ಬುದ್ಧಿ ಕಲಿಸಿದ ಸುಬ್ಬಿ
ಕೋಳಿ(ಸುಬ್ಬಿ) ಮತ್ತು ಮೇಕೆ (ಚಿನ್ನು) ಇಬ್ಬರು ಬಲು ಆಪ್ತ ಗೆಳತಿಯರು. ಇವರು ಆಗಾಗ ಅಂಗಳದಲ್ಲಿ ಕೂಡಿ ಖುಷಿಯಿಂದ ಆಟ ಆಡುವರು. ಪರಸ್ಪರ ಹಂಚಿ ತಿನ್ನುವರು. ಒಬ್ಬರು ಇನ್ನೊಬ್ಬರಿಗೆ ಸಹಕರಿಸುತ್ತಿದ್ದರು ಪ್ರೀತಿ ಮತ್ತು ವಿಶ್ವಾಸವೇ ಗೆಳತನದ ಬುನಾದಿ ಅಲ್ಲವೇ, ಒಂದು ದಿನ ಸುಬ್ಬಿ ‘‘ಏ ಚಿನ್ನು ನನಗೆ ನಿನ್ನ ಕೈಯಿಂದ ಮಾಡಿದ ಪುಲಾವ್ ಬಲು ಇಷ್ಟ’’ ಎಂದಿತು ಅದಕ್ಕೆ ಚಿನ್ನು ‘‘ಓ ಆಗಲಿ ಮನೆಗೆ ಬಾ’’ ಎಂದಳು. ಸುಬ್ಬಿಯನ್ನು ಊಟಕ್ಕೆ ಮನೆಗೆ ಕರೆಯಿತು. ಚಿನ್ನು ತರೆಹೇವಾರಿ ತರಕಾರಿ ಹಾಕಿ ಬಿಸಿ ಬಿಸಿ ಪುಲಾವ್ ತಯಾರಿಸಿದಳು. ಇತ್ತ ಸುಬ್ಬಿ ತನ್ನ ಬಣ್ಣ ಬಣ್ಣದ ಪುಟಾಣಿ ಮರಿಗಳ ಜತೆಗೆ ಆಗಮಿಸಿದಳು.ಚಿನ್ನು ನಗು ಮುಖದಿಂದ ಸುಬ್ಬಿಯನ್ನು ಬರಮಾಡಿಕೊಂಡಿತು.ಅಷ್ಟರಲ್ಲಿ ಬೆಕ್ಕು (ಸೋನು) ಮೀಸೆ ತಿರುವುತ್ತಾ ‘‘ವ್ಹಾ!. ಏನು ಘಮ ಅನ್ನುವ ವಾಸನೆ ಚಿನ್ನು?’’ ಎಂದನು.. ಚಿನ್ನು ‘‘ಬಾ ಸೋನು ಪುಲಾವ್ ತಿನ್ನುವೇ’’ ಎಂದಳು. ಬೇಕಂತ ಸೋನು ಸುಬ್ಬಿ ಮುಂದೆಯೇ ಕುಳಿತೇ ಬಿಟ್ಟನು. ಸುಬ್ಬಿ ಮತ್ತು ಮರಿಗಳಿಗೆ ಎದೆ ಢವ ಢವ ಶುರುವಾಯಿತು. ಮುಂದೆ ಇರುವ ಊಟವನ್ನು ತಿನ್ನದೆ ಭಯದಿಂದ ಕುಳಿತವು. ಈ ದೃಶ್ಯವನ್ನು ನೋಡಿ ಚಿನ್ನು ಕಿಲ ಕಿಲ ನಗುತ್ತಿದ್ದಳು. ಆದರೆ ಸುಬ್ಬಿಗೆ ಪ್ರಾಣ ಸಂಕಟದಿಂದ ಕಣ್ಣು ತುಂಬಿ ಬಂದವು. ಅಲ್ಲಿಂದ ಬೇಸರದ ಮನಸ್ಸಿನಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಓಡಿ ಬಂತು. ಇತ್ತ ಸುಬ್ಬಿಗೆ ಒಂದೇ ಪ್ರಶ್ನೆ ಕಾಡಿತು. ಚಿನ್ನು ಯಾಕೆ ಇಂಥ ಮುಜುಗರ ಮಾಡಿದಳು? ಎಂದು ಚಿಂತಿಸಿತು. ನಂತರ ಸುಬ್ಬಿ ಚಿನ್ನುಗೆ ಪಾಠ ಕಲಿಸಲು ತಾನು ಊಟಕ್ಕೆ ಆಹ್ವಾನಿಸಿದಳು. ಚಿನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಬರಬೇಕು ಎಂದು ಸುಬ್ಬಿ ಪ್ರೀತಿಯಿಂದ ಕರೆದಳು. ಚಿನ್ನು ಮಿಂಚು ಮಿಂಚುತ್ತಾ ಬಂದಳು. ಇತ್ತ ಸ್ವಾದಿಷ್ಟ ಭೋಜನ ತಯಾರಿಸಿ ಸುಬ್ಬಿ ಒಂದು ಉದ್ದ ಪಾತ್ರೆಯಲ್ಲಿ ಹಾಕಿ ಚಿನ್ನುಗೆ ತಿನ್ನಲು ಕೊಟ್ಟಳು. ಸುಬ್ಬಿ ‘‘ಎಂಥಾ ಪಾತ್ರೆಯಲ್ಲಿ ಹಾಕಿದ್ದಿಯಾ ಹೇಗೆ ತಿನ್ನಲಿ’’ ಎಂದಿತು. ತಿನ್ನಲು ಆಗದೇ ಪಾತ್ರೆಯಲ್ಲಿ ಕತ್ತು ಸಿಗಿಸಿ ಚಡಪಡಿಸಿತು. ಇದನ್ನು ನೋಡಿ ಸುಬ್ಬಿ ಮತ್ತು ಮರಿಗಳು ಕೇ ಕೇ ಹಾಕಿದವು. ಹಾಗೆ ಒದ್ದಾಡುತ್ತಾ ಕುತ್ತಿಗೆಯನ್ನು ಪಾತ್ರೆಯಿಂದ ಹೊರಗೆ ತೆಗೆದಳು. ಆಗ ಚಿನ್ನುಗೆ ತನ್ನ ತಪ್ಪಿನ ಅರಿವು ಆಯಿತು. ಸುಬ್ಬಿಯ ಕ್ಷಮೆ ಕೇಳಿತು. ಕಹಿ ಮಾತು ಮರೆತು ಮತ್ತೊಮ್ಮೆ ಇಬ್ಬರು ಖುಷಿಯಿಂದ ಗೆಳತನ ಮುಂದುವರಿಸಿದವು. ಮುದ್ದು ಪುಟಾಣಿಗಳೇ ಇನ್ನೊಬ್ಬರ ಕಷ್ಟವನ್ನು ನೋಡಿ ಹಾಸ್ಯ ಮಾಡಬಾರದು ಅಲ್ಲವೇ??
ಕಥೆಯ ನೀತಿ
‘ಹಾಸ್ಯ ಇರಲಿ ಅಪಹಾಸ್ಯ ಬೇಡ’