ನಾಡ ಪಿಸ್ತೂಲ್ ಮಾರಾಟ ಯತ್ನ: ಉ.ಪ್ರದೇಶ ಮೂಲದ ಆರೋಪಿ ಬಂಧನ

Update: 2019-07-26 13:27 GMT

ಮಡಿಕೇರಿ, ಜು.26: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಬನಾರಸ್ ನಿವಾಸಿ ಸುಮಿತ್ ಚೌದರಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

ಜು.23ರಂದು ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕರು ಗಸ್ತು ತಿರುಗುವ ಸಂದರ್ಭ ವ್ಯಕ್ತಿಯೊಬ್ಬ ಅಕ್ರಮವಾಗಿ ನಾಡ ಪಿಸ್ತೂಲನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದನ್ನಾಧರಿಸಿ ಉತ್ತರ ಪ್ರದೇಶದ ಸುಮಿತ್ ಚೌದರಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಆತನ ಬಳಿಯಿದ್ದ ಒಂದು ನಾಡ ಪಿಸ್ತೂಲ್ ಮತ್ತು ಒಂದು ಸಜೀವ ಗುಂಡನ್ನು ವಶಕ್ಕೆ ಪಡೆಯಲಾಗಿದೆ. 

ಸುಮಿತ್ ಚೌದರಿ ಕೊಡ್ಲಿಪೇಟೆಯಲ್ಲಿ ಮರಳು ತೆಗೆಯುವ ಕೆಲಸ ಮಾಡುತ್ತಿದ್ದು, ಪಿಸ್ತೂಲ್ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್ ತಿಳಿಸಿದ್ದಾರೆ. ಆರೋಪಿ ಸುಮಿತ್ ಚೌದರಿ ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಕೆಲ ಸಮಯದ ಹಿಂದೆ ಕೊಡಗು ಜಿಲ್ಲೆಗೆ ಬಂದಿದ್ದ. ಸುಮಿತ್ ಚೌದರಿ ನೀಡಿರುವ ಮಾಹಿತಿ ಆಧರಿಸಿ, ಕೊಡಗು ಜಿಲ್ಲಾ ಪೊಲೀಸರು ಉತ್ತರ ಪ್ರದೇಶಕ್ಕೂ ತೆರಳಿ ತನಿಖೆ ನಡೆಸಲಿದ್ದಾರೆ ಎಂದು ಎಸ್.ಪಿ. ಡಾ. ಸುಮನ ಡಿ.ಪನ್ನೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News