ಮಹಾಪ್ರವಾಹಕ್ಕೆ ನಲುಗಿದ ಶಿವಮೊಗ್ಗ ನಗರ

Update: 2019-08-10 13:03 GMT

ಶಿವಮೊಗ್ಗ, ಆ. 10: 'ಪ್ರವಾಹ ಸೃಷ್ಟಿಸಿರುವ ತುಂಗಾ ನದಿ... ಉಕ್ಕಿ ಹರಿಯುತ್ತಿರುವ ರಾಜಕಾಲುವೆ-ಚರಂಡಿಗಳು... ಎಲ್ಲೆಲ್ಲೂ ನೀರು... ಜಲಾವೃತವಾಗಿರುವ ಸಾವಿರಾರು ಮನೆಗಳು... ಲೆಕ್ಕವಿಲ್ಲದಷ್ಟು ಜನರ ಸ್ಥಳಾಂತರ... ಉರುಳಿ ಬೀಳುತ್ತಿರುವ ಮನೆಗಳು... ನೀರಿನಿಂದ ಆವೃತವಾಗಿರುವ ರಸ್ತೆಗಳು... ಅಸ್ತವ್ಯಸ್ತವಾದ ಜನಜೀವನ... ಸಮರೋಪಾದಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ..!'

ಇದು, ಶಿವಮೊಗ್ಗ ನಗರದಲ್ಲಿ ಉಂಟಾಗಿರುವ 'ಮಹಾ ಪ್ರವಾಹ'ದ ಪ್ರಮುಖ ಹೈಲೈಟ್ಸ್ ಗಳು! ಹೌದು. ಕಳೆದೊಂದು ದಶಕದ ಅವದಿಯಲ್ಲಿ ಕಂಡುಬರದ ಭಾರೀ ನೆರೆಗೆ 'ಮಲೆನಾಡ ನಗರಿ' ತುತ್ತಾಗಿದೆ. ಸರಿಸುಮಾರು ಅರ್ಧದಷ್ಟು ನಗರ ಭಾಗ ಜಲಾವೃತದ ಸಮಸ್ಯೆಗೀಡಾಗಿದೆ. ಸಾವಿರಾರು ನಾಗರೀಕರು ಸಂಕಷ್ಟಕ್ಕೀಡಾಗಿದ್ದಾರೆ.

ಈಗಾಗಲೇ ತುಂಗಾ ನದಿಯ ಪ್ರವಾಹದಿಂದ, ನಗರದ ಹಲವು ಬಡಾವಣೆಗಳು ಕಳೆದ ಕೆಲ ದಿನಗಳಿಂದ ಜಲಾವೃತ ಸ್ಥಿತಿಯಲ್ಲಿವೆ. ಆದರೆ ಶುಕ್ರವಾರ ಬಿದ್ದ ಭಾರೀ ಮಳೆ ಹಾಗೂ ತುಂಗಾ ನದಿಯಲ್ಲಿ ಹೆಚ್ಚಾದ ನೀರಿನ ಹರಿವು ಹಾಗೂ ರಾಜಕಾಲುವೆ-ಚರಂಡಿಗಳು ಉಕ್ಕಿ ಹರಿಯ ಲಾರಂಭಿಸಿದ್ದರಿಂದ, ತಡರಾತ್ರಿಯಿಂದ ನಗರದ ಇನ್ನಷ್ಟು ಬಡಾವಣೆಗಳು ಜಲಾವೃತವಾಗಲಾರಂಭಿಸಿದವು. 

ಕೆಲ ಬಡಾವಣೆಗಳಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ಹರಿಯಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಮನೆಗಳಿಗೆ ನೀರು ನುಗ್ಗಲಾರಂಭಿಸಿದ್ದು, ಸವಿ ನಿದ್ರೆಯಲ್ಲಿದ್ದ ನಾಗರೀಕರು ಆತಂಕಿರಾದರು. ಸಾವಿರಾರು ಜನರು ನಿದ್ರೆಯಿಲ್ಲದ ರಾತ್ರಿ ಕಳೆಯುವಂತಾಯಿತು. ಸ್ಥಳೀಯ ನಿವಾಸಿಗಳು ಹಾಗೂ ರಕ್ಷಣಾ ತಂಡಗಳು, ನೆರೆ ಪೀಡಿತ ಬಡಾವಣೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. 

ನೆರೆ: ಗಾಜನೂರಿನ ತುಂಗಾ ಜಲಾಶಯದಿಂದ ಶುಕ್ರವಾರದಿಂದ 1 ಲಕ್ಷಕ್ಕೂ ಅಧಿಕ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ, ನಗರದಲ್ಲಿ ಹಾದು ಹೋಗಿರುವ ತುಂಗಾ ನದಿ ಉಕ್ಕಿ ಹರಿಯಲಾರಂಭಿಸಿದೆ. ಶನಿವಾರ ಕೂಡ ಡ್ಯಾಂನಿಂದ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ, ನಗರದಲ್ಲಿ ನೆರೆ ಪರಿಸ್ಥಿತಿ ಉಲ್ಬಣಿಸಲು ಮುಖ್ಯ ಕಾರಣವಾಗಿದೆ. 

ಈಗಾಗಲೇ ಜಲಾವೃತವಾಗಿದ್ದ ಇಮಾಮ್‍ಬಾಡ, ಕುಂಬಾರಗುಂಡಿ, ಸೀಗೆಹಟ್ಟಿ, ಅಂತರಘಟ್ಟಮ್ಮ ದೇವಸ್ಥಾನ ಸರ್ಕಲ್, ಬಿ.ಬಿ.ರಸ್ತೆ ಸುತ್ತಮುತ್ತಲಿನ ಬಡಾವಣೆಗಳು ಮತ್ತಷ್ಟು ನೀರಿನಿಂದ ಆವೃತವಾಗಿದ್ದವು. ಈ ಭಾಗದಲ್ಲಿ ನೂರಾರು ಮನೆಗಳು ಜಲಾವೃತವಾಗಿದ್ದವು. 
ಇನ್ನೊಂದೆಡೆ ಸಿದ್ದಯ್ಯ ರಸ್ತೆ, ಮಂಜುನಾಥ ಟಾಕೀಸ್ ಸುತ್ತಮುತ್ತಲಿನ ಏರಿಯಾ, ಎಂಕೆಕೆ ರಸ್ತೆ, ಭರ್ಮಪ್ಪ ನಗರ, ಕೆ.ಆರ್.ಪುರಂ, ಎನ್.ಟಿ.ರಸ್ತೆ ಸೇರಿದಂಥೆ ಹಳೇ ಶಿವಮೊಗ್ಗದ ಮುಕ್ಕಾಲು ಪಾಲು ಬಡಾವಣೆಗಳು ಜಲಾವೃತವಾಗಿದ್ದವು. ಸಾವಿರಾರು ನಾಗರೀಕರು ಮನೆಯಿಂದ ಹೊರಬರಲಾಗದ ಸ್ಥಿತಿ ಸೃಷ್ಟಿಯಾಗಿತ್ತು.

ಮತ್ತೊಂದೆಡೆ ಅಂಗಳಯ್ಯನ ಕೆರೆ ಸುತ್ತಮುತ್ತಲಿನ ಏರಿಯಾ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಶೇಷಾದ್ರಿಪುರಂ, ಗುಂಡಪ್ಪ ಶೆಡ್, ಎಲ್‍ಬಿಎಸ್ ನಗರ ಬಡಾವಣೆಗಳು ಜಲಾವೃತ ಸಮಸ್ಯೆಗೀಡಾದವು.

ಬೈಪಾಸ್ ರಸ್ತೆ, ವಿದ್ಯಾನಗರ, ಹೊಳೆಹೊನ್ನೂರು ರಸ್ತೆಯ ಬಡಾವಣೆಗಳು, ಶಾಂತಮ್ಮ ಲೇಔಟ್, ಕಂಟ್ರಿಕ್ಲಬ್ ಸಮೀಪ ಹಾಗೂ ವಿದ್ಯಾನಗರ ಏರಿಯಾದ ಸುತ್ತಮುತ್ತಲಿನ ಬಡಾವಣೆಗಳಲ್ಲಿಯೂ ದೊಡ್ಡಮಟ್ಟದ ಜಲಾವೃತ ಸ್ಥಿತಿ ಕಂಡುಬಂದಿತು. 

ಅಪಾರ ಹಾನಿ: ನಗರದ ಹಲವು ಬಡಾವಣೆಗಳಲ್ಲಿ ರಾತ್ರೋ ರಾತ್ರಿ ನೀರು ನುಗ್ಗಿದೆ. ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ದೊಡ್ಡ ಸಂಖ್ಯೆಯಲ್ಲಿ ಮನೆಗಳು ಉರುಳಿ ಬೀಳುತ್ತಿವೆ. ಮನೆಯಲ್ಲಿಟ್ಟಿದ್ದ ದವಸ ಧಾನ್ಯ ಸೇರಿದಂತೆ ಹಲವು ದಿನ ಬಳಕೆ ವಸ್ತುಗಳು ನೀರು ಪಾಲಾಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ಧಕ್ಕೆಯ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. 

18 ಗೋವುಗಳ ಸಾವು

ನಗರದ ಮಹಾವೀರ ಗೋ ಶಾಲೆಯೂ ಪ್ರವಾಹಕ್ಕೆ ಸಿಲುಕಿದೆ. ಇದರಿಂದ ಸುಮಾರು 18 ಗೋವುಗಳು ಸತ್ತಿವೆ. ವಿಷಯ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೋವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದಾರೆ. 

ನಗರಕ್ಕೆ ಎನ್‍ಡಿಆರ್ ಎಫ್ ಸೇರಿದಂತೆ ಇತರೆ ರಕ್ಷಣಾ ತಂಡಗಳ ಆಗಮನ

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಹಾಗೆಯೇ ವಿವಿಧ ರಕ್ಷಣಾ ತಂಡಗಳು ಕೂಡ ನಗರಕ್ಕೆ ದೌಡಾಯಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್.ಡಿ.ಆರ್.ಎಫ್) ತಂಡ ಕೂಡ ಆಗಮಿಸಿದೆ.

ಇನ್ನೊಂದೆಡೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕೂಡ ವಿವಿಧ ಹಂತಗಳ ಅಧಿಕಾರಿಗಳ ನೇತೃತ್ವದಲ್ಲಿ ರಕ್ಷಣಾ ತಂಡಗಳ ರಚನೆ ಮಾಡಿದೆ. ಶಿವಮೊಗ್ಗ ನಗರಕ್ಕೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ನೂರಾರು ಜನರನ್ನು ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿವೆ. ದೋಣಿ, ಯಾಂತ್ರಿಕೃತ ಬೋಟ್, ತೆಪ್ಪಗಳನ್ನು ಕೂಡ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. 

ರಸ್ತೆಗಳು ಬಂದ್ : ಸಂಚಾರ ಅಸ್ತವ್ಯಸ್ತ

ಶಿವಮೊಗ್ಗ-ಭದ್ರಾವತಿ ನಡುವಿನ ಬಿ.ಹೆಚ್.ರಸ್ತೆಯ ಹಲವೆಡೆ ಜಲಾವೃತ ಪರಿಸ್ಥಿತಿಯಿದೆ. ನಗರದ ಹೊಳೆ ಬಸ್ ನಿಲ್ದಾಣದ ಹಳೇ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತಿರುವ ಹೊಸ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬೈಪಾಸ್ ರಸ್ತೆಯಲ್ಲಿಯೂ ನೀರು ನುಗ್ಗಿದೆ. ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಹರಕೆರೆಯ ಎನ್.ಟಿ.ರಸ್ತೆಯಲ್ಲಿಯೂ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಹಳೇ ಶಿವಮೊಗ್ಗ ರಸ್ತೆಯ ಹಲವೆಡೆ ಮುಖ್ಯ ರಸ್ತೆಗಳು ಸಂಪೂರ್ಣ ನೀರಿ ನಿಂದ ಆವೃತವಾಗಿದ್ದು, ವಾಹನಗಳಿರಲಿ ಜನರೂ ಕೂಡ ಓಡಾಡಲು ಸಾಧ್ಯವಾಗದಂತಾಗಿದೆ.

ತಾಲೂಕಿನ ವಿವಿಧೆಡೆಯೂ ಸಂಕಷ್ಟ

ಒಂದೆಡೆ ಶಿವಮೊಗ್ಗ ನಗರ ನೆರೆ ಸ್ಥಿತಿಗೆ ಸಿಲುಕಿ ಸಂಕಷ್ಟ ಪಡುತ್ತಿದೆ. ಇನ್ನೊಂದೆಡೆ ಶಿವಮೊಗ್ಗ ತಾಲೂಕಿನ ವಿವಿಧೆಡೆಯೂ ಮಳೆ ಹಾಗೂ ನೆರೆಯಿಂದ ಭಾರೀ ಪ್ರಮಾಣದ ಅನಾಹುತ ಸಂಭವಿಸಿದ ವರದಿಗಳು ಬಂದಿವೆ. ಬೇಡರ ಹೊಸಹಳ್ಳಿ ಗ್ರಾಮದಲ್ಲಿ ತುಂಗಾ ನದಿ ಉಕ್ಕಿ ಹರಿದ ಪರಿಣಾಮ ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗಿದೆ. ಮೋಜಪ್ಪನ ಹೊಸೂರು ಬಳಿಯಿರುವ ಕೆರೆ ಭರ್ತಿಯಾಗಿರುವುದರಿಂದ ಹಿನ್ನೀರಿನ ಸುಮಾರು 50 ಕ್ಕೂ ಅಧಿಕ ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಗೆಜ್ಜೇನಹಳ್ಳಿ ರಸ್ತೆಯ ಸೋಮಿನಕೊಪ್ಪ ಕೆರೆ ತುಂಬಿದ್ದು, ಕೋಡಿ ಬಿದ್ದಿದೆ. ಇದರಿಂದ ಕೃಷಿ ಭೂಮಿಗಳು ಜಲಾವೃತವಾಗಿವೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News