ಸಿಎಂ ಬೆಳಗಾವಿ ಪ್ರವಾಸ ರದ್ದು: ಪ್ರವಾಹ ಬಾಧಿತ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

Update: 2019-08-05 14:34 GMT

ಬೆಳಗಾವಿ, ಆ.5: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಇಂದು ಜಿಲ್ಲೆಯ ಪ್ರವಾಹ ಬಾಧಿತ ಗ್ರಾಮಗಳ ಭೇಟಿ ನೀಡುವ ಕಾರ್ಯಕ್ರಮ ಕೊನೆಗಳಿಗೆಯಲ್ಲಿ ರದ್ದುಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಮುಖ್ಯಮಂತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪ್ರವಾಹ ಬಾಧಿತ ಸತ್ತಿ ಮತ್ತು ನಂದೇಶ್ವರ ಗ್ರಾಮಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ಸಿಗದಿರುವ ಕಾರಣಕ್ಕೆ ಅಥಣಿ ತಾಲೂಕು ಪ್ರವಾಸವನ್ನು ಕೊನೆಗಳಿಗೆಯಲ್ಲಿ ಮೊಟಕುಗೊಳಿಸಿ ವಿಜಯಪುರದಿಂದಲೇ ಬೆಂಗಳೂರಿಗೆ ಹಿಂತಿರುಗಿದರು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪರಿಶೀಲನೆ: ಮುಖ್ಯಮಂತ್ರಿಯ ಪ್ರವಾಸ ರದ್ದುಗೊಂಡ ಬಳಿಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪ್ರವಾಹ ಬಾಧಿತ ಸತ್ತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸತ್ತಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಪರಿಹಾರ(ಗಂಜಿ) ಕೇಂದ್ರಕ್ಕೆ ಭೇಟಿ ನೀಡಿದ ಅವರು, ಊಟದ ವ್ಯವಸ್ಥೆಯ ಸಂತ್ರಸ್ತರಿಂದಲೇ ಮಾಹಿತಿ ಪಡೆದುಕೊಂಡರು. ಇಂದು ನಾಗರ ಪಂಚಮಿಯಾಗಿರುವುದರಿಂದ ಜಾಸ್ತಿ ಜನರು ಪರಿಹಾರ ಕೇಂದ್ರದಲ್ಲಿ ಮಧ್ಯಾಹ್ನ ಊಟ ಮಾಡಿರುವುದಿಲ್ಲ ಎಂದು ಉಸ್ತುವಾರಿಗೆ ನಿಯೋಜಿಸಲಾದ ಅಧಿಕಾರಿಗಳು ತಿಳಿಸಿದರು.

ಸತ್ತಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ಇದುವರೆಗೆ 33 ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ 70 ಕುಟುಂಬಗಳು ಆಶ್ರಯ ಪಡೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಊಟದ ಕೊರತೆ ಆಗಬಾರದು: ಪರಿಹಾರ ಕೇಂದ್ರಗಳಲ್ಲಿ ಎಷ್ಟೇ ಜನರು ಆಶ್ರಯ ಪಡೆದುಕೊಂಡರೂ ಸರಿ. ಯಾವುದೇ ಕಾರಣಕ್ಕೂ ಊಟದ ಕೊರತೆ ಆಗಬಾರದು ಎಂದು ರಾಕೇಶ್ ಸಿಂಗ್ ಸೂಚನೆ ನೀಡಿದರು.

ಪರಿಹಾರ ಕೇಂದ್ರದ ಬಳಿ ಶೌಚಾಲಯಗಳನ್ನು ಸ್ಥಾಪಿಸಬೇಕು. ಸ್ಥಳಾಂತರಗೊಂಡಿರುವ ಕುಟುಂಬಗಳ ಜಾನುವಾರುಗಳನ್ನು ಕೂಡ ಕಟ್ಟಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂತ್ರಸ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ನದಿ ತೀರದಲ್ಲಿ ವಾಸಿಸುವ ಕುಟುಂಬಗಳ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ, ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪರಿಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸೂಕ್ತ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು. ಸತ್ತಿ ಗ್ರಾಮದ ಸರಕಾರಿ ಶಾಲೆಯಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಕುಟುಂಬಗಳ ಜನರು ತಮ್ಮ ಅಹವಾಲುಗಳನ್ನು ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೂ ಮುನ್ನ ರಡ್ಡೇರಹಟ್ಟಿಯ ಪುನರ್ವಸತಿ ಕೇಂದ್ರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News