ಪ್ರವಾಹ ಪೀಡಿತ ಸಂತ್ರಸ್ಥರಿಗೆ ಸುವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು: ಸಿದ್ದರಾಮಯ್ಯ

Update: 2019-08-07 15:09 GMT

ಬೆಂಗಳೂರು, ಆ.7: ಪ್ರವಾಹ ಸಂತ್ರಸ್ತರನ್ನು ಕಂಡು ಮನಸು ಮರುಗುತ್ತಿದೆ. ಸಂತ್ರಸ್ಥರಿಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ಸುವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿ, ಸಂಕಷ್ಟ ಸಿಲುಕಿರುವ ಜನತೆಯ ಕುರಿತು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಾಗೂ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಈಗಾಗಲೇ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರನ್ನು ಕಂಡು ಮನಸ್ಸು ಮರುಗುತ್ತಿದೆ. ಇಂಥ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಿತ್ತು ಎನಿಸುತ್ತಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲದ ವಿಶ್ರಾಂತಿ ಪಡೆಯಬೇಕಾಗಿದೆ. ನನ್ನ ಕ್ಷೇತ್ರ ಬಾದಾಮಿಯಲ್ಲಿ ಸಹ ಪ್ರವಾಹ ಭೀತಿ ಎದುರಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಸುರಕ್ಷಿತ ತಾಣಕ್ಕೆ ತೆರಳುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ. ಈ ಸಂಬಂಧ ಬಾದಾಮಿ ತಹಶಿಲ್ದಾರ್, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕ್ಷೇತ್ರದ ಜನತೆಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ಸುವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು.

ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವುದರಿಂದ ಮಲಪ್ರಭಾ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ. ಆದ್ದರಿಂದ ಗ್ರಾಮಸ್ಥರು ಸುರಕ್ಷಿತ ತಾಣಕ್ಕೆ ತೆರಳಬೇಕೆಂದು ಅವರು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News