ಕಾಫಿನಾಡಿನಲ್ಲಿ ನಿಲ್ಲದ ವರುಣನ ಆರ್ಭಟ: ಸಾರ್ವಜನಿಕ ಆಸ್ತಿಪಾಸ್ತಿ, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ

Update: 2019-08-09 17:26 GMT

ಚಿಕ್ಕಮಗಳೂರು, ಆ.9: ಕಾಫಿನಾಡು ಇದೀಗ ಅಕ್ಷರಶಃ ಮಳೆನಾಡಾಗಿ ಪರಿಣಮಿಸಿದ್ದು, ಕಳೆದ 8 ದಿನಗಳಿಂದ ಜಿಲ್ಲಾದ್ಯಂತ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ, ಜಮೀನು, ಹೊಲಗದ್ದೆಗಳಿಗೆ ತುಂಗಾ, ಭದ್ರಾ, ಹೇಮಾವತಿ ನದಿ ಸೇರಿದಂತೆ ಹಳ್ಳಕೊಳ್ಳಗಳ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಅತೀವೃಷ್ಟಿಯಿಂದಾಗಿ ಮಲೆನಾಡು ಭಾಗದಲ್ಲಿ ಪ್ರಾಕೃತಿಕ ವಿಕೋಪಗಳೂ ಹೆಚ್ಚುತ್ತಿವೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳೂ ಸೇರಿದಂತೆ ಬಯಲು ಸೀಮೆ ಪ್ರದೇಶಗಳಾದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಗಳಲ್ಲೂ ಶುಕ್ರವಾರ ವರ್ಷಧಾರೆ ಆರ್ಭಟಿಸಿದ ಪರಿಣಾಮ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದ ಪ್ರಮುಖ ಜೀವನದಿಗಳಾದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಕಳೆದ 2 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅಪಾಯಕಾರಿ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಈ ನದಿಗಳು ಹರಿಯುತ್ತಿರುವ ತೀರ ಪ್ರದೇಶಗಳಲ್ಲೆಲ್ಲಾ ಭಾರೀ ಅನಾಹುತಗಳನ್ನು ಮಾಡಿವೆ.

ಮೂಡಿಗೆರೆ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಿರುಗುಂದ, ಜನ್ನಾಪುರ, ಗೋಣಿಬೀಡು ಗ್ರಾಮಗಳ ವ್ಯಾಪ್ತಿಯಲ್ಲಿ ಹೇಮಾವತಿ ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿಕರ ಪಾಲಿಗೆ ಹೇಮಾವತಿ ಹೆಮ್ಮಾರಿಯಂತೆ ಕಾಡುತ್ತಿದೆ. ಗೋಣಿಬೀಡು ಹೋಬಳಿ ಕಸ್ಕೆಬೈಲು ಗ್ರಾಮದ ಚಂದ್ರೇಗೌಡ ಎಂಬವರ 15 ಎಕರೆ ಕಾಫಿ ತೋಟ, ಶಿವೇಗೌಡ, ಚನ್ನಕೇಶವಗೌಡ, ಲಾರೆನ್ಸ್ ಲೋಬೋ ಎಂಬವರ ತಲಾ 10 ಎಕರೆ ಕಾಫಿ ತೋಟ ಹೇಮಾವತಿ ನದಿ ನೀರಿನಿಂದ ಜಲಾವೃತಗೊಂಡಿದ್ದರೆ, ಇನ್ನು ಕೆಲ ಕಾಫಿ ಬೆಳೆಗಾರರ ಒಟ್ಟು 60 ಎಕರೆ ಕಾಫಿ ತೋಟ ಹಾಗೂ 40 ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕೆಲವೆಡೆ ಕಾಫಿ ತೋಟದ ಕೆಲ ಭಾಗಗಳು ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಮರಗಳು ಉರುಳುವುದು, ಭೂಕುಸಿತದಂತಹ ಘಟನೆಗಳು ಶುಕ್ರವಾರವೂ ಮುಂದುವರಿದಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಎರಡು ಜೆಸಿಬಿಗಳ ಮೂಲಕ ಮಣ್ಣು, ಬಂಡೆಕಲ್ಲು, ಮರಗಳ ತೆರವು ಕಾರ್ಯಾಚರಣೆ ಶುಕ್ರವಾರವೂ ನಡೆದಿದೆ. ಚಾರ್ಮಾಡಿ ಘಾಟ್‍ನಲ್ಲಿ ಪ್ರಾಕೃತಿಕ ವಿಕೋಪಗಳು ನಿರಂತರವಾಗಿ ಸಂಭವಿಸುತ್ತಿರುವುದರಿಂದ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಕಳೆದ ಎರಡು ದಿನಗಳಿಂದ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಜಿಲ್ಲಾಡಳಿತ ಬಂದ್ ಮಾಡಿದ್ದು, ಶುಕ್ರವಾರವೂ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

ಇನ್ನು ತಾಲೂಕಿನ ಕಳಸ ಭಾಗದಲ್ಲೂ ಮಳೆ ಅವ್ಯಾಹತವಾಗಿ ಸುರಿಯುತ್ತಿದ್ದು, ಕಳಸ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ರಸ್ತೆ ಮೇಲೆ ಧರೆ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಕಳೆದ ಮೂರು ದಿನಗಳಿಂದ ಮುಳುಗಡೆಯಾಗಿದ್ದ ಹೊರನಾಡು-ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಶುಕ್ರವಾರವೂ ಮುಳುಗಡೆಯಾಗಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಬರುತ್ತಿದ್ದ ದೂರದ ಪ್ರವಾಸಿಗರ ವಾಹನಗಳು ಸೇತುವೆ ಮೇಲೆ ಸಂಚರಿಸಲಾಗದೇ ಹಿಂದುರುಗುತ್ತಿದ್ದ ದೃಶ್ಯಗಳು ಶುಕ್ರವಾರವೂ ಕಂಡು ಬಂದಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯ ನೀರು ಕಗ್ಗನಳ್ಳ ಗ್ರಾಮದಲ್ಲಿ ಹೆದ್ದಾರಿ ಮೇಲೆ ನುಗ್ಗಿರುವ ಪರಿಣಾಮ ಕಳಸ ಪಟ್ಟಣದಿಂದ ಬಾಳೆಹೊನ್ನೂರು ಸಂಪರ್ಕ ರಸ್ತೆಯಲ್ಲಿ ಶುಕ್ರವಾರವೂ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಸಮೀಪದಲ್ಲೇ ಹರಿಯುತ್ತಿರುವ ಭದ್ರಾ ನದಿ ಪಟ್ಟಣ ಸಮೀಪದಲ್ಲಿರುವ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಬಾಳೆಹೊನ್ನೂರ-ಚಿಕ್ಕಮಗಳೂರು ಸಂಪರ್ಕದ ಸೇತುವೆಗೆ ನದಿ ನೀರು ಮುಟ್ಟಲು ಇನ್ನು ಕೆಲವೇ ಅಡಿಗಳು ಬಾಕಿ ಇದ್ದು, ನದಿ ನೀರು ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಸೇತುವೆ ಮೇಲೆ ಜಮಾಯಿಸುತ್ತಿದ್ದಾರೆ. ಸೇತುವೆ ಬಳಿಯಲ್ಲಿದ್ದ ಎರಡು ಮನೆಗಳಿಗೆ ನದಿ ನೀರು ನುಗ್ಗಿದ್ದು, ಪಟ್ಟಣದಿಂದ ಮಾಗುಂಡಿ, ಕೊಟ್ಟಿಗೆಹಾರ, ಕಳಸ ಸಂಪರ್ಕರ ಹೆದ್ದಾರಿ ಮೇಲೆಯೂ ಅಲ್ಲಲ್ಲಿ ಭದ್ರಾ ನದಿ ನೀರು ತುಂಬಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. 

ಬಾಳೆಹೊನ್ನೂರು, ಮಾಗುಂಡಿ, ಕೊಟ್ಟಿಗೆಹಾರ, ಕಳಸಕ್ಕೆ ಸಂಚರಿಸುವ ಖಾಸಗಿ, ಸರಕಾರಿ ಸಾರಿಗೆ ಬಸ್‍ಗಳ ಓಡಾಟವನ್ನು ನಿಷೇಧಿಸಲಾಗಿದೆ. ಅಲ್ಲದೇ ಈ ರಸ್ತೆಯಲ್ಲಿನ ಭದ್ರಾ ನದಿ ತೀರದ ಕೆಲ ಗ್ರಾಮಗಳ ಜನರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸುರಕ್ಷಿತ ಪ್ರದೇಶಗಳಿಗೆ ಬೋಟ್‍ಗಳ ಮೂಲಕ ಸ್ಥಳಾಂತರಿಸಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತಲ ಬನ್ನೂರು, ಜಕ್ಕಣ್ಣಕ್ಕಿ, ಕುಂಬ್ರುಮನೆ, ಕೋಡಿಗೆ, ಮಾಗುಂಡಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, ಈ ಭಾಗದ ಜನರನ್ನು ರಕ್ಷಿಸಿ  ರಂಬಾಪುರಿ ಮಠದಲ್ಲಿ ಆಶ್ರಯ ನೀಡಲಾಗಿದೆ.

ಶೃಂಗೇರಿ ತಾಲೂಕಿನಲ್ಲಿ ತುಂಗೆ ಆರ್ಭಟಿಸುತ್ತಿದ್ದು, ಶಂಕರಮಠದ ಗುರುಭವನ ಹಾಗೂ ಗಾಂಧಿಭವನಕ್ಕೆ ನದಿಯ ನೀರು ನುಗ್ಗಿದೆ. ಹಾಗೂ ಮಠದ ಊಟದ ಹಾಲ್‍ಗೂ ನೀರು ನುಗ್ಗಿದೆ. ಜಿಲ್ಲೆಯ ಅನೇಕ ಕಡೆ ಧರೆ ಕುಸಿತವಾಗಿ ರಸ್ತೆ ಸಂಪರ್ಕ ಕಡಿದುಕೊಂಡಿದೆ. ನೂರಾರು ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಅನೇಕ ಮನೆಗಳು ಕುಸಿದಿವೆ. ಕೊಪ್ಪ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ತುಂಗಾ ನದಿ ಪ್ರವಾಹದಿಂದಾಗಿ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿದ್ದು, ನಾರ್ವೆ ಗ್ರಾಮದಲ್ಲಿ ತುಂಗಾ ನದಿ ನೀರು ನುಗ್ಗಿ ಕೊಪ್ಪ-ಜಯಪುರ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಬಸರಿಕಟ್ಟೆಯಿಂದ ಕೊಗ್ರೆ ಶೃಂಗೇರಿ ಸಂಪರ್ಕ ರಸ್ತೆಯಲ್ಲೂ ಭೂ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ತಾಲೂಕಿನ ಹಲವೆಡೆ ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿವೆ.

ಚಿಕ್ಕಮಗಳೂರು ತಾಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನದ ನಂತರ ನಗರದಲ್ಲಿ ಮಳೆ ಆರ್ಭಟ ಹೆಚ್ಚಿತ್ತು. ತಾಲೂಕಿನ ಕಣಿವೆಹಳ್ಳಿ ಸಮೀಪ ರೈಲ್ವೇಹಳಿ ಮೇಲೆ ಗುಡ್ಡ ಕುಸಿದು ರೈಲು ಸಂಚಾರವೂ ಸ್ಥಗಿತಗೊಂಡಿದೆ. ಪಟ್ಟಣ ಸಮೀಪ ಹಿರೇಮಗಳೂರು ಬಡಾವಣೆಯಲ್ಲಿ ಮನೆಯೊಂದು ಕುಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಇನ್ನು ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಂದಾಗಿ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಇಡೀ ಮಲೆನಾಡು ಕತ್ತಲೆಯಲ್ಲಿ ಮುಳುಗಿದೆ.

ಜನರ ರಕ್ಷಣೆಗೆ ಅಧಿಕಾರಿಗಳು ಹೈ ಅಲರ್ಟ್: ಮಲೆನಾಡು ಭಾಗದಲ್ಲಿ ಪ್ರವಾಹ ಉಂಟಾಗಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಮಳೆಯ ನಡುವೆಯೂ ಮುಂದಾಗಿದ್ದಾರೆ. ಅಗ್ನಿಶಾಮಕ ದಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೋಟ್ ಬಳಸಿಕೊಂಡು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಹೇಮಾವತಿ ನದಿಯಲ್ಲಿ ಬುಧವಾರ ಕಾಲುಜಾರಿ ಬಿದ್ದ ಶ್ರೀವತ್ಸ ಯುವಕನ ಶೋಧಕಾರ್ಯ ಮಳೆಯ ನಡುವೆ ನಡೆಯುತ್ತಿದೆ. ಪುರ್ನವಸತಿ ಕೇಂದ್ರ ತೆರೆಯಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾದ್ಯಂತ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ, 24 ಗಂಟೆಗಳಲ್ಲಿ ಹೋಬಳಿವಾರು ಆಗಿರುವ ಮಳೆಯ ವಿವರ ಇಂತಿದೆ: (ವಿವರ ಮಿ.ಮೀ.ಗಳಲ್ಲಿ)
ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 78, ಕಸಬಾ ಹೋಬಳಿ 68, ಅಂಬಳೆ ಹೋಬಳಿ 50, ಆಲ್ದೂರು 112, ಸಂಗಮೇಶ್ವರಪೇಟೆ 101, ಕಳಸಾಪುರ 43,  ಆವತಿ 106, ಜಾಗರ 89, ವಸ್ತಾರೆ 84 ಮಿ.ಮೀ. ಮಳೆಯಾಗಿದೆ.  ಕಡೂರು ತಾಲೂಕಿನ ಕಡೂರು 39, ಕಡೂರು ಹೋಬಳಿಯಲ್ಲಿ 47, ಬೀರೂರು 44, ಹಿರೆನಲ್ಲೂರು 37, ಸಖರಾಯಪಟ್ಟಣ 33, ಸಿಂಗಟಗೆರೆ 35, ಯಗಟಿ 26, ಹಿರೇಚೌಳೂರು 69, ಪಂಚನಹಳ್ಳಿ 21 ಮಿ.ಮೀ. ಮಳೆಯಾಗಿದೆ. ಕೊಪ್ಪ ತಾಲೂಕಿನ ಕೊಪ್ಪ 155, ಕೊಪ್ಪ ಹೋಬಳಿ 170, ಹರಿಹರಪುರ 139, ಮೇಗುಂದ 153, ಮೂಡಿಗೆರೆ ತಾಲೂಕಿನ ಮೂಡಿಗೆರೆ 177, ಮೂಡಿಗೆರೆ ಹೋಬಳಿ 206, ಬಣಕಲ್ 175, ಗೋಣಿಬೀಡು 196, ಕಳಸ 143, ಜಾವಳಿ 215, ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ 87, ಕಸಬಾ ಹೋಬಳಿ 76, ಬಾಳೆಹೊನ್ನೂರು ಹೋಬಳಿಯಲ್ಲಿ 115ಮಿ.ಮೀ. ಮಳೆಯಾಗಿದೆ. ಶೃಂಗೇರಿ ತಾಲೂಕಿನ ಶೃಂಗೇರಿ 169, ಕಸಬಾ 158, ಕಿಗ್ಗ 173, ತರೀಕೆರೆ ತಾಲೂಕಿನ ತರೀಕೆರೆ 79, ಕಸಬಾ 75, ಅಜ್ಜಂಪುರ 92, ಅಮೃತಾಪುರ 87, ಲಕ್ಕವಳ್ಳಿ 64, ಲಿಂಗದಹಳ್ಳಿ 64 ಹಾಗೂ ಶಿವನಿ ಹೋಬಳಿಯಲ್ಲಿ 99 ಮಿ.ಮೀ. ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News