ಬಿ.ಸಿ ಪಾಟೀಲ್ ಗೆ 25 ಕೋಟಿ ರೂ. ಆಮಿಷ: ಸಚಿವ ಕೃಷ್ಣಭೈರೇಗೌಡ ಆರೋಪ

Update: 2019-07-22 09:00 GMT

 ಬೆಂಗಳೂರು, ಜು.22: ಶಾಸಕ ಬಿ.ಸಿ.ಪಾಟೀಲ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.ಅವರಿಗೆ 25 ಕೋಟಿ ರೂ. ಆಮಿಷವೊಡ್ಡಿದ ದಾಖಲೆ ಇದೆ ಎಂದು ಸಚಿವ ಕೃಷ್ಣಭೈರೇಗೌಡ ಸದನದಲ್ಲಿ ಗಂಭೀರ ಆರೋಪ ಮಾಡಿದರು.

 ನಾವು  ಸಚಿವ ಪದವಿಯನ್ನು ಕೊಡುತ್ತೇವೆ. ಉಪಚುನಾವಣೆ ನಡೆಯುವುದಿಲ್ಲ. ನಮ್ಮ ಪಕ್ಷದ ಸ್ಪೀಕರ್ ಇರುತ್ತಾರೆ ಎಂದು ಬಿಜೆಪಿ ನಾಯಕರೊಬ್ಬರು ದೂರವಾಣಿಯಲ್ಲಿ ಭರವಸೆ ನೀಡಿರುವ ಬಗ್ಗೆ ಆಡಿಯೋ ದಾಖಲೆ ಇದೆ ಸದನದ  ಗಮನ ಸೆಳೆದರು.

ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಸದನದಲ್ಲಿ ದಾಖಲೆ ಇಲ್ಲದೆ ಸದನಕ್ಕೆ ಗೈರು ಹಾಜರಾದ  ಶಾಸಕರ ಬಗ್ಗೆ ಆರೋಪ ಮಾಡಬಾರದು.  ಎಂದಾಗ ಸ್ಪೀಕರ್ ರಮೇಶ್ ಕುಮಾರ್ “ ಅವರು ಯಾಕೆ ಸದನಕ್ಕೆ ಬಂದಿಲ್ಲ. ಸದನದಲ್ಲಿ ತಮ್ಮ ಪರ ಮಾತನಾಡಬೇಕೆಂದು ಕ್ಷೇತ್ರದ ಜನತೆ ಆರಿಸಿ ಕಳುಹಿಸಿದ್ದಾರೆ. ಹಾಗಿದ್ದರೂ ಯಾಕೆ ಬಂದಿಲ್ಲ. ಬಾರದಕ್ಕೆ ಕಾರಣ ನೀಡಿಲ್ಲ'' ಎಂದರು.

ನಿಮ್ಮಲ್ಲಿರುವ ದಾಖಲೆಯನ್ನು  ನೀಡುವಂತೆ ಕೃಷ್ಣಭೈರೇಗೌಡರಿಗೆ ಸ್ಪೀಕರ್  ಸೂಚನೆ ನೀಡಿದರು.

ಬಿಜೆಪಿ ನಡೆಸಿದ  ಆಪರೇಷನ್ ಕಮಲದ ಬಗ್ಗೆ ಸದನಕ್ಕೆ ಎಳೆಎಳೆಯಾಗಿ ವಿವರಿಸಿದ ಕೃಷ್ಣಭೈರೇಗೌಡ ಕರ್ನಾಟಕದಲ್ಲಿ ಮಾತ್ರವಲ್ಲ. ಈ ಮೊದಲು ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿಯೂ  ಆಪರೇಷನ್ ಕಮಲ ನಡೆದಿದೆ ಎಂದು ಮಾಹಿತಿ ನೀಡಿದರು.

ಸಂವಿಧಾನದಲ್ಲಿ ತ್ರಿಶಂಕು ಸ್ಥಿತಿಗೆ ಅವಕಾಶ ಇಲ್ಲ.  ಆದರೆ ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ರಾಜೀನಾಮೆ ಕೊಟ್ಟವರ ಬಗ್ಗೆ ತೀರ್ಮಾನವಾಗಿಲ್ಲ. ಅವರ ರಾಜೀನಾಮೆಯನ್ನು ಒಂದೋ ಅಂಗೀಕರಿಸಬೇಕು, ಅಥವಾ ತಿರಸ್ಕರಿಸಬೇಕು. ಅದು ಇತ್ಯರ್ಥವಾಗದೆ ವಿಶ್ವಾಸಮತಕ್ಕೆ ಹಾಕಿದರೆ ಆ ಪ್ರಕ್ರಿಯೆ ಸಿಂಧೂವಾಗುವುದಿಲ್ಲ. ನಿಮಗೆ ಅಧಿಕಾರ ಇದೆ.  ಹೀಗಾಗಿ ನೀವು ತೀರ್ಮಾನಿಸಬೇಕು ಎಂದು ಸಭಾಧ್ಯಕ್ಷರನ್ನು  ಆಗ್ರಹಿಸಿದರು.

ವಿಧಾನಸಭೆಯ ಬೆಳಗ್ಗಿನ  ಕಲಾಪದ ಮೊದಲಾರ್ಧ ಬಹುತೇಕ  ಕೃಷ್ಣಭೈರೇಗೌಡ   ಭಾಷಣಕ್ಕೆ ಸೀಮಿತವಾಗಿತ್ತು, ಕೃಷ್ಣಭೈರೇಗೌಡರ ಭಾಷಣ ಮುಗಿದ ಬೆನ್ನಲ್ಲೇ ಡೆಪ್ಯುಟಿ  ಸ್ಪೀಕರ್ ಕೃಷ್ಣಾರೆಡ್ಡಿ ಕಲಾಪವನ್ನು ಮಧ್ಯಾಹ್ನ 3:30ಕ್ಕೆ ಮುಂದೂಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News