ಕೃಷಿ ಜಾನಪದ: ಮಹತ್ವದ ಸಂಶೋಧನಾ ಕೃತಿ

Update: 2019-07-24 18:44 GMT

ಜಾನಪದ ಸಾಹಿತ್ಯಗಳು ಹುಟ್ಟುವುದೇ ಕಾಯಕಗಳ ಜೊತೆ ಜೊತೆಗೆ. ಕಾಯಕವನ್ನು ಹಗುರ ಮಾಡುವ ಕೆಲಸವೂ ಸಾಹಿತ್ಯದಿಂದಾಗುತ್ತಿತ್ತು. ಧಾರ್ಮಿಕ, ಆಧ್ಯಾತ್ಮಿಕ ಹೊಳಹುಗಳ ಜೊತೆಗೆ ಒಳಗಿನ ನೋವು, ಖುಷಿ, ಸಂತೋಷಗಳು ಈ ಸಂದರ್ಭದಲ್ಲಿ ಅಭಿವ್ಯಕ್ತಿಗೊಳ್ಳುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇ ಮುಖ್ಯ ಕಾಯಕ ವಾಗಿದ್ದುದರಿಂದ, ಈ ಕೃಷಿ ಚಟುವಟಿಕೆಗಳಲ್ಲೇ ಹಾಡುಹಸೆಗಳು ಹುಟ್ಟಿಕೊಂಡವು. ಕೃಷಿಯನ್ನು ಹೊರತುಪಡಿಸಿದರೆ ಜಾನಪದ ಹಾಡುಗಳನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಉಳಿದಂತೆ ಮಹಿಳೆಯರ ಮನೆಯೊಳಗಿನ ಕೆಲಸ ಕಾರ್ಯಗಳಲ್ಲೂ ಈ ಹಾಡುಗಳು ಬೆಸೆದುಕೊಂಡಿರುತ್ತಿದ್ದವು. ಜೊತೆಗೆ ಮದುವೆ, ಹಬ್ಬಗಳ ಸಂದರ್ಭದಲ್ಲೂ ಜನಸಾಮಾನ್ಯರು ಹಾಡು, ಕತೆಗಳ ಮೂಲಕ ಸಂಭ್ರಮಗಳನ್ನು ಹಂಚಿಕೊಳ್ಳುತ್ತಿದ್ದರು.
   ಚಿತ್ರದುರ್ಗ ಜಿಲ್ಲೆಯನ್ನು ಕ್ಷೇತ್ರ ಕಾರ್ಯವಾಗಿರಿಸಿ ಕೊಂಡು ಡಾ. ಎಂ. ಜಿ. ಈಶ್ವರಪ್ಪ ಅವರ ಸಂಶೋಧನಾ ಗ್ರಂಥ ‘ಕೃಷಿ ಜಾನಪದ’ ಈ ನೆಲದ ಮೂಲವನ್ನು ಸ್ಪಷ್ಟಿಸುತ್ತದೆ. ಇದು ಕೇವಲ ಜಾನಪದ ಸಾಹಿತ್ಯಕ್ಕಷ್ಟೇ ಸೀಮಿತವಾಗದೆ, ನಾಡಿನ ಕೃಷಿಯ ಒಳಹೊರಗನ್ನೂ, ಅದನ್ನು ನಂಬಿಕೊಂಡ ಜನರ ಬದುಕನ್ನು ತೆರೆದಿಡುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ 1983ರಲ್ಲಿ ಬಿ. ಆರ್. ಪ್ರಾಜೆಕ್ಟ್‌ನಲ್ಲಿ ನಡೆದ ಜಾನಪದ ವಿಚಾರಸಂಕಿರಣದಲ್ಲಿ ಲೇಖಕರು ಮಂಡಿಸಿದ ‘ಕೃಷಿ ಜಾನಪದ’ ಲೇಖನದ ವಿಸ್ತೃತ ಫಲವಾಗಿದೆ ಈ ಗ್ರಂಥ. ಇತಿಹಾಸ ಮತು ಪ್ರಾಕ್ತನ ಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣ ಜಿಲ್ಲೆಯಾಗಿರುವ ಚಿತ್ರದುರ್ಗವನ್ನು ಕೇಂದ್ರೀಕರಿಸಿರುವ ಲೇಖಕರು, ಜಿಲ್ಲೆಯ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಕಾರ್ಯಗಳನ್ನು ಸಂಶೋಧನೆ ನಡೆಸಿ ದಾಖಲಿಸಿದ್ದಾರೆ. ಕ್ಷೇತ್ರಕಾರ್ಯದ ಆನಂತರ ಸಂಗ್ರಹಿತ ವಿಷಯಗಳನ್ನು ವರ್ಗೀಕರಿಸಿ, ಲಭ್ಯವಿರುವ ಸಾಹಿತ್ಯದೊಂದಿಗೆ ಪರಾಮರ್ಶಿಸಿ, ವ್ಯವಸಾಯದ ಉಗಮ ಮತ್ತು ಗ್ರಂಥಗಳು, ಚಿತ್ರದುರ್ಗ ಜಿಲ್ಲೆಯ ವ್ಯವಸಾಯ, ಜಿಲ್ಲೆಯ ಮಳೆ ಜಾನಪದ, ಖುಷ್ಕಿ ವ್ಯವಸಾಯದ ಬೆಳೆಗಳು, ತರಿ ಮತ್ತು ಬಾಗಾಯ್ತು ಬೆಳೆಗಳು, ವ್ಯವಸಾಯದ ಸಾಮಾನ್ಯ ವಿಷಯಗಳು ಹೀಗೆ ಏಳು ಅಧ್ಯಾಯದಲ್ಲಿ ಕೃತಿಯೊಳಗೆ ವಿವರಿಸಲಾಗಿದೆ. ವ್ಯವಸಾಯವು ಶಾಸ್ತ್ರೀಯ ಮಾತ್ರವಲ್ಲ, ಅದೊಂದು ಸೃಜನಶೀಲ ಕಾರ್ಯವೆನ್ನುವುದನ್ನೂ ಈ ಕೃತಿಯ ಮೂಲಕ ನಾವು ಮನಗಾಣಬಹುದು. ಚಿತ್ರದುರ್ಗ ಕೇಂದ್ರವಾಗಿದ್ದರೂ, ಕೃತಿಯೂ ಕೃಷಿಯ ಉಗಮ, ಕರ್ನಾಟಕದಲ್ಲಿ ಕೃಷಿಯ ಇತಿಹಾಸ ಇತ್ಯಾದಿಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತದೆ. ‘ಕವಿರಾಜಮಾರ್ಗ ಪೂರ್ವ ಕಾಲದ ವ್ಯವಸಾಯ ಪದ್ಧತಿ’ಯ ಬಗ್ಗೆಯೂ ಇಲ್ಲಿ ಮಾಹಿತಿಗಳಿವೆ. ಚಿದಾನಂದಮೂರ್ತಿ ಅವರ ಅಧ್ಯಯನವನ್ನು ಉಲ್ಲೇಖಿಸುತ್ತಾ, ರೈತರನ್ನು ಭೂದೇವಿಯ ಮಕ್ಕಳು, ಭೂಮಿಯ ಪುತ್ರರು, ಒಕ್ಕಲು ಮಕ್ಕಳುಗಳೆಂದು ಶಾಸನಗಳು ಕರೆತಿರುವುದನ್ನು ಬರೆಯುತ್ತಾರೆ. ಕನ್ನಡದ ಹಿಂದಿನ ಕಾವ್ಯಗಳಲ್ಲಿ ವ್ಯವಸಾಯ ಹೇಗೆ ಪರಿಚಯಿಸಲ್ಪಟ್ಟಿದೆ, ಎನ್ನುವುದನ್ನು ಕವಿರಾಜ ಮಾರ್ಗದಿಂದ ಹಿಡಿದು ವಚನ ಸಾಹಿತ್ಯದವರೆಗೆ ಬೇರೆ ಬೇರೆ ನೆಲೆಗಳಲ್ಲಿ ಕೃಷಿ ವಿವರಿಸುತ್ತದೆ. ಕನಕ ದಾಸರ ರಾಮಧಾನ್ಯ ಚರಿತ್ರೆಗಾಗಿಯೇ ಹತ್ತು ಪುಟಗಳನ್ನು ಕೃತಿ ಮೀಸಲಿರಿಸಿದೆ. ಬೇಸಾಯಗಳು ನಮ್ಮ ಸಂಸ್ಕೃತಿಯೊಂದಿಗೆ ಅವಿನಾಭಾವವಾಗಿ ಬೆಸೆದಿರುವ ಬಗೆಯನ್ನು ಕುತೂಹಲಕರವಾಗಿ ಕೃತಿ ನಿರೂಪಿಸುತ್ತದೆ. ಕೃಷಿ ದೂರವಾಗುತ್ತಿರುವ ದಿನಗಳಲ್ಲಿ, ಕೃಷಿಯ ಕುರಿತಂತೆ ಅಪಾರ ಮಾಹಿತಿಗಳನ್ನು ಹೊಂದಿರುವ ಈ ಕೃತಿ ಮಹತ್ವಪೂರ್ಣವಾದುದು. ಈ ಕೃತಿಯ ಹುಡುಕಾಟ ಮನುಷ್ಯನ ಬದುಕಿನ ಹುಡುಕಾಟವೇ ಹೌದು.
484 ಪುಟಗಳ ಈ ಕೃತಿಯ ಮುಖಬೆಲೆ 270 ರೂಪಾಯಿ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರತಂದಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News