ಆ ಕರಾಳ ದಿನಗಳ ನೆನಪಿನಲ್ಲಿ...
ಪ್ರಪಂಚದಲ್ಲಿ ಹಲವಾರು ಧರ್ಮಗಳಿವೆ, ಹಲವಾರು ದೇವಾಲಯಗಳಿವೆ! ಆದರೆ ಪ್ರಪಂಚದ ಶಾಂತಿಗೆ ಮುಡಿಪಾದ ದೇವಾಲಯ ಒಂದಿದೆ. ಅದು ಜಪಾನಿನ ಹಿರೋಷಿಮಾದಲ್ಲಿದೆ. ಪ್ರತಿ ವರ್ಷ ಆಗಸ್ಟ್ 6ರಂದು ಅಲ್ಲಿ ಸಾವಿರಾರು ಜನ ಸೇರಿ ಪ್ರಾರ್ಥನೆ ನಡೆಸುತ್ತಾರೆ. ಜಗತ್ತಿನಲ್ಲಿ ನಿತ್ಯಶಾಂತಿ ನೆಲೆಸಲಿ ಎಂದು, ಹಿರೋಷಿಮಾ ಪಟ್ಟಪಾಡು ಮತ್ತೇ ಯಾವ ಪಟ್ಟಣವೂ ಪಡುವಂತಾಗದಿರಲಿ ಎಂದು.
ಎರಡನೆಯ ಮಹಾಯುದ್ಧದ ಶತ್ರು ಪಕ್ಷದವರಾದ ಜರ್ಮನಿ, ಇಟಲಿ, ಟರ್ಕಿ, ಜಪಾನ್ ಮತ್ತು ಮಿತ್ರ ಪಕ್ಷದವರಾದ ಇಂಗ್ಲೆಂಡ್, ಪ್ರಾನ್ಸ್, ರಶ್ಯ ಮತ್ತು ಅಮೆರಿಕಗಳ ನಡುವೆ ಸಂಭವಿಸಿತು. ಯುದ್ಧ ಜರುಗಿದ್ದು ಯುರೋಪ್ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರ ಪ್ರದೇಶಗಳಲ್ಲಾದರೂ ಇಡಿ ಪ್ರಪಂಚವೇ ಇದರಲ್ಲಿ ಭಾಗವಹಿಸಿತ್ತು. 1939ರಲ್ಲಿ ಹಿಟ್ಲರ್‌ನ ಸೈನ್ಯ ಪೋಲೆಂಡಿಗೆ ನುಗ್ಗಿದಂದು ಆರಂಭವಾದ ಈ ಯುದ್ಧ 1945ರಲ್ಲಿ ಅಮೆರಿಕ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಾಂಬ್ ದಾಳಿಯ ಆನಂತರ ಮುಕ್ತಾಯಗೊಂಡಿತು.
ಎರಡನೇ ಮಹಾಯುದ್ಧಕ್ಕೆ ಕಾರಣಗಳು
ಮೊದಲನೇ ಮಹಾಯುದ್ಧದ ನಂತರ ಜರುಗಿದ ವರ್ಸೆಲ್ಸ್ ಒಪ್ಪಂದದಲ್ಲಿ ಉಳಿದ ತಪ್ಪುಗಳೇ ಎರಡನೆಯ ಮಹಾಯುದ್ಧಕ್ಕೆ ಬೀಜೋತ್ಪತ್ತಿಯಾದವು. ಜರ್ಮನಿಯಲ್ಲಿ ವರ್ಸೆಲ್ಸ್ ಒಪ್ಪಂದದಲ್ಲಿ ಬಹು ನಿಕೃಷ್ಟವಾಗಿ ನೋಡಿದ ಮಿತ್ರ ರಾಷ್ಟ್ರಗಳು ಅದರ ಮಿಲಿಟರಿ ಬಲವನ್ನು ಕುಂಠಿತಗೊಳಿಸಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡವು. ಜರ್ಮನಿಯ ಅಂದಿನ ಶೋಚನೀಯ ಪರಿಸ್ಥಿತಿಯ ಲಾಭ ಪಡೆದ ಹಿಟ್ಲರ್ ನಾಜೀವಾದದಲ್ಲಿ ಅವರಿಗೆ ನಂಬಿಕೆ ಹುಟ್ಟಿಸುವಲ್ಲಿ ಯಶಸ್ವಿಯಾದ. ವರ್ಸೆಲ್ಸ್ ಒಪ್ಪಂದ ಜರ್ಮನಿಯಂತೆ ಇಟಲಿಯನ್ನೂ ಬಡತನಕ್ಕೀಡು ಮಾಡಿತು. ಮೊದಲನೆಯ ಮಹಾಯುದ್ಧಾನಂತರ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಹೊಣೆ ಹೊತ್ತು ನಿಂತ ಲೀಗ್ ಆಫ್ ನೇಷನ್ಸನ್ ವೈಫಲ್ಯ ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.
ಜಪಾನಿನ ಹಾನ್ ಷು ದ್ವೀಪದ ದಕ್ಷಿಣ ತೀರದಲ್ಲಿ ಹಿರೋಷಿಮಾ ಕೊಲ್ಲಿಯ ಬಳಿ ಓಟಾ ನದಿಯ ಮುಖಜ ಭೂಮಿಯಲ್ಲಿರುವ ಒಳನಾಡಿನ ಬಂದರು ಎರಡನೇ ಮಹಾಯುದ್ಧದ ಪರ್ಯಂತ ಹಿರೋಷಿಮಾ ಸೈನಿಕ ಕೇಂದ್ರವಾಗಿತ್ತು. ಹಿರೋಷಿಮಾ ನಗರ ಬೆಳೆದಂತೆ ಓಟಾ ನದಿಯ ಮುಖಜ ಭೂಮಿಯಲ್ಲಿದ್ದ ಆರು ದ್ವೀಪಗಳನ್ನು ಒಂದಕ್ಕೊಂದು ಜೋಡಿಸಲು ಎಂಬತ್ತೊಂದು ಸೇತುವೆಗಳನ್ನು ಕಟ್ಟಿದ್ದರು.
ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲದ ಆ ದಿನ 1945 ಆಗಸ್ಟ್ 6ರ ಬೆಳಗ್ಗೆ 8:15 ಗಂಟೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ‘ಲಿಟಲ್‌ಬಾಯ್’ ಎಂಬ ಪ್ರಥಮ ಪರಮಾಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಹಾಕಿತು. ಈ ಶಕ್ತಿಶಾಲಿ ಒಂದು ಬಾಂಬ್‌ನಿಂದಲೇ ನಗರದ ಬಹುಭಾಗ ನಾಶವಾಯಿತು. ಸುಮಾರು 60,000 ಜನ ಮಡಿದರು. ಒಂದು ಲಕ್ಷ ಜನ ಗಾಯಗೊಂಡರು, ಎರಡು ಲಕ್ಷ ಜನ ಮನೆಯಿಲ್ಲದೆ ನಿರ್ಗತಿಕರಾದರು. ಬದುಕಿ ಉಳಿದವರಲ್ಲೂ ಅನೇಕರು ವಿಕಿರಣ ಕಾಯಿಲೆಗೆ ಗುರಿಯಾಗಿ ಮರಣ ಹೊಂದಿದರು. ಎಷ್ಟೋ ವರ್ಷಗಳ ಕಾಲ ಅಲ್ಲಿ ಹುಟ್ಟಿದ ಮಕ್ಕಳಲ್ಲಿ ಅನೇಕರು ಅಂಗವಿಕಲರಾಗಿ ಹುಟ್ಟಿದರು.
ಪರಮಾಣು ಬಾಂಬಿನಿಂದಲೇ ಹಾಳಾಗಿದ್ದ ಹಿರೋಷಿಮಾ ನಗರ 1945ರ ಸೆಪ್ಟಂಬರ್‌ನಲ್ಲಿ ಸಂಭವಿಸಿದ ಪ್ರವಾಹದಿಂದ ಅಪಾರ ನಷ್ಟಕ್ಕೆ ಈಡಾಯಿತು. ಆನಂತರ ಹೊಸ ನಗರವನ್ನು ಕಟ್ಟುವ ಕೆಲಸ 1946ರಿಂದ ಪ್ರಾರಂಭವಾಯಿತು. ಈಗ ಹಿರೋಷಿಮಾದಲ್ಲಿ ಅನೇಕ ಆಧುನಿಕ ಕೈಗಾರಿಕೆಗಳು ಬೆಳೆಯುತ್ತಿವೆ. 2015ರಲ್ಲಿ ಈ ನಗರದ ಜನಸಂಖ್ಯೆ 11,85,656.
ಬಾಂಬ್ ಬಿದ್ದ ಸ್ಥಳದಲ್ಲಿ, ದಾಳಿಯಲ್ಲಿ ಮೃತರಾದವರ ಸ್ಮರಣಾರ್ಥ ಸ್ಮಾರಕ ಸಮಾಧಿಯೊಂದನ್ನು ನಿರ್ಮಿಸಲಾಗಿದೆ. ಕಮಾನಿನ ಕೆಳಗಿರುವ ಕಲ್ಲಿನ ಮೇಲೆ ಸುತ್ತು 60,000 ಜನರ ಹೆಸರುಗಳನ್ನು ಕೆತ್ತಿದ್ದಾರೆ. 1949ರಲ್ಲಿ ಅಂತರ್‌ರಾಷ್ಟ್ರೀಯ ಶಾಂತಿ ದೇವಾಲಯವನ್ನು ಹಿರೋಷಿಮಾದಲ್ಲಿ ಕಟ್ಟಬೇಕೆಂಬ ಜನತೆಯ ಅಪೇಕ್ಷೆಗೆ ಜಪಾನಿನ ಸರಕಾರವು ಸಮ್ಮತಿಸಿ ನಾಶವಾಗಿದ್ದ ಇಗರ್ಜಿಯೊಂದರ ಸ್ಥಳದಲ್ಲಿ ಹೊಸ ಶಾಂತಿ ದೇವಾಲಯ ನಿರ್ಮಾಣವಾಯಿತು.
ಹಿರೋಷಿಮಾದಂತೆಯೇ ಪರಮಾಣು ಬಾಂಬಿನ ಭೀಕರತೆಯನ್ನು ಅನುಭವಿಸಿದ ಇನ್ನೊಂದು ನಗರ ನಾಗಸಾಕಿ. ಜಪಾನಿನ ಕೈಫು ದ್ವೀಪದ ವಾಯುವ್ಯ ಭಾಗದಲ್ಲಿ ಸುತ್ತಲೂ ಬೆಟ್ಟಗಳಿಂದ ಆವೃತ್ತವಾದ ನಾಗಸಾಕಿ ಪ್ರಪಂಚದ ಸುಂದರತೆಯ ಬಂದರುಗಳಲ್ಲಿ ಒಂದಾಗಿತ್ತು. ಉರಗಾಮಿ ಎಂಬ ಕಣಿವೆಯಲ್ಲಿ ದೊಡ್ಡ ಉಕ್ಕಿನ ಕಾರ್ಖಾನೆ, ಇಂಜಿನಿಯರಿಂಗ್ ಉದ್ಯಮಗಳು, ಯುದ್ಧ ಸಾಧನ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆ ಇದ್ದವು. ಎರಡನೆಯ ಮಹಾಯುದ್ಧ ಈ ಹಡಗು ನಿರ್ಮಾಣ ಉದ್ಯಮ ಬೆಳೆಯಲು ಮುಖ್ಯ ಕಾರಣವಾಯಿತು. 1945ರಲ್ಲಿ ಈ ನಗರದ ಜನಸಂಖ್ಯೆ 3,43,000.
ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಕಾಲ, ಅಮೆರಿಕ ವಿಮಾನಗಳ ಬಾಂಬ್ ದಾಳಿ ಜಪಾನಿನ ನಗರವಾಸಿಗಳ ಅನುಭವವಾಗಿ ಹೋಗಿತ್ತು. ಆದರೆ 1945 ಆಗಸ್ಟ್ 9 ಬೆಳಗ್ಗೆ 11 ಗಂಟೆಗೆ ನಾಗಸಾಕಿಯ ಮೇಲೆ ಬಿದ್ದ ಆ ಒಂದೇ ಬಾಂಬು ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿಯೇ 37,501 ಜನರನ್ನು ಸಾವಿಗೆ ದೂಡಿತ್ತು. 51,580 ಜನ ಗಾಯಗೊಂಡಿದ್ದರು. ನಾಗಸಾಕಿಯ ಮೇಲೆ ಬಿದ್ದುದು ಜಗತ್ತಿನ ಎರಡನೆಯ ಪರಮಾಣು ಬಾಂಬ್ ಆಗಿದೆ.
ಪರಮಾಣು ಬಾಂಬಿನ ಪ್ರಯೋಗ ಎರಡನೆಯ ಮಹಾಯುದ್ಧದ ಮುಕ್ತಾಯವನ್ನು ತೀವ್ರಗೊಳಿಸಿತು. ನಾಗಸಾಕಿಯ ಮೇಲೆ ಬಾಂಬ್ ಬಿದ್ದ ಐದು ದಿನಗಳ ನಂತರ ಜಪಾನ್ ಶರಣಾಗತವಾಯಿತು. ಈ ಬಾಂಬ್‌ಗಳಿಂದ ಶಾಂತಸಾಗರ ಪ್ರದೇಶದ ಯುದ್ಧ ಒಂದು ವರ್ಷಕ್ಕೆ ಮುಂಚಿತವಾಗಿ ಮುಗಿಯಿತು. ಹತ್ತು ಲಕ್ಷ ಅಮೆರಿಕನ್ ಸೈನಿಕರನ್ನೂ ಎರಡೂವರೆ ಲಕ್ಷ ಬ್ರಿಟಿಷ್ ಸೈನಿಕರನ್ನೂ ಉಳಿಸಿತು ಎಂದು ವಾದಿಸಿ ಪರಮಾಣು ಬಾಂಬಿನ ಪ್ರಯೋಗವನ್ನು ಸಮರ್ಥಿಸುವವರು ಇನ್ನೂ ಇದ್ದಾರೆ.
ಜಪಾನಿನ ಜನರು ನಾಗಸಾಕಿ ನಗರವನ್ನು ಮತ್ತೆ ಹೊಸದಾಗಿ ನಿರ್ಮಿಸಲಾಯಿತು. 2015ರಲ್ಲಿ ನಾಗಸಾಕಿ ನಗರದ ಜನಸಂಖ್ಯೆ 4,33,514.
ಪ್ರತಿ ವರ್ಷ ಆಗಸ್ಟ್ 9ರಂದು ನಾಗಸಾಕಿ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಎರಡನೆಯ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಹಾಗೂ ನಾಗರಿಕರ ಆತ್ಮಕ್ಕೆ ಶಾಂತಿ ಕೋರುವುದಾಗಿದೆ.
ಹಿರೋಷಿಮಾ, ನಾಗಸಾಕಿ ಪಟ್ಟ ಪಾಡು ಜಗತ್ತಿನ ಮತ್ತೆ ಯಾವ ಪಟ್ಟಣವೂ ಪಡುವಂತಾಗದಿರಲಿ ಮೂರನೇ ಮಹಾಯುದ್ಧ ಎಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುವುದಷ್ಟೇ ಇಂದಿನ ಪರಿಸ್ಥಿತಿಯಲ್ಲಿ ನಮಗುಳಿದಿರುವ ದಾರಿಯಾಗಿದೆ