ಜರ್ಮನ್ ರಾಯಭಾರಿ ಲಿಂಡನರ್ ಆರೆಸ್ಸೆಸ್ ಕಚೇರಿ ಭೇಟಿಯ ಸುತ್ತಮುತ್ತ...

Update: 2019-07-29 18:32 GMT

ಆರೆಸ್ಸೆಸ್ ಮುಖ್ಯ ಕಾರ್ಯಾಲಯಕ್ಕೆ ಲಿಂಡನರ್ ಅವರ ಭೇಟಿಯ ಉದ್ದೇಶವೇನು ಎಂಬ ಕುರಿತಾಗಿ ನಿಖರ ವಿವರಣೆಯು ದಿಲ್ಲಿಯಲ್ಲಿನ ಜರ್ಮನ್ ರಾಯಭಾರಿ ಕಚೇರಿಯಿಂದ ಇನ್ನೂ ಬಂದಿಲ್ಲ. ಈ ವಿದ್ಯಮಾನವು ಕೇವಲ ಭಾರತದಲ್ಲಿ ಮಾತ್ರವಲ್ಲ ಜರ್ಮನಿಯಲ್ಲಿ ಕೂಡಾ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಲಿಂಡನರ್ ನಿರ್ದಿಷ್ಟವಾದ ರೀತಿಯಲ್ಲಿ ಇನ್ನೊಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.

ನಾಝಿವಾದದ ಹೆಸರಿನಲ್ಲಿ ಅಪರಾಧ ಕೃತ್ಯಗಳು ಜರ್ಮನಿಯನ್ನು ಇಂದಿನ ದಿನಗಳಲ್ಲಿ ಬೆಂಬಿಡದೆ ಕಾಡುತ್ತಿವೆ. 1945ರಲ್ಲಿ ದ್ವಿತೀಯ ಜಾಗತಿಕ ಮಹಾಯುದ್ಧ ಕೊನೆಗೊಂಡ ಬೆನ್ನಲ್ಲೇ ಹಾಗೂ ಆನಂತರದ ದಶಕಗಳಲ್ಲಿ ಈ ಅಪರಾಧಕೃತ್ಯಗಳು ಜನರನ್ನು ಬೆಚ್ಚಿಬೀಳಿಸಿದ್ದವು.

 ಹಲವಾರು ಜರ್ಮನರಿಗೆ ಈ ಘಟನೆಗಳನ್ನು ಹಾಗೂ ಅದರ ಸಂಕೀರ್ಣತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 1960ರ ದಶಕದಲ್ಲಷ್ಟೇ ನಾಝಿವಾದ ಮತ್ತೆ ತಲೆಯೆತ್ತುತ್ತಿರುವ ಬಗ್ಗೆ ವಿಸ್ತೃತವಾದ ಸಾಮಾಜಿಕ ಚರ್ಚೆ ಆರಂಭಗೊಂಡಿತ್ತು. ಪ್ರಾಥಮಿಕವಾಗಿ ಯುವಜನಾಂಗವು ಗತಕಾಲದ ಘಟನೆಗಳ ಮರುಅವಲೋಕನವನ್ನು ಹುರುಪಿನಿಂದ ಮಾಡತೊಡಗಿತು.

ನಾಝಿವಾದದ ಹಿಂಸಾಚಾರ ಹಾಗೂ ಘೋರ ಹತ್ಯಾಕಾಂಡ (ಹೊಲೊಕಾಸ್ಟ್) ಘಟನೆಯ ಪರಿಣಾಮಗಳು ಜರ್ಮನಿಯನ್ನು ಆತ್ಮವಿಮರ್ಶೆಗೆ ಒಳಪಡಿಸಿದ್ದವು.

ನಮ್ಮ ಇತಿಹಾಸ

    1945ನೇ ಇಸವಿಯಲ್ಲಿ ಜರ್ಮನಿಯು ಇತಿಹಾಸ ಭವನ ಎಂಬ ವಸ್ತುಸಂಗ್ರಹಾಲಯವನ್ನು ಬಾನ್ ನಗರದಲ್ಲಿ ಸ್ಥಾಪಿಸಿತ್ತು. 1945ನೇ ಇಸವಿಯಿಂದೀಚೆಗೆ ಜರ್ಮನಿಯನ್ನು ಹಾದುಹೋಗುವ ಯಾವುದೇ ಪ್ರವಾಸಿಗನು ಈ ಮ್ಯೂಸಿಯಂಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲಾರ. ಈ ವಸ್ತುಸಂಗ್ರಹಾಲಯವು, ಜರ್ಮನಿಗೆ ಅದರ ತೊಂದರೆಗೀಡಾದ ಇತಿಹಾಸವನ್ನು ತಿದ್ದಲು ನಿರಂತರವಾಗಿ ಪ್ರಯತ್ನಿಸುವುದಕ್ಕೆ ಪ್ರೇರೇಪಿಸುತ್ತಿದೆ. ಅಡಾಲ್ಫ್ ಹಿಟ್ಲರ್‌ನ ಬೆಳವಣಿಗೆ ಹಾಗೂ ಆತ ನಡೆಸಿದ ಭಯಾನಕವಾದ ಜನಾಂಗೀಯ ಹತ್ಯಾಕಾಂಡಕ್ಕಾಗಿ ಜರ್ಮನಿಯು ಕ್ಷಮೆಯಾಚಿಸಿತು ಹಾಗೂ ನಾಝಿವಾದದ ಸಂತ್ರಸ್ತರಿಗೆ ಪರಿಹಾರವಾಗಿ ನೂರಾರು ಕೋಟಿ ಡಾಲರ್‌ಗಳನ್ನು ಪಾವತಿಸಿತು. 1970ರ ಡಿಸೆಂಬರ್ 7ರಂದು ಜರ್ಮನಿಯ ಚಾನ್ಸಲರ್ ವಿಲ್ಲಿ ಬ್ರಾಂಟ್ ಅವರು ಪೋಲ್ಯಾಂಡ್‌ನ ವಾರ್ಸಾದಲ್ಲಿರುವ ಯಹೂದ್ಯರ ಕೇರಿಯಲ್ಲಿ ಮೊಣಕಾಲೂರಿ, ತನ್ನ ದೇಶ ನಡೆಸಿದ ಗತಕಾಲದ ಭಯಾನಕ ಕೃತ್ಯಗಳಿಗಾಗಿ ಕ್ಷಮೆಯಾಚಿಸಿದರು.

    2015ರಲ್ಲಿ ನಿರಾಶ್ರಿತರ ಪ್ರವಾಹವೇ ಯುರೋಪ್‌ಗೆ ಹರಿದುಬಂದಾಗ, ಅವರಲ್ಲಿ 8.90 ಲಕ್ಷ ಮಂದಿಗೆ ಜರ್ಮನಿಯು ಆಶ್ರಯ ನೀಡಿತು. ತನ್ನ ಅಪಮಾನಕರವಾದ ಗತಚರಿತ್ರೆಯನ್ನು ತಿದ್ದುಪಡಿ ಮಾಡುವ ಜರ್ಮನಿ ಜನತೆಯ ನಿರಂತರವಾದ ಹಂಬಲವೇ ಈ ಸದ್ಭಾವನೆಯ ಕ್ರಮಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಆಕಾಂಕ್ಷೆಯೇ ಏಂಜೆಲಾ ಮರ್ಕೆಲ್ ಸರಕಾರಕ್ಕೆ ಐಸಿಸ್ ಉಗ್ರರ ಪ್ರಾಬಲ್ಯದ ಪ್ರದೇಶಗಳಿಂದ ಪಲಾಯನಗೈದ ಸಿರಿಯ ನಿರಾಶ್ರಿತರನ್ನು ಸ್ವಾಗತಿಸುವುದಕ್ಕೆ ಪ್ರೇರಣೆಯನ್ನು ನೀಡಿತು.

 ಆದರೆ ಇಂತಹ ಸದ್ಭಾವನೆಯ ಕ್ರಮವು ಮುಸ್ಲಿಂ ಪ್ರಾಬಲ್ಯದ ಪೆಟ್ರೋ-ಡಾಲರ್ ರಾಷ್ಟ್ರಗಳಿಂದ ಬರಲಿಲ್ಲವೆಂಬ ಅಂಶವು ರಾಜಕೀಯ ವೀಕ್ಷಕರು ಹಾಗೂ ಸಾರ್ವಜನಿಕರ ಗಮನಕ್ಕೆ ಬಾರದೇ ಹೋಗಲಿಲ್ಲ. ನಿರಾಶ್ರಿತರು ತಂಡತಂಡವಾಗಿ ಆಗಮಿಸುತ್ತಿದ್ದಾಗ ಶ್ರೀಸಾಮಾನ್ಯ ಜರ್ಮನ್ ನಾಗರಿಕರು ಅವರನ್ನು ಭಾರೀ ಸಡಗರದೊಂದಿಗೆ ಸ್ವಾಗತಿಸುತ್ತಿದ್ದುದನ್ನು ಜಗತ್ತೇ ವೀಕ್ಷಿಸಿತ್ತು.

ಖಚಿತವಾಗಿಯೂ, ತೃತೀಯ ಜಗತ್ತಿನ ಹಲವಾರು ದೇಶಗಳು ಜನಾಂಗೀಯ ಹತ್ಯಾಕಾಂಡ ಹಾಗೂ ಸಾಮೂಹಿಕ ಹತ್ಯೆಗಳನ್ನು ಬಹಳಷ್ಟು ಕಂಡಿದೆ. ಭೂತಕಾಲದಲ್ಲಿ ನಡೆದ ದುಷ್ಕೃತ್ಯಗಳಿಗೆ ಸಾಮೂಹಿಕವಾದ ತಪ್ಪೊಪ್ಪಿಗೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಎರಡನೆ ಮಹಾಯುದ್ಧಾನಂತರದ ಜರ್ಮನಿಯು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅವರು ಅನುಸರಿಸಲಿಲ್ಲ. ಜರ್ಮನಿಯ ಹಾಗಲ್ಲದೆ, ಜಗತ್ತಿನ ಹಲವಾರು ಭಾಗಗಳಲ್ಲಿ ಇಂತಹ ಹೇಯ ಅಪರಾಧಗಳ ಸೂತ್ರಧಾರಿಗಳು ಹಾಗೂ ಅವುಗಳನ್ನು ಕಾರ್ಯಗತಗೊಳಿಸಿದವರಿಗೆ ರಾಜಕೀಯ ಗೆಲುವು ಕೂಡಾ ದೊರೆತಿತ್ತು.

 ಆದರೂ, ಭಾರತದಲ್ಲಿನ ಜರ್ಮನಿಯ ರಾಯಭಾರಿ ವಾಲ್ಟರ್ ಜೆ. ಲಿಂಡನರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದ ವರಿಷ್ಠ ಮೋಹನ್ ಭಾಗವತ್ ಅವರ ನಡುವೆ ಇತ್ತೀಚೆಗೆ ನಡೆದ ಮಾತುಕತೆಯು ಭಾರೀ ಆತಂಕ ಹಾಗೂ ಅಚ್ಚರಿಯನ್ನುಂಟು ಮಾಡಿದೆ.

  ಈ ಆತಂಕಕ್ಕೆ ಮುಖ್ಯ ಕಾರಣವೆಂದರೆ, ಆರೆಸ್ಸೆಸ್ ಹಿಂದುತ್ವವಾದವನ್ನು ಪ್ರತಿಪಾದಿಸುತ್ತದೆ. ಆರೆಸ್ಸೆಸ್‌ನ ಅತ್ಯಂತ ಪ್ರಮುಖ ನಾಯಕರೊಬ್ಬರು ಜರ್ಮನಿಯಲ್ಲಿ ಯಹೂದ್ಯರ ಜನಾಂಗೀಯ ಶುಚೀಕರಣವನ್ನು ಪ್ರಶಂಸಿಸಿದ್ದರು. ಇಂತಹ ಅಭಿಪ್ರಾಯಗಳಿಂದ ದೂರಸರಿಯದ ಸಂಸ್ಥೆಗೆ ಲಿಂಡರ್ ಭೇಟಿ ನೀಡಿರುವುದು ಕನಿಷ್ಠ ಪಕ್ಷ ಜರ್ಮನಿಯ ದೃಷ್ಟಿಯಿಂದಲಾದರೂ ವಿಷಾದಕರವಾಗಿದೆ. ವಾಸ್ತವಿಕವಾಗಿ ‘ಅಲ್ಪಸಂಖ್ಯಾತರ ಪ್ರಶ್ನೆ’ಯನ್ನು ಇತ್ಯರ್ಥಗೊಳಿಸಲು ನಾಝಿಗಳು ಅನುಸರಿಸಿದಂತಹ ವಿಧಾನಗಳನ್ನು ಭಾರತದಲ್ಲಿ ಅಳವಡಿಸಬೇಕು ಎಂಬ ಸಿದ್ಧ್ದಾಂತವನ್ನು ಆರೆಸ್ಸೆಸ್ ಪ್ರಸ್ತಾಪಿಸ ಹೊರಟಿದೆ.

 ಲಿಂಡನರ್ ಅವರು ಸಾಮಾನ್ಯವಾದ ರಾಜತಾಂತ್ರಿಕನೇನಲ್ಲ. ಅವರು ಜರ್ಮನಿಯ ಮಾಧ್ಯಮಗಳ ಕಣ್ಮಣಿಯಾಗಿದ್ದಾರೆ. ಜರ್ಮನಿಯ ಮಾಜಿ ಉಪಕುಲಪತಿ ಹಾಗೂ ವಿದೇಶಾಂಗ ಸಚಿವ ಜೋಶಿಕಾ ಫಿಶರ್ ಅವರ ವಕ್ತಾರರಾಗಿದ್ದರು. 2018ರಲ್ಲಿ ಹೇಕೊ ಮಾಸ್ ಅವರು ವಿದೇಶಾಂಗ ಸಚಿವರಾದಾಗ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜರ್ಮನಿ, ಫ್ರೆಂಚ್, ಟರ್ಕಿ ಹಾಗೂ ಇಂಗ್ಲಿಷ್ ಬಲ್ಲ ಬಹುಭಾಷಾ ಪಂಡಿತರೂ ಹೌದು.

ನುರಿತ ಕೊಳಲು ಹಾಗೂ ಗಿಟಾರ್ ವಾದಕರೂ ಆಗಿರುವ ಅವರು ಎರಡು ಸಂಗೀತ ಅಲ್ಬಮ್‌ಗಳನ್ನು ಕೂಡಾ ನಿರ್ಮಿಸಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಲಿಂಡನರ್ ಅವರು ಆರೆಸ್ಸೆಸ್ ಹಾಗೂ ಅದು ಪ್ರತಿಪಾದಿಸುವ ರಾಷ್ಟ್ರವಾದದ ಬಗ್ಗೆ ತಿಳಿಯದವರೇನೂ ಅಲ್ಲ.

   ಆರೆಸ್ಸೆಸ್ ಮುಖ್ಯ ಕಾರ್ಯಾಲಯಕ್ಕೆ ಲಿಂಡನರ್ ಅವರ ಭೇಟಿಯು ಖಾಸಗಿಯಾಗಿಯೇ ಉಳಿದಿದ್ದಲ್ಲಿ, ಆ ಕುರಿತಾದ ಆಕ್ಷೇಪಗಳನ್ನು ಕಡೆಗಣಿಸಬಹುದಿತ್ತು ಅಥವಾ ತಳ್ಳಿಹಾಕಬಹುದಾಗಿತ್ತು. ಆದರೆ ಜರ್ಮನಿಯ ರಾಯಭಾರಿ ಅವರು ತನ್ನ ನಾಗಪುರ ಭೇಟಿಯ ಬಗ್ಗೆ ವ್ಯಾಪಕವಾಗಿ ಟ್ವೀಟ್ ಮಾಡಿದ್ದರು. ಅವರು ನಾಗಪುರದಲ್ಲಿ ತನ್ನ ಬೈಸಿಕಲ್ ಸವಾರಿ ಮಾಡಿ ಆ ಪ್ರದೇಶದಲ್ಲಿ ಕುಷ್ಠರೋಗದ ವಿರುದ್ಧ ಹೋರಾಟದ ಅಭಿಯಾನವನ್ನು ಬೆಂಬಲಿಸುವುದು ಸೇರಿದಂತೆ ನಾಗಪುರದಲ್ಲಿ ತನ್ನ ಚಟುವಟಿಕೆಗಳು ಹಾಗೂ ಭಾಗವತ್ ಜೊತೆಗೆ ತಾನು ನಡೆಸಿದ ಮಾತುಕತೆಗಳನ್ನು ಟ್ವೀಟ್ ಮಾಡಿದ್ದರು.

ಅವರ ಟ್ವೀಟ್‌ಗಳ ಬೆನ್ನಲ್ಲೇ ಆರೆಸ್ಸೆಸ್‌ನಿಂದಲೂ ಟ್ವಿಟರ್ ಮೂಲಕ ಇದೇ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು. ಇದರಿಂದಾಗಿ ಇಡೀ ಕಾರ್ಯಕ್ರಮವು ಅಧಿಕೃತವೆನಿಸಿಕೊಂಡಿತು.

ನಾಗಪುರ ಆರೆಸ್ಸೆಸ್ ಕಾರ್ಯಾಲಯಕ್ಕೆ ಲಿಂಡನರ್ ಅವರ ಭೇಟಿಯನ್ನು ವಿರೋಧಿಸಿ ತಕ್ಷಣವೇ ಸರಣಿದೂರುಗಳು ಹರಿದುಬಂದವು ಹಾಗೂ ಪ್ರತಿಭಟನೆಗಳು ನಡೆದವು. change.org  ಎಂಬ ವೆಬ್‌ಸೈಟ್‌ನಲ್ಲಿ ದಕ್ಷಿಣ ಏಶ್ಯದ ವಿದ್ಯಮಾನಗಳ ವಿಶ್ಲೇಷಕ ಪೀಟರ್ ಫ್ರೆಡ್‌ರಿಕ್ ಎಂಬವರು ಈ ಕುರಿತ ದೂರು ಅರ್ಜಿಗಳ ಅಭಿಯಾನವನ್ನೇ ನಡೆಸಿದರು. ರವಿವಾರ ರಾತ್ರಿಯೊಳಗೆ ಜಗತ್ತಿನಾದ್ಯಂತದ ಪ್ರಮುಖ ಶಿಕ್ಷಣವೇತ್ತರು ಸೇರಿದಂತೆ ಸುಮಾರು 1,800 ಮಂದಿ ಈ ಅಭಿಯಾನಕ್ಕೆ ಸಹಿಹಾಕಿದರು. ಆರೆಸ್ಸೆಸ್‌ನ ಛಾಯಾಸೈನಿಕ, ಸೈದ್ಧಾಂತಿಕ ಹಾಗೂ ಸಾಂಸ್ಥಿಕ ಸ್ವರೂಪವು ಯುರೋಪ್‌ನ ಫ್ಯಾಶಿಸ್ಟ್‌ವಾದದಿಂದ ಸ್ಫೂರ್ತಿ ಪಡೆದುಕೊಂಡಿದೆಯೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ ಹಾಗೂ ಆರೆಸ್ಸೆಸ್‌ನ ಸಿದ್ಧಾಂತದ ಬಗ್ಗೆ ಜರ್ಮನಿಯು ತನ್ನ ಅಸಹಿಷ್ಣುತೆಯನ್ನು ಪ್ರದರ್ಶಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.

ಆರೆಸ್ಸೆಸ್‌ನ ಎರಡನೇ ವರಿಷ್ಠರಾಗಿದ್ದ ಮಾಧವ ಗೋಳ್ವಾಲ್ಕರ್ ಅವರು ಭಾರತವನ್ನು ಜನಾಂಗೀಯ ರಾಷ್ಟ್ರವೆಂಬ ದೃಷ್ಟಿಕೋನವನ್ನು ವಿವಾದಾತ್ಮಕವಾಗಿ ಪ್ರಸ್ತಾವಿಸಿದ್ದರು. ತನ್ನ ಪ್ರಮುಖ ಕೃತಿಯೊಂದರಲ್ಲಿ ಅವರು ‘ನಾವು ಅಥವಾ ನಮ್ಮ ರಾಷ್ಟ್ರೀಯತೆ’ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಅವರು ಬರೆದಿದ್ದರು.

  ‘‘ಭಾರತದಲ್ಲಿ ತಮ್ಮ ಪವಿತ್ರ ಭೂಮಿಯನ್ನು ಹೊಂದಿರದ ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮಗಳು ಹಿಂದೂ ಜನಾಂಗದೊಂದಿಗೆ ವಿಲೀನಗೊಳ್ಳಲು ತಮ್ಮ ಪ್ರತ್ಯೇಕ ಅಸ್ಮಿತೆಯನ್ನು ತೊರೆಯಬೇಕಾಗಿದೆ. ಇಲ್ಲದಿದ್ದಲ್ಲಿ ಅವರಿಗೆ ಪೌರತ್ವದ ಯಾವುದೇ ಸವಲತ್ತುಗಳನ್ನು ಹೊಂದುವ ಹಕ್ಕಿರುವುದಿಲ್ಲ ಹಾಗೂ ಅವರು ಹಿಂದೂ ರಾಷ್ಟ್ರಕ್ಕೆ ಸಂಪೂರ್ಣವಾಗಿ ಅಧೀನರಾಗಿರಬೇಕಾಗುತ್ತದೆ.’’

  ಗೋಳ್ವಾಲ್ಕರ್ ಪ್ರಕಟಿಸಿದ ಪುಸ್ತಕದ ಸಮಯ ಕೂಡಾ ಅಷ್ಟೇ ಪ್ರಸ್ತುತವಾಗಿದೆ. ನಾಝಿಗಳಿಂದ ಯಹೂದ್ಯರ ಮೊದಲ ಹತ್ಯಾಕಾಂಡ ಜರ್ಮನಿಯ ಕ್ರಿಸ್ಟಾಲ್‌ನಾಟ್‌ನಲ್ಲಿ ನಡೆದ ಒಂದು ವರ್ಷದ ಬಳಿಕ ಅಂದರೆ 1939ರಲ್ಲಿ ಈ ಪುಸ್ತಕ ಪ್ರಕಟವಾಗಿತ್ತು. ಇದಕ್ಕೂ ನಾಲ್ಕು ವರ್ಷಗಳ ಮೊದಲು, 1935ರಲ್ಲಿ ನಾಝಿಗಳು ಯೆಹೂದ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ನ್ಯೂರೆಂಬರ್ಗ್ ಕಾನೂನುಗಳನ್ನು ಅಂಗೀಕರಿಸಿತ್ತು. ನೂರೆಂಬರ್ಗ್ ಕಾನೂನಿನ ಎರಡು ಪ್ರಮುಖ ಮಸೂದೆಗಳು, ಯೆಹೂದ್ಯರ ಪೌರತ್ವವನ್ನು ರದ್ದುಪಡಿಸಿದ್ದವು ಹಾಗೂ 45 ವರ್ಷದೊಳಗಿನ ಜರ್ಮನ್ ಮಹಿಳೆಯರಿಗೆ ಉದ್ಯೋಗದಲ್ಲಿ ತೊಡಗುವುದನ್ನು ನಿಷೇಧಿಸಿತ್ತು ಜರ್ಮನ್ ಯೆಹೂದ್ಯರು ಹಾಗೂ ಯೆಹೂದ್ಯೇತರರ ನಡುವೆ ವಿವಾಹವನ್ನು ನಿಷೇಧಿಸಿದ್ದವು.

ತನ್ನ ದೇಶದಲ್ಲಿ ಇತ್ತೀಚೆಗೆ ನಡೆದ ಸರಣಿ ಘಟನೆಗಳನ್ನು ಜರ್ಮನ್ ರಾಯಭಾರಿ ಲಿಂಡನರ್ ಗಮನಕ್ಕೆ ತೆಗೆದುಕೊಂಡಿದ್ದಲ್ಲಿ ಗೋಳ್ವಾಲ್ಕರ್‌ರ ಲೇಖನವು ಬಹುಶಃ ಅವರನ್ನು ವಿಚಲಿತಗೊಳಿಸಬಹುದಾಗಿತ್ತು. ಜರ್ಮನ್ ಸಮಾಜದಲ್ಲಿ ಕಟ್ಟರ್ ಬಲಪಂಥೀಯವಾದವು ಹೇಗೆ ಅಳವಾಗಿ ನುಸುಳುತ್ತಿದೆಯೆಂಬುದನ್ನು ಈ ಘಟನಾವಳಿಗಳು ತೋರಿಸಿಕೊಟ್ಟಿವೆ.

ಜರ್ಮನಿಯ ಮಾಜಿ ಬೇಹುಗಾರಿಕಾ ವರಿಷ್ಠ ಹಾಗೂ ಆಡಳಿತಾರೂಢ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಪಕ್ಷದ ಸದಸ್ಯರಾದ ಮಾಸ್ಸೆನ್ ತೀರಾ ಇತ್ತೀಚೆಗೆ ಬಲಪಂಥೀಯವಾದಿ ಟ್ವೀಟ್‌ಗಳನ್ನು ಪ್ರಸಾರ ಮಾಡುವ ಮೂಲಕ ಭಾರೀ ಜನಾಕ್ರೋಶಕ್ಕೆ ಕಾರಣರಾಗಿದ್ದರು.

ಜರ್ಮನಿಯ ಪೂರ್ವಭಾಗದ ಪ್ರಮುಖ ನಗರಗಳಲ್ಲೊಂದಾದ ಚೆಮಿನಿಟ್ಝ್‌ನಲ್ಲಿ ಬಲಪಂಥೀಯವಾದಿ ಪ್ರತಿಭಟನಕಾರರು, ವಲಸಿಗರ ಮೇಲೆ ಹಲ್ಲೆ ಮಾಡಿದ ಘಟನೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಮಾಸ್ಸೆನ್ ಅವರು ಜರ್ಮನಿಯ ಬೇಹುಗಾರಿಕಾ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

  ಮಾಸ್ಸೆನ್ ಅವರ ವಿವಾದಾತ್ಮಕ ಟ್ವೀಟ್‌ಗೆ ಕೇವಲ ಒಂದು ತಿಂಗಳು ಮೊದಲು ಸಿಡಿಯು ಪಕ್ಷದ ಸದಸ್ಯ, ವಾಲ್ಟರ್ ಲುಬ್ಕೆ ಅವರನ್ನು ನವ ನಾಝಿ ಸ್ಟೀಫನ್ ಅರ್ನೆಸ್ಟ್ ಎಂಬಾತ ಹತ್ಯೆಗೈದಿದ್ದ. ನಿರಾಶ್ರಿತ ಪರ ನಿಲುವನ್ನು ಹೊಂದಿದ್ದಕ್ಕಾಗಿ ಲುಬ್ಕೆ ಅವರನ್ನು ಹತ್ಯೆಗೈದಿದ್ದನೆನ್ನಲಾಗಿದೆ.

2015ರಲ್ಲಿ ನಿರಾಶ್ರಿತ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಗಾಗಿ ಮರ್ಕೆಲ್ ಅವರು ಬಲಪಂಥೀಯವಾದಿಗಳಿಂದ ತೀವ್ರ ಟೀಕೆಗೊಳಗಾ ಗಿದ್ದರು. ನಿರಾಶ್ರಿತರಿಗೆ ಜರ್ಮನಿಯ ಗಡಿಗಳನ್ನು ಮುಚ್ಚದಿರುವ ಮರ್ಕೆಲ್ ಅವರ ನಿರ್ಧಾರವನ್ನು ಲುಬ್ಕೆ ಸಮರ್ಥಿಸಿದ್ದರು. ಇದು ಕಟ್ಟಾಬಲಪಂಥೀಯವಾದಿಗಳನ್ನು ಕೆರಳಿಸಿತ್ತು.

ಹೆಚ್ಚುತ್ತಿರುವ ಬಲಪಂಥೀಯ ಹಿಂಸಾಚಾರವನ್ನು ಖಂಡಿಸಿ ಲುಬ್ಕೆ ಹತ್ಯೆಗೈಯಲ್ಪಟ್ಟ ಕ್ಯಾಸ್ಸೆಲ್ ನಗರದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆದವು. ಪ್ರತಿಭಟನೆಯೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಆದರೆ ಇನ್ನೂ ಹೆಚ್ಚಿನ ಪ್ರತಿಭಟನೆಗಳನ್ನು ನಡೆಸಬೇಕೆಂದು ಬಲಪಂಥೀಯವಾದ ವಿರೋಧಿ ಹ್ಯಾಸ್ ಸಂಘಟನೆಯು ನೀಡಿದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘‘ಬಲಪಂಥೀಯವಾದದ ವಿರುದ್ಧ ನನ್ನ ದೇಶದ ಜನರು ಯಾಕೆ ಬೀದಿಗಿಳಿಯುತ್ತಿಲ್ಲ’’ ಎಂದು ಜರ್ಮನಿಯ ಖ್ಯಾತ ಅಂಕಣಕಾರ ಆಕ್ಯೂನ್ ಅವರು ಡೆರ್ ಟ್ಯಾಗೆಸ್‌ಪಿಗೆಲ್ ಪತ್ರಿಕೆಗೆ ಬರೆದ ಲೇಖನದಲ್ಲಿ ಪ್ರಶ್ನಿಸಿದ್ದಾರೆ. ವಾಲ್ಟರ್ ಲ್ಯುಬ್ಕೆ ಅವರ ಸಾವಿನ ಬಳಿಕ, ಕೊಲೊನ್ ನಗರದ ಮೇಯರ್ ಹೆನ್ರಿಟ್ ರೆಕೆರ್ ಹಾಗೂ ಇತರ ಡಜನ್‌ಗಟ್ಟಲೆ ರಾಜಕಾರಣಿಗಳ ವಿರುದ್ಧವೂ ಕೊಲೆ ಬೆದರಿಕೆಗಳು ಬಂದಿವೆ ಎಂದವರು ಹೇಳಿದ್ದಾರೆ.

  ಈ ಮಧ್ಯೆ ಕಟ್ಟಾ ಬಲಪಂಥೀಯ ಫರ್ ಡ್ಯುಶ್‌ಲ್ಯಾಂಡ್ (ಎಎಫ್‌ಡಿ) ಪಕ್ಷವು ಸಂಸತ್‌ನಲ್ಲಿ ಸೀಟುಗಳನ್ನು ಗೆಲ್ಲಲು ಸಫಲವಾಗಿದೆ. ಈ ಗೆಲುವು ಅದಕ್ಕೆ ಇನ್ನಷ್ಟು ಉತ್ತೇಜನ ನೀಡಿರುವಂತೆ ಕಾಣುತ್ತಿದೆ. ಜರ್ಮನಿಯ ಸಂವಿಧಾನದ ರಕ್ಷಣೆಗಾಗಿನ ಫೆಡರಲ್ ಕಚೇರಿಯ ವರಿಷ್ಠ ಥಾಮಸ್ ಹಾಲ್ಡೆನ್‌ವಾಂಗ್ ಅವರು ಬಲಪಂಥೀಯವಾದಿ ತೀವ್ರವಾದಿಗಳಿಂದ ಬೆದರಿಕೆಗಳು ಹೆಚ್ಚುತ್ತಿರುವ ಬಗ್ಗೆ ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದಾರೆ.

ಆದರೆ, ಆರೆಸ್ಸೆಸ್ ಮುಖ್ಯ ಕಾರ್ಯಾಲಯಕ್ಕೆ ಲಿಂಡನರ್ ಅವರ ಭೇಟಿಯ ಉದ್ದೇಶವೇನು ಎಂಬ ಕುರಿತಾಗಿ ನಿಖರ ವಿವರಣೆಯು ದಿಲ್ಲಿಯಲ್ಲಿನ ಜರ್ಮನ್ ರಾಯಭಾರಿ ಕಚೇರಿಯಿಂದ ಇನ್ನೂ ಬಂದಿಲ್ಲ. ಈ ವಿದ್ಯಮಾನವು ಕೇವಲ ಭಾರತದಲ್ಲಿ ಮಾತ್ರವಲ್ಲ ಜರ್ಮನಿಯಲ್ಲಿ ಕೂಡಾ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಲಿಂಡನರ್ ನಿರ್ದಿಷ್ಟವಾದ ರೀತಿಯಲ್ಲಿ ಇನ್ನೊಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಕೃಪೆ: newsclick.in

Writer - ಸುಭಾಷ್ ಗಟಾಡೆ

contributor

Editor - ಸುಭಾಷ್ ಗಟಾಡೆ

contributor

Similar News

ಜಗದಗಲ
ಜಗ ದಗಲ