ಚಂದಿರನಲ್ಲಿಗೆ ಪಯಣದ ಬಯಕೆ ಯಾಕೆ?
ನಾಸಾದ ಆಡಳಿತಗಾರರಾಗಿರುವ ಜಿಮ್ ಬ್ರಿಡನ್‌ಸ್ಟಿನ್‌ಹೇಳುವಂತೆ ಈಗ ಮರಳಿ ಚಂದ್ರನಲ್ಲಿಗೆ ಹೋಗುವ ನಿರ್ಧಾರಕ್ಕೆ ಮುಖ್ಯ ಕಾರಣ: ರಾಜಕಾರಣಿಗಳು (ಸರಕಾರದ ಮುಖ್ಯಸ್ಥರು) 1972ರ ನಂತರ ಮನಸ್ಸು ಬದಲಾಯಿಸಿ, ಚಂದ್ರನ ಬದಲಾಗಿ ಮಂಗಳ ಗ್ರಹದ ಕಡೆಗೆ ಹೊರಳಿದಂತೆ ಪುನಃ ಮನಸ್ಸು ಬದಲಾಯಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.
ಪ್ರತಿಯೊಬ್ಬರು, ಪ್ರತಿಯೊಂದು ದೇಶವೂ ಈಗ ಚಂದ್ರನಲ್ಲಿಗೆ ಹೋಗಲು ಬಯಸುತ್ತಿರುವಂತೆ ಕಾಣಿಸುತ್ತಿದೆ. ಜನವರಿಯಲ್ಲಿ ಚೀನಾದ ಒಂದು ರಾಕೆಟ್ ಚಾಂಗ್ ‘ಇ-4’ ಚಂದ್ರನ ಅಂಚಿನಲ್ಲಿ ಇಳಿದ ಮೊದಲ ರಾಕೆಟ್ ಎಂದು ದಾಖಲಾಯಿತು. ಭಾರತ ಚಂದ್ರಯಾನ -2 ವ್ಯೋಮ ನೌಕೆಯನ್ನು ಕಳುಹಿಸಿದೆ. ಇಸ್ರೇಲ್ ಕೂಡ ಸ್ಪೇಸ್2 ಎಂಬ ಒಂದು ರಾಕೆಟನ್ನು ಕಳುಹಿಸಲು ಪ್ರಯತ್ನಿಸಿತಾದರೂ ಅದು ವಿಫಲವಾಯಿತು.
ಮುಂದಿನ ದಶಕಗಳಲ್ಲಿ ಚೀನಾ ಮತ್ತು ಯುರೋಪಿಯನ್ ಸ್ಪೇಸ್ ಏಜನ್ಸಿ ಚಂದ್ರನಲ್ಲಿಗೆ ಹೋಗುವ, 2050ರ ವೇಳೆಗೆ ಒಂದು ಅಂತರ್‌ರಾಷ್ಟ್ರೀಯ ‘‘ಚಂದ್ರ ಹಳ್ಳಿ’’ ಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿವೆ. ರಶ್ಯ ಕೂಡ ವ್ಯೋಮಯಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ 2030ರ ವೇಳೆಗೆ ಚಂದ್ರನಲ್ಲಿಗೆ ಕಳುಹಿಸುವ ಯೋಜನೆಗಳನ್ನು ಹೊಂದಿದೆ. ಅಮೆರಿಕ ಕೂಡ 2024ರ ವೇಳೆಗೆ ಅಮೆರಿಕನ್ನರನ್ನು ಚಂದ್ರನ ಮೇಲೆ ಇಳಿಸುವುದಾಗಿ ಪ್ರಕಟಿಸಿದೆ. ಅಮೆರಿಕ ಮತ್ತು ನಾಸಾಕ್ಕೆ ಚಂದ್ರ ಈಗ ಮಂಗಳ ಗ್ರಹಕ್ಕೆ ಹೋಗುವ ಮಾರ್ಗದಲ್ಲಿರುವ ಒಂದು ನಿಲ್ದಾಣವಾಗಿದೆ.
ಇಷ್ಟೇ ಅಲ್ಲದೆ, ಅಮೆಜಾನ್ ಸ್ಥಾಪಕ ಜೇಫ್ ಬೆಝೂಸ್‌ನ ‘ಬ್ಲೂ ಒರಿಜಿನ್’ನಂತಹ ಕಂಪೆನಿಗಳು ಕೂಡ ಪ್ರವಾಸಿಗರನ್ನು, ಸರಕುಗಳನ್ನು ಚಂದ್ರನಲ್ಲಿಗೆ ಕಳುಹಿಸುವ ಗುರಿಹೊಂದಿವೆ.
ನಾಸಾದ ಆಡಳಿತಗಾರರಾಗಿರುವ ಜಿಮ್ ಬ್ರಿಡನ್‌ಸ್ಟಿನ್‌ಹೇಳುವಂತೆ ಈಗ ಮರಳಿ ಚಂದ್ರನಲ್ಲಿಗೆ ಹೋಗುವ ನಿರ್ಧಾರಕ್ಕೆ ಮುಖ್ಯ ಕಾರಣ: ರಾಜಕಾರಣಿಗಳು (ಸರಕಾರದ ಮುಖ್ಯಸ್ಥರು) 1972ರ ನಂತರ ಮನಸ್ಸು ಬದಲಾಯಿಸಿ, ಚಂದ್ರನ ಬದಲಾಗಿ ಮಂಗಳ ಗ್ರಹದ ಕಡೆಗೆ ಹೊರಳಿದಂತೆ ಪುನಃ ಮನಸು ಬದಲಾಯಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.
ಈಗ ನಾಸಾ ತನ್ನ ಹೊಸ, ಚಂದ್ರನಡೆಗೆ ಹೋಗುವ ಕಾರ್ಯಕ್ರಮಕ್ಕೆ ‘ಆರ್ಟೆಮಿಸ್’ ಎಂಬ ಹೆಸರಿಟ್ಟಿದೆ. ಆರ್ಟೆಮಿಸ್ ಚಂದ್ರನಲ್ಲಿಗೆ ‘‘ಮೊತ್ತ ಮೊದಲ ಮಹಿಳೆ ಮತ್ತು ಮುಂದಿನ ಪುರುಷ’’ನನ್ನು ಕರೆದೊಯ್ಯಲಿದೆ.
ಹಾಗಿದ್ದರೆ ಈಗ ಚಂದ್ರನೆಡೆಗೆ ಸಾಗುವ ಹಾದಿಯಲ್ಲಿ ನೂಕುನುಗ್ಗಲಿಗೆ ಏನು ಮೂಲ ಕಾರಣ ಗೊತ್ತೆ? ಇನ್ನು ಮುಂದಕ್ಕೆ ಚಂದ್ರನೆಡೆಗೆ ಹೋಗುವ ವ್ಯೋಮಯಾನಿಗಳಿಗೆ ಚಂದ್ರನೇ ಬೆಲೆಕಟ್ಟಲಾಗದ ನೀರಿನ ಅಮೂಲ್ಯ ಮೂಲ, ಸಂಪನ್ಮೂಲ ಅಲ್ಲದೆ, ಹೈಡ್ರೋಜನ್ (ಜಲಜನಕ) ಮತ್ತು ಆಮ್ಲಜನಕವಾಗಿ ವಿಭಜಿಸಬಹುದಾದ ನೀರಿಗೆ ಕೂಡ ಚಂದ್ರನೇ ಸಂಪನ್ಮೂಲವಾಗಬಲ್ಲ. ಹೇಗೆಂದರೆ, ಆಮ್ಲಜನಕವು ಉಸಿರಾಡಲು ಬೇಕಾದ ವಾಯುವನ್ನು ನೀಡಬಲ್ಲದು; ಮತ್ತು ಆಮ್ಲಜನಕ ಹಾಗೂ ಜಲಜನಕ, ರಾಕೆಟ್‌ಗಳಿಗೆ (ಉಡಾವಣೆಯ ಬಳಿಕ) ಮುಂದೆ ಸಾಗಲು ಇಂಧನವಾಗಿ ಬಳಕೆಯಾಗಬಲ್ಲವು. ಹೀಗೆ ಸೌರವ್ಯೆಹದ ಕಡೆಗೆ ಸಾಗುವ ಮೊದಲು ವ್ಯೋಮವಾಹಗಳಿಗೆ, ಸ್ಪೇಸ್‌ಕ್ರಾಫ್ಟ್‌ಗಳಿಗೆ ಇಂಧನವನ್ನು ತಮ್ಮ ಟ್ಯಾಂಕ್‌ಗಳಿಗೆ ಪುನಃ ತುಂಬಿಸಿಕೊಳ್ಳಲು ಒಂದು ನಿಲ್ದಾಣವಾಗಿ (ಪೆಟ್ರೋಲ್ ಬಂಕ್‌ಗಳ ಹಾಗೆ) ಚಂದ್ರ ಉಪಯೋಗವಾಗಬಹುದು.
1998ರಲ್ಲಿ ನಾಸಾ ನಿರ್ಮಿಸಿದ ಲೂನಾರ್ ಪ್ರಾಸ್ಪೆಕ್ಟರ್ ಎಂಬ ವ್ಯೋಮದಲ್ಲಿ ಸುತ್ತುವ ಒಂದು ಚಿಕ್ಕ ನಾಸಾ ವ್ಯೋಮವಾಹದಲ್ಲಿ ಓರ್ವ ಸೌರವ್ಯೆಹ ವಿಜ್ಞಾನಿಯಾಗಿರುವ ಅಲನ್ ಬೈಂಡರ್‌ನ ಚಿಂತನೆ ಇತ್ತು. ಈತ ಚಂದ್ರನ ಮೇಲ್ಮೈಯಲ್ಲಿ ಇರುವ ನೆರಳಿನಿಂದ ಆವೃತವಾದ ಬಾವಿ (ಕ್ರೇಟರ್)ಗಳಲ್ಲಿರುವ ನೀರಿನ ಹಿಮಗಡ್ಡೆಗಳನ್ನು ಬಳಸಿಕೊಳ್ಳುವ ಕುರಿತು ಚಿಂತಿಸಿದ.
ಇವೆಲ್ಲದರ ಜೊತೆಗೆ ಚಂದ್ರನನ್ನು ಬಳಸಿ ಹಣ ಸಂಪಾದನೆ ಮಾಡುವ ಯೋಚನೆಯೂ ಹಲವರಿಗೆ ಬಂತು. ಚಂದ್ರ ಯಾಕೇ ಒಂದು ವ್ಯಾಪಾರೋದ್ಯಮಕ್ಕೆ ಅವಕಾಶವಾಗಬಾರದು? ಇಂತಹ ವ್ಯಾಪಾರೋದ್ಯಮದಲ್ಲಿ ಚಂದ್ರನ ಮೇಲಿರುವ ಮಣ್ಣಿನಿಂದ ಪಡೆಯಬಹುದಾದ ‘ಹೀಲಿಯಂ-3’ ಎಂಬ, ಭವಿಷ್ಯದ ಫ್ಯೂಶನ್ ರಿಯಾಕ್ಟರ್‌ಗಳಿಗೆ ಒಂದು ಇಂಧನವಾಗಬಹುದಾದ ಅಮೂಲ್ಯವಾದ ಸಂಪತ್ತೂ ಸೇರಿದೆ.
ಹಾಗೆಯೇ, ಭೂಮಿಯ ಮೇಲೆ ಮೃತಪಟ್ಟ ತಮ್ಮ ಪ್ರೀತಿಪಾತ್ರರ ಚಿತಾಭಸ್ಮವನ್ನು ಚಂದ್ರನಲ್ಲಿಗೆ ಒಂದು ಸ್ಮಾರಕವಾಗಿ ಸಾಗಿಸುವ ಕೆಲವು ಕೆಂಪೆನಿಗಳಿಗೂ ಇಲ್ಲಿಯ ಬಿಲಿಯಾಧೀಶರಿಂದ ಭಾರೀ ಬಿಸಿನೆಸ್ ದೊರಕಬಹುದು. ಇನ್ನೂ ಕೆಲವು ಖಾಸಗಿ ಕಂಪೆನಿಗಳು ಆಕಾಶದಲ್ಲಿ ವ್ಯೋಮ ನಿಲ್ದಾಣಗಳನ್ನು ಸ್ಥಾಪಿಸುವವರು ನಡೆಸುವ ವೈಜ್ಞಾನಿಕ ಸಂಶೋಧನೆಗಳಿಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನು, ಸರಕುಗಳನ್ನು ಸಾಗಿಸುವ ಉದ್ದಿಮೆ ನಡೆಸಿಯೂ ಬಿಲಿಯಗಟ್ಟಲೆ ಡಾಲರ್ ಬಾಚಿಕೊಳ್ಳಬಹುದು.
ಈ ಹಿಂದೆ ನಾಸಾ ಇಂತಹ ಸರಕು ಸಾಗಣೆಗೆ ಬೇಕಾದ ವ್ಯವಸ್ಥೆಯನ್ನು ತಾನೇ ಮಾಡುವುದಾಗಿ ಉದ್ದೇಶಿಸಿತ್ತು. ಚಂದ್ರನ ಮೇಲೆ ಒಂದು ಯಾರ್ಡ್‌ನಷ್ಟು ತೂತು ಕೊರೆದು ಹೈಡ್ರೋಜನ್, ಹೀಲಿಯಂ, ನೈಟ್ರೋಜನ್, ಕಾರ್ಬನ್ ಡೈ ಆಕ್ಸೈಡ್‌ನಂತಹವುಗಳನ್ನು ಹೊರತೆಗೆಯುವ ಒಂದು ವಾಹನ (ರೋವರ್)ವನ್ನು ಬಳಸುವ ಯೋಚನೆ ಮಾಡಿತ್ತು. ಆದರೆ ಕಳೆದ ವರ್ಷ ಅದು ಇಂತಹ ಉದ್ದೇಶಗಳಿಗಾಗಿ ‘ರಿಸೋರ್ಸ್ ಫ್ರಾಸ್ಪೆಕ್ಟರ್’ನ್ನು ಬಳಸುವ ಯೋಜನೆಯನ್ನು ಕೈ ಬಿಟ್ಟು ಇಂತಹ ಕೆಲಸಗಳನ್ನೆಲ್ಲಾ ಖಾಸಗಿ ಕಂಪೆನಿಗಳಿಗೆ ವಹಿಸಿಕೊಡಲು ನಿರ್ಧರಿಸಿತು.
2024ರ ವೇಳೆಗೆ ಚಂದ್ರನನ್ನು ತಲುಪುವ ನಾಸಾದ ಪ್ರಯತ್ನಗಳ ಯಶಸ್ಸು ಅಮೆರಿಕದ ಸರಕಾರ (ಕಾಂಗ್ರೆಸ್) ಅದಕ್ಕೆ ಸಾಕಷ್ಟು ಹಣಕಾಸು ಒದಗಿಸುತ್ತದೆಯೇ? ಎಂಬುದನ್ನು ಅವಲಂಬಿಸಿದೆ. 2020ರ ಹಣಕಾಸು ವರ್ಷಕ್ಕೆ 1.6 ಮಿಲಿಯ ಡಾಲರ್ ಹೆಚ್ಚುವರಿ ಮೊತ್ತ ಬೇಕಾಗುತ್ತದೆಂದು ನಾಸಾ ಕಳೆದ ವರ್ಷ ಹೇಳಿತ್ತು. 2024ರ ಅಂತಿಮ ಗಡುವಿನ ಒಳಗೆ ಯೋಜನೆ ಯಶಸ್ವಿಯಾಗಬೇಕಾದಲ್ಲಿ ಒಟ್ಟು ವೆಚ್ಚ 20ರಿಂದ 30 ಬಿಲಿಯ ಡಾಲರಿನಷ್ಟು ಆಗಬಹುದೆಂದು ಬ್ರಿಡನ್‌ಸ್ಟಿನ್ ಕಳೆದ ತಿಂಗಳು ಹೇಳಿದ್ದಾರೆ.
ರಿಪಬ್ಲಿಕನ್ನರು ಮತ್ತು ಡೆಮಾಕ್ರಟರು ಎರಡು ಕಡೆಯವರೂ ಬೆಂಬಲಿಸದೆ ಇದ್ದಲ್ಲಿ ನಾಸಾದ ಯೋಜನೆ ಮತ್ತೊಮ್ಮೆ ಮುಗ್ಗರಿಸಬಹುದು ಎಂದಿದ್ದಾರೆ ಬ್ರಿಡನ್‌ಸ್ಟಿನ್.
ಕೃಪೆ: ಇಂಟರ್‌ನ್ಯಾಶನಲ್ ನ್ಯೂಯಾರ್ಕ್ ಟೈಮ್ಸ್