೊಗೆ ರಹಿತ ಅಡುಗೆ ಮನೆಗಳು ಅಂತಿಮವಾಗಿ ನಮ್ಮ ಗುರಿಯಾಗಿರುವುದಾದಲ್ಲಿ, ನಾವು ಗ್ರಾಮೀಣ ಪ್ರದೇಶದ ಬಡವರು ಸದಾ ಎಲ್‌ಪಿಜಿ ಬಳಸಲು ಸಾಧ್ಯವಾಗುವಂತೆ ಪಿಎಂಯುವೈ ಯೋಜನೆಯಲ್ಲಿಸೂಕ್ತ ಬದಲಾವಣೆಗಳನ್ನು ಮಾಡಬೇಕು.

 ಕೃಪೆ: ಡೆಕ್ಕನ್ ಹೆರಾಲ್ಡ್

Writer - ಕಲ್ಯಾಣ್ ರೇ

contributor

Editor - ಕಲ್ಯಾಣ್ ರೇ

contributor

Similar News

ಜಗದಗಲ
ಜಗ ದಗಲ