ಚಿಕ್ಕಮಗಳೂರು: ಸಿದ್ಧಾರ್ಥ್ ರ ಅಂತಿಮ ದರ್ಶನಕ್ಕೆ ಸಿದ್ಧತೆ

Update: 2019-07-31 07:13 GMT

ಚಿಕ್ಕಮಗಳೂರು, ಜು.31:  ಸೋಮವಾರ ರಾತ್ರಿ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೈದಿರುವ ನಾಡಿನ ಹೆಸರಾಂತ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಜಿಲ್ಲೆಯವರಾದ ವಿ.ಜಿ.ಸಿದ್ಧಾರ್ಥ್ ಅವರ ಅಂತ್ಯಸಂಸ್ಕಾರ ಜಿಲ್ಲೆಯ ಚಟ್ನಹಳ್ಳಿಯಲ್ಲಿರುವ ಚೇತನಾ ಹಳ್ಳಿ ಎಸ್ಟೇಟ್ ನಲ್ಲಿ ಇಂದು(ಜು.31) ಸಂಜೆ ನೆರವೇರಲಿದೆ.

ಅಂತ್ಯ ಸಂಸ್ಕಾರಕ್ಕೂ ಮುನ್ನ ಚಿಕ್ಕಮಗಳೂರು ನಗರದಲ್ಲಿರುವ ಎಬಿಸಿ ಕಾಫಿ ಗ್ಲೋಬಲ್ ಲಿ. ಕಂಪೆನಿ ಆವರಣದಲ್ಲಿ ಸಿದ್ಧಾರ್ಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯಲಿದ್ದು, ಅಂತಿಮ ದರ್ಶನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.

ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಡಿನ ಪ್ರಮುಖ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳೂ, ಸಿದ್ದಾರ್ಥ್ ಒಡೆತನದ ಸಂಸ್ಥೆಗಳ ಸಿಬ್ಬಂದಿ, ಕಾರ್ಮಿಕರು ಹಾಗೂ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುವ ಹಿನ್ನೆಯಲ್ಲಿ  ವ್ಯವಸ್ಥಿತ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಸಿದ್ದಾರ್ಥ್ ಅವರ ಸಾವಿನ‌ ಹಿನ್ನೆಲೆಯಲ್ಲಿ ನಗರದ ಎಬಿಸಿ ಕಂಪೆನಿ ಸಿಬ್ಬಂದಿ, ಕಾಪಿ ಡೆ, ಅಂಬರ್ ವ್ಯಾಲಿ, ಸೆರಾಯ್ ರೆಸಾರ್ಟ್, ಹೊಟೇಲ್ ಮ್ಯಾನೇಜ್ಮೆಂಟ್ ಕಾಲೆಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈಗಾಗಲೆ ಎಬಿಸಿ ಕಂಪೆನಿ‌ ಅವರಣದಲ್ಲಿ ಜಮಾಯಿಸಲಾರಂಭಿಸಿದ್ದಾರೆ.

ಜಿಲ್ಲಾದ್ಯಂತ ಇರುವ ಸಿದ್ಧಾರ್ಥ್ ಅವರ ಸಂಬಂಧಿಗಳು, ಕಾಫಿ ಬೆಳೆಗಾರರೂ ಅಂತಿಮ ದರ್ಶನ ಪಡೆಯಲು ದೌಡಾಯಿಸುತ್ತಿದ್ದಾರೆ.

ಸ್ಥಳದಲ್ಲಿ ಬಾರಿ ವಾಹನಗಳು ಹಾಗೂ ಸಾರ್ವಜನಿಕರು ಜಮಾಯಿಸುತ್ತಿರುವುದರಿಂದ ಚಿಕ್ಕಮಗಳೂರು -ಮೂಡಿಗೆರೆ ಹೆದ್ದಾರಿಯಲ್ಲಿ ಬಾರಿ ವಾಹನ‌ದಟ್ಟಣೆ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಬ್ಯಾರಿಕೇಡ್ ಗಳ ಮೂಲಕ ಹರಸಾಹಸ ಪಡುತ್ತಿದ್ದಾರೆ.

ಎಬಿಸಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ದಾರಿ, ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನೊಂದೆಡೆ ಮುಂಜಾನೆ ಸಿ ಸಿದ್ಧಾರ್ಥ್ ಸಾವಿನ‌ಸುದ್ದಿ ತಿಳಿಯುತ್ತಿದ್ದಂತೆ, ಮೂಡಿಗೆರೆ ತಾಲುಕಿನ ಚಟ್ನಹಳಿ ಗ್ರಾಮದಲ್ಲಿ‌ ಸೂತಕದ ಛಾಯೆ ಅವರಿಸಿದೆ.  ಸಿದ್ದಾರ್ಥ ತಾಯಿ ಮಗನ ಸಾವಿನ ಸುದ್ದಿಯಿಂದ ತೀವ್ರವಾಗಿ ನೊಂದು ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ

ಸಿದ್ಧಾರ್ಥ್ ಸಾವಿನ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಇಂದು ಸ್ವಯಂಪ್ರೇರಿತ ಬಂದ್ ಗೆ ಸಂಘ ಸಂಸ್ಥೆಗಳು ಕರೆ ನೀಡಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News