ಕೊಡಗು: ಮಳೆಹಾನಿ ಪ್ರದೇಶಕ್ಕೆ ಶಾಸಕ ಬೋಪಯ್ಯ ಭೇಟಿ

Update: 2019-08-06 18:05 GMT

ಮಡಿಕೇರಿ, ಆ.6: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.

ಭಾಗಮಂಡಲದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದ್ದು, ಭಾಗಮಂಡಲ-ಮಡಿಕೇರಿ ಮತ್ತು ಭಾಗಮಂಡಲ-ಅಯ್ಯಂಗೇರಿ ರಸ್ತೆ ಬಂದ್ ಆಗಿರುವ ಹಿನ್ನೆಲೆ ಮಂಗಳವಾರ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.  

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಳೆ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಅವರು ಪ್ರತಿನಿತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.  

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸಭೆ ನಡೆಸಿದ್ದು, ಪ್ರಸ್ತಾವನೆಯಂತೆ 540 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಸಂತ್ರಸ್ತರಿಗೆ ಕೂಡಲೇ ಮನೆಗಳ ಹಸ್ತಾಂತರ ಮಾಡಲಾಗುವುದು, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆ ಕಡಿಮೆ. ಆದರೂ ಸಹ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಬೋಟ್ ವ್ಯವಸ್ಥೆ, ಈಜುಗಾರರು ಮತ್ತು ಮುಳುಗು ತಜ್ಞರನ್ನು ನಿಯೋಜಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. ಭಾಗಮಂಡಲದಲ್ಲಿ ಮೇಲು ಸೇತುವೆ ನಿರ್ಮಾಣವಾಗಬೇಕಿದ್ದು, ಮುಂದಿನ ವರ್ಷದೊಳಗೆ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಜನರು ನದಿ, ತೊರೆ, ಹಳ್ಳಕೊಳ್ಳ ಹಾಗೂ ಬೆಟ್ಟಗುಡ್ಡ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಶಾಸಕರು ತಿಳಿಸಿದರು. 

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಇದುವರೆಗೆ ವಿಶೇಷ ಸ್ಥಾನವಿತ್ತು, ಅದನ್ನು ರದ್ದುಪಡಿಸಿ ದೇಶದಾದ್ಯಂತ ಒಂದೇ ಕಾನೂನನ್ನು ಜಾರಿಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದ್ದು, ವಿಶೇಷ ಸ್ಥಾನ ರದ್ದುಪಡಿಸಿರುವುದಕ್ಕೆ ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ 370ರ ವಿಧಿ ರದ್ದುಪಡಿಸಲು ಬೆಂಬಲ ಪ್ರತಿಪಕ್ಷದ ಮುಖಂಡರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವಂತೆ ದೇಶದ ಅಭಿವೃದ್ಧಿಗೆ ಸರ್ಕಾರ ಕಠಿಬದ್ಧವಾಗಿದೆ ಎಂದರು. ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಮತ್ತಿತರ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News