ಕಾಫಿ ಸಾಮ್ರಾಟ ಜಿ.ವಿ.ಸಿದ್ದಾರ್ಥ ನಡೆದು ಬಂದ ದಾರಿ

Update: 2019-07-31 18:06 GMT

ಚಿಕ್ಕಮಗಳೂರು, ಜು.31: 1959 ಆಗಸ್ಟ್ 23 ರಂದು ಎಸ್.ವಿ.ಗಂಗಯ್ಯ ಹೆಗ್ಡೆ-ವಾಸಂತಿ ಹೆಗ್ಡೆ ಮಗನಾಗಿ ಜನಿಸಿದ ಜಿ.ವಿ ಸಿದ್ದಾರ್ಥ, ಬಾಲ್ಯದಲ್ಲೇ ಅತ್ಯಂತ ತುಂಟನಾಗಿದ್ದ. ತಮ್ಮ ಪ್ರಾರ್ಥಮಿಕ ಮತ್ತು ಪ್ರೌಢಶಿಕ್ಷಣವನ್ನು ಚಿಕ್ಕಮಗಳೂರು ಜಿಲ್ಲೆ ಮೌಂಟೆನ್ ವ್ಯೂ ಶಾಲೆಯಲ್ಲಿ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪೂರೈಸಿದರು. ಪದವಿ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. 

ಸರಳ ವ್ಯಕ್ತಿತ್ವದಿಂದಲೇ ಜನರನ್ನು ಸೆಳೆದರು: ಜಿ.ವಿ.ಸಿದ್ದಾರ್ಥ ಹುಟ್ಟುತ್ತಲೇ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರಲ್ಲ, ಅವರ ತಂದೆ ಸಾಮಾನ್ಯ ಮದ್ಯಮ ವರ್ಗದಿಂದ ಬಂದವರು. ತನ್ನ ಚತುರತೆ ಮತ್ತು ಪರಿಶ್ರಮದಿಂದಲೇ ಮೇಲೆ ಬಂದ ಜಿ.ವಿ. ಸಿದ್ದಾರ್ಥ ದೊಡ್ಡ ಉದ್ಯಮಿಯಾಗಿ ಬೆಳೆದರು. 

ಸಿದ್ದಾರ್ಥ ಹೆಗ್ಡೆ ಎಂದು ಕೂಡ ತಾನೊಬ್ಬ ದೊಡ್ಡ ಉದ್ಯಮಿ ಎಂದು ಬೀಗಿದವರಲ್ಲ, ಸರಳ, ಸಜ್ಜನಿಕೆ ಅವರ ವೇಷಭೂಷಣ ಹಾಗೂ ನಡೆಯಲ್ಲಿತ್ತು. ಅವರ ಸಂಸ್ಥೆಯಿಂದಲೇ ರೂಪಿಸಿದ ಸಾಮಾಜಿಕ ಕೊಡುಗೆಯ ಕಾರ್ಯಕ್ರಮದಲ್ಲಿ ವೇದಿಕೆಯಿಂದ ದೂರ ಉಳಿದು ಸಾರ್ವಜನಿಕರ ಮದ್ಯೆ ಇದದ್ದು ಅವರ ಸರಳತೆಗೆ ಹಿಡಿದ ಕೈಗನ್ನಡಿ. 

ಸನ್ನಿವೇಶಕ್ಕೆ ತಕ್ಕಂತೆ ಕೃಷಿ ಪದ್ಧತಿ ಆಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂದು ಸಿದ್ದಾರ್ಥ ಮಿತ್ರ ಬೆಳೆಗಾರರಿಗೂ ಸಲಹೆ ನೀಡುತ್ತಿದ್ದರು. ಆಧುನಿಕ ಕೃಷಿ, ಮೌಲ್ಯವರ್ಧನೆ, ಸ್ವಂತ ಬ್ರಾಂಡ್ ನಿರ್ಮಾಣದಿಂದ ರೈತರು ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ರೈತರಿಗೆ ತಿಳಿ ಹೇಳುತ್ತಿದ್ದರು.  

ಸಿದ್ದಾರ್ಥ ಯಾವಾಗಲೂ ಕೂಡ ಸಕರಾತ್ಮಕ ಚಿಂತನೆ ಮಾಡುತ್ತಿದ್ದರು. ಯಾವಾಗಲೂ ಕ್ರೀಯಾಶೀಲರಾಗಿರುತ್ತಿದ್ದರು. ಜನತೆಗೆ ಹೆಚ್ಚಿನ ಉದ್ಯೋಗ ನೀಡಬೇಕೆಂಬ ತುಡಿತವಿತ್ತು ಎಂದು ಅವರ ಆಪ್ತ ವರ್ಗದವರು ತಿಳಿಸುತ್ತಾರೆ.  ಜಿ.ವಿ.ಸಿದ್ದಾರ್ಥ ತಮ್ಮ ಸ್ನಾತಕೋತರ ಶಿಕ್ಷಣ ಪಡೆದುಕೊಂಡ ನಂತರ ತಂದೆ ಗಂಗಯ್ಯ ಹೆಗ್ಡೆಯವರಿಂದ 30 ಸಾವಿರ ರೂ. ಪಡೆದುಕೊಂಡು ಶಿವನ್ ಸೆಕ್ಯೂರಿಟೀಸ್‍ನಲ್ಲಿ ಷೇರು ವ್ಯವಹಾರದಲ್ಲಿ ತೊಡಗಿಸಿದರು. 

ಇಲ್ಲಿಂದ ವ್ಯವಹಾರ ಆರಂಭಿಸಿದ ಅವರು 12 ಸಾವಿರ ಎಕರೆ ಕಾಫಿತೋಟದ ಮಾಲಕರಾದರು. ತಮ್ಮದೇ ಎಬಿಸಿ ಕಾಫಿ ಕ್ಯೂರಿಂಗ್ ಸ್ಥಾಪಿಸಿದರು. ಮೊದಲ ಕೆಫೆ ಕಾಫಿಡೆ 1996ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾಯಿತು. ಆನಂತರ ವಿಸ್ತರಣೆಗೊಳ್ಳುತ್ತಾ ಸಾಗಿ ದೇಶ-ವಿದೇಶಗಳಲ್ಲಿ 1800 ಕಾಫಿ ಡೇಗಳು ಕಾರ್ಯ ನಿರ್ವಹಿಸುತ್ತಿವೆ. 

ನಂತರ ಚಿಕ್ಕಮಗಳೂರಿನ ಹೊರವಲಯದಲ್ಲಿ ತರಬೇತಿ ಸಂಸ್ಥೆಯೊಂದನ್ನು ಆರಂಭಿಸಿ ಉಪಾಹಾರ ಗೃಹಗಳಲ್ಲಿ ಕೆಲಸ ಮಾಡುವವರಿಗೆ ಅವಶ್ಯಕ ತರಬೇತಿಯನ್ನು ಈ ಸಂಸ್ಥೆ ನೀಡುತ್ತದೆ. ಪಂಚತಾರಾ ಹೋಟೆಲ್‍ಗಳಲ್ಲಿ ಆಹಾರ ಸರಬರಾಜು ಹಾಗೂ ಗ್ರಾಹಕರೊಂದಿಗಿನ ಸೌಜನ್ಯಯುತ ನಡವಳಿಕೆಗಳನ್ನು ನೂರಾರು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ. 

ಮಲೆನಾಡಿನ ಕಾಫಿಯ ಮಡಿಲಿನಲ್ಲಿರುವ ಚಿಕ್ಕಮಗಳೂರಿನಲ್ಲಿ ನಗದು ಘಟಕ ಹೊಂದಿರದ ಹೈಟೆಕ್ ಆಸ್ಪತ್ರೆಯೊಂದನ್ನು ತಮ್ಮ ತಂದೆ ಗಂಗಯ್ಯ ಹೆಗ್ಡೆಯವರ ಹುಟ್ಟುಹಬ್ಬದ ನೆನಪಿಗಾಗಿ 30 ಕೋಟಿ ರೂ.ವೆಚ್ಚದಲ್ಲಿ ಆರಂಭಿಸಲು ಸಿದ್ದಾರ್ಥ ಮುಂದಾಗಿದ್ದರು. ಕಟ್ಟಡದ ನಿರ್ಮಾಣ ಆರಂಭವಾಗಿತ್ತು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಅತ್ಯಂತ ಆಧುನಿಕ ರೀತಿಯ ವಿದ್ಯಾಸಂಸ್ಥೆಯನ್ನು ಆರಂಭಿಸಿ ನಮ್ಮ ಸಂಸ್ಕೃತಿಯೊಂದಿಗೆ ವೈವಿಧ್ಯಮಯ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಉತ್ತಮ ಶಿಕ್ಷಣ ನೀಡುವ ಅಂಬರ್ ವ್ಯಾಲಿ ವಿದ್ಯಾಸಂಸ್ಥೆ ಶಿಕ್ಷಣ ತಜ್ಞೆ ಪೂರ್ಣಿಮಾ ಜೈರಾಜ್ ಅವರೊಂದಿಗೆ ಆರಂಭಿಸಲು ಮುಂದಾಗಿ ಇಂದು ಅದು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ.

ತಂತ್ರಜ್ಞಾನ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ ಅವರು, ಮೈಂಡ್ ಟ್ರೀ, ಇತ್ತಿಯಂ ಸಿಸ್ಟಮ್ಸ್, ಕ್ಷೇಮ ಟೆಕ್ನಾಲಜೀಸ್ ಹಾಗೂ ವೆಂಚರ್ ಕ್ಯಾಪಿಟಲಿಸ್ಟ್ ಸಂಸ್ಥೆಯಾದ ಗ್ಲೋಬಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ರೂಪುಗೊಳಿಸಿದ್ದರು. ಉದ್ಯಮ ಕ್ಷೇತ್ರದಲ್ಲಿ ತಮ್ಮದೆ ಛಾಪು ಮೂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News