ಶೈಕ್ಷಣಿಕ ವರ್ಷಾಂತ್ಯದೊಳಗೆ ಪಠ್ಯಪುಸ್ತಕ ವಿತರಣೆಗೆ ಚಿಂತನೆ

Update: 2019-08-03 16:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3: ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಈ ವರ್ಷದ ಶೈಕ್ಷಣಿಕ ವರ್ಷ ಮುಗಿಯುವದರೊಳಗೆ ವಿತರಣೆ ಮಾಡಲು ಚಿಂತನೆ ನಡೆಸಲಾಗಿದೆ.

ಶೈಕ್ಷಣಿಕ ವರ್ಷ ಆರಂಭವಾದರೂ ಸರಿಯಾದ ಸಮಯಕ್ಕೆ ಮಕ್ಕಳ ಕೈಗೆ ಪಠ್ಯಪುಸ್ತಕಗಳು ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿದೆ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷ(2020-21)ದ ಪಠ್ಯಪುಸ್ತಕಗಳನ್ನು ಶಾಲೆಗಳು ಆರಂಭವಾಗುವ ಮೊದಲೇ ಶಾಲೆಗಳಿಗೆ ರವಾನಿಸಲು ತಯಾರಿ ನಡೆಸುತ್ತಿದೆ.

ರಾಜ್ಯಾದ್ಯಂತ ಶಾಲೆಗಳು ಆರಂಭವಾದ ಮೊದಲ ದಿನವೇ ಮಕ್ಕಳ ಕೈಗೆ ಪುಸ್ತಕ ಸಿಗಬೇಕು ಎಂಬ ಉದ್ದೇಶದಿಂದ ಹಲವು ವರ್ಷಗಳಿಂದಲೂ ನಿರಂತರ ಪ್ರಯತ್ನ ನಡೆಯುತ್ತಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಆದರೆ, ಈ ಬಾರಿ ನಾಲ್ಕು ತಿಂಗಳ ಮೊದಲೇ ಪಠ್ಯಪುಸ್ತಕಗಳ ಮುದ್ರಣ ಆರಂಭಿಸಿರುವ ಸಂಘವು, ಶೀಘ್ರ ಎಲ್ಲ ಮುದ್ರಣ ಕಾರ್ಯ ಮುಗಿಸಿ, ಬೈಂಡಿಂಗ್ ಮಾಡಿಸಲು ಯೋಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿವರ್ಷವೂ ಪಠ್ಯಪುಸ್ತಕ ಟೆಂಡರ್ ಅನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಅನಂತರ ಟೆಂಡರ್ ಮುಗಿದು, ಸಂಬಂಧಪಟ್ಟ ಮುದ್ರಣಾಲಯವು 4 ತಿಂಗಳ ಕಾಲಾವಕಾಶ ಪಡೆದು, ಪುಸ್ತಕಗಳನ್ನು ಮುದ್ರಣ ಮಾಡಿಕೊಡಲಾಗುತ್ತದೆ. ಆದರೆ, ಈ ಬಾರಿ ಇದನ್ನು ನಾಲ್ಕು ತಿಂಗಳ ಮೊದಲೇ ಆರಂಭಿಸಲು ಚಿಂತಿಸಿದ್ದು, ಅದರಂತೆ ಆಗಸ್ಟ್‌ನಲ್ಲಿಯೇ ಪುಸ್ತಕಗಳ ಮುದ್ರಣ ಟೆಂಡರ್ ಕರೆಯಲಾಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಟೆಂಡರ್ ಮುಗಿದರೆ, ಫೆಬ್ರವರಿಯಲ್ಲಿ ಸಂಪೂರ್ಣ ಮುದ್ರಣ ಕೆಲಸ ಮುಗಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಮಾರ್ಚ್ ತಿಂಗಳ ಅಂತ್ಯದೊಳಗೆ ಎಲ್ಲ ಶಾಲೆಗಳಿಗೂ ಪುಸ್ತಕಗಳನ್ನು ರವಾನಿಸಿದರೆ, ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಜೂನ್ ವೇಳೆಗೆ ಮಕ್ಕಳ ಕೈಗೆ ಪುಸ್ತಕ ಸಿಗುತ್ತದೆ ಎಂದು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

1 ನೆ ತರಗತಿಗೆ ಹೊರತುಪಡಿಸಿ ಉಳಿದ ಎಲ್ಲ ತರಗತಿಗಳಲ್ಲಿ ಹಿಂದಿನ ವರ್ಷದಲ್ಲಿರುವಷ್ಟೇ ವಿದ್ಯಾರ್ಥಿಗಳು ಇರುತ್ತಾರೆ. ಹೀಗಾಗಿ, ಅಷ್ಟೇ ಪ್ರಮಾಣದಲ್ಲಿ ಪುಸ್ತಕಗಳನ್ನು ಮುದ್ರಣ ಮಾಡಲಾಗುತ್ತದೆ. ಮಕ್ಕಳ ಸಂಖ್ಯೆಯಲ್ಲಿ ಹೆಚ್ಚು-ಕಡಿಮೆಯಾದಾಗ ಸ್ಥಳೀಯ ಬಿಇಒಗಳ ಮೂಲಕ ಮಾಹಿತಿ ಪಡೆದು ಅದನ್ನು ಪರಿಶೀಲಿಸಿ ಮುದ್ರಣ ಕಾರ್ಯ ನಡೆಸಲಾಗುತ್ತದೆ. ಈ ವರ್ಷದ ಅಂತ್ಯದಲ್ಲಿಯೇ ಶೇ.99ರಷ್ಟು ಪುಸ್ತಕಗಳನ್ನು ತಲುಪಿಸಲು ಚಿಂತನೆ ನಡೆಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಉರ್ದು, ಮರಾಠಿ ಸೇರಿದಂತೆ 7 ಮಾಧ್ಯಮಗಳ 365 ಶೀರ್ಷಿಕೆಗಳ ಪುಸ್ತಕಗಳ ಮುದ್ರಣ ಮಾಡಲಾಗುತ್ತದೆ.

- ಎಚ್.ಎನ್.ಗೋಪಾಲಕೃಷ್ಣ, ಪಠ್ಯಪುಸ್ತ ಸಂಘದ ವ್ಯವಸ್ಥಾಪಕ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News