ಡೆಂಗ್ ಸಾವುಗಳು‌: ಕೆಲವು ಬಾಹ್ಯ ಕಾರಣಗಳು

Update: 2019-07-26 07:02 GMT

ಪ್ರತೀ ಮಳೆಗಾಲದಂತೆಯೂ ಈ ಬಾರಿಯೂ ಡೆಂಗ್ ಜ್ವರ ಬಾಧಿತರು, ಸಂಭವಿಸಿದ ಸಾವುಗಳು ಇತ್ಯಾದಿ ಅಂಕಿಅಂಶಗಳನ್ನು ಮಾಧ್ಯಮಗಳು ವರದಿ ಮಾಡುತ್ತಿವೆ. ಹೆಚ್ಚಿನೆಲ್ಲಾ ಪತ್ರಿಕೆಗಳು ಡೆಂಗ್ ಕುರಿತಂತೆ ವೈದ್ಯಕೀಯ ಮಾಹಿತಿಯುಕ್ತ ಲೇಖನಗಳನ್ನು ಮತ್ತು ಜಾಗೃತಿ ಲೇಖನಗಳನ್ನು ಪ್ರಕಟಿಸುತ್ತಿವೆ. ಆದರೆ ಡೆಂಗ್ ಜ್ವರದಿಂದ ಸಂಭವಿಸುವ ಸಾವಿಗೆ ಇರುವ ಬಾಹ್ಯ ಕಾರಣಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಡೆಂಗ್ ‘ಏಡಿಸ್’ ಎಂಬ ಸೊಳ್ಳೆ ಕಡಿತದಿಂದ ಹರಡುವ ಒಂದು ವಿಧದ ವೈರಲ್ ಜ್ವರ. ಡೆಂಗ್ ಜ್ವರ ಬಾಧಿಸಿದ ಕಾರಣಕ್ಕೆ ಯಾರೂ ಸಾಯುವುದಿಲ್ಲ. ಡೆಂಗ್ ಜ್ವರದ ಅತ್ಯಂತ ಅಪಾಯಕಾರಿ ಅಂಶವೆಂದರೆ ರಕ್ತದ  ಪ್ಲೇಟ್ ಲೆಟ್ಸ್ (ಕಿರುತಟ್ಟೆಗಳು) ಕಡಿಮೆಯಾಗುವುದು. ಪ್ಲೇಟ್ ಲೆಟ್ ಗಳ ಮುಖ್ಯ ಕೆಲಸ ರಕ್ತಸ್ರಾವವಾದಾಗ ರಕ್ತ ಹೆಪ್ಪುಗಟ್ಟುವಂತೆ ಮಾಡುವುದು. ವೈದ್ಯಕೀಯ ಭಾಷೆಯಲ್ಲಿ "Platelets are the clotting factor of blood" ಎನ್ನುತ್ತಾರೆ. ಪ್ಲೇಟ್ ಲೆಟ್ಸ್ ಗಳ ಸಾಮಾನ್ಯ ಮಿತಿ 150000-400000 Lakhs/cumm. ಪ್ಲೇಟ್ ಲೆಟ್ ಕಡಿಮೆಯಾದಾಗ ಶರೀರದ ಬಾಹ್ಯ ಅಥವಾ ಆಂತರಿಕ ಭಾಗದಲ್ಲಿ‌ ರಕ್ತಸ್ರಾವವಾದರೆ ಅವು ಸುಲಭದಲ್ಲಿ ನಿಲ್ಲುವುದಿಲ್ಲ. ಪ್ಲೇಟ್ ಲೆಟ್ಸ್ ಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾಗ ಅವು ತಕ್ಷಣ ಬಿಡುಗಡೆಯಾಗಿ ರಕ್ತವನ್ನು ಹೆಪ್ಪುಗಟ್ಟಿಸಿ ಇನ್ನಷ್ಟು ರಕ್ತ ಸ್ರಾವವಾಗದಂತೆ ತಡೆಯೊಡ್ಡುತ್ತವೆ. ಅವು ಸಾಕಷ್ಟು ಸಂಖ್ಯೆಯಲ್ಲಿಲ್ಲದಾಗ ಸಹಜವಾಗಿಯೇ ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆ ನಿಧಾನವಾಗುತ್ತದೆ. ಶರೀರದ ಬಾಹ್ಯ ಭಾಗದಲ್ಲಿ ರಕ್ತ ಸ್ರಾವವಾದರೆ ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಆಂತರಿಕ ರಕ್ತಸ್ರಾವವು ನಮ್ಮ ಗಮನಕ್ಕೆ ಬರುವುದಿಲ್ಲ. ಪ್ಲೇಟ್ ಲೆಟ್ಸ್ ಕಡಿಮೆಯಾದರೆ ಹೆಚ್ಚಿನ ಸಂದರ್ಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಡೆಂಗ್ ಖಾಯಿಲೆಯಿಂದ ಸಾವು ಸಂಭವಿಸಲು ಪ್ಲೇಟ್ ಲೆಟ್ಸ್ ಕಡಿಮೆಯಾಗಿದ್ದು ತಿಳಿಯದಿರುವುದೇ ಮುಖ್ಯ ಕಾರಣ.

ಸಾಮಾನ್ಯವಾಗಿ ಜ್ವರ ಮೈನೋವು, ತಲೆನೋವು ಎಂದು ಸ್ಥಳೀಯ ವೈದ್ಯರ ಬಳಿ ಹೋದಾಗ ಹೆಚ್ಚಿನ ವೈದ್ಯರು ಜ್ವರದೊಂದಿಗೆ ಮೈ‌ಕೈ ನೋವು ಕಡಿಮೆಯಾಗಲು‌ ಔಷಧಿ ನೀಡುತ್ತಾರೆ. ಸಾಮಾನ್ಯವಾಗಿ ವೈದ್ಯರು Ibuprofen ‌Diclofinac sodium, Nimusulide ಇವುಗಳಲ್ಲಿ ಯಾವುದಾದರೊಂದು ನೋವು ನಿವಾರಕವನ್ನೂ ನೀಡುತ್ತಾರೆ. ಇವುಗಳಿಂದಾಗಿ ತಾತ್ಕಾಲಿಕವಾಗಿ ನೋವು ಶಮನವಾಗುತ್ತದೆ. ಅವುಗಳ ಶಕ್ತಿ ಮುಗಿದ ಕೂಡಲೇ ಮತ್ತೆ ನೋವು ಪ್ರಾರಂಭವಾಗುತ್ತದೆ. ಇನ್ನು ಕೆಲವರು ಸ್ವಯಂ ವೈದ್ಯರಾಗಿ ಔಷಧಾಲಯಗಳಿಂದ, ಗ್ರಾಮೀಣ ಪ್ರದೇಶಗಳ ಗೂಡಂಗಡಿಗಳಿಂದ ನೋವು ನಿವಾರಕ ಔಷಧಿ ಖರೀದಿಸಿ ಸೇವಿಸಿ ತಾತ್ಕಾಲಿಕ ಶಮನ ಪಡೆಯುತ್ತಾರೆ. ಸಮಸ್ಯೆ ಪ್ರಾರಂಭವಾಗುವುದೇ ಇಲ್ಲಿಂದ. ಒಂದೋ ವೈದ್ಯರು ಡೆಂಗ್ ಪರೀಕ್ಷೆ ಅಥವಾ ಪ್ಲೇಟ್ ಲೆಟ್ಸ್ ಪರೀಕ್ಷೆ ಮಾಡಿಸುವ ಗೋಜಿಗೆ ಹೋಗದೇ ಖಾಯಿಲೆ ಪತ್ತೆಯಾಗುವುದಿಲ್ಲ. ಅಥವಾ ಜನರು ವೈದ್ಯರ ಸಲಹೆ ಸೂಚನೆ ಪಡೆಯದೇ ಸ್ವಯಂ ವೈದ್ಯರಾಗುವುದು. 

ಯಾವನೇ ವೈದ್ಯನಾದರೂ ರಕ್ತ ಪರೀಕ್ಷೆ ಮಾಡದೇ ಇಂತಹ ಜ್ವರ ಎಂದು ನಿರ್ಧರಿಸಲಾಗದು. ಮೈಕೈ ನೋವು ಮತ್ತು ಜ್ವರಕ್ಕೆ ಔಷಧಿ ನೀಡಿದಾಗ ಆ ಲಕ್ಷಣಗಳು ಕಡಿಮೆಯಾಗುತ್ತವೆಯಾದರೂ ಪ್ಲೇಟ್ ಲೆಟ್ಸ್ ಕಡಿಮೆಯಾದುದನ್ನು ಸರಿದೂಗಿಸಲು ಸಾಧ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪ್ಲೇಟ್ ಲೆಟ್ಸ್ ತಾನೇ ಸರಿದೂಗುತ್ತದೆ. ಅನೇಕರು ಡೆಂಗ್ ಗೆ ಪಪ್ಪಾಯ ಎಲೆಯ ರಸ ಒಳ್ಳೆಯ ಔಷಧಿಯೆನ್ನುತ್ತಾರೆ. ಅವು ಪ್ಲೇಟ್ ಲೆಟ್ಸ್ ಪ್ರಮಾಣವನ್ನು ಏರಿಸುತ್ತದೆ ಎನ್ನುತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಆಯುರ್ವೇದ ಔಷಧಿ ತಯಾರಿಕಾ ಸಂಸ್ಥೆಗಳು ಅದರ ಮಾತ್ರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಇಳಿಸಿ ಭರ್ಜರಿ ಲಾಭ ಮಾಡುತ್ತಿವೆ. ‌ಅಸಲಿಗೆ ಅದು ಪ್ಲೇಟ್ ಲೆಟ್ಸ್ ಹೆಚ್ಚಿಸುವ ಔಷಧಿ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನೆಗಳ ಬಲವಿಲ್ಲ.

ಕೆಲವೊಮ್ಮೆ ಪಪ್ಪಾಯ ಎಲೆಯ ಕಷಾಯವೂ‌ ಖಾಯಿಲೆ ಉಲ್ಭಣಗೊಳ್ಳಲು ಕಾರಣವಾಗಬಹುದು. ಹೇಗೆಂದರೆ ಪಪ್ಪಾಯ ಎಲೆಯ ಕಷಾಯ ಅಸಾಧ್ಯ ಕಹಿಯಿರುತ್ತದೆ. ಅದನ್ನು ರೋಗಿ ಕುಡಿದಾಗ ಆತನಿಗೆ ವಾಂತಿಯಾಗಿ ದೇಹದ ದ್ರವಾಂಶ ಕಡಿಮೆಯಾಗಬಹುದು. ದ್ರವಾಂಶ ಕಡಿಮೆಯಾಗುವುದರಿಂದ ಪ್ಲೇಟ್ ಲೆಟ್ಸ್ ಕಡಿಮೆಯಾಗಲೂಬಹುದು.

ಕಿವಿ ಹಣ್ಣು ಕೂಡಾ ಪ್ಲೇಟ್ ಲೆಟ್ಸ್ ಹೆಚ್ಚಿಸಲು ಸಹಕಾರಿ ಎಂಬ ಆಧಾರರಹಿತ ವಾದವಿದೆ. ಪಪ್ಪಾಯ ಎಲೆಗೆ ಹೋಲಿಸಿದರೆ ಕಿವಿ ಹಣ್ಣು ಅಷ್ಟೇನೂ  ಅಪಾಯಕಾರಿಯಲ್ಲ.‌ ಯಾಕೆಂದರೆ ಅದನ್ನು ಕುಡಿಯುವುದರಿಂದ  ವಾಂತಿಯಾಗುವ ಸಾಧ್ಯತೆ ಕಡಿಮೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪ್ಪಾಯ ಎಲೆಯ ರಸದಿಂದ ತಯಾರಿಸಿದ ಕ್ಯಾರಿಪಿಲ್ ಎಂಬ ಮಾತ್ರೆಯೂ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೇಗೆಂದರೆ ಇಂದು ಅದರ ಕುರಿತ ಜಾಹೀರಾತು ಎಲ್ಲೆಡೆ ಕೇಳಿಬರುತ್ತಿದೆ. ಮತ್ತು ಅನೇಕ ಔಷಧಾಲಯಗಳವರೇ ವೈದ್ಯರಾಗಿ ಅವನ್ನು ಪ್ಲೇಟ್ ಲೆಟ್ಸ್ ಹೆಚ್ಚಿಸಲು ದಿವ್ಯ ಔಷಧಿ ಎಂದು ಪ್ರಚಾರ ಮಾಡಿ ಅವನ್ನು ಮಾರುತ್ತಾರೆ. ಜೊತೆ ಜೊತೆಗೆ ನೋವು ನಿವಾರಕಗಳನ್ನು ನೀಡಿ ನೋವು ಶಮನಗೊಳಿಸುತ್ತಾರೆ. ನಮ್ಮ ಜನ ಇವುಗಳನ್ನೇ ನಂಬಿ ವೈದ್ಯರ ಬಳಿ ಹೋಗದಿರುವ ಸಾಧ್ಯತೆ ಬಹಳಷ್ಟಿದೆ.

ಈಗಾಗಲೇ ಬರೆದಂತೆ ಹೆಚ್ಚಿನ ಸಂದರ್ಭಗಳಲ್ಲಿ ಪ್ಲೇಟ್ ಲೆಟ್ಸ್ ಕಡಿಮೆಯಾಗಿರುವುದಕ್ಕೆ ಯಾವುದೇ ನಿಶಾನಿಯೋ, ರೋಗಲಕ್ಷಣಗಳೋ‌ ಕಂಡು ಬರುವುದಿಲ್ಲ. ಒಂದೆಡೆ ನೋವು ನಿವಾರಕಗಳ ಸೇವನೆಯಿಂದ ನೋವು ಕಡಿಮೆಯಾಗುತ್ತದೆ. ಇನ್ನೊಂದೆಡೆ ರೋಗಿಯ ಅರಿವಿಗೆ ಬಾರದೆಯೇ ಪ್ಲೇಟ್ ಲೆಟ್ಸ್ ಕಡಿಮೆಯಾಗುತ್ತದೆ. ರಕ್ತ ಪರೀಕ್ಷೆ ಮಾಡದ ಹೊರತಾಗಿ ಅವು ತಿಳಿಯುವುದೇ ಇಲ್ಲ. ರಕ್ತ ಪರೀಕ್ಷೆ ಮಾಡಿಸದೇ ಅಂದಾಜಿಗೆ ಮಾಡುವ ಚಿಕಿತ್ಸೆಯೇ ರೋಗ ಉಲ್ಬಣಕ್ಕೆ ಕಾರಣವಾಗಬಹುದು.

ಡೆಂಗ್ ರಕ್ತ ಪರೀಕ್ಷೆ ತುಸು ದುಬಾರಿಯಾದುದರಿಂದ ಅನೇಕ ಮಂದಿ ಪರೀಕ್ಷೆ ಮಾಡಿಸದೇ ಇರಬಹುದು. ಅದೇ ಕಾರಣವನ್ನು ಮುಂದಿಟ್ಟು ವೈದ್ಯರು ಅಂದಾಜಿಗೆ ಚಿಕಿತ್ಸೆ ನೀಡುವುದು ಸಲ್ಲ. ಕನಿಷ್ಠ ಪಕ್ಷ  ಪ್ಲೇಟ್ ಲೆಟ್ಸ್ ಪರೀಕ್ಷೆಯಾದರೂ ಮಾಡಿಸಬಹುದು. ಅದೇನು ದುಬಾರಿ ಪರೀಕ್ಷೆಯೂ ಅಲ್ಲ ಮತ್ತು ಎಲ್ಲಾ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಾಡುತ್ತಾರೆ.

 ಸಕಾಲಕ್ಕೆ ವೈದ್ಯರು ರಕ್ತ ಪರೀಕ್ಷೆ ಮಾಡಿಸುವುದರಿಂದ ಮತ್ತು ಜನರು ಸ್ವಯಂವೈದ್ಯರಾಗುವುದನ್ನು ನಿಲ್ಲಿಸಿದರೆ ಡೆಂಗ್ ನಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಕನಿಷ್ಠಗೊಳಿಸಬಹುದು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News