ಬೈಗುಳ

Update: 2019-07-28 05:47 GMT

‘ನೀ ನನ್ನ ತಡವಿದರೆ ನಾ ಬಾಯಿಗೆ ಸಿಕ್ಕಂಗ ಹಲಕಟ್ಟು ಬೈದು ಬಿಡುತೀನಿ ನೋಡು’ ಉತ್ತರ ಕರ್ನಾಟಕದ ಕಡೆ ಈ ಮಾತು ಹೆಚ್ಚು ಪ್ರಚಲಿತದಲ್ಲಿದೆ. ದಕ್ಷಿಣ ಕರ್ನಾಟಕದ ಜನಕ್ಕೆ ಇಂಥ ಮಾತುಗಳ ಅರ್ಥವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಪುಂಖಾನು ಪುಂಖವಾಗಿ ಯಾವುದೇ ಎಗ್ಗಿಲ್ಲದೇ ಬಂದು ಹೋಗುತ್ತಲೇ ಇರುತ್ತದೆ. ಇಬ್ಬರು ವ್ಯಕ್ತಿಗಳ ನಡುವೆ ಯಾವುದೋ ಒಂದು ವಿಷಯ ತಾರಕ್ಕಕ್ಕೇರಿ ವಾದಕ್ಕಿಳಿದಾಗ ಮೇಲಿನ ವಾಕ್ಯ ಬರುತ್ತದೆ.

ಮೇಲಿನ ವಾಕ್ಯದ ಅರ್ಥವಾದರೂ ಏನು? ತಡವಿದರೆ ಎಂದರೆ ಕೆರಳಿಸಿದರೆ, ಕೆಣಕಿದರೆ ಎಂದೂ ಹಲಕಟ್ಟು ಎಂದರೆ ಹೇಸಿಗೆಯ, ಹೊಲಸಾದ, ಕೀಳಾದ, ಸೊಂಟದ ಕೆಳಗಿನ ಭಾಷೆಯ ಎಂದೂ ಬೈದು ಎಂದರೆ ಬೈಗುಳ ಹೇಳುವುದು ಎಂದು ವಿವರಿಸಬಹುದು.

ಹಾಗಾದರೆ ಬೈಗುಳ ಎಂದರೆ ಕೆಟ್ಟದ್ದನ್ನು ನುಡಿಯುವುದು ಎಂದರ್ಥವಾಯಿತು. ಕೆಟ್ಟದ್ದನ್ನು ಮಾತನಾಡಬಾರದು ಎಂದು ನಮ್ಮ ವೇದಗಳು, ಹಿರಿಯರು ಹೇಳುವುದನ್ನೇ ಇಲ್ಲಿ ವಿರೋಧವಾಗಿ ಮುಂದುವರಿಸುವುದನ್ನು ಬೈಗುಳದ ಸಾಲಿಗೆ ಸೇರಿಸಬಹುದಾಗಿದೆ. ಬೈಗುಳವನ್ನೇಕೆ ಬಯ್ಯಬೇಕು ಎಂದು ಒಂದು ಪ್ರಶ್ನೆ ಉದ್ಭವಿಸುವುದು ಸಹಜ. ಕೈಲಾಗದವನು ಮೈ ಪರಚಿಕೊಂಡ ಎಂಬ ಮಾತು ನಮ್ಮಲ್ಲಿ ಪ್ರಚಲಿತದಲ್ಲಿದೆ. ಅಂದರೆ ಎದುರಾಳಿಗಳನ್ನು ದೈಹಿಕವಾಗಿ ಎದುರಿಸಲು ಅಸಮರ್ಥನಾದವನು ಬೈಗುಳ ಎಂಬ ಮಹಾ ಅಸ್ತ್ರದಿಂದ ಅವರನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರುತ್ತಾರೆ. ಈ ರೀತಿಯ ಕೆಟ್ಟ ಮಾತುಗಳನ್ನು ಮಾತನಾಡುವವರ ಜೊತೆ ವಾದಕ್ಕಿಳಿಯದೇ ಅವರಿಂದ ದೂರವಿರುವುದೇ ಲೇಸೆಂದು ಸುಮ್ಮನಿರುವವರು ಹೆಚ್ಚಾದಂತೆಲ್ಲಾ ಬೈಗುಳದ ಜನರೂ ಹೆಚ್ಚಾಗುತ್ತಾರೆ.

ಬಯ್ಯಲು ನಮ್ಮಲ್ಲಿ ಅನೇಕ ಪ್ರೀತಿಯ ತರಹೇವಾರಿ ಬೈಗುಳಗಳಿವೆ. ದಡ್ಡ, ಹುಚ್ಚ, ಹೆಡ್ಡ, ಮಬ್ಬ, ಮಂಕ ಎಂಬಿತ್ಯಾದಿ ಶಬ್ದಗಳು ಬುದ್ಧಿ ಮತ್ತು ಜ್ಞಾನ ಕಡಿಮೆ ಇರುವವರನ್ನು ಬಯ್ಯುವಂತಹವುಗಳಾಗಿವೆ. ಇಂತಹ ಬೈಗುಳಗಳು ಯಾವುದೇ ತೊಂದರೆಯನ್ನು ಈಡು ಮಾಡುವುದಿಲ್ಲ. ಬೈಸಿಕೊಂಡವರಿಗೆ ಕಷ್ಟವನ್ನುಂಟು ಮಾಡುವುದಿಲ್ಲ. ಒಂದೊಂದು ಸಲ ಒಳ್ಳೆಯ ಕೆಲಸವನ್ನು ಮಾಡಿದವರಿಗೂ ಈ ರೀತಿಯಿಂದ ಬಯ್ಯುವುದೂ ಉಂಟು. ಇವೆಲ್ಲಾ ತೀರಾ ಸಾಮಾನ್ಯ ಬೈಗುಳಗಳಾಗಿವೆ.

ಬೈಗುಳದ ಪರಮಾವಧಿ ಕೆಲವೊಮ್ಮೆ ಪ್ರಾಣಿಗಳಿಗೆ ಹೋಲಿಸಿ ಬಯ್ಯಲಾಗುತ್ತದೆ. ಮಂಗ್ಯಾ, ಕೋತಿ, ಹಂದಿ, ಕತ್ತೆ, ಎಮ್ಮಿ ಮಣಕ, ಕೋಣ ಎನ್ನುವ ಕೆಲವು ಪ್ರಾಣಿಗಳಿಗೆ ತಳಕು ಹಾಕಲಾಗುತ್ತದೆ. ಮಂಗ್ಯಾ, ಕೋತಿ ಎಂಬ ಮಾತಿನಿಂದ ಬೈದಾಗ ಮನಸಿಗೆ ನೋವೆನಿಸುವುದಿಲ್ಲ. ಬಹುಶಃ ಅದಕ್ಕೆ ಮಂಗನಿಂದ ಮಾನವನೆಂಬ ಕಾರಣವೂ ಇರಬಹುದು. ಆ ಒಂದಷ್ಟು ಪ್ರೀತಿಯೋ, ಅನುಕಂಪವೋ ಒಟ್ಟಿನಲ್ಲಿ ಅದು ಮನಸಿಗೆ ನಾಟುವುದಿಲ್ಲ. ಆದರೆ ಕತ್ತೆ, ಹಂದಿ, ಎಮ್ಮೆ, ಹೋರಿ ಎಂದೆಲ್ಲಾ ಬೈದಾಗ ಜನರ ನಡುವೆ ಅವಮಾನವಾಗುತ್ತದೆ. ಪಶುಗಳಿಗಿಂತ ಕಡಿಮೆಯಾದೆವಲ್ಲ ಎಂಬ ಸಣ್ಣ ಭಾವನೆ ಬರುವುದುಂಟು.

ಬಯ್ಯುವ ಬೈಗುಳ ಒಂದೊಂದು ಸಲ ಎಷ್ಟು ವಿಚಿತ್ರವಾಗಿರುತ್ತದೆ ಎಂದರೆ ಬಯ್ಯುವ ಪರಾಕಾಷ್ಠತೆಯಲ್ಲಿ ಹಿಂದು ಮುಂದು ಯೋಚಿಸದೇ ಯಾರ ಬದಲು ಯಾರನ್ನೋ ಬಯ್ಯುತಿರುತ್ತೇವೆ. ಸೂಳೇ ಮಗ ಎಂಬ ಪದ ಉತ್ತರ ಕರ್ನಾಟಕದ ಒಂದು ಹೆಚ್ಚು ಪ್ರಚಲಿತದಲ್ಲಿರುವ ಮತ್ತು ಸಾಮಾನ್ಯವಾಗಿ ಎಲ್ಲಾ ಸಂದರ್ಭಗಳಲ್ಲಿ ಉಪಯೋಗಿಸಬಹುದಾದ ಬೈಗುಳ. ಇದು ಒಳ್ಳೆಯ ಕೆಲಸ ಮಾಡಿದಾಗ ಮತ್ತು ಸಾಧನೆಯನ್ನು ಕಂಡಾಗ ಕೂಡಾ ಪ್ರೀತಿಯಿಂದ ಬರಬಹುದಾದ ಬೈಗುಳ. ಇಲ್ಲಿ ಬಯ್ಯಬೇಕಾಗಿರುವ ವ್ಯಕ್ತಿಯನ್ನು ಬಿಟ್ಟು ಅವರವ್ವನನ್ನು ಪರೋಕ್ಷವಾಗಿ ಬೈಯಲಾಗುತ್ತದೆ. ಹಾಗೆಯೇ ಮುಂಡೇ ಮಗ ಹಾಗೂ ಇನ್ನಿತರ ಮಗನೆಂದು ಬಯ್ಯುವ ಬೈಗುಳದಲ್ಲಿ ಬೇರೆಯವರೇ ಬಯ್ಯಿಸಿಕೊಳ್ಳುತ್ತಾರೆ.

ಇನ್ನು ಕುಡುಕರು, ತಲೆ ಹಿಡುಕರು, ಬುದ್ಧಿ ಭ್ರಮಣೆಯಾದವರು, ಅಜ್ಞಾನಿಗಳು, ಅವಿವೇಕಿಗಳು ಮುಂತಾದವರು ಬಯ್ಯುವ ಮಾತುಗಳಂತೂ ಕೇಳಲೇಬಾರದು. ನಾಗರಿಕ ಸಮಾಜದಲ್ಲಿ ತೀರಾ ಅನಾಗರಿಕ ಎಂದೆನಿಸಿಕೊಳ್ಳುವ ಮಾತುಗಳನ್ನು ಆಡಿ ಅಲ್ಲಿರುವ ಇತರರನ್ನು ಕೂಡಾ ಮುಜುಗರಕ್ಕೆ ಒಳಪಡಿಸುವವರೂ ಇದ್ದಾರೆ. ಬಯ್ದು ಹೇಳೋರು ಒಳ್ಳೆಯದಕ್ಕೆ ಹೇಳ್ತಾರೆ ಅನ್ನೋದು ನಮ್ಮಲ್ಲಿನ ನಂಬಿಕೆ. ಚಿಕ್ಕ ಮಕ್ಕಳಲ್ಲಿ ತಂದೆ ತಾಯಿಗಳ, ಶಾಲೆಯಲ್ಲಿ ಶಿಕ್ಷಕರ, ಸುತ್ತ ಮುತ್ತಲಿನ ಹಿರಿಯರ ಬೈಗುಳದ ಹೆದರಿಕೆ ಸದಾ ಜಾಗೃತವಾಗಿರುತ್ತದೆ. ಇಂತಹ ಬೈಗುಳದ ಹೆದರಿಕೆ ಇದ್ದಲ್ಲಿ ಅವರು ಯಾವಾಗಲೂ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಎಚ್ಚರ ವಹಿಸುತ್ತಿರುತ್ತದೆ. ಕೆಲವರ ಮಾತೇ ಏಟಿಗಿಂತಲೂ ತೀಕ್ಷ್ಣವಾಗಿರುತ್ತದೆ. ಜಾಣನಿಗೆ ಮಾತಿನ ಪೆಟ್ಟು ಎಂಬ ಮಾತು ಹೆಚ್ಚು ಸಮಂಜಸವೆನ್ನಿಸುತ್ತದೆ.

ಬೈಗುಳ ಎಂಬುದಕ್ಕೆ ಪರ್ಯಾಯವಾದ ಮತ್ತು ಶ್ರೀಮಂತವಾದ ಪದವೆಂದರೆ ವಾಗ್ದಂಡನೆ. ಮಾತಿನಿಂದಲೇ ದಂಡಿಸುವುದು ಎಂದು ಇರ ಅರ್ಥ. ಕಟುವಾದ ಪದಗಳನ್ನು ಬಳಸಿದಾಗ ಕೆಲವರಿಗೆ ನೋವಾಗುವುದುಂಟು. ಆ ಮೂಲಕ ಅವರಿಗೆ ದಂಡಿಸಲಾಗುತ್ತದೆ. ಮಾತಿನಿಂದಲೇ ಇಹವು ಮಾತಿನಿಂದಲೇ ಪರವು ಮಾತಿನಿಂದಲೇ ಸರ್ವ ಸಂಪದವು ಜಗದೊಳಗೆ ಮಾತೇ ಮಾಣಿಕ್ಯ ಎಂದು ಸರ್ವಜ್ಞ ಕವಿ ಹೇಳಿದ್ದಾನೆ. ಜಗತ್ತಿನ ಒಳಗೆ ಇರುವ ಒಳಿತು ಕೆಡುಕೆಲ್ಲವೂ ನಮ್ಮ ಮಾತಿನಿಂದಲೇ ಅವಲಂಬಿತವಾಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಹಾಗಾಗಿ ಯಾರಿಗಾದರೂ ನಾವು ಏನನ್ನಾದರೂ ಹೇಳಬೇಕಾಗಿದ್ದಲ್ಲಿ ಅದು ನೇರವಾಗಿರಬೇಕು ಮತ್ತು ಅವ ಭಾವನೆಗೆ ನೋವಾಗುವಂತಹದ್ದು ಆಗಿರಬಾರದು ಎಂಬುದು ಮೂಲಭೂತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಬೈದು ಹೇಳಿದವ ಒಳ್ಳೆಯದಕ್ಕೆ ಹೇಳಿದ, ನಗುತಾ ಹೇಳದವ ಕೆಟ್ಟದ್ದಕ್ಕೆ ಹೇಳಿದ ಎಂಬುದೊಂದು ನಮ್ಮಲ್ಲಿ ಮಾತಿದೆ. ಹರಿಯವಾದ ಮಾತುಗಳಲ್ಲಿ ಒಂದೊಂದು ಸಲ ಸಕಾರಣ ಅರ್ಥವಿರುತ್ತದೆ. ಅದಕ್ಕೆ ನಮ್ಮ ಮಾತು ಒಳ್ಳೆಯದಕ್ಕೆ ಆಗಿರಬೇಕು. ಬದಲಾಗಿ ಬೇರೆಯವರಿಗೆ ನೋವಾಗ ಬಾರದು. ಹಾಗಾದಾಗಲೇ ಆಡಿದ ಮಾತಲ್ಲಿ ಹಿತವಿರುತ್ತದೆ.

ಭೋಜರಾಜ ಸೊಪ್ಪಿಮಠ

Writer - ಭೋಜರಾಜ ಸೊಪ್ಪಿಮಠ

contributor

Editor - ಭೋಜರಾಜ ಸೊಪ್ಪಿಮಠ

contributor

Similar News