ಕನ್ನಡದ ಪ್ರಥಮ ಖಂಡ ಕಾವ್ಯ ಕಿಟೆಲ್‌ರ ‘ಕ್ರಿಸ್ತ ಕಥನ’
ಫರ್ಡಿನೆಂಡ್ ಕಿಟೆಲ್‌ರನ್ನು ಸ್ಮರಿಸದೆ ನಮ್ಮ ಕನ್ನಡ ಪೂರ್ತಿಯಾಗುವುದಿಲ್ಲ. ಕನ್ನಡ ಭಾಷೆಗಾಗಿ ಅವರು ಮಾಡಿದ ಸೇವೆ ಅಷ್ಟು ಅಮೂಲ್ಯವಾದುದು. ಇಂದು ಕನ್ನಡದ ನಿಘಂಟುಗಳು ಕಿಟೆಲ್‌ರ ಋಣದ ಮೇಲೆ ನಿಂತಿವೆ. ಕನ್ನಡ ವ್ಯಾಕರಣ, ಅವರು ಸಂಪಾದಿಸಿದ ‘ಶಬ್ದಮಣಿದರ್ಪಣ ಹಾಗೂ ನಾಗವರ್ಮನ ಛಂದಸ್ಸು(ಛಂದೋಂಬುಧಿ)’ ಕನ್ನಡದ ಏರೆತ್ತರ ಮಾನ ಸ್ತಂಭಗಳು. ಎರಡು ಸಂಸ್ಕೃತಿಗಳ ವಿಭಿನ್ನ ನೆಲೆಗಳಲ್ಲಿ ಕಾರ್ಯನಿರ್ವಹಿಸಿ ಭಾರತೀಯ ಅದರಲ್ಲೂ ಕನ್ನಡ ಸಂಸ್ಕೃತಿ ಎಲ್ಲೆಯನ್ನು ವಿಸ್ತರಿಸಿದ ಕಿಟೆಲ್‌ರ ಅಸಾಮಾನ್ಯ ಭಾರತೀಯ ನೆಲದ ಅರಿವು ಹೆಚ್ಚಾಗಿ ಬೆಳಕಿಗೆ ಬಂದಿಲ್ಲ. ಇಂದು ಕಿಟೆಲ್‌ರನ್ನು ಧರ್ಮ ಪ್ರಚಾರಕ್ಕೆ ಬಂದ ಪಾದ್ರಿ ಎಂದು ಸಂಕುಚಿತವಾಗಿ ವ್ಯಾಖ್ಯಾನಿಸುವವರಿದ್ದಾರೆ. ಇದೇ ಸಂದರ್ಭದಲ್ಲಿ ಕಿಟೆಲ್‌ರ ಕಾರ್ಯವೈಖರಿ ಅವರ ಮೇಲಾಧಿಕಾರಿಗಳಿಗೂ ಇಷ್ಟವಾಗುತ್ತಿರಲಿಲ್ಲ. ಅವರ ಮೇಲೆ ಕ್ರಮಕೈಗೊಳ್ಳುವ ಬೆದರಿಕೆಯನ್ನೂ ಮಿಷನರಿಗಳು ಒಡ್ಡಿದ್ದರು. ‘‘....ಸ್ವತಂತ್ರ ಹೊಸ ಆಲೋಚನೆಗಳು ಹುಟ್ಟಿಕೊಳ್ಳುವುದು ದುಷ್ಟರ ಮನಸ್ಸುಗಳಲ್ಲಿ ಮಾತ್ರ. ಅವೆಂದೂ ಬದುಕಿಗೆ ಶಾಂತಿ ಸಮಾಧಾನ ತರಲಾರವು...’’ ಎಂದೂ ಹೇಳಿದ್ದರು. ಅಂದರೆ ಕಿಟೆಲ್, ಮಿಷನರಿಗಳ ಮಾರ್ಗಸೂಚಿಗಳನ್ನು ಮೀರಿ ಸ್ವತಂತ್ರವಾಗಿ ಯೋಚಿಸಿದ ಕಾರಣಕ್ಕಾಗಿಯೇ ಕನ್ನಡದಲ್ಲಿ ಅಪಾರ ಸಾಧನೆಗಳನ್ನು ಸಾಧಿಸಲು ಸಾಧ್ಯವಾಯಿತು.
ಇದೇ ಸಂದರ್ಭದಲ್ಲಿ ಕ್ರಿಸ್ತನನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆ ಅವರದು. ಅವರು ಕ್ರಿಸ್ತನ ಜೀವನವನ್ನು ಕೇವಲ ಕನ್ನಡಕ್ಕೆ ಅನುವಾದಿಸಿರುವುದಲ್ಲ. ಹಳೆಗನ್ನಡ ಕಾವ್ಯ ಛಂದಸ್ಸಿನ ಮೂಲಕ ಅವರು ಕ್ರಿಸ್ತನನ್ನು ಮರು ನಿರೂಪಿಸಿದರು. ಕನ್ನಡದ ಜನಪ್ರಿಯ ಛಂದಸ್ಸುಗಳಾದ ಭಾಮಿನಿ, ವಾರ್ಧಕ ಹಾಗೂ ಪೂರ್ವೀರಾಗ(ಕೀರ್ತನೆಗಳ ಮಟ್ಟು)ಗಳ ಮಹಾಕಾವ್ಯವನ್ನೇ ಬರೆದರು. ಕೇವಲ ಧರ್ಮ ಪ್ರಚಾರವೇ ಅವರ ಗುರಿಯಾಗಿರಲಿಲ್ಲ. ಕನ್ನಡ ಲೋಕಕ್ಕೆ ಈ ಮೂಲಕ ಅಪರೂಪದ ಪ್ರಾಚೀನ ಪದಗಳನ್ನು ಹೆಕ್ಕಿ ತೆಗೆದು ಕಾಣಿಕೆಯಾಗಿ ನೀಡಿದರು. ಧರ್ಮ ಪ್ರಚಾರ ಉದ್ದೇಶವಾದರೂ, ಅಂತಿಮವಾಗಿ ಕನ್ನಡವೇ ಅವರ ಪಾಲಿನ ಧರ್ಮವಾದುದನ್ನು ನಾವು ಮರೆಯಬಾರದು. ಕಿಟೆಲ್ ಬರೆದ ಕ್ರಿಸ್ತ ಕಥನ ಕಾವ್ಯದಲ್ಲಿ ಮಹತ್ವದ ‘ಕಥನ ಮಾಲೆ’ಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ. ಪ್ರೊ. ಎ. ವಿ. ನಾವಡ ಅವರು ಇದನ್ನು ಸಂಪಾದಿಸಿದ್ದಾರೆ.ಇದು ಆಧುನಿಕ ಕನ್ನಡದ ವೊತ್ತ ಮೊದಲ ಖಂಡಕಾವ್ಯವೂ ಹೌದು. ಈ ಗ್ರಂಥವನ್ನು ಕಿಟೆಲ್ ರಚಿಸಿ, 1862ರಲ್ಲಿ ಮಂಗಳೂರು ಬಾಸೆಲ್ ಮಿಷನ್ ಮುದ್ರಣಾಲಯದಿಂದ ಪ್ರಕಟಿಸಿದರು. ಯೇಸುವಿನ ಜನನದಿಂದ ಹಿಡಿದು ಕ್ರಿಸ್ತನ ಬದುಕಿನ ಬೇರೆ ಬೇರೆ ಹಂತಗಳು, ಆತನ ಕರುಣೆ, ದೀನರಿಗಾಗಿ ಆತ ಮಾಡಿದ ಸೇವೆ, ಪವಾಡಗಳು, ಆತನ ಮರಣ, ಪುನರುತ್ಥಾನ, ದಿವ್ಯಾರೋಹಣ ಹೀಗೆ ಸುಮಾರು 43 ಪದ್ಯಗಳಲ್ಲಿ ಈ ಕಥಾಮಾಲೆಯಿದೆ.
142 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ.