ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಕುರಿತಂತೆ....
ಕಡಕೋಳ ಮಡಿವಾಳಪ್ಪನವರು ತತ್ವಜ್ಞಾನಿ. ಅವರ ಮಾತು, ಹಾಡು ಎಲ್ಲವೂ ಒಂದು ವಿಸ್ಮಯ. ಅವರ ಪ್ರತಿ ಮಾತಿಗೂ ಒಂದು ವಿಶೇಷ ಅರ್ಥ. ಶಿಶುನಾಳ ಶರೀಫರು, ರಾಂಪುರ ಬಕ್ಕಪ್ಪನವರು, ಎಮ್ಮಡಿಗೆ ಪ್ರಭುಗಳು ಹಾಗೂ ಭೀಮಾಶಂಕರ ಅವಧೂತರ ಸಾಲಿಗೆ ಸೇರಿದವರು ಕಡಕೋಳ ಮಡಿವಾಳಪ್ಪನವರು. ಹೈದರಾಬಾದ್ ಕರ್ನಾಟಕದಲ್ಲಿ ಮಡಿವಾಳಪ್ಪನವರ ನುಡಿಗಳು ಈಗಲೂ ಮನೆಮಾತು. ಜನರು ಅವರ ಮಾತುಗಳನ್ನು, ಹಾಡುಗಳನ್ನು, ವಾಕ್ಯಗಳನ್ನು ಉಲ್ಲೇಖಿಸಿಯೇ ಮಾತನಾಡುವುದನ್ನು ಒಂದು ಸಹಜಕ್ರಿಯೆ ಎನ್ನುವ ಹಾಗೆ ಅನುಸರಿಸಿಕೊಂಡು ಬಂದಿದ್ದಾರೆ. ಕಡಕೋಳ ಮಡಿವಾಳಪ್ಪನವರು ಅಲ್ಲಿನ ಜನಜೀವನವನ್ನು ಬೆಸೆದ ಬಗೆಯನ್ನು ಇದು ಹೇಳುತ್ತದೆ. ಶರಣ ಎಲ್. ಬಿ. ಕೆ. ಆಲ್ದಾಳ ಅವರು ಕಡಕೋಳ ಮಡಿವಾಳಪ್ಪನವರ ಬದುಕು, ಸಂದೇಶಗಳನ್ನು ‘ಕಡಕೋಳ ಮಡಿವಾಳಪ್ಪನವರು’ ಕೃತಿಯಲ್ಲಿ ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರತಂದಿದೆ.
ಇಲ್ಲಿ ಮಡಿವಾಳಪ್ಪನವರನ್ನು ಐತಿಹಾಸಿಕ ನೆಲೆಯಲ್ಲಿ ಮಾತ್ರವಲ್ಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ನೋಡಲಾಗಿದೆ. ನಂಬಿಕೆಯ ನೆಲೆಗಟ್ಟಿನಲ್ಲಿ ಲೇಖಕರು ಮಡಿವಾಳಪ್ಪನವರನ್ನು ಕಟ್ಟಿಕೊಟ್ಟಿದ್ದಾರೆ. ಮಿತ್‌ಗಳು ಮತ್ತು ವಾಸ್ತವಗಳ ನಡುವೆ ಇರುವ ಮಡಿವಾಳಪ್ಪರ ಕಥನವನ್ನು, ಅವರ ಆಧ್ಯಾತ್ಮಿಕ ಹಿನ್ನೆಲೆಗಳನ್ನು ನಾವು ಈ ಕೃತಿಯ ಮೂಲಕ ಗ್ರಹಿಸಬಹುದಾಗಿದೆ. ಜೊತೆಗೆ ತತ್ವಕಾರರು ಹೇಗೆ ಧಾರ್ಮಿಕತೆಯ ಎಲ್ಲೆಗಳನ್ನು ಮೀರಿ ತಮ್ಮ ಅಧ್ಯಾತ್ಮ ವಲಯಗಳನ್ನು ವಿಸ್ತರಿಸಿಕೊಂಡಿದ್ದರು ಎನ್ನುವುದಕ್ಕೂ ಇಲ್ಲಿ ಹಲವು ಉದಾಹರಣೆಗಳು ದೊರಕುತ್ತವೆ.
ಚನ್ನೂರ ಜಲಾಲಸಾಹೇಬರು ಉನ್ನತ ವಿಚಾರವಾದಿಗಳು. ಜಾತಿ ಮತ ಪಂಥಗಳ ಗಡಿದಾಟಿದ ಸಂತರು. ಮಡಿವಾಳ ಶಿವಯೋಗಿ ಮತ್ತು ಜಲಾಲ ಸಾಹೇಬರ ಮುಖಾಮುಖಿಯನ್ನು ಈ ಕೃತಿಯಲ್ಲಿ ಒಂದೆಡೆ ಕಾಣಬಹುದು. ಮಡಿವಾಳ ಶಿವಯೋಗಿಗಳ ಪ್ರಭಾವಕ್ಕೆ ಮಣಿದು ಕಡಕೋಳಕ್ಕೆ ಬಂದಾಗ ಸರ್ವಾಂಗ ಲಿಂಗ ಧಾರಿಯಾದ ಮಡಿವಾಳ ಶಿವಯೋಗಯೋಗಿಗಳಿಗೆ ಜಲಾಲ ಸಾಹೇಬರು ಪ್ರಶ್ನೆ ಮಾಡುತ್ತಾರೆ
‘‘ಜಂಗಮನಾಗ ಬೇಕಾದರೆ ಮನ ಲಿಂಗ ಮಾಡಿಕೊಂಡಿರಬೇಕು
ಅಂಗದ ಗುಣ ಅಳಿದಿರಬೇಕು-ತಾ
ನಿಸ್ಸಂಗನಾಗಿ ಶರಣರ ಕೂಡಿ ಕೊಂಡಿರಬೆೀಕು...’’
ಎಂದು ವೀರಶೈವದ ಕುರುಹು ಅರುಹುಗಳನ್ನು ತೋರಿಸುವ ಮೂಲಕ ತಮ್ಮನುಭವವನ್ನು ಬಿಚ್ಚಿಡುತ್ತಾರೆ.
ಮಡಿವಾಳ ಶಿವಯೋಗಿಗಳು ಹಸನ್ಮುಖಿಯಾಗಿ ಜಲಾಲ ಸಾಹೇಬರನ್ನು ಸ್ವಾಗತಿಸುತ್ತಾ ‘‘ಫಕೀರನಾಗಬೇಕಾದರೆ ಈ ಮನ/ಧಿಃಕ್ಕಾರ ಮಾಡಿಕೊಂಡಿರಬೇಕು/ನಕಾರ, ಮಕಾರ, ಶಿಕಾರ, ವಕಾರ/ಯಕಾರ, ಓಂಕಾರ ತಿಳಿದಿರಬೇಕೋ....’’ ಎಂದು ಆರು ಚರಣಗಳ ತತ್ವ ಹಾಡುಗಳಿಂದ ಉತ್ತರಿಸುತ್ತಾರೆ. ಮಾತಿನಾಚೆಗೆ ತತ್ವ ಪದಗಳ ಮೂಲಕವೇ ಕಡಕೋಳ ಮಡಿವಾಳಪ್ಪನವರೂ ಅವರ ಸಮಕಾಲೀನರು ಹೇಗೆ ಬದುಕಿದರು ಎನ್ನುವುದನ್ನು ಇದು ಹೇಳುತ್ತದೆ. 140 ಪುಟಗಳ ಈ ಕೃತಿಯ ಮುಖಬೆಲೆ 120 ರೂ.