ಆಯ್ದ ವಚನಗಳ ಮರು ಓದು
ಕರ್ನಾಟಕದ ಪಾಲಿಗೆ ಹನ್ನೆರಡೇ ಶತಮಾನ ಸಂಕ್ರಮಣ ಕಾಲ. ವೈದಿಕ ಜಾತೀಯತೆಗೆ ಸೆಡ್ಡು ಹೊಡೆದು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಹೊಸ ಧರ್ಮವೊಂದನ್ನು ಒದಗಿಸಿದ ಕಾಲಘಟ್ಟ ಅದು. ಶರಣರ ಮಾರಣ ಹೋಮದ ನಡುವೆಯೂ ಲಿಂಗಾಯತ ಧರ್ಮ ಅರಳಿ ನಿಂತಿತು. ಶರಣರ ವಚನಗಳು ಇಂದಿಗೂ ನಮಗೆ ಮಾರ್ಗದರ್ಶನವಾಗಿದೆ ಮಾತ್ರವಲ್ಲ, ಆ ಚಳವಳಿಯ ಕಾವು ವರ್ತಮಾನದ ಕೈ ದೀವಿಗೆಯಾಗಿದೆ. ವಚನಗಳ ಕುರಿತಂತೆ ಕರ್ನಾಟಕದಲ್ಲಿ ಹಲವು ವಿದ್ವಾಂಸರು ಸಂಶೋಧನೆ ನಡೆಸಿದ್ದಾರೆ, ಸಂಗ್ರಹಿಸಿದ್ದಾರೆ ಮತ್ತು ವ್ಯಾಖ್ಯಾನಿಸಿದ್ದಾರೆ. ಅಪಭ್ರಂಶಗಳನ್ನು ತಿದ್ದಿದ್ದಾರೆ. ವೀರಶೈವ ಮತ್ತು ಲಿಂಗಾಯತ ಧರ್ಮದ ನಡುವಿನ ಅಂತರಗಳನ್ನು ಗುರುತಿಸಿ ಹೇಗೆ ಶರಣ ಚಳವಳಿ ವೀರಶೈವಪಂಥದ ಕಲಬೆರಕೆಯಿಂದ ಹಾದಿತಪ್ಪಿತು ಎನ್ನುವುದನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಾದಿ ತಪ್ಪಿದಾಗೆಲ್ಲ ವಚನಗಳು ಅವರಿಗೆ ಸರಿದಾರಿಯನ್ನು ತೋರಿಸಿದೆ.
ಹನ್ನೆರಡನೆಯ ಶತಮಾನದ ವಚನಕಾರರು ಅಥವಾ ಶಿವಶರಣಶರಣೆಯರು ಮೂಲತಃ ನಿಷ್ಠುರ ವಿಮರ್ಶಕರು. ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಮುತ್ತಣ ಪರಿಸರವನ್ನು ಕುರಿತು, ಎಲ್ಲಕ್ಕೂ ಮಿಗಿಲಾಗಿ ತಮನ್ನೇ ಕುರಿತು ವಸ್ತು ನಿಷ್ಠವಾಗಿ ವಿಮರ್ಶೆ ಮಾಡಿದವರು ಎಂದು ಜಿ. ಎಸ್. ಶಿವರುದ್ರಪ್ಪ ಹೇಳುತ್ತಾರೆ. ವೈದಿಕ ಚಿಂತನೆಗಳಿಂದ ಹಾದಿ ತಪ್ಪಿದ ವರ್ತಮಾನವನ್ನು ಜಾಗೃತಿಗೊಳಿಸಲು ಮತ್ತೆ ವಚನಗಳನ್ನು ಜಾಗೃತಿಗೊಳಿಸುವುದು ಅತ್ಯಗತ್ಯವಾಗಿದೆ. ಅಂತಹ ಪ್ರಯತ್ನಗಳಲ್ಲಿ ಸಿ. ಪಿ. ನಾಗರಾಜ ಅವರ ‘ಶಿವಶರಣರ ವಚನಗಳ ಓದು’ ಕೃತಿ ಒಂದಾಗಿದೆ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ವಚನ ಸಂಪುಟಗಳಿಂದ ಆಯ್ದ ವಚನಗಳನ್ನು ಬಳಸಿಕೊಂಡು ಅವುಗಳನ್ನು ಸರಳ ಕನ್ನಡದಲ್ಲಿ ಲೇಖಕರು ವ್ಯಾಖ್ಯಾನಿಸಿದ್ದಾರೆ.
ಅಂಗಸೋಂಕಿನ ಲಿಂಗತಂದೆ, ಮುಗಿದೇವ್ಯ, ಉರಿಲಿಂಗ ಪೆದ್ದಿ, ಕಂಬದ ಮಾರಿತಂದೆ, ಕುಷ್ಟಗಿ ಕರಿಬಸವೇಶ್ವರ, ಗುರುಪುರದ ಮಲ್ಲಯ್ಯ, ಚೆನ್ನಬಸವಣ್ಣ, ತುರುಗಾಹಿ ರಾಮಣ್ಣ, ನಗೆಯ ಮಾರಿತಂದೆ, ಬಾಲಸಂಗಯ್ಯ, ಬಾಹೂರ ಬೊಮ್ಮಣ್ಣ, ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯ, ಷಣ್ಮುಖಸ್ವಾಮಿ, ಶಿವಲೆಂಕ ಮಂಚಣ್ಣ, ಸಕಲೇಶ ಮಾದರಸ, ಹಡಪದ ಅಪ್ಪಣ್ಣ ಇವರ ಆಯ್ದ ವಚನಗಳ ಜೊತೆಗೆ ಅವುಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. ತೆರೆಮರೆಯಲ್ಲಿರುವ ಹಲವು ವಚನಕಾರರ ವಚನಗಳನ್ನು ಇಲ್ಲಿ ಆರಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಸಣ್ಣ ಸಣ್ಣ ವಚನಗಳೂ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ವಿಶಾಲ ಅರ್ಥದ ಪ್ರಖರ ವೈಚಾರಿಕ ಚಿಂತನೆಗಳನ್ನು ಗುರುತಿಸಿ ಅದನ್ನು ಓದುಗರಿೆ ಬಿಡಿಸಿಕೊಡುವ ಪ್ರಯತ್ನವನ್ನು ಲೇಖಕರಿಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ವಚನಗಳನ್ನು ವಿಶ್ಲೇಷಿಸುವ ಮುನ್ನ ವಚನಕಾರರ ಕಾಲ, ಕಸುಬು, ಅವರ ಅಂಕಿತನಾಮ ಸಹಿತ ಸರಳ ಪರಿಚಯವನ್ನೂ ನೀಡಲಾಗಿದೆ. ವಚನ ಸಾಹಿತ್ಯದ ಮೇಲೆ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ.
ನಾಗು ಸ್ಮಾರಕ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 128. ಮುಖಬೆಲೆ 100 ರೂಪಾಯಿ. ಆಸಕ್ತರು 9743512174 ದೂರವಾಣಿಯನ್ನು ಸಂಪರ್ಕಿಸಬಹುದು.