ಅನರ್ಹಗೊಂಡ ಶಾಸಕರ ರಾಜಕೀಯ ಪರಿಸ್ಥಿತಿ ಬೀದಿಪಾಲು: ಶಾಸಕ ಕೃಷ್ಣಬೈರೇಗೌಡ

Update: 2019-07-26 16:26 GMT

ಬೆಂಗಳೂರು, ಜು.26: ಬಿಜೆಪಿ ನಾಯಕರ ಮಾತನ್ನು ನಂಬಿಕೊಂಡು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡಿರುವ ಅತೃಪ್ತ ಶಾಸಕರ ಮುಂದಿನ ರಾಜಕೀಯ ಪರಿಸ್ಥಿತಿ ಬೀದಿಪಾಲಾಗುತ್ತದೆ ಎಂದು ಶಾಸಕ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರಕಾರದ ವಿಶೇಷ ಅನುದಾನದಡಿಯಲ್ಲಿ ಬಾಗಲೂರಿನಿಂದ ಸಾತನೂರಿನವರೆಗೆ ಸುಮಾರು 2.5 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯವರು ಶಾಸಕರ ಅನರ್ಹತೆ ಪ್ರಕರಣವನ್ನು ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳಬಹುದು. ಕೋರ್ಟ್‌ನಲ್ಲಿ ಪ್ರಕರಣದ ತೀರ್ಪು ಬರಲು ಸಾಕಷ್ಟು ದಿನಗಳಾಗುತ್ತದೆ. ಹೀಗಾಗಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿರುವ ಅತೃಪ್ತರ ಪರಿಸ್ಥಿತಿ ಅಯೋಮಯವೆಂದು ತಿಳಿಸಿದರು.

ಅತೃಪ್ತ ಶಾಸಕರಿಗೆ ಬಿಜೆಪಿ ನಾಯಕರು ಟೋಪಿ ಹಾಕಲಿದ್ದಾರೆ ಎಂದು ನಾವು ಸದನದಲ್ಲಿ ಹೇಳಿದ್ದೇವೆ. ಆದರೆ, ಅವರು ನಮ್ಮನ್ನು ಗೇಲಿ ಮಾಡಿದರು. ಈಗ ಅವರು ಇದನ್ನ ಅನುಭವಿಸಬೇಕಾಗುತ್ತದೆ. ಶಾಸಕರು ಹೌದೋ ಅಲ್ಲವೋ ಅನ್ನುವುದು ಕೋರ್ಟ್ ತೀರ್ಮಾನಿಸುವವರೆಗೂ ಅತಂತ್ರ ಸ್ಥಿತಿಯಲ್ಲಿರಬೇಕಾಗುತ್ತದೆ. ಇನ್ನು, ಬಿಜೆಪಿ ಸಂಪುಟದಲ್ಲಿ ಮಂತ್ರಿಗಳಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ಜೆ.ಮುನೇಗೌಡ ಮಾತನಾಡಿ, ನಗರೀಕರಣದ ಪ್ರಭಾವದಿಂದಾಗಿ ಈ ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಹೆಚ್ಚಾಗುತ್ತಿದೆ. ಹೀಗಾಗಿ, ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಇಂದು ನಮ್ಮ ಪಂಚಾಯತ್ ವ್ಯಾಪ್ತಿಯ ಬಾಗಲೂರಿನಿಂದ ಸಾತನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸುಮಾರು 2.5.ಕೋಟಿ ರೂ.ಅಂದಾಜು ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಶಾಸಕರು ಚಾಲನೆ ನೀಡಿ, ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಂತೆ ಪೂರ್ಣಗೊಳಿಸಲು ಸೂಚಿಸಿದ್ದಾರೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ರಮೇಶ್, ಸುಷ್ಮಾ ಮುನಿರಾಜು, ಜಿ.ಪಂ.ಮಾಜಿ ಸದಸ್ಯರಾದ ದಾನೇಗೌಡ, ಅಶೋಕನ್, ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಆಂಜನಪ್ಪ(ಪುಟ್ಟು), ಕಾಂಗ್ರೆಸ್ ಮುಖಂಡರಾದ ದೊಡ್ಡಜಾಲ ಶ್ರೀನಿವಾಸಯ್ಯ ಸೇರಿದಂತೆ ಬಾಗಲೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News