ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಿಎಂ ಬಳಿ ಪಠ್ಯಪುಸ್ತಕ ಬೇಕೆಂದ ವಿದ್ಯಾರ್ಥಿನಿ

Update: 2019-08-08 17:19 GMT

ಬೆಳಗಾವಿ, ಆ.8: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಿದ್ಯಾರ್ಥಿನಿಯೊಬ್ಬಳು ಪಠ್ಯಪುಸ್ತಕ ಕೊಡಿಸುವಂತೆ ಕೇಳಿದ ಪ್ರಸಂಗ ಜರುಗಿತು. ಈ ವೇಳೆ ಒಂದು ಕ್ಷಣ ಆಶ್ಚರ್ಯಚಕಿತಗೊಂಡ ಮುಖ್ಯಮಂತ್ರಿ, ನಾಳೆ ಸಂಜೆಯೊಳಗೆ ಅಗತ್ಯ ಪಠ್ಯಪುಸ್ತಕಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಹಿರಣ್ಯಕೇಶಿ ನದಿ ಪ್ರವಾಹದಿಂದ ನಿರಾಶ್ರಿತರಾಗಿರುವ ಸಂಕೇಶ್ವರ ಪಟ್ಟಣದ ರಾಮ ಚಿತ್ರಮಂದಿರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಿ.ಎ.ಮೊದಲ ವರ್ಷದ ವಿದ್ಯಾರ್ಥಿನಿ ಸೀಮಾ ಇಂಗಳಿ, ಪಠ್ಯಪುಸ್ತಕ ನೀರಿನಲ್ಲಿ ಹಾಳಾಗಿರುವುದರಿಂದ ಓದುವುದಕ್ಕೆ ತೊಂದರೆಯಾಗಿದೆ ಎಂದು ಅಹವಾಲು ಹೇಳಿಕೊಂಡಳು.

ಆಕೆಯ ಜತೆಗೆ ಮಾತನಾಡಿದ ಮುಖ್ಯಮಂತ್ರಿ, ಅಗತ್ಯ ಪುಸ್ತಕಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದರು. ಪಟ್ಟಿಯನ್ನು ನೀಡಿದ ತಕ್ಷಣ ಪಠ್ಯಪುಸ್ತಕಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿದಾಗ ಜನರು ತಮ್ಮ ಸಂಕಷ್ಟದ ನಡುವೆಯೂ ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು. ಸಂತ್ರಸ್ತರನ್ನು ಕಂಡ ತಕ್ಷಣ ಮುಖ್ಯಮಂತ್ರಿ ಕೈಮುಗಿದುಕೊಂಡು ನೇರವಾಗಿ ಅವರ ಬಳಿ ತೆರಳಿದರು.

ಬೆಳಗಾವಿ ನಗರದ ಸಾಯಿಭವನ ಹಾಗೂ ಸಂಕೇಶ್ವರದ ರಾಮ ಚಿತ್ರಮಂದಿರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಜತೆ ಮಾತನಾಡಿದ ಅವರು, ಊಟೋಪಹಾರ, ಬಟ್ಟೆ, ಹಾಸಿಗೆ-ಹೊದಿಕೆಗಳನ್ನು ತಕ್ಷಣವೇ ಒದಗಿಸಲಾಗುವುದು ಎಂದರು.

ಬಹುತೇಕ ಸಂತ್ರಸ್ತರು ಮನೆಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶಾಸಕರಾದ ಉಮೇಶ್ ಕತ್ತಿ, ಅಭಯ್ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬೆಳಗಾವಿ ಉತ್ತರ ವಲಯ ಐಜಿಪಿ ಎಚ್.ಜಿ. ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News