ಮೋದಿಗೆ ತಾಕತ್ತಿದ್ದರೆ ದೇಶಾದ್ಯಂತ 'ಅನ್ನಭಾಗ್ಯ' ಜಾರಿಗೆ ತರಲಿ: ಪ್ರೊ.ಮಹೇಶ್ ಚಂದ್ರಗುರು

Update: 2019-07-31 17:45 GMT

ಮೈಸೂರು,ಜು,31: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ತಕ್ಷಣ ಜಾರಿಗೆ ತಂದ ಅನ್ನಭಾಗ್ಯದಂತಹ ಮಹತ್ತರ ಯೋಜನೆಯನ್ನು  ಪ್ರಧಾನಿ ನರೇಂದ್ರ ಮೋದಿ ತಾಕತ್ತಿದ್ದರೆ ದೇಶಾದ್ಯಂತ ಜಾರಿಗೆ ತರಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಸವಾಲು ಹಾಕಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ದಿ.ರಾಕೇಶ್ ಸಿದ್ದರಾಮಯ್ಯ ಅವರ ಮೂರನೇ ವರ್ಷದ ಪುಣ್ಯಸ್ಮರಣೆ, ಸಾಮಾಜಿಕ ನ್ಯಾಯ-ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಳಿತ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಹಸಿವು ಬಡತನ, ಅಪೌಷ್ಠಿಕತೆಯಿಂದ ಬಳಲುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ಅನ್ನಭಾಗ್ಯ ಯೋಜೆಯನ್ನು ಜಾರಿಗೆ ತಂದರು. ನೀವು ನಿಮ್ಮ ಪ್ರಧಾನಿ ಹುದ್ದೆಗೆ ನಿಜವಾಗಿ ಗೌರವ ತರಬೇಕಾದರೆ ಸಿದ್ದರಾಮಯ್ಯ ಅವರ ಯೋಜನೆಯನ್ನು ಅನುಸರಿಸಿ ದೇಶಾದ್ಯಂತ ಜಾರಿಗೆ ತಂದು ಲಕ್ಷಾಂತರ ಜನರನ್ನು ಬದುಕಿಸಿ. ಆಗ ನಿಮ್ಮ 56 ಇಂಚಿನ ಎದೆಗೆ ಸಾರ್ಥಕವಾಗುತ್ತದೆ ಎಂದು ಕುಟುಕಿದರು.

ಸಬ್ ಸಬ್‍ಕಾ ವಿಕಾಸ್, ಸಬ್‍ಕಾ ಸಾಥ್ ಬರೀ ಡೋಂಗಿ, ಲಕ್ಷಾಂತರ ಜನ ಆತ್ಮಹತ್ಯೆ ಮಾಡಿಕೊಂದಿದ್ದಾರೆ. ಅವರ ಬಗ್ಗ ಒಂದೇ ಒಂದು ಮಾತನಾಡದ ನೀವು, ಶ್ರೀಮಂತರ ಪ್ರಧಾನಿಯಾಗಿ ನೀವು ಕೆಲಸ ಮಾಡುತ್ತಿದ್ದೀರಿ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದ ನೀವು ಬಡವರ ನಿರ್ಮೂಲನೆ ಮಾಡಲು ಹೊರಟಿದ್ದೀರಿ, ಸರಕಾರಿ ಸಂಸ್ಥೆಗಳನ್ನು ಉದ್ದಾರ ಮಾಡುವ ಬದಲು ಖಾಸಗಿ ಸಂಸ್ಥೆಗಳ ಉದ್ದಾರಕ್ಕೆ ಕೈ ಹಾಕಿದ್ದೀರಿ. ಜನರನ್ನು ಹೆಚ್ಚು ದಿನ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಗುಡುಗಿದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನೀವು ಬಡವರು, ಯುವಕರು ಸೇರಿದಂತೆ ಅನೇಕರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ದಲಿತರು ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಭಾರತ ದೇಶದಲ್ಲಿ ಸುರಕ್ಷತೆ ಇಲ್ಲ ಎಂದು ವಿಶ್ವಸಂಸ್ಥೆಯೇ 2018 ರಲ್ಲಿ ಹೇಳಿದೆ. ಹಾಗಿದ್ದ ಮೇಲೆ ನೀವು ಪ್ರಧಾನಿಯಾಗಿ ಸಾಧಿಸಿರುವುದಾದರೂ ಏನು ಎಂದು ದೇಶದ ಜನರಿಗೆ ತಿಳಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಹಿಸಿದ್ದರು. ಸಾಹಿತಿ ಬಂಜಗೆರೆ ಜಯಪ್ರಕಾಶ್, ಸಿದ್ದರಾಮಯ್ಯ ಅವರ ಜಂಟಿ ಕಾರ್ಯದರ್ಶಿ ರಾಮಯ್ಯ, ಬಿ.ಎಸ್.ಶಿವಣ್ಣ, ಮಾಜಿ ಶಾಸಕ ಮಂಜುನಾಥ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಮಂಜುಳ ಮಾನಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆ.ಎಸ್.ಶಿವರಾಮು, ಉಪಸ್ಥಿತರಿದ್ದರು. ಮಹೇಶ್ ಸೋಸಲೆ ಕಾರ್ಯಕ್ರಮ ನಿರೂಪಿಸಿದರು. 

ಮುಖ್ಯಮಂತ್ರಿಯಾಗುವಂತಹ ಪ್ರಜಾಸತ್ತಾತ್ಮಕ ಯೋಗ್ಯತೆ ಇಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಪದೇ ಪದೇ ಬೇಜವಾಬ್ದಾರಿಯುತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಮನೆಗೆ ಹೋಗುವುದು, ಅಧಿಕಾರ ಸ್ವೀಕರಿಸುವುದು ಮನೆಗೆ ಹೋಗುವುದು. ಮಾನಮರ್ಯಾದೆ ಕಳೆದುಕೊಳ್ಳುವುದಕ್ಕೆ ಒಂದು ಮಿತಿ ಬೇಡವೆ.
-ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಗತಿಪರ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News