ಮಾಂದಲಪಟ್ಟಿ ಪ್ರವೇಶ ನಿಷೇಧಕ್ಕೆ ವಿರೋಧ : ಎಸ್ಪಿಯಿಂದ ಸ್ಥಳ ಪರಿಶೀಲನೆ

Update: 2019-07-25 18:19 GMT

ಮಡಿಕೇರಿ, ಜು.25: ಮಳೆಯಿಂದ ಎದುರಾಗಬಹುದಾದ ಅನಾಹುತಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಸರುವಾಸಿ ಪ್ರವಾಸಿತಾಣ ಮಾಂದಲಪಟ್ಟಿಗೆ ಜಿಲ್ಲಾಡಳಿತ ಪ್ರವೇಶ ನಿಷೇಧಿಸಿರುವುದನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಜೀಪು ಚಾಲಕರು ತೀವ್ರವಾಗಿ ವಿರೋಧಿಸಿದ್ದಾರೆ.

ಜಿಲ್ಲಾಡಳಿತದ ಈ ಕ್ರಮದಿಂದ ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿರುವ ಜೀಪು ಚಾಲಕರಿಗೆ ಹಾಗೂ ಗ್ರಾಮಸ್ಥರಿಗೆ ಕಷ್ಟ, ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಮಳೆಗಾಲದಲ್ಲಿ ಗುಡ್ಡ ಕುಸಿತವಾಗಿ ಉಳಿದಿರುವ ಅಲ್ಪ ಸ್ವಲ್ಪ ಮಣ್ಣು ರಸ್ತೆ ಬದಿಯ ಚರಂಡಿಗೆ ಬೀಳುತ್ತಿದೆಯೇ ಹೊರತು ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇಲ್ಲ.

ಮಾಂದಲಪಟ್ಟಿಗೆ ಹೋಗಲು 3 ರಸ್ತೆಗಳಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಗಳಿರುವುದಿಲ್ಲ. ಕಳೆದ ಬಾರಿಯ ಮಳೆಯಲ್ಲಿ ಭೂ ಕುಸಿತದಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡಿರುವ ಗ್ರಾಮಸ್ಥರಿಗೆ ಪ್ರವಾಸಿಗರ ಆಗಮನವೇ ಆದಾಯವಾಗಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ಕುಟುಂಬಗಳ ಜೀವನ ನಿರ್ವಹಣೆ ಪ್ರವಾಸೋದ್ಯಮದ ಮೂಲಕವೇ ನಡೆಯುತ್ತಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ವರ್ಷ ದೊಡ್ಡ ಪ್ರಮಾಣದ ಮಳೆಯೂ ಆಗುತ್ತಿಲ್ಲ, ಅನಾಹುತದ ಪರಿಸ್ಥಿತಿ ಎದುರಾದರೆ ನಾವುಗಳೇ ಜವಾಬ್ದಾರಿಯುತವಾಗಿ ವಾಹನಗಳನ್ನು ನಿಲುಗಡೆಗೊಳಿಸುತ್ತೇವೆ ಎಂದು ತಿಳಿಸಿರುವ ಚಾಲಕರು ಮಾನವೀಯ ನೆಲೆಗಟ್ಟಿನಡಿ ಜಿಲ್ಲಾಧಿಕಾರಿ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಪ್ರವೇಶ ನಿಷೇಧಿಸಿರುವ ಹಿನ್ನೆಲೆ ಎಸ್ಪಿ ಸುಮನ್ ಡಿ.ಪನ್ನೇಕರ್ ಮಾಂದಲಪಟ್ಟಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸ್ಥಳೀಯ ಗ್ರಾಮಸ್ಥರು ಹಾಗೂ ಜೀಪು ಚಾಲಕರು ಎಸ್ಪಿ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಜಿಲ್ಲಾಧಿಕಾರಿ ಕ್ರಮವನ್ನು ಸಮರ್ಥಿಸಿಕೊಂಡರು. ಮಾಂದಲಪಟ್ಟಿಗೆ ತೆರಳುವ ರಸ್ತೆಯ ಬದಿಗಳಲ್ಲಿ ಸಣ್ಣ ಪ್ರಮಾಣಲ್ಲಿ ಮಣ್ಣು ಕುಸಿಯುತ್ತಿದೆ. ಈ ಪ್ರಮಾಣ ಹೆಚ್ಚಾಗಿ ಪ್ರವಾಸಿಗರು ಅಪಾಯಕ್ಕೆ ಸಿಲುಕಬಹುದೆನ್ನುವ ಕಾರಣಕ್ಕಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯರಾದರೆ ಅಪಾಯದಿಂದ ಪಾರಾಗಬಹುದು, ಆದರೆ ಹೊರಗಿನಿಂದ ಆಗಮಿಸುವ ಪ್ರವಾಸಿಗರು ಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದೆ ಎಂದು ಹೇಳಿದರು.

ಮಳೆ ಕಡಿಮೆ ಇರುವುದರಿಂದ ಆದೇಶವನ್ನು ಪುನರ್ ಪರಿಶೀಲಿಸಲು ಅವಕಾಶವಿದ್ದು, ಜಿಲ್ಲಾಧಿಕಾರಿ ನಿರ್ಧಾರವೇ ಅಂತಿಮವೆಂದು ಎಸ್ಪಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News