ಕರುಣೆಯ ನೋಟ

Update: 2019-08-03 18:40 GMT

‘‘ಇವಳು ನನ್ನ ಬಾಲ್ಯದ ಸ್ನೇಹಿತೆ ಸಂಶೀರಾ ಅಂತ. ನಾವಿಬ್ಬರು ಶಾಲೆ-ಮದ್ರಸದ ಏಳನೆಯ ತರಗತಿಯ ವರೆಗೆ ಒಟ್ಟಿಗೆ ಕಲಿತವರು. ದೇರಳಕಟ್ಟೆಯ ನಿಯಾಝ್‌ನನ್ನು ಮೂರು ವರ್ಷದ ಹಿಂದೆ ಮದುವೆಯಾಗಿದ್ದಳು. ಆದರೆ....’’ ಎಂದು ಅಝ್ಮಿಯಾ ತನ್ನ ಕೈಯಲ್ಲಿದ್ದ ಸಂಶೀರಾಳ ಫೋಟೊವನ್ನು ಪತಿ ಇಜಾಸ್‌ಗೆ ತೋರಿಸಿ ಬಿಕ್ಕಳಿಸತೊಡಗಿದಳು.

ಪತ್ನಿ ಅಝ್ಮಿಯಾಳನ್ನು ಸಂತೈಸಿದ ಇಜಾಸ್, ‘‘ಅಳಬೇಡ... ಮುಂದೇನಾಯಿತು?’’ ಎಂದು ಕೇಳಿದ.

‘‘ಏನೆಂದು ಹೇಳಲಿ?. ಮೀನುಗಾರಿಕೆಗೆ ತೆರಳಿದ್ದ ಇವಳ ಗಂಡ ನಿಯಾಝ್ ಬೋಟ್‌ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದ. ಬಳಿಕ ಅವನ ಪತ್ತೆಯೇ ಇಲ್ಲ. ಯಾವ ಮೀನಿಗೆ ಆಹಾರವಾದನೋ ಏನೋ? ಜೀವಂತವಿರುವ ಸಾಧ್ಯತೆಯೇ ಕಡಿಮೆ. ಹಾಗಂತ ಇಹಲೋಕ ತ್ಯಜಿಸಿದ್ದಾನೆ ಎಂಬುದಕ್ಕೆ ಆಧಾರವೂ ಇಲ್ಲ. ಎರಡು ವರ್ಷ ಕಾದ ಬಳಿಕ ಇವಳ ಮನೆಯವರು ಖಾಝಿಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಅವರು ಅದೇನೋ ಪತ್ರ ಬರೆದುಕೊಟ್ಟು ಬೇರೆ ಮದುವೆಯಾಗಲು ಅನುಮತಿ ನೀಡಿದರಂತೆ. ನೋಡಿ ಈ ಫೋಟೊ... ತುಂಬಾ ಚಂದ ಇದ್ದಾಳೆ. ಹೆಚ್ಚೆಂದರೆ 24 ವರ್ಷ ಪ್ರಾಯವಾಗಿರಬಹುದು. 2 ವರ್ಷದ ಮಗುವಿನ ಮುಖ ನೋಡಿ ತನ್ನ ಗಂಡನನ್ನು ಈಗಲೂ ಎದುರು ನೋಡುತ್ತಿದ್ದಾಳೆ. ಕಷ್ಟದ ಬದುಕು. ಮನೆಯಲ್ಲಿ ಗಂಡು ಅಂತ ಯಾರೂ ಇಲ್ಲ. ಅಜ್ಜಿ, ಮಗಳು, ಮೊಮ್ಮಗಳು, ಮರಿಮೊಮ್ಮಗಳು ಮಾತ್ರ ಇರುವುದು. ಅವರಿವರು ಕೊಟ್ಟ ಅನ್ನ ತಿಂದು ಬದುಕುತ್ತಿದ್ದಾರೆ. ನಿಮ್ಮ ಗುರುತು-ಪರಿಚಯದವರಲ್ಲಿ ಯಾರಾದರೂ ಇದ್ದರೆ ಹೇಳಿ... ಹೆಣ್ಣಿಗೊಂದು ಬಾಳು ಕೊಟ್ಟಂತಾಗುತ್ತದೆ’’ ಎಂದು ಅಝ್ಮಿಯಾ ಹೇಳಿದಾಗ ಇಜಾಸ್ ತದೇಕಚಿತ್ತದಿಂದ ಆ ಫೋಟೊ ನೋಡಿದ. ‘‘ಗುರುತು ಪರಿಚಯದವ ಯಾಕೆ... ನಾನೇ ಆಗಬಾರದಾ... ಹೇಗೂ ನಿನ್ನ ಗೆಳತಿ. ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಉಸಿರಾಡಲು ಒಪ್ಪಿಗೆ ಕೊಡುವೆಯಾ?’’ ಎಂದು ಇಜಾಸ್ ತನ್ನ ಮನದಾಸೆಯನ್ನು ನೇರ ಕೇಳಲಾಗದೆ ತನ್ನಲ್ಲೇ ಹೇಳತೊಡಗಿದ.

ಅಝ್ಮಿಯಾ ಗೆಳತಿ ಸಂಶೀರಾಳ ಫೋಟೊವನ್ನು ಮತ್ತೊಮ್ಮೆ ನೋಡಿದಳು. ಅವಳ ಕಣ್ಣಂಚಿನಲ್ಲಿ ನೀರು ಆಟವಾಡುತ್ತಿತ್ತು.

***

ಇಜಾಸ್ ತನ್ನ 10 ವರ್ಷದ ದಾಂಪತ್ಯ ಜೀವನದ ಬಗ್ಗೆ ಮೆಲುಕು ಹಾಕತೊಡಗಿದ. ಹಾಗೇ ನೋಡಿದರೆ ಇಜಾಸ್ ಮತ್ತು ಅಝ್ಮಿಯಾಳ ಮದುವೆ ಅನಿರೀಕ್ಷಿತವಾದುದು. ಇಜಾಸ್‌ನಿಗೆ ಕಾಸರಗೋಡಿನ ಹುಡುಗಿಯ ಜೊತೆ ವಿವಾಹದ ಮಾತುಕತೆ ನಡೆದಿತ್ತು. ಆಮಂತ್ರಣ ಪತ್ರವೂ ಸಿದ್ಧಪಡಿಸಿ ಮದುವೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಇನ್ನೇನೋ ಮದುವೆಗೆ ಎರಡು ದಿನ ಇರುವಾಗ ಹುಡುಗಿಗೆ ಮಾನಸಿಕ ರೋಗವಿದೆ ಎಂಬ ಮಾಹಿತಿ ಇಜಾಸ್‌ನ ಮನೆಯವರಿಗೆ ತಿಳಿಯಿತು. ತಕ್ಷಣ ಅವರು ಎಚ್ಚೆತ್ತುಕೊಂಡು ರೋಗ ಬಚ್ಚಿಟ್ಟ ಬಗ್ಗೆ ಹುಡುಗಿಯ ಮನೆಯವರ ಬಳಿ ವಾಗ್ವಾದ ನಡೆಸಿ ಮದುವೆಯನ್ನೇ ರದ್ದುಗೊಳಿಸಿದರು. ಅಂತಿಮ ಕ್ಷಣದಲ್ಲಿ ಪಕ್ಕದೂರಿನ ತೆಂಗಿನಕಾಯಿ ವ್ಯಾಪಾರಿ ಅಥಾವುಲ್ಲಾರ ಮಗಳು ಅಝ್ಮಿಯಾಳನ್ನು ಇಜಾಸ್ ಮದುವೆಯಾಗಿದ್ದ.

ಅಝ್ಮಿಯಾಳ ಮನೆಯವರು ಮದುವೆಗೆ ಯಾವ ಪೂರ್ವ ತಯಾರಿಯನ್ನೂ ಮಾಡಿರಲಿಲ್ಲ. ಇಜಾಸ್‌ನ ಗುಣ ಸ್ವಭಾವದ ಬಗ್ಗೆ ಮೊದಲೇ ಅರಿತಿದ್ದ ಅವರು ಕುಟುಂಬದ ಕೆಲವು ಮಂದಿಯನ್ನು ಮಾತ್ರ ಆಹ್ವಾನಿಸಿ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಮದುವೆಗೆ ಒಪ್ಪಿಗೆ ನೀಡಿದ್ದರು. ಹೀಗೆ ಆಕಸ್ಮಿಕವಾಗಿ ನ್ಯಾಯವಾದಿ ಇಜಾಸ್‌ನ ಬಾಳಿನಲ್ಲಿ ಅಝ್ಮಿಯಾ ಪ್ರವೇಶಿಸಿದ್ದಳು. ವರ್ಷ ದೊಳಗೆ ಹೆಣ್ಣು ಮಗುವಿನ ತಾಯಿಯೂ ಆದಳು. ಪ್ರೀತಿಯ ಹೊನಲನ್ನೇ ಸುರಿಸುವ ಪತಿಗೆ ವಿಧೇಯಳಾಗಿದ್ದಳು. ಹಾಲು-ಜೇನಿನಂತಹ ಬದುಕಿನಲ್ಲಿ ಕೆಲವೊಮ್ಮೆ ಕಹಿಯೂ ಇತ್ತು. ಸಣ್ಣಪುಟ್ಟ ವಿಷಯಕ್ಕೆ ಜಗಳ, ಮಾತು ಬಿಡುವುದು, ಕ್ಷಮೆ ಯಾಚಿಸುವುದು... ಮತ್ತೆ ಹಾಲು ಜೇನಿನಂತೆ ಒಂದಾಗುವುದು ಇದ್ದೇ ಇತ್ತು.

***

ಅದೊಂದು ದಿನ ಯಾವುದೋ ವಿಷಯಕ್ಕೆ ಇಬ್ಬರೊಳಗೆ ನಡೆದ ತಣ್ಣಗಿನ ಜಗಳ ಬಿಸಿಯಾಗಿ ಎರಡು ದಿನ ಮಾತು ಮಾತ್ರವಲ್ಲ... ಮುಖವನ್ನೇ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆವರೆಗೂ ಒಂದೇ ಹಾಸಿಗೆ ಹಂಚಿಕೊಳ್ಳುತ್ತಿದ್ದ ಇಜಾಸ್- ಅಝ್ಮಿಯಾ ದಂಪತಿ ಎರಡು ದಿನದಿಂದ ಪ್ರತ್ಯೇಕ ಕೋಣೆಯನ್ನೇ ಆಶ್ರಯಿಸಿದ್ದರು.

ಆ ದಿನ ಮುಂಜಾನೆ ಮೂರು ಗಂಟೆಗೆ ಅಝ್ಮಿಯಾಳಿಗೆ ಕೆಟ್ಟ ಕನಸು ಬಿತ್ತು. ಹೃದಯಾಘಾತದಿಂದ ವಿಲವಿಲನೆ ಒದ್ದಾಡುವ ಇಜಾಸ್ ಸಹಾಯಕ್ಕಾಗಿ ತನ್ನನ್ನು ಅಂಗಾಲಾಚಿ ಕರೆಯುವುದು, ತಾನು ಮೊಂಡುತನ ಬಿಡದೆ ಏನೂ ಆಗಿಲ್ಲ ಎಂಬಂತೆ ಬಂಡೆಕಲ್ಲಿನಂತೆ ಸುಮ್ಮನಿದ್ದು ಬಿಡುವುದು, ಕ್ಷಣಾರ್ಧದಲ್ಲಿ ಇಜಾಸ್‌ನ ಉಸಿರು ನಿಲ್ಲುವುದು, ‘ಯಾ ಅಲ್ಲಾಹ್’ ಎಂದು ತಾನು ಬೊಬ್ಬಿಡುವುದು... ಹೀಗೆ ಬಿದ್ದ ಕನಸಿಗೆ ಬೆಚ್ಚಿ ಬಿದ್ದ ಅಝ್ಮಿಯಾ ಎದ್ದು ಕುಳಿತು ಪಿಳಿಪಿಳಿ ಕಣ್ಣು ಬಿಟ್ಟಳಲ್ಲದೆ ತಕ್ಷಣ ಕೋಣೆಯಿಂದ ಹೊರಬಂದಳು. ಕನಸು ಕೆಟ್ಟದ್ದಾದರೂ ನಿಜ ಬದುಕಿನಲ್ಲಿ ನಡೆದಿದೆ ಎಂಬಂತೆ ಭಾಸವಾಗಿ ಪತಿ ಮಲಗಿದ್ದ ಕೋಣೆಯತ್ತ ನುಗ್ಗಿದಳು.

ಇಜಾಸ್ ಗೊರಕೆ ಹೊಡೆಯುತ್ತಿದ್ದ. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಎರಡು ದಿನ ಮಾತು ಬಿಟ್ಟ ಕಾರಣ ಮನಸ್ಸಿನಲ್ಲೇನೋ ಬೇಗುದಿ. ಹೇಳಲಾಗದ ನೋವು. ಮೈ-ಮನಸ್ಸಿಗೆ ಅದೇನೋ ಚುಚ್ಚಿದಂತಹ ಅನುಭವ. ಆದರೂ ಹಿಂದೊಮ್ಮೆ ಸ್ವತಃ ತಾವು ಪರಸ್ಪರ ಮಾಡಿಕೊಂಡ ಒಪ್ಪಂದದಂತೆ ಈ ಬಾರಿ ಅಝ್ಮಿಯಾ ಪತಿಯನ್ನು ನಿದ್ದೆಯಿಂದ ಎಬ್ಬಿಸಿ ಮಾತನಾಡಿಸಿದಳು. ಆರೋಗ್ಯ ವಿಚಾರಿಸಿದಳು. ಪತ್ನಿಯ ಅಚಾನಕ್ ವರ್ತನೆಯಿಂದ ಗಲಿಬಿಲಿಗೊಂಡ ಇಜಾಸ್ ‘‘ಯಾಕೆ... ಏನು’’ ಎಂಬಂತೆ ಪ್ರಶ್ನಿಸಿದ. ಅಝ್ಮಿಯಾ ತಕ್ಷಣಕ್ಕೆ ಏನನ್ನೂ ಹೇಳದೆ ಸ್ವಲ್ಪ ಸಮಯದ ಬಳಿಕ ತನಗೆ ಬಿದ್ದ ಕೆಟ್ಟ ಕನಸನ್ನು ಮರೆಮಾಚದೆ ಹೇಳತೊಡಗಿದಳು. ಕೆಟ್ಟ ಘಳಿಗೆಯಲ್ಲಿ ಬಿದ್ದ ಕನಸನ್ನು ಮರೆತುಬಿಡು. ಈಗ ನನ್ನೊಂದಿಗೆ ಇರು ಎಂದು ಪತ್ನಿಯನ್ನು ಅಪ್ಪಿಹಿಡಿದ. ಅಝ್ಮಿಯಾ ಕಣ್ಣೀರಾದಳು. ಆ ಕೆಟ್ಟ ಕನಸು ಬಿದ್ದು ತಿಂಗಳಾಗಿರಲಿಲ್ಲ. ಅಝ್ಮಿಯಾ ಪಾರ್ಶ್ವವಾಯು ಪೀಡಿತಳಾಗಿ ಹಾಸಿಗೆ ಹಿಡಿದಳು. ಹೌಹಾರಿದ ಇಜಾಸ್ ಹಲವು ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಅಝ್ಮಿಯಾ ಹಾಸಿಗೆಯಿಂದ ಎದ್ದೇಳಲಾಗದೆ ತೊಳಲಾಡಿದಳು. ಇಜಾಸ್‌ಗೆ ದಾರಿ ಕಾಣದಾಯಿತು. ತನ್ನ ವೃತ್ತಿಯ ಬಗ್ಗೆಯೂ ಹೆಚ್ಚು ಗಮನಹರಿಸದೆ ಪತ್ನಿಯ ಆರೈಕೆಯಲ್ಲಿ ತೊಡಗಿದ. ಅಝ್ಮಿಯಾ ವೌನವಾಗಿ ರೋದಿಸತೊಡಗಿದಳು. ಪತಿ-ಮಗಳನ್ನು ಬಿಟ್ಟು ಇಹಲೋಕ ತ್ಯಜಿಸುವುದು ನಿಶ್ಚಿತ ಎಂಬಂತೆ ಮಾತನಾಡತೊಡಗಿದಳು. ಇಜಾಸ್ ಪತ್ನಿಗೆ ಧೈರ್ಯತುಂಬಿ ಆರೈಕೆ ಮಾಡತೊಡಗಿದ. ದಿನಗಳೆದಂತೆ ಅಝ್ಮಿಯಾ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗತೊಡಗಿದಳು. ಸತತ ಮೂರು ತಿಂಗಳ ಚಿಕಿತ್ಸೆ-ಆರೈಕೆಯ ಹೊರತೂ ಅಝ್ಮಿಯಾ ಇಹಲೋಕ ತ್ಯಜಿಸಿದಳು. ಇಜಾಸ್ ಆ ಹೊಡೆತದಿಂದ ತತ್ತರಿಸಿದ. ಊಟ-ತಿಂಡಿ ಬಿಟ್ಟು ಖಿನ್ನತೆಗೊಳಗಾದ. ಹೆಣ್ಮಗುವನ್ನು ತನ್ನ ತಾಯಿಯ ಮಡಿಲು ಸೇರಿಸಿದ.

ವರ್ಷವಾದರೂ ಮರುಮದುವೆಯ ಬಗ್ಗೆ ಇಜಾಸ್ ಮನಸ್ಸು ಮಾಡಲೇ ಇಲ್ಲ. ಮನೆ ಮಂದಿ ಎಷ್ಟೇ ಒತ್ತಾಯಿಸಿದರೂ ಇಜಾಸ್ ವೌನಕ್ಕೆ ಶರಣಾದ. ಇಜಾಸ್‌ನ ಏರಿಳಿತದ ಬದುಕಿನ ಬಗ್ಗೆ ಅರಿತುಕೊಂಡ ಆತನ ಸ್ನೇಹಿತರು ಮನೆಗೆ ಆಗಮಿಸಿ ಸಂತೈಸಿ ಹಿತವಚನ ನೀಡತೊಡಗಿದರು. ಕಾಲ ಉರುಳುತ್ತಿತ್ತು.

ಇಜಾಸ್ ಸಹಜ ಸ್ಥಿತಿಗೆ ಮರಳತೊಡಗಿದ. ಅದೊಂದು ದಿನ ಸ್ನೇಹಿತನ ಮಗಳ ಮದುವೆಯ ಕರೆಯೋಲೆ ನೀಡಲು ಮೂರು ಸೆಂಟ್ಸ್ ಸೈಟ್‌ಗಳಲ್ಲಿ ಮನೆ ಮಾಡಿಕೊಂಡಿರುವ ಅಕ್ಷರನಗರ ಎಂಬ ಗಲ್ಲಿಗೆ ತೆರಳಿದ್ದ. ಹಾಗೇ ಆ ಮನೆಯ ಪಕ್ಕ ವೃದ್ಧ ಜೀವವೊಂದು ಕೆಮ್ಮುವುದು ಮತ್ತು ಆ ವೃದ್ಧೆಯನ್ನು ಆಕೆಯ ಮೊಮ್ಮಗಳಂತೆ ಕಾಣುವ ಯುವತಿ ಆರೈಕೆ ಮಾಡುವುದು ಇಜಾಸ್‌ಗೆ ಕಂಡಿತು. ಅದನ್ನು ಕಾಣುತ್ತಲೇ ಇಜಾಸ್‌ನ ಮನಸ್ಸು ಕರಗತೊಡಗಿತ್ತು. ಅವರ ಬಗ್ಗೆ ಕೇಳಿ ತಿಳಿದುಕೊಳ್ಳುವ ಆಸಕ್ತಿ ವಹಿಸಿದ. ವೃದ್ಧೆ-ಮಗಳು-ಮೊಮ್ಮಗಳ, ಮರಿ ಮೊಮ್ಮಗಳ ದಾರುಣ ಬದುಕು, ಗುಡಿಸಲು... ಎಲ್ಲವನ್ನೂ ಗಮನಿಸಿದ ಇಜಾಸ್‌ಗೆ ಅಲ್ಲಿಂದ ಕದಳಲು ಮನಸ್ಸು ಬರಲಿಲ್ಲ. ನೇರ ಆ ಗುಡಿಸಲಿನತ್ತ ಹೆಜ್ಜೆ ಹಾಕಿದ. ಅಲ್ಲಿನ ಚಿತ್ರಣ ಕಂಡು ಮಮ್ಮಲ ಮರುಗಿದ. ಮಾತಿಗೆಳೆದು ಅವರ ಸಂಕಷ್ಟ ಅರಿತುಕೊಂಡ. ತನ್ನ ಸ್ನೇಹಿತನನ್ನೂ ಕರೆದು ವಿಷಯ ತಿಳಿಸಿದ. ಹಾಗೇ ನೆರವಿನ ಭರವಸೆಯನ್ನೂ ನೀಡಿದ. ಅಲ್ಲಿಂದ ಹೊರಗೆ ಬರುವ ಮುನ್ನ ಆ ಯುವತಿಯನ್ನೊಮ್ಮೆ ನೋಡಿದ. ಕೆಲವು ತಿಂಗಳ ಹಿಂದೆ ಅಝ್ಮಿಯಾ ಈಕೆಯ ಫೋಟೊ ತೋರಿಸಿ ಇವಳಿಗೊಂದು ಗಂಡು ಹುಡುಕಿಕೊಡಿ ಎಂದು ಹೇಳಿದ್ದು ನೆನಪು ಆಯಿತು.

ಇವಳು ಅದೇ ಯುವತಿಯೋ, ಏನೋ ಎಂದು ಸ್ಪಷ್ಟಪಡಿಸುವ ಸಲುವಾಗಿ ಅಝ್ಮಿಯಾಳ ಹೆಸರು ಉಲ್ಲೇಖಿಸಿ ಪರಿಚಯವಿದೆಯಾ? ಎಂದು ಕೇಳಿದ.

ಹೌದು ಎಂಬಂತೆ ಆಕೆ ತಲೆಯಾಡಿಸಿ ತಾವು? ಎಂದಳು. ತಾನು ಅಝ್ಮಿಯಾಳ ಪತಿ ಎಂದು ಇಜಾಸ್ ತನ್ನನ್ನು ಪರಿಚಯಿಸಿಕೊಂಡು ಪತ್ನಿಯ ಕೋರಿಕೆಯಂತೆ ತಾನೇ ಈಕೆಗೆ ಬಾಳು ನೀಡುವೆ ಎಂದು ಮನಸ್ಸಲ್ಲೇ ನಿರ್ಧರಿಸಿ ಆಕೆಯತ್ತ ಕರುಣೆ-ಪ್ರೀತಿಯ ನೋಟ ಬೀರಿದ.

ಹಂಝ ಮಲಾರ್

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News