ನಾಗರ ಪಂಚಮಿ ಬದಲು ಬಸವ ಪಂಚಮಿ ಆಚರಣೆ: ಶಾಲಾ ಮಕ್ಕಳಿಗೆ ಹಾಲು, ಬಿಸ್ಕೆಟ್ ವಿತರಣೆ

Update: 2019-08-05 18:21 GMT

ಮಂಡ್ಯ, ಆ.5:  ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾಯಕಯೋಗಿ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ನಾಗರಪಂಚಮಿಗೆ ಬದಲಾಗಿ ಬಸವ ಪಂಚಮಿಯನ್ನು ಆಚರಿಸಿದರು. 

ನಗರದ ಜಬ್ಬರ್ ಸರ್ಕಲ್‍ನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮಕ್ಕಳಿಗೆ ಹಾಲು, ಬಿಸ್ಕೆಟ್ ನೀಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬಿತ್ತುವ ಪ್ರಯತ್ನ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಮೌಢ್ಯತೆಯ ವಿರುದ್ಧ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದ್ದರು. ಅಂತಹ ಸಾಮಾಜಿಕ ಕ್ರಾಂತಿಯ ಹರಿಕಾರನ ಲಿಂಗೈಕ್ಯ ದಿನವಾದ ಇಂದು ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವನ್ನು ವೈದಿಕರು ಮಾಡಿಕೊಂಡು ಬಂದಿರುವುದು ಅವೈಜ್ಞಾನಿಕ. ಬಸವಣ್ಣನವರ ಆದರ್ಶಗಳನ್ನು ಸಾಕಾರಗೊಳಿಸಲು ಮಕ್ಕಳಲ್ಲಿಯೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕೆಂದರು. 

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಶಾಲಾ ಮಕ್ಕಳಲ್ಲಿ ಪ್ರಗತಿಪರ ಆಲೋಚನೆಗಳನ್ನು ಬಿತ್ತಬೇಕು. ನಾಗರ ಪಂಚಮಿಯಂತಹ ಧಾರ್ಮಿಕ ಆಚರಣೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಹೋಮ, ಹವನದ ಹೆಸರಲ್ಲಿ ಲಕ್ಷಾಂತರ ರೂ.ಬೆಲೆಬಾಳುವ ವಸ್ತುಗಳನ್ನು ದಹಿಸಿ ರಾಷ್ಟ್ರೀಯ ನಷ್ಟವುಂಟು ಮಾಡುತ್ತಿರುವ ಬಗ್ಗೆ ಜನಜಾಗೃತಿಯ ಅವಶ್ಯಕತೆ ಇದೆ ಎಂದರು. 

ವೈಜ್ಞಾನಕವಾಗಿ ಹಾವು ಹಾಲನ್ನು ಆಹಾರವಾಗಿ ಸ್ವೀಕರಿಸುವುದಿಲ್ಲವಾದರೂ ಸಾಂಪ್ರದಾಯವಾದಿಗಳು ಇಂತಹದ್ದೊಂದು ಪರಿಪಾಠವನ್ನು ಹುಟ್ಟುಹಾಕಿದ್ದಾರೆ. ನಿಜವಾದ ನಾಗರಹಾವು ಬಂದರೆ ಒಡೆದು ಸಾಯಿಸುವ ಜನರು ಹುತ್ತದ ನಾಗರಕ್ಕೆ ಹಾಲೆರೆಯುವುದು ಎಷ್ಟು ಸರಿ ಎಂದು ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಪ್ರಶ್ನಿಸಿದರು. 

ಬಸವ ಫೌಂಡೇಶನ್ ಅಧ್ಯಕ್ಷೆ ಎಚ್.ಪಿ.ಅಪರ್ಣ ಮಾತನಾಡಿ, ಮಹಿಳೆಯರಲ್ಲಿ ಧಾರ್ಮಿಕ ನಂಬಿಕೆ ಇರಬೇಕೆ ಹೊರತು ಮೂಢನಂಬಿಕೆಯಾಗಿ ಅದು ಪರಿವರ್ತನೆಯಾಗಬಾರದು. ಮಹಿಳೆಯರು ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಚಿಂತನೆ ಮತ್ತು ಸ್ವಾಭಿಮಾನದ ಬದುಕಿನತ್ತ ಮುಖ ಮಾಡಬೇಕು ಎಂದರು. 

ಕಾಯಕಯೋಗಿ ಸಮೂಹ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಇಂದೂಧರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಸಂಪತ್‍ ಕುಮಾರ್, ಶ್ಯಾಮ್, ಕೃಷ್ಣಪ್ಪ, ವೆಂಕಟೇಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News